Last Updated:
ಬೆಂಗಳೂರು ಜಿಬಿಎ, ಬಿಇಸಿಸಿ ಕಟ್ಟಡ ಮಾಲೀಕರಿಗೆ ಸಡನ್ ಶಾಕ್ ನೀಡಿದೆ, ಈ ಸಲ ಯಾರಿಗೂ ವಿನಾಯಿತಿ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. ಕಟ್ಟಡಗಳ ವಿಷಯದಲ್ಲಿ ನಾನಾ ಕಠಿಣ ಕ್ರಮಕ್ಕೆ ಮುಂದಾದ ಜಿಬಿಎಗೆ ಜನ ಹಲವು ಸವಾಲುಗಳನ್ನು ಹಾಕಿದ್ದು ಈ ನಡುವೆಯೇ ಲಕ್ಷಾಂತರ ರೂಪಾಯಿ ನಷ್ಟ ಭಯವನ್ನೂ ನಾಗರಿಕರು ಎದುರಿಸುತ್ತಿದ್ದಾರೆ.
ಬೆಂಗಳೂರು: ಸ್ವಂತ ಮನೆ ಕಟ್ಟಿ, ಅದಕ್ಕೆ ಭದ್ರತೆಗಾಗಿ ಎತ್ತರದ ಕಾಂಪೌಂಡ್ ಗೋಡೆ (Compound Wall) ನಿರ್ಮಿಸಿ ನಿರಾಳವಾಗಿದ್ದೀರಾ? ಹಾಗಿದ್ದರೆ ನಿಮಗೆ ಭಾರೀ ಶಾಕ್ (Big Shock) ಕಾದಿದೆ! ಮನೆ ಸುಭದ್ರವಾಗಿರಲಿ ಎಂದು ನಗರದಲ್ಲಿ ಅಳತೆ ಮೀರಿ ನಿರ್ಮಿಸಿರುವ ಕಾಂಪೌಂಡ್ಗಳನ್ನು ನೆಲಸಮ ಮಾಡಲು ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (GBA) ಮತ್ತು ಬೆಂಗಳೂರು ಈಸ್ಟ್ ಸಿಟಿ ಕಾರ್ಪೊರೇಷನ್ (BECC) ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆಗೆ ಇಳಿದಿದ್ದಾರೆ.
ರಾಷ್ಟ್ರೀಯ ಕಟ್ಟಡ ಸಂಹಿತೆ (NBC) ಉಲ್ಲಂಘಿಸಿದ ಕಾಂಪೌಂಡ್ ಮಾಲೀಕರಿಗೆ ಈಗಾಗಲೇ ಧಡಾಧಡ್ ನೋಟಿಸ್ ಜಾರಿಯಾಗುತ್ತಿದ್ದು, ಒಂದು ವೇಳೆ ನೀವೇ ಅದನ್ನು ತೆರವುಗೊಳಿಸದಿದ್ದರೆ ಜಿಬಿಎ ಅಧಿಕಾರಿಗಳೇ ಜೆಸಿಬಿ ತಂದು ಧ್ವಂಸ ಮಾಡಲಿದ್ದಾರೆ! ಅಷ್ಟೇ ಅಲ್ಲ, ಆ ಗೋಡೆ ಕೆಡವಲು ತಗಲುವ ವೆಚ್ಚವನ್ನೂ ನಿಮ್ಮ ಕೈಯಲ್ಲೇ ವಸೂಲಿ ಮಾಡುವ ಅಧಿಕಾರ ಪ್ರಾಧಿಕಾರಕ್ಕಿದೆ.
