Last Updated:
ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL) 2026ರ ನೇಮಕಾತಿ ಅಧಿಸೂಚನೆ ಪ್ರಕಟಿಸಿದ್ದು, ಜೂನಿಯರ್ ಇಂಜಿನಿಯರ್, ಸ್ಟೇಷನ್ ಮಾಸ್ಟರ್, ಅಸಿಸ್ಟೆಂಟ್ ಲೋಕೋ ಪೈಲಟ್, ಕಮರ್ಷಿಯಲ್ ಸೂಪರ್‌ವೈಸರ್ ಸೇರಿದಂತೆ 201 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ಅಭ್ಯರ್ಥಿಗಳಿಗೆ ಇದು ಉತ್ತಮ ಸರ್ಕಾರಿ ಉದ್ಯೋಗದ ಅವಕಾಶವಾಗಿದೆ.
ಬೆಂಗಳೂರು: ಸರ್ಕಾರಿ ಉದ್ಯೋಗದ (Government Job) ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL) ಭರ್ಜರಿ ಅವಕಾಶ ನೀಡಿದೆ. ಒಟ್ಟು 201 ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಪ್ರಕಟಿಸಲಾಗಿದ್ದು, 10ನೇ ತರಗತಿ, ಐಟಿಐ, ಡಿಪ್ಲೊಮಾ, ಪದವಿ ಹಾಗೂ ಎಂಜಿನಿಯರಿಂಗ್ ಪದವೀಧರರು ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ನಾಗರಿಕ (Civil), ಮೆಕ್ಯಾನಿಕಲ್, ಸಿಗ್ನಲ್ & ಟೆಲಿಕಮ್ಯುನಿಕೇಷನ್, ಎಲೆಕ್ಟ್ರಿಕಲ್, ಆಪರೇಟಿಂಗ್ ಹಾಗೂ ಕಮರ್ಷಿಯಲ್ ವಿಭಾಗಗಳಲ್ಲಿ ನೇಮಕಾತಿ ನಡೆಯಲಿದೆ. ಈ ನೇಮಕಾತಿಯಲ್ಲಿ ಜೂನಿಯರ್ ಎಂಜಿನಿಯರ್, ಸೀನಿಯರ್ ಸೆಕ್ಷನ್ ಎಂಜಿನಿಯರ್, ಅಸಿಸ್ಟೆಂಟ್ ಲೊಕೊ ಪೈಲಟ್ (ALP), ಸ್ಟೇಷನ್ ಮಾಸ್ಟರ್, ಸೆಕ್ಷನ್ ಕಂಟ್ರೋಲರ್, ಗುಡ್ಸ್ ಟ್ರೈನ್ ಮ್ಯಾನೇಜರ್, ಕಮರ್ಷಿಯಲ್ ಸೂಪರ್ವೈಸರ್, ಟೆಕ್ನಿಷಿಯನ್-III, ESTM-III ಹಾಗೂ ಟ್ರ್ಯಾಕ್ ಮೆಂಟೈನರ್ ಸೇರಿದಂತೆ ಹಲವು ಹುದ್ದೆಗಳು ಸೇರಿವೆ. ವಿವಿಧ ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆಯೂ ವಿಭಿನ್ನವಾಗಿದೆ.
ಸಿವಿಲ್ ಮತ್ತು ಮೆಕ್ಯಾನಿಕಲ್ ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಸಂಬಂಧಿತ ವಿಷಯದಲ್ಲಿ ಡಿಪ್ಲೊಮಾ ಅಥವಾ ಎಂಜಿನಿಯರಿಂಗ್ ಪದವಿ, ಸೀನಿಯರ್ ಸೆಕ್ಷನ್ ಎಂಜಿನಿಯರ್ ಹುದ್ದೆಗೆ ನಾಲ್ಕು ವರ್ಷದ ಎಂಜಿನಿಯರಿಂಗ್ ಪದವಿ, ALP ಹಾಗೂ ಟೆಕ್ನಿಷಿಯನ್ ಹುದ್ದೆಗಳಿಗೆ SSLC ಜೊತೆಗೆ ITI ಅಥವಾ ಡಿಪ್ಲೊಮಾ, ಸೆಕ್ಷನ್ ಕಂಟ್ರೋಲರ್, ಸ್ಟೇಷನ್ ಮಾಸ್ಟರ್, ಗುಡ್ಸ್ ಟ್ರೈನ್ ಮ್ಯಾನೇಜರ್ ಮತ್ತು ಕಮರ್ಷಿಯಲ್ ಸೂಪರ್ವೈಸರ್ ಹುದ್ದೆಗಳಿಗೆ ಯಾವುದೇ ವಿಷಯದಲ್ಲಿ ಪದವಿ ಕಡ್ಡಾಯವಾಗಿದೆ. ಟ್ರ್ಯಾಕ್ ಮೆಂಟೈನರ್ ಹುದ್ದೆಗೆ 10ನೇ ತರಗತಿ ಉತ್ತೀರ್ಣರಾಗಿರಬೇಕು.
