Last Updated:
ಇತ್ತೀಚೆಗೆ ಹಲವು ನಟ-ನಟಿಯರು ಯಶ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಇದೀಗ ರಾಮಾಯಣ ಚಿತ್ರದಲ್ಲಿ ಮಂಡೋದರಿ ಪಾತ್ರದಲ್ಲಿ ನಟಿಸುತ್ತಿರುವ ಕಾಜಲ್ ಅಗರ್ವಾಲ್ ಕೂಡ ಯಶ್ ನ ಹಾಡಿ ಹೊಗಳಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಬಹುನಿರೀಕ್ಷಿತ ರಾಮಾಯಣ (Ramayana) ಸಿನಿಮಾ ಈಗಾಗಲೇ ಭಾರತೀಯ ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ನಿರ್ದೇಶಕ ನಿತೇಶ್ ತಿವಾರಿ (Nitesh Tiwari) ಅವರ ಡ್ರೀಮ್ ಪ್ರಾಜೆಕ್ಟ್ ಎಂದು ಹೇಳಲಾಗುತ್ತಿರುವ ಈ ಚಿತ್ರದಲ್ಲಿ ಅನೇಕ ಖ್ಯಾತ ಕಲಾವಿದರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಶ್ ರಾವಣನ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದು, ಇತ್ತೀಚೆಗೆ ಹಲವು ನಟ-ನಟಿಯರು ಯಶ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಇದೀಗ ರಾಮಾಯಣ ಚಿತ್ರದಲ್ಲಿ ಮಂಡೋದರಿ ಪಾತ್ರದಲ್ಲಿ ನಟಿಸುತ್ತಿರುವ ಕಾಜಲ್ ಅಗರ್ವಾಲ್ ಕೂಡ ಯಶ್ ನ ಹಾಡಿ ಹೊಗಳಿದ್ದಾರೆ.
ಕೆಜಿಎಫ್ ಭರ್ಜರಿ ಯಶಸ್ಸಿನ ಬಳಿಕ ಯಶ್ ಅಭಿನಯದ ಮುಂದಿನ ಸಿನಿಮಾಗಳಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ವರ್ಷ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗಳು ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಎರಡೂ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿವೆ. ಈ ಸಿನಿಮಾಗಳಲ್ಲಿ ಬಾಲಿವುಡ್ ಹಾಗೂ ದಕ್ಷಿಣ ಭಾರತದ ಹಲವು ಖ್ಯಾತ ಕಲಾವಿದರು ಅಭಿನಯಿಸುತ್ತಿದ್ದು, ಚಿತ್ರದ ಪ್ರತಿಯೊಂದು ಅಪ್ಡೇಟ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ರಾಮಾಯಣ ಚಿತ್ರದಲ್ಲಿ ಕಾಜಲ್ ಅಗರ್ವಾಲ್ ರಾವಣನ ಪತ್ನಿ ಮಂಡೋದರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದು, ಮೊದಲ ಭಾಗದಲ್ಲಿ ತಮ್ಮ ಪಾತ್ರದ ಅವಧಿ ಸೀಮಿತವಾಗಿರುತ್ತದೆ ಎಂದು ತಿಳಿಸಿದ್ದಾರೆ. ಕಥೆಯ ಮೊದಲ ಭಾಗದಲ್ಲಿ ಲಂಕೆಗೆ ಸಂಬಂಧಿಸಿದ ದೃಶ್ಯಗಳು ಕಡಿಮೆ ಇರುವ ಕಾರಣ ಮಂಡೋದರಿ ಪಾತ್ರವೂ ಹೆಚ್ಚು ಸಮಯ ಕಾಣಿಸಿಕೊಳ್ಳುವುದಿಲ್ಲ ಎಂದುವಿವರಿಸಿದ್ದಾರೆ.
ಆದರೂ ಈ ರೀತಿಯ ಬೃಹತ್ ಚಿತ್ರದಲ್ಲಿ ಭಾಗವಾಗಿರುವುದೇ ತಮ್ಮ ಪಾಲಿಗೆ ದೊಡ್ಡ ಗೌರವ ಎಂದು ಕಾಜಲ್ ಹೇಳಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ಪುರಾಣಗಳ ಆಧಾರಿತ ಇಂತಹ ಮಹತ್ವಾಕಾಂಕ್ಷೆಯ ಚಿತ್ರದಲ್ಲಿ ಅಭಿನಯಿಸುವ ಅವಕಾಶ ದೊರೆತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.