ರಾಷ್ಟ್ರೀಯ ಕಟ್ಟಡ ಸಂಹಿತೆ ಮತ್ತು ಬಿಬಿಎಂಪಿ ಬೈಲಾ ಪ್ರಕಾರ ಕಾಂಪೌಂಡ್ ಗೋಡೆಗೆ ಕಟ್ಟುನಿಟ್ಟಿನ ನಿಯಮಗಳಿವೆ:
ಗರಿಷ್ಠ ಎತ್ತರ 1.5 ಮೀಟರ್ ಮಾತ್ರ: ಯಾವುದೇ ಮನೆ, ಅಪಾರ್ಟ್ಮೆಂಟ್, ಹೋಟೆಲ್ ಅಥವಾ ವಾಣಿಜ್ಯ ಸಂಕೀರ್ಣವಿರಲಿ, ಮುಂಭಾಗದ ರಸ್ತೆಯ ಮಧ್ಯ ರೇಖೆಯಿಂದ ಕಾಂಪೌಂಡ್ ಗೋಡೆಯ ಎತ್ತರ ಕೇವಲ 1.5 ಮೀಟರ್ (ಸುಮಾರು 5 ಅಡಿ) ಮಾತ್ರ ಇರಬೇಕು. ಇದಕ್ಕಿಂತ ಹೆಚ್ಚು ಬೇಕಿದ್ದರೆ ವಿಶೇಷ ಅನುಮತಿ ಕಡ್ಡಾಯ.
ಗ್ರಿಲ್ ಹಾಕಲು ಮಾತ್ರ ಚಾನ್ಸ್: ಕಾಂಪೌಂಡ್ನ ಒಟ್ಟು ಎತ್ತರವನ್ನು 2.4 ಮೀಟರ್ ವರೆಗೆ ಹೆಚ್ಚಿಸಿಕೊಳ್ಳಬಹುದು. ಆದರೆ, ಕೆಳಗಿನ 1.5 ಮೀಟರ್ ಕಾಂಪೌಂಡ್ನ ಮೇಲಿನ 0.9 ಮೀಟರ್ ಭಾಗ ಕಡ್ಡಾಯವಾಗಿ ಗಾಳಿ-ಬೆಳಕು ಸರಾಗವಾಗಿ ಸಂಚರಿಸುವ ಓಪನ್ ಟೈಪ್ ಗ್ರಿಲ್ ಅಥವಾ ರೇಲಿಂಗ್ ವಿನ್ಯಾಸ ಹೊಂದಿರಬೇಕು.
ಕುಮಾರಕೃಪಾ ಗೆಸ್ಟ್ಹೌಸ್ನಲ್ಲೇ ಈ ನಿಯಮದ ಉಲ್ಲಂಘನೆಯಾಗಿದೆ. ಲೋಕೋಪಯೋಗಿ ಇಲಾಖೆ (PWD) ವ್ಯಾಪ್ತಿಯ ಕುಮಾರಕೃಪಾ ಅತಿಥಿಗೃಹದ ಸುತ್ತಲೂ ಇದ್ದ 1.5 ಮೀಟರ್ ಕಾಂಪೌಂಡ್ ಅನ್ನು ಈಗ ನಿಯಮ ಬಾಹಿರವಾಗಿ 8 ಅಡಿಗೆ ಏರಿಸಲಾಗುತ್ತಿದ್ದು, ಮುಂದೆ 10 ಅಡಿಗೆ ಎತ್ತರಿಸಲು ಪ್ಲಾನ್ ಮಾಡಲಾಗಿದೆ! ಕ್ರೆಸೆಂಟ್ ರಸ್ತೆಯಲ್ಲಿರುವ ಹಲವು ಸಚಿವರ ವಸತಿ ಕಟ್ಟಡದ ಕಾಂಪೌಂಡ್ಗಳು ಬರೋಬ್ಬರಿ 8 ರಿಂದ 9 ಅಡಿ ಎತ್ತರ ಇವೆ! ಇನ್ನು ಕೆಲವು ಖಾಸಗಿ ಬಿಲ್ಡಿಂಗ್ಗಳ ಕಾಂಪೌಂಡ್ ಅಂತೂ 10 ರಿಂದ 15 ಅಡಿ ಎತ್ತರ ತಲುಪಿದೆ ಎಂದು ಕನ್ನಡಪ್ರಭ ವರದಿ ಮಾಡಿದೆ.