Group-C ಹುದ್ದೆಗಳಿಗೆ 18 ರಿಂದ 36 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಟ್ರ್ಯಾಕ್ ಮೆಂಟೈನರ್ (Group-D) ಹುದ್ದೆಗೆ 18 ರಿಂದ 45 ವರ್ಷ ವಯೋಮಿತಿ ಇದೆ. SC/ST, OBC, PwBD, ಮಾಜಿ ಸೈನಿಕರು ಸೇರಿದಂತೆ ಮೀಸಲಾತಿ ವರ್ಗಗಳಿಗೆ ನಿಯಮಾನುಸಾರ ವಯೋಸಡಿಲಿಕೆ ದೊರೆಯಲಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ ಪ್ರಕಾರ ₹18,000 ರಿಂದ ₹44,900 ಆರಂಭಿಕ ವೇತನ ದೊರೆಯಲಿದೆ. ಹುದ್ದೆಗೆ ಅನುಗುಣವಾಗಿ ಪೇ ಲೆವೆಲ್ ಬದಲಾಗಲಿದೆ.
ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮೂಲಕ ಆಯ್ಕೆ ಮಾಡಲಾಗುತ್ತದೆ. ಕೆಲವು ಹುದ್ದೆಗಳಿಗೆ CBAT/ಅಪ್ಟಿಟ್ಯೂಡ್ ಟೆಸ್ಟ್, ದಾಖಲೆ ಪರಿಶೀಲನೆ (DV), ವೈದ್ಯಕೀಯ ಪರೀಕ್ಷೆ ಹಾಗೂ ಟ್ರ್ಯಾಕ್ ಮೆಂಟೈನರ್ ಹುದ್ದೆಗೆ Physical Efficiency Test (PET) ಕಡ್ಡಾಯವಾಗಿದೆ. CBT ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ 1 ಅಂಕ ನೆಗೆಟಿವ್ ಮಾರ್ಕಿಂಗ್ ಇರಲಿದೆ.
ಅರ್ಜಿ ಸಲ್ಲಿಸುವ ಮೊದಲು ಗಮನಿಸಿ
ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಒಂದೇ ಆನ್‌ಲೈನ್ ಅರ್ಜಿಯಲ್ಲಿ ಹಲವು ಹುದ್ದೆಗಳಿಗೆ ಆದ್ಯತೆ ಕ್ರಮದಲ್ಲಿ ಆಯ್ಕೆ ನೀಡಬಹುದು. ಅರ್ಜಿ ಸಲ್ಲಿಸುವ ಮೊದಲು ಶೈಕ್ಷಣಿಕ ಅರ್ಹತೆ, ವೈದ್ಯಕೀಯ ಮಾನದಂಡ, ವಯೋಮಿತಿ ಹಾಗೂ ಅಗತ್ಯ ದಾಖಲೆಗಳನ್ನು ಪರಿಶೀಲಿಸಿಕೊಳ್ಳುವುದು ಅಗತ್ಯ. KRCL ಅರ್ಜಿ ಪ್ರಕ್ರಿಯೆ ಹಾಗೂ ಅಧಿಕೃತ ಪ್ರಕಟಣೆಗಳನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತದೆ.
Bangalore [Bangalore],Bangalore,Karnataka














