Last Updated:
ಸೀತೆಯ ಪಾತ್ರದಲ್ಲಿ ನಟಿಸಿರುವ ಸಾಯಿ ಪಲ್ಲವಿ (Sai Pallavi) ಅವರ ಉಡುಗೆ ಹೆಚ್ಚು ಗಮನ ಸೆಳೆದಿದ್ದು, ಕೆಲವರು ಅದನ್ನು ಮಾಡರ್ನ್ ಸೀತೆ ಎಂದು ಟೀಕಿಸಿದ್ದಾರೆ. ಈ ಟೀಕೆಗಳ ನಡುವೆಯೇ ಚಿತ್ರದ ಕಾಸ್ಟ್ಯೂಮ್ ಡಿಸೈನರ್ಸ್ ರಿಂಪಲ್ ಮತ್ತು ಹರ್‌ಪ್ರೀತ್ ನರುಲಾ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿ, ತಮ್ಮ ವಿನ್ಯಾಸದ ಹಿಂದಿನ ಉದ್ದೇಶವನ್ನು ವಿವರಿಸಿದ್ದಾರೆ.
ಭಾರಿ ನಿರೀಕ್ಷೆ ಮೂಡಿಸಿರುವ ರಾಮಾಯಣ (Ramayana) ಚಿತ್ರದ ಟ್ರೈಲರ್ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ (Social Media) ಚಿತ್ರದ ಪಾತ್ರಗಳು ಮತ್ತು ಅವುಗಳ ವಿನ್ಯಾಸಗಳ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ಅದರಲ್ಲೂ ಸೀತೆಯ ಪಾತ್ರದಲ್ಲಿ ನಟಿಸಿರುವ ಸಾಯಿ ಪಲ್ಲವಿ (Sai Pallavi) ಅವರ ಉಡುಗೆ ಹೆಚ್ಚು ಗಮನ ಸೆಳೆದಿದ್ದು, ಕೆಲವರು ಅದನ್ನು ಮಾಡರ್ನ್ ಸೀತೆ ಎಂದು ಟೀಕಿಸಿದ್ದಾರೆ. ಈ ಟೀಕೆಗಳ ನಡುವೆಯೇ ಚಿತ್ರದ ಕಾಸ್ಟ್ಯೂಮ್ ಡಿಸೈನರ್ಸ್ ರಿಂಪಲ್ ಮತ್ತು ಹರ್‌ಪ್ರೀತ್ ನರುಲಾ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿ, ತಮ್ಮ ವಿನ್ಯಾಸದ ಹಿಂದಿನ ಉದ್ದೇಶವನ್ನು ವಿವರಿಸಿದ್ದಾರೆ.
ಟ್ರೈಲರ್ ಬಿಡುಗಡೆಯಾದ ನಂತರ ಸಾಯಿ ಪಲ್ಲವಿ ಅವರ ಸೀತೆಯ ಪಾತ್ರದ ಉಡುಗೆ ಹಾಗೂ ಲಾರಾ ದತ್ತ ಅಭಿನಯಿಸಿರುವ ಕೈಕೇಯಿ ಪಾತ್ರದ ಕಾಸ್ಟ್ಯೂಮ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯಿತು. ವಿಶೇಷವಾಗಿ ಸೀತೆಯ ಉಡುಗೆ ಪೌರಾಣಿಕ ಪಾತ್ರಕ್ಕಿಂತ ಆಧುನಿಕ ಶೈಲಿಯಲ್ಲಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು. ಮತ್ತಷ್ಟು ಮಂದಿ ಈ ಲುಕ್ ರಾಮಾಯಣದ ಸಾಂಪ್ರದಾಯಿಕ ಚಿತ್ರಣಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಟೀಕಿಸಿದರು.
ಈ ಟೀಕೆಗಳಿಗೆ ಪ್ರತಿಕ್ರಿಯಿಸಿದ ಕಾಸ್ಟ್ಯೂಮ್ ಡಿಸೈನರ್ಸ್ ರಿಂಪಲ್ ಮತ್ತು ಹರ್‌ಪ್ರೀತ್ ನರುಲಾ, ಇಂತಹ ಪ್ರತಿಕ್ರಿಯೆಗಳು ಬರುತ್ತವೆ ಎಂಬುದು ಮೊದಲೇ ತಮ್ಮ ನಿರೀಕ್ಷೆಯಲ್ಲಿತ್ತು ಎಂದು ಹೇಳಿದ್ದಾರೆ.
