Last Updated:
ಲಿಫೈಯರ್ 1 ರಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 254 ರನ್ಗಳಿಸಿತ್ತು. 255 ರನ್‌ಗಳ ದಾಖಲೆಯ ಮೊತ್ತವನ್ನ ಬೆನ್ನಟ್ಟಿದ ಗುಜರಾತ್ ಯಾವುದೇ ಹಂತದಲ್ಲೂ ಸ್ಪರ್ಧೆಯನ್ನೂ ನೀಡಲಾಗದೇ 19.3 ಓವರ್‌ಗಳಲ್ಲಿ 162 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯವಾಗಿ ಸೋಲು ಕಂಡಿತು.
ಧರ್ಮಶಾಲಾ ಮೈದಾನದಲ್ಲಿ ನಡೆದ 2026ರ ಐಪಿಎಲ್‌ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ಸಿಬಿ ಸಂಪೂರ್ಣ ಪ್ರಾಬಲ್ಯ ಸಾಧಿಸಿ ಗುಜರಾತ್ ವಿರುದ್ಧ 92 ರನ್‌ಗಳ ಗೆಲುವು ಸಾಧಿಸಿದೆ. ಈ ಗೆಲುವಿನ ಮೂಲಕ ಆರ್ಸಿಬಿ ಸತತ 2ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಬೆಂಗಳೂರು ತಂಡ ಟ್ರೋಫಿ ಎತ್ತಿ ಹಿಡಿಯಲು ಕೇವಲ ಒಂದು ಜಯದ ಅಂತರದಲ್ಲಿದೆ. ಕ್ವಾಲಿಫೈಯರ್ 1 ರಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 254 ರನ್ ಗಳಿಸಿತ್ತು. 255 ರನ್‌ಗಳ ದಾಖಲೆಯ ಮೊತ್ತವನ್ನ ಬೆನ್ನಟ್ಟಿದ ಗುಜರಾತ್ ಟೈಟನ್ಸ್ ಯಾವುದೇ ಹಂತದಲ್ಲೂ ಸ್ಪರ್ಧೆ ನೀಡಲಾಗದೇ 19.3 ಓವರ್‌ಗಳಲ್ಲಿ 162 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯವಾಗಿ ಸೋಲು ಕಂಡಿತು.
255 ರನ್‌ಗಳ ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್ ಕೆಟ್ಟ ಆರಂಭ ಪಡೆದುಕೊಂಡಿತು. ಪವರ್ ಪ್ಲೇ ಮುಗಿಯುವುದರೊಳಗೆ 5 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಬೃಹತ್ ಮೊತ್ತದ ಗುರಿಯ ಒತ್ತಡಕ್ಕೆ ಸಿಲುಕಿದ ಟೈಟನ್ಸ್ ಬ್ಯಾಟರ್ಗಳು ಆರ್ಸಿಬಿ ವೇಗಿಗಳ ದಾಳಿಗೆ ಉತ್ತರಿಸಲಾಗದೇ ಸತತ ವಿಕೆಟ್ ಕಳೆದುಕೊಂಡರು. ಆರಂಭಿಕ ಸಾಯಿ ಸುದರ್ಶನ್ ದುರಾದೃಷ್ಟಕರ ರೀತಿಯಲ್ಲಿ ಹಿಟ್ ವಿಕೆಟ್ ಆಗಿ ನಿರಾಶೆ ಮೂಡಿಸಿದರು. ಡಫಿ ಬೌಲಿಂಗ್‌ನಲ್ಲಿ ಶಾಟ್ ಮಾಡಿದರು. ಆದರೆ ಬ್ಯಾಟ್ ಕೈಜಾರಿ ಸ್ಟಂಪ್ ಮೇಲೆ ಬಿದ್ದು ಔಟ್ ಆದರು. ನಂತರದ ಓವರ್‌ನಲ್ಲೇ ಶುಭ್ಮನ್ ಗಿಲ್ ಕೇವಲ 2 ರನ್‌ಗಳಿಸಿ ಭುವನೇಶ್ವರ್ ಕುಮಾರ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು.