ಈ ಕುರಿತು ಹೆಚ್ಚುವರಿ ಆಯುಕ್ತರಾದ ಎಲ್.ಎಸ್. ಸುಧಾಕರ್ ಅವರು ಮಾತನಾಡುತ್ತಾ, “ನಿಯಮ ಸಂಹಿತೆ ಎಲ್ಲರಿಗೂ ಒಂದೇ. ಅದು ಸರ್ಕಾರಿ ಕಟ್ಟಡವಿರಲಿ ಅಥವಾ ಖಾಸಗಿ ಕಟ್ಟಡವಿರಲಿ, 1.5 ಮೀಟರ್ಗಿಂತ ಎತ್ತರವಿದ್ದರೆ ನೋಟಿಸ್ ನೀಡಿ ಕೆಡವುತ್ತೇವೆ” ಎಂದು ಖಡಕ್ ಆಗಿ ಹೇಳಿದ್ದಾರೆ. ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿರುವ 98 ಟೆಕ್ ಪಾರ್ಕ್ಗಳು, 3,876 ಐಟಿ ಕಂಪನಿಗಳು, 4500ಕ್ಕೂ ಹೆಚ್ಚು ವಾಣಿಜ್ಯ ಸಂಕೀರ್ಣಗಳು, 217 ಮಾಲ್ಗಳು ಹಾಗೂ 1.10 ಲಕ್ಷ ಕೈಗಾರಿಕಾ ಕಟ್ಟಡಗಳಲ್ಲಿ ಬಹುಪಾಲು ಕಟ್ಟಡಗಳು ಈ ಸಂಹಿತೆಯನ್ನು ಗಾಳಿಗೆ ತೂರಿ ಕಾಂಪೌಂಡ್ ನಿರ್ಮಿಸಿವೆ!
ಯಾಕೆ ಈ ದಿಢೀರ್ ಕ್ರಮ? ಇಲ್ಲಿದೆ ಅಸಲಿ ಕಾರಣ!
ಮಳೆಗಾಲದಲ್ಲಿ (ಜೂನ್-ಸೆಪ್ಟೆಂಬರ್) ಅತಿ ಎತ್ತರದ ಮತ್ತು ಕಳಪೆ ಗುಣಮಟ್ಟದ ಕಾಂಪೌಂಡ್ ಗೋಡೆಗಳು ಕುಸಿದು ಸಾವು-ನೋವುಗಳು ಸಂಭವಿಸುತ್ತಿವೆ (ಉದಾಹರಣೆಗೆ ಇತ್ತೀಚೆಗೆ ನಡೆದ ವಿಜಯನಗರ ಕ್ಲಬ್ ಗೋಡೆ ಕುಸಿತ). ಅಲ್ಲದೆ, ರಸ್ತೆ ಜಂಕ್ಷನ್ ಹಾಗೂ ಮೂಲೆ ಪ್ಲಾಟ್ಗಳಲ್ಲಿ ಇಂತಹ ಎತ್ತರದ ಗೋಡೆಗಳು ವಾಹನ ಚಾಲಕರ ದೃಷ್ಟಿಗೆ ಅಡ್ಡಿಪಡಿಸಿ ಅಪಘಾತಗಳಿಗೆ ಕಾರಣವಾಗುತ್ತಿವೆ. ನಿಮ್ಮ ಮನೆ ಕಾಂಪೌಂಡ್ ಕೂಡ 1.5 ಮೀಟರ್ಗಿಂತ ಎತ್ತರವಾಗಿದ್ದರೆ, ತಕ್ಷಣವೇ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿ ವಿಶೇಷ ಅನುಮತಿ ಪಡೆದುಕೊಳ್ಳಿ, ಇಲ್ಲದಿದ್ದರೆ ನೋಟಿಸ್ ಗ್ಯಾರಂಟಿ!
Bangalore [Bangalore],Bangalore,Karnataka













