ಕನ್ನಡ ಪ್ರೇಕ್ಷಕರಿಗೆ ಪ್ರಿಯಾ ಆನಂದ್ ಯಾವಾಗಲೂ ತಮ್ಮವರೇ ಅನಿಸುತ್ತಾರೆ. ಕಳೆದ ಕೆಲವು ವರ್ಷಗಳಲ್ಲಿ ಅವರು ‘ಆರೆಂಜ್’, ‘ರಾಜಕುಮಾರ’, ‘ಜೇಮ್ಸ್’ ಮತ್ತು ‘ಕರಟಕ ದಮನಕ’ ಚಿತ್ರಗಳ ಮೂಲಕ ವೀಕ್ಷಕರೊಂದಿಗೆ ಆತ್ಮೀಯ ಸಂಬಂಧ ಬೆಳೆಸಿಕೊಂಡಿದ್ದಾರೆ. ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದರೂ, ಅವರು ಕನ್ನಡ ಚಿತ್ರಗಳಲ್ಲಿ ನಿರಂತರವಾಗಿ ನಟಿಸುತ್ತಾ ಬಂದಿದ್ದಾರೆ. ಹೀಗಾಗಿ ಅವರು ಇಲ್ಲಿಗೆ ಅತಿಥಿ ನಟಿಯಾಗಿ ಬಂದಂತೆ ಅನಿಸದೇ, ಕನ್ನಡದವರೇ ಆಗಿಬಿಟ್ಟಿದ್ದಾರೆ.
ಪ್ರಿಯಾ ಆನಂದ್ ಅವರ ಮುಂದಿನ ಚಿತ್ರ ‘ಬಲರಾಮನ ದಿನಗಳು’, ಕೆ.ಎಂ. ಚೈತನ್ಯ ನಿರ್ದೇಶನದ ಈ ಗ್ಯಾಂಗ್‌ಸ್ಟರ್ ಡ್ರಾಮಾ ಜೂನ್ 26 ರಂದು ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಚೈತನ್ಯ ಅವರ ಹಿಂದಿನ ಸೂಪರ್ ಹಿಟ್ ಅಂಡರ್‌ವರ್ಲ್ಡ್ ಕ್ಲಾಸಿಕ್ ಚಿತ್ರ ‘ಆ ದಿನಗಳು’ ಜೊತೆ ಹೋಲಿಕೆ ಮಾಡಿದ್ದಾರೆ. ‘ಆ ದಿನಗಳು’ ಬಿಡುಗಡೆಯಾಗಿ ಎರಡು ದಶಕಗಳಾಗುತ್ತ ಬಂದರೂ ಇಂದಿಗೂ ಕನ್ನಡ ಗ್ಯಾಂಗ್‌ಸ್ಟರ್ ಸಿನಿಮಾಗಳಿಗೆ ಮಾದರಿಯಾಗಿದೆ.
ಈ ಚಿತ್ರದಲ್ಲಿ ಪ್ರಿಯಾ ಆನಂದ್ ‘ರೇವತಿ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ನನ್ನ ಪಾತ್ರವು ಕೇವಲ ಅಸಹಾಯಕವಾಗಿ ಅಳುವ ಹೆಣ್ಣಿನ ಪಾತ್ರವಲ್ಲ. ಈ ಸಿನಿಮಾದಲ್ಲಿ ಪುರುಷರ ಭಾವುಕತೆಗಳನ್ನು ತೋರಿಸಿರುವಷ್ಟೇ ಮಹಿಳಾ ಪಾತ್ರಗಳನ್ನೂ ಬರೆಯಲಾಗಿದೆ. ಇದು ನನಗೆ ತುಂಬಾ ಖುಷಿ ಕೊಟ್ಟಿತು. ‘ಆ ದಿನಗಳು’ ನಂತರ ಚೈತನ್ಯ ಈ ರೀತಿಯ ಕಥೆಗೆ ಕೈ ಹಾಕಿರಲಿಲ್ಲ, ಹಾಗಾಗಿ ಚಿತ್ರದ ಬಗ್ಗೆ ಭಾರಿ ಕುತೂಹಲವಿದೆ. ಇಷ್ಟು ವರ್ಷಗಳ ಕಾಲ ಶ್ರಮಪಟ್ಟು ಸಿದ್ಧಪಡಿಸಿದ ಕಥೆಯ ಭಾಗವಾಗಿದ್ದು ನನಗೆ ಹೆಮ್ಮೆ ತಂದಿದೆ’ ಎಂದಿದ್ದಾರೆ.