ಜೋಸ್ ಬಟ್ಲರ್ ಸ್ಫೋಟಕ ಆಟಕ್ಕೆ ಮುಂದಾಗಿ ಹ್ಯಾಜಲ್ವುಡ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ಬಟ್ಲರ್ 11 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್‌ಗಳ ಸಹಿತ 29 ರನ್‌ಗಳಿಸಿದರು. ಬಟ್ಲರ್ ವಿಕೆಟ್ ನಂತರ ಜಿಟಿ ಚೇತರಿಸಿಕೊಳ್ಳಲು ಆರ್ಸಿಬಿ ಬೌಲರ್‌ಗಳು ಅವಕಾಶ ನೀಡಲಿಲ್ಲ. 53ಕ್ಕೆ3 ಇದ್ದ ತಂಡ 88 ರನ್‌ಗಳಾಗುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡಿತು. ನಿಶಾಂತ್ ಸಿಂಧು 3 ಎಸೆತಗಳಲ್ಲಿ 5 ರನ್, ವಾಷಿಂಗ್ಟನ್ ಸುಂದರ್ 8 ಎಸೆತಗಳಲ್ಲಿ 8, ಜೇಸನ್ ಹೋಲ್ಡರ್ 3 ಎಸೆತಗಳಲ್ಲಿ ಶೂನ್ಯ, ರಶೀದ್ ಖಾನ್ 9 ಎಸೆತಗಳಲ್ಲಿ 8 ಹಾಗೂ ಕಗಿಸೋ ರಬಾಡ 5 ಎಸೆತಗಳಲ್ಲಿ 2 ಬೌಂಡರಿ ಸಹಿತ 9 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಜಿಟಿ 100ರ ಗಡಿ ದಾಟೋದು ಅನುಮಾನ ಎನ್ನಲಾಗಿತ್ತು. ಆರ್ಸಿಬಿ 100-150ರನ್‌ಗಳ ಅಂತರದಲ್ಲಿ ಗೆಲ್ಲಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ರಾಹುಲ್ ತೆವಾಟಿಯಾ ಎಲ್ಲರ ಲೆಕ್ಕಾಚಾರ ಉಲ್ಟಾ ಮಾಡಿದರು. 9ನೇ ವಿಕೆಟ್ ಜೊತೆಯಾಟದಲ್ಲಿ ಮೊಹಮ್ಮದ್ ಸಿರಾಜ್ ಜೊತೆ ಸೇರಿ 68 ರನ್ ಸೇರಿಸಿ ತಂಡದ ಮೊತ್ತವನ್ನ 150 ರನ್ ಗಡಿದಾಟಿಸಿದರು. ತೆವಾಟಿಯಾ 43 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್‌ಗಳ ಸಹಿತ 68 ರನ್‌ಗಳಿಸಿ 19ನೇ ಓವರ್‌ನಲ್ಲಿ ಭುವನೇಶ್ವರ್‌ಗೆ ವಿಕೆಟ್ ಒಪ್ಪಿಸಿದರು. 20ನೇ ಓವರ್‌ನ 3ನೇ ಎಸೆತದಲ್ಲಿ ಕೃನಾಲ್ ಪಾಂಡ್ಯ ಮೊಹಮ್ಮದ್ ಸಿರಾಜ್ (5) ವಿಕೆಟ್ ಪಡೆದು ಗುಜರಾತ್ ಇನ್ನಿಂಗ್ಸ್‌ಗೆ ಅಂತ್ಯ ಹಾಡಿದರು.
