Last Updated:
ಕತಾರ್ ಎನರ್ಜಿ ಎಲ್ಎನ್ಜಿ ನಿರ್ವಹಿಸುವ ರಾಸ್ ಲಫಾನ್ ಕೈಗಾರಿಕಾ ನಗರದ ಬರ್ಜಾನ್ ಸ್ಥಳೀಯ ಅನಿಲ ಪೂರೈಕೆ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ 12 ಭಾರತೀಯರು ಸೇರಿದಂತೆ ಕನಿಷ್ಠ ಹದಿಮೂರು ಜನರು ಸಾವನ್ನಪ್ಪಿದ್ದರು. ಅವರಲ್ಲಿ ಒಬ್ಬರು ಪಾಕಿಸ್ತಾನಿ ಪ್ರಜೆ ಸೇರಿದ್ದಾರೆ.
ನವದೆಹಲಿ: ಕತಾರ್ನ ರಾಸ್ ಲಫಾನ್ನಲ್ಲಿ ನಡೆದ ಕೈಗಾರಿಕಾ ಅಪಘಾತದಲ್ಲಿ ಮೃತಪಟ್ಟ ಎಂಟು ಭಾರತೀಯ ಪ್ರಜೆಗಳ ಶವಗಳನ್ನು ಸ್ವದೇಶಕ್ಕೆ ತರಲಾಗಿದ್ದು, ಆ ಮೂಲಕ ಒಟ್ಟು 12 ಮಂದಿಯ ಮೃತದೇಹಗಳನ್ನು ಸ್ವದೇಶಕ್ಕೆ ತರಲಾಗಿದೆ ಎಂದು ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಗುರುವಾರ ನಾಲ್ವರು ಮೃತರ ಶವಗಳನ್ನು ಒಂದು ದಿನ ಮುಂಚಿತವಾಗಿ ಸ್ವದೇಶಕ್ಕೆ ತರಲಾಗಿದೆ. ಈ ಬಗ್ಗೆ ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಎಕ್ಸ್ ಖಾತೆಯಲ್ಲಿ ಶುಕ್ರವಾರ ರಾತ್ರಿ ಮಾಡಲಾದ ಪೋಸ್ಟ್ನಲ್ಲಿ, ‘ರಾಸ್ ಲಫಾನ್ ಅಪಘಾತದಲ್ಲಿ ದುರದೃಷ್ಟವಶಾತ್ ಸಾವನ್ನಪ್ಪಿದ 8 ಭಾರತೀಯ ಪ್ರಜೆಗಳ ಮೃತದೇಹಗಳನ್ನು ಜೂನ್ 26 ರಂದು ಭಾರತಕ್ಕೆ ವಾಪಸ್ ತರಲಾಗಿದೆ. 12 ಮೃತ ದೇಹಗಳಲ್ಲಿ 4 ಮೃತ ದೇಹಗಳನ್ನು ಜೂನ್ 25 ರಂದು ವಾಪಸ್ ತರಲಾಗಿದೆ’ ಎಂದು ಹೇಳಿದೆ.
ಭಾರತೀಯ ರಾಯಭಾರ ಕಚೇರಿಯು, ಖತಾರಿ ಅಧಿಕಾರಿಗಳು, ಭಾರತೀಯ ಸಮುದಾಯ ಸಂಸ್ಥೆಗಳು ಮತ್ತು ಭಾರತದಲ್ಲಿನ ಸರ್ಕಾರಿ ಸಂಸ್ಥೆಗಳು, ವಾಪಸಾತಿ ಪ್ರಕ್ರಿಯೆಯನ್ನು ಸುಗಮಗೊಳಿಸುವಲ್ಲಿ ಮತ್ತು ದುಃಖಿತ ಕುಟುಂಬಗಳಿಗೆ ಬೆಂಬಲ ನೀಡುವಲ್ಲಿ ನೀಡಿದ ತ್ವರಿತ ಸಹಾಯಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿತು.
ಅಪಘಾತದ ನಂತರ ಚಿಕಿತ್ಸೆ ಪಡೆಯುತ್ತಿರುವ ಗಾಯಗೊಂಡ ಕೆಲವು ಭಾರತೀಯ ಪ್ರಜೆಗಳನ್ನು ಭೇಟಿ ಮಾಡಲು ರಾಯಭಾರಿ ವಿಪುಲ್ ಮತ್ತು ರಾಯಭಾರ ಕಚೇರಿಯ ಇತರ ಅಧಿಕಾರಿಗಳು ಶುಕ್ರವಾರ ಅಲ್ಖೋರ್ಗೆ ಭೇಟಿ ನೀಡಿದರು.
ಈ ಘಟನೆಯಲ್ಲಿ ಕತಾರ್, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ದೇಶಗಳ ಜನರು ಸೇರಿದಂತೆ ಒಟ್ಟು 66 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
New Delhi,Delhi