ಹಾಗೆಯೇ ಸೀತೆಯ ಉಡುಗೆ ಕುರಿತು ಮಾತನಾಡಿದ ರಿಂಪಲ್, ಪುರಾಣಗಳಲ್ಲಿ ಕಾಣುವ ಚಿತ್ರಗಳನ್ನು ಮಾತ್ರ ಆಧಾರವಾಗಿಸಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ. ತಾವು ಪೂಜಿಸುವ ಸೀತಾ ದೇವಿಯನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡು ಈ ವಿನ್ಯಾಸ ರೂಪಿಸಿದ್ದಾಗಿ ಅವರು ವಿವರಿಸಿದರು. ಹೊಸ ದೃಷ್ಟಿಕೋನದ ಮೂಲಕ ಪಾತ್ರವನ್ನು ಪ್ರೇಕ್ಷಕರ ಮುಂದೆ ತರುವ ಉದ್ದೇಶವೇ ಈ ವಿನ್ಯಾಸದ ಹಿಂದೆ ಇತ್ತು ಎಂದರು.
ಕೈಕೇಯಿ ಪಾತ್ರದ ಉಡುಗೆಯ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿವೆ. ಇದಕ್ಕೆ ಪ್ರತಿಕ್ರಿಯಿಸಿದ ಹರ್‌ಪ್ರೀತ್ ನರುಲಾ, ಪ್ರತಿಯೊಂದು ಬಣ್ಣಕ್ಕೂ ವಿಶೇಷ ಅರ್ಥವಿದೆ ಎಂದು ತಿಳಿಸಿದ್ದಾರೆ.
ಹಸಿರು ಬಣ್ಣ ತಾಯ್ತನವನ್ನು ಪ್ರತಿಬಿಂಬಿಸಿದರೆ, ಗಾಢ ಮೆರೂನ್ ಬಣ್ಣ ಪಾತ್ರದ ಆಂತರಿಕ ಸಂಘರ್ಷವನ್ನು ಸೂಚಿಸುತ್ತದೆ. ಹೀಗಾಗಿ ಪ್ರತಿಯೊಂದು ಕಾಸ್ಟ್ಯೂಮ್ ಹಿಂದೆ ನಿರ್ದಿಷ್ಟವಾದ ಕಲಾತ್ಮಕ ಆಲೋಚನೆ ಮತ್ತು ಉದ್ದೇಶವಿದೆ. ಅದನ್ನು ಅರ್ಥಮಾಡಿಕೊಳ್ಳುವ ಮೊದಲೇ ಕೆಲವರು ಟೀಕೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಸಿನಿಮಾ ಬಿಡುಗಡೆಯಾಗುವ ಮೊದಲೇ ತೀರ್ಮಾನಕ್ಕೆ ಬರದೆ, ಮೊದಲು ಚಿತ್ರವನ್ನು ಸಂಪೂರ್ಣವಾಗಿ ವೀಕ್ಷಿಸಿ ನಂತರ ಅಭಿಪ್ರಾಯ ವ್ಯಕ್ತಪಡಿಸಿ ಎಂದು ಕಾಸ್ಟ್ಯೂಮ್ ಡಿಸೈನರ್ಸ್ ಮನವಿ ಮಾಡಿದ್ದಾರೆ.
ಜುಲೈ 30ರಂದು ಬಿಡುಗಡೆಯಾದ ರಾಮಾಯಣ ಚಿತ್ರದ ಟ್ರೈಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದಲ್ಲಿ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ರಾಕಿಂಗ್ ಸ್ಟಾರ್ ಯಶ್, ಲಕ್ಷ್ಮಣನಾಗಿ ರವಿ ದುಬೆ ಹಾಗೂ ಕೈಕೇಯಿಯಾಗಿ ಲಾರಾ ದತ್ತ ಅಭಿನಯಿಸಿದ್ದಾರೆ.
Bangalore [Bangalore],Bangalore,Karnataka