ನಿರ್ದೇಶಕರ ಜೊತೆಗಿನ ಮೊದಲ ಭೇಟಿಯನ್ನು ನೆನಪಿಸಿಕೊಂಡ ಪ್ರಿಯಾ, ‘ನಾನು ಅವರನ್ನು ಒಂದು ಟೀ ಅಂಗಡಿಯಲ್ಲಿ ಭೇಟಿಯಾಗಿದ್ದೆ. ಆ ಮಾತುಕತೆ ಇನ್ನೂ ನೆನಪಿನಲ್ಲಿದೆ. ಕೆಲವರು ಈ ಸಿನಿಮಾವನ್ನು ಯಾಕೆ ಒಪ್ಪಿಕೊಂಡ್ರಿ ಎಂದು ಕೇಳುತ್ತಾರೆ, ಆದರೆ ಸಿನಿಮಾಗಳೇ ನಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದು ನಾನು ನಂಬುತ್ತೇನೆ. ರೇವತಿ ಪಾತ್ರವನ್ನು ಒಪ್ಪಿಕೊಂಡು ಆ ಜಗತ್ತಿಗೆ ಕಾಲಿಟ್ಟಿದ್ದು ಸೂಕ್ತ ಎನಿಸಿತು’ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಗ್ಯಾಂಗ್‌ಸ್ಟರ್ ಸಿನಿಮಾಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ ಇರುವುದಿಲ್ಲ. ಅವರು ಕೇವಲ ಹಿನ್ನೆಲೆಯಲ್ಲಿ ಇರುತ್ತಾರೆ ಅಥವಾ ಪುರುಷರ ಪಾತ್ರಗಳಿಗೆ ಭಾವುಕ ಬೆಂಬಲವಾಗಿರುತ್ತಾರೆ. ಆದರೆ ‘ಬಲರಾಮನ ದಿನಗಳು’ ಚಿತ್ರದಲ್ಲಿ ಹಾಗಾಗಿಲ್ಲ ಎಂದಿದ್ದಾರೆ ಪ್ರಿಯಾ. “ಪುರುಷರ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂದು ಜನ ಹೇಳುತ್ತಾರೆ. ಅದು ಕೇಳಲು ಹಳೆಯ ಮಾತು ಅನಿಸಿದರೂ ಸತ್ಯ. ಪ್ರತಿಯೊಬ್ಬರಿಗೂ ತಮ್ಮನ್ನು ಪ್ರಶ್ನಿಸುವ, ಬೆಂಬಲಿಸುವ ಮತ್ತು ಹೊಸ ದೃಷ್ಟಿಕೋನ ನೀಡುವ ಒಬ್ಬ ವ್ಯಕ್ತಿಯ ಅಗತ್ಯವಿರುತ್ತದೆ. ರೇವತಿ ಕೇವಲ ಬಂದು ಹೋಗುವ ಪಾತ್ರವಲ್ಲ. ಅವಳಿಗೆ ಸ್ವಂತ ನಿರ್ಧಾರ ತಗೊಳ್ಳುವ ಶಕ್ತಿಯಿದೆ. ಅವಳು ಬಲರಾಮನ ಪ್ರಯಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ.” ಎಂದು ಹೇಳಿದ್ದಾರೆ.