ಇನ್ನು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ ನಟಿ ಕಾಜಲ್ , ರಾಮಾಯಣ ಕೇವಲ ಭಾರತೀಯ ಸಿನಿಮಾ ಮಾತ್ರವಲ್ಲ, ವಿಶ್ವದ ಸಿನಿಪ್ರಿಯರನ್ನು ಸೆಳೆಯುವ ಸಾಮರ್ಥ್ಯ ಹೊಂದಿರುವ ದೊಡ್ಡ ಚಿತ್ರವಾಗಿದೆ. ಇಂತಹ ಮಹತ್ವದ ಯೋಜನೆಯ ಭಾಗವಾಗಿರುವುದು ತಮ್ಮ ವೃತ್ತಿಜೀವನದ ವಿಶೇಷ ಅನುಭವಗಳಲ್ಲಿ ಒಂದಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಸಿನಿಮಾ ಭಾವನಾತ್ಮಕವಾಗಿ ಭಾರತೀಯರಿಗೆ ತುಂಬಾ ಹತ್ತಿರವಾಗಿರುವ ಕಥೆಯನ್ನು ಹೊಸ ತಂತ್ರಜ್ಞಾನದೊಂದಿಗೆ ಜಾಗತಿಕ ಮಟ್ಟದಲ್ಲಿ ತಲುಪಿಸುವ ಪ್ರಯತ್ನವಾಗಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಸಂದರ್ಶನದ ವೇಳೆ ಯಶ್ ಅವರ ಬಗ್ಗೆ ಮಾತನಾಡಿದ ಕಾಜಲ್ ಅಗರ್ವಾಲ್, ಯಶ್ ಅತ್ಯಂತ ಪ್ರತಿಭಾವಂತ ನಟ ಎಂದು ಹೇಳಿದ್ದಾರೆ. ನಾನು ಯಾವಾಗಲೂ ಅವರ ಕೆಲಸವನ್ನು ಮೆಚ್ಚಿಕೊಂಡಿದ್ದೇನೆ. ಈ ಯೋಜನೆಯಲ್ಲಿ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಸಂತಸದ ವಿಷಯ. ಯಶ್ ಕೇವಲ ನಟನಾಗಿ ಮಾತ್ರವಲ್ಲ, ಚಿತ್ರದ ಮೇಲೂ ಸಾಕಷ್ಟು ಆಸಕ್ತಿ ಹೊಂದಿದ್ದಾರೆ. ಅವರ ವೃತ್ತಿಪರತೆ ಮತ್ತು ಕೆಲಸದ ಮೇಲಿನ ಬದ್ಧತೆ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತದೆ ಎಂದು ನಟಿ ತಿಳಿಸಿದ್ದಾರೆ.
ರಾಮಾಯಣದಂತಹ ಬೃಹತ್ ಯೋಜನೆ ಯಶಸ್ವಿಯಾಗಲು ಚಿತ್ರತಂಡದ ಪ್ರತಿಯೊಬ್ಬರೂ ಶ್ರಮಿಸುತ್ತಿದ್ದಾರೆ ಎಂದು ಕಾಜಲ್ ಹೇಳಿದ್ದಾರೆ. ಪ್ರತಿಯೊಂದು ಪಾತ್ರಕ್ಕೂ ವಿಶೇಷ ಮಹತ್ವ ನೀಡಲಾಗುತ್ತಿದ್ದು, ಕಥೆಯ ಗುಣಮಟ್ಟಕ್ಕೆ ಯಾವುದೇ ರಾಜಿ ಮಾಡಿಕೊಳ್ಳದೆ ಸಿನಿಮಾ ನಿರ್ಮಾಣವಾಗುತ್ತಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಇನ್ನು ರಾಮಾಯಣ ಚಿತ್ರದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಹಾಗೂ ಕಾಜಲ್ ಅಗರ್ವಾಲ್ ಸೇರಿದಂತೆ ಹಲವು ಖ್ಯಾತ ಕಲಾವಿದರು ಅಭಿನಯಿಸುತ್ತಿದ್ದಾರೆ. ಪ್ರತಿಯೊಬ್ಬ ಪಾತ್ರಕ್ಕೂ ವಿಶೇಷ ಗಮನ ನೀಡಲಾಗುತ್ತಿದ್ದು, ಭಾರತೀಯ ಪುರಾಣದ ಈ ಮಹಾಕಾವ್ಯವನ್ನು ಅದ್ದೂರಿಯಾಗಿ ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ಚಿತ್ರದ ಘೋಷಣೆಯಾದ ದಿನದಿಂದಲೇ ಅಭಿಮಾನಿಗಳಲ್ಲಿ ಭಾರೀ ಕುತೂಹಲ ನಿರ್ಮಾಣವಾಗಿದ್ದು, ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ.
Bangalore [Bangalore],Bangalore,Karnataka