ಆರ್ಸಿಬಿ ಪರ ಜೇಕಬ್ ಡಫಿ 39ಕ್ಕೆ3 ವಿಕೆಟ್ ಪಡೆದು ಮಿಂಚಿದರೆ, ಇವರಿಗೆ ಸಾಥ್ ನೀಡಿದ ಅನುಭವಿ ಭುವನೇಶ್ವರ್ ಕುಮಾರ್ 28ಕ್ಕೆ2, ರಸಿಕ್ ಸಲಾಮ್ 24ಕ್ಕೆ2, ಕೃನಾಲ್ ಪಾಂಡ್ಯ 16ಕ್ಕೆ2 ಹಾಗೂ ಜೋಶ್ ಹ್ಯಾಜಲ್ವುಡ್ 39ಕ್ಕೆ1 ವಿಕೆಟ್ ಪಡೆದು 92 ರನ್‌ಗಳ ಬೃಹತ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಆರ್ಸಿಬಿ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಮೊದಲ ಓವರ್‌ನಲ್ಲೇ 3 ಬೌಂಡರಿ ಸಿಡಿಸಿದ್ದ ವೆಂಕಟೇಶ್ ಅಯ್ಯರ್ 2ನೇ ಓವರ್‌ನಲ್ಲಿ ರಬಾಡ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಗಿಲ್ ಹಿಡಿದ ಅದ್ಭುತ ಕ್ಯಾಚ್‌ಗೆ ಬಲಿಯಾದರು. ಅಯ್ಯರ್ 7 ಎಸೆತಗಳಲ್ಲಿ 19 ರನ್ ಗಳಿಸಿದ್ದರು. ನಂತರ ಬಂದ ಪಡಿಕ್ಕಲ್ 2ನೇ ವಿಕೆಟ್‌ಗೆ ಕೊಹ್ಲಿ ಜೊತೆ ಸೇರಿ ಕೇವಲ 38 ಎಸೆತಗಳಲ್ಲಿ 72 ರನ್ ಸೇರಿಸಿದರು. ಸ್ಫೋಟಕ ಆಟವಾಡುತ್ತಿದ್ದ ಈ ಜೋಡಿ ಒಂದೇ ಓವರ್‌ನಲ್ಲಿ ಹೋಲ್ಡರ್‌ಗೆ ವಿಕೆಟ್ ಒಪ್ಪಿಸಿದರು. ಕೊಹ್ಲಿ 25 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 43 ರನ್‌ಗಳಿಸಿ ಬೌಲ್ಡ್ ಆದರೆ, ಪಡಿಕ್ಕಲ್ 19 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ 30 ರನ್‌ಗಳಿಸಿ ಬಟ್ಲರ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
3 ಎಸೆತಗಳ ಅಂತರದಲ್ಲಿ ಆರ್ಸಿಬಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ಆದರೆ ನಾಯಕ ರಜತ್ ಪಾಟೀದಾರ್ ಹಾಗೂ ಕೃನಾಲ್ ಪಾಂಡ್ಯ ಒಂದೆರಡು ಓವರ್ ಎಚ್ಚರಿಕೆಯಿಂದ ಆಡಿ ನಂತರ ಮತ್ತೆ ತಮ್ಮ ಅಬ್ಬರ ಶುರುಮಾಡಿಕೊಂಡರು. ಈ ಇಬ್ಬರು ಅನುಭವಿಗಳು 4ನೇ ವಿಕೆಟ್ ಜೊತೆಯಾಟದಲ್ಲಿ 95 ರನ್‌ಗಳ ಭರ್ಜರಿ ಜೊತೆಯಾಟ ನೀಡಿದರು. 28 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಿತ 43 ರನ್‌ಗಳಿಸಿದ್ದ ಕೃನಾಲ್ ಪಾಂಡ್ಯ 17ನೇ ಓವರ್‌ನಲ್ಲಿ ರಬಾಡಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಸ್ಫೋಟಕ ಆಟಗಾರ ಟಿಮ್ ಡೇವಿಡ್ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾದರು. 5 ಎಸೆತಗಳಲ್ಲಿ 4 ರನ್‌ಗಳಿಸಿದ್ದ ಡೇವಿಡ್ ಕನ್ನಡಿಗ ಪ್ರಸಿದ್ಧ ಕೃಷ್ಣ ಬೌಲಿಂಗ್‌ನಲ್ಲಿ ಬೌಲ್ಡ್ ಆದರು.
ಕೊನೆಯ ಓವರ್ವರೆಗೂ ಆಡಿದ ನಾಯಕ ರಜತ್ ಪಾಟೀದಾರ್ 33 ಎಸೆತಗಳಲ್ಲಿ 5 ಬೌಂಡರಿ, 9 ಸಿಕ್ಸರ್‌ಗಳ ಸಹಿತ ಅಜೇಯ 93 ರನ್‌ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು. ಜಿತೇಶ್ ಶರ್ಮಾ 5 ಎಸೆತಗಳಲ್ಲಿ ತಲಾ 1 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 15 ರನ್‌ಗಳಿಸಿ ತಂಡದ ಮೊತ್ತವನ್ನ 250ರ ಗಡಿ ದಾಟಿಸಿದರು.
ಗುಜರಾತ್ ಟೈಟನ್ಸ್ ಪರ ಕಗಿಸೋ ರಬಾಡ 54ಕ್ಕೆ2, ಜೇಸನ್ ಹೋಲ್ಡರ್ 39ಕ್ಕೆ2, ಪ್ರಸಿದ್ಧ್ ಕೃಷ್ಣ 53ಕ್ಕೆ1 ವಿಕೆಟ್ ಪಡೆದರು.
May 26, 2026 11:49 PM IST