ಈ ಚಿತ್ರದ ಮೂಲಕ ಪ್ರಿಯಾ ಮೊದಲ ಬಾರಿಗೆ ಆ್ಯಕ್ಷನ್ ಸ್ಟಾರ್ ವಿನೋದ್ ಪ್ರಭಾಕರ್ ಜೊತೆ ನಟಿಸಿದ್ದಾರೆ. ತೆರೆಮೇಲೆ ಆ್ಯಕ್ಷನ್ ಹೀರೋ ಆಗಿ ಕಾಣುವ ವಿನೋದ್, ವೈಯಕ್ತಿಕವಾಗಿ ತುಂಬಾ ಭಿನ್ನ ಎಂದಿದ್ದಾರೆ ಪ್ರಿಯಾ. “ವಿನೋದ್ ಜೊತೆ ಕೆಲಸ ಮಾಡುವುದು ತುಂಬಾ ಇಷ್ಟವಾಯಿತು. ನಾವು ಅವರ ಇಮೇಜ್ ನೋಡಿ ಅಂದುಕೊಳ್ಳುವುದಕ್ಕೂ ಅವರ ನಿಜವಾದ ಸ್ವಭಾವಕ್ಕೂ ವ್ಯತ್ಯಾಸವಿದೆ. ಅವರು ತುಂಬಾ ಯೋಚನೆ ಮಾಡುವ, ಸಿನಿಮಾ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ವ್ಯಕ್ತಿ. ಚಿತ್ರೀಕರಣದ ಸಮಯದಲ್ಲಿ ಅವರ ಪತ್ನಿ ನಿಶಾ ಅವರನ್ನೂ ಭೇಟಿಯಾಗಿದ್ದು ಖುಷಿ ತಂದಿತು”.
ವಿವಿಧ ಚಿತ್ರರಂಗಗಳಲ್ಲಿ ಕೆಲಸ ಮಾಡಿರುವ ಪ್ರಿಯಾ ಅವರಿಗೆ ಕನ್ನಡದ ಮೇಲಿರುವ ಪ್ರೀತಿ ಅಪಾರ. “ನನ್ನ ತಂದೆ ತಮಿಳಿನವರು, ತಾಯಿಗೆ ತೆಲುಗು ಮತ್ತು ಮಹಾರಾಷ್ಟ್ರದ ಹಿನ್ನೆಲೆಯಿದೆ. ನಾನು ಬೇರೆ ಬೇರೆ ಸಂಸ್ಕೃತಿಗಳ ಮಧ್ಯೆ ಬೆಳೆದಿದ್ದೇನೆ. ಆದರೆ ನಾನು ಕನ್ನಡಿಗರಾಗಲು ಇಷ್ಟಪಡುತ್ತೇನೆ” ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. “ನನಗೆ ಇಲ್ಲಿ ತುಂಬಾ ಆತ್ಮೀಯತೆ ಅನಿಸುತ್ತದೆ. ನಾನು ಈಗ ತುಂಬಾ ಕನ್ನಡ ಮಾತನಾಡುತ್ತೇನೆ. ಈ ಭಾಷೆ ನನ್ನ ದೈನಂದಿನ ಜೀವನದ ಭಾಗವಾಗಿದೆ. ಕನ್ನಡ ನನಗೆ ಸಹಜವಾಗಿಯೇ ಬರುತ್ತದೆ”.
ಸಿನಿಮಾಗಳ ನಡುವೆ ದೀರ್ಘಾವಧಿಯ ಗ್ಯಾಪ್ ಇದ್ದರೂ ಪ್ರೇಕ್ಷಕರು ತಮ್ಮನ್ನು ನೆನಪಿಟ್ಟುಕೊಳ್ಳಲು ಹಾಡುಗಳೇ ಕಾರಣ ಎನ್ನುತ್ತಾರೆ ಪ್ರಿಯಾ. ‘ನಾನು ಕೆಲಸ ಮಾಡಿದ ಎಲ್ಲಾ ಚಿತ್ರರಂಗಗಳಲ್ಲೂ ಜನ ಇಂದಿಗೂ ನೆನಪಿನಲ್ಲಿಟ್ಟುಕೊಳ್ಳುವಂತಹ ಹಾಡುಗಳಲ್ಲಿ ಭಾಗಿಯಾಗುವ ಸೌಭಾಗ್ಯ ನನಗೆ ಸಿಕ್ಕಿದೆ. ಸಿನಿಮಾ ರಿಲೀಸ್ ತಡವಾದರೂ ಆ ಹಾಡುಗಳು ಪ್ರೇಕ್ಷಕರನ್ನು ನನ್ನ ಜೊತೆ ಕನೆಕ್ಟ್ ಆಗಿರುವಂತೆ ಮಾಡಿದ್ದಾವೆ’.
ಇಂದು ಪ್ರಿಯಾ ಆನಂದ್ ಅವರ ಆಲೋಚನೆಗಳು ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಿಗಿಂತ ತುಂಬಾ ಬದಲಾಗಿವೆ. “ಜನ ನನ್ನನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬ ಕಾರಣಕ್ಕಾಗಿ ಸಿನಿಮಾ ಮಾಡಬೇಕು ಅನ್ನೋ ಒತ್ತಡ ಈಗ ನನಗಿಲ್ಲ. ಕೇವಲ ಪ್ರಚಾರಕ್ಕಾಗಿ ಸಿನಿಮಾ ಮಾಡುವ ಬದಲು, ಸಣ್ಣ ಪಾತ್ರವಾದರೂ ನನಗೆ ಖುಷಿ ಕೊಡುವ ಸಿನಿಮಾದ ಭಾಗವಾಗಲು ನಾನು ಇಷ್ಟಪಡುತ್ತೇನೆ” ಎಂದಿದ್ದಾರೆ ಪ್ರಿಯಾ.
‘ಬಲರಾಮನ ದಿನಗಳು’ ಚಿತ್ರದ ನಂತರ ಪ್ರಿಯಾ ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಸದ್ಯಕ್ಕೆ ಅವರು ಹೊಸ ಬ್ಯುಸಿನೆಸ್ ಪ್ರಾರಂಭಿಸಲು ಮತ್ತು ಸಿನಿಮಾದಿಂದ ಹೊರತಾದ ಕ್ಷೇತ್ರಗಳಲ್ಲಿ ತಮ್ಮ ಆಸಕ್ತಿಗಳನ್ನು ಅನ್ವೇಷಿಸಲು ಗಮನ ಹರಿಸುತ್ತಿದ್ದಾರೆ.
“ನನಗೆ 20 ವರ್ಷ ಇದ್ದಾಗ ಇದ್ದ ಆಸೆಗಳಿಗೂ, ಈಗಿರುವ ಆಸೆಗಳಿಗೂ ತುಂಬಾ ವ್ಯತ್ಯಾಸವಿದೆ. ಸಿನಿಮಾವನ್ನು ಅತಿಯಾಗಿ ಪ್ರೀತಿಸಿದ್ದರಿಂದ ನಾನು ಒನ್-ವೇ ಟಿಕೆಟ್ ಪಡೆದು ಭಾರತಕ್ಕೆ ಬಂದಿದ್ದೆ. ಆ ಪ್ರೀತಿ ಇಂದಿಗೂ ಜೀವಂತವಾಗಿದೆ. ಸಿನಿಮಾ ಮಾಡುವುದು ನನಗೆ ಯಾಂತ್ರಿಕ ಕೆಲಸವಾಗಬಾರದು. ನಾನು ಸಿನಿಮಾವನ್ನು ಪ್ರೀತಿಸಿದ್ದರಿಂದ ಇಲ್ಲಿಗೆ ಬಂದೆ. ಆ ಪ್ರೀತಿ ಮತ್ತು ಉತ್ಸಾಹ ಎಂದಿಗೂ ಕಮ್ಮಿಯಾಗದಂತೆ ನೋಡಿಕೊಳ್ಳುವುದೇ ಈಗ ನನ್ನ ಮುಂದಿರುವ ಸವಾಲು” ಎಂದು ಪ್ರಿಯಾ ಆನಂದ್ ಹೇಳಿಕೊಂಡಿದ್ದಾರೆ.












