Last Updated:
2026ರ ಐಪಿಎಲ್ನ 61ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 23 ರನ್ಗಳ ರೋಚಕ ಜಯ ಸಾಧಿಸಿ ಈ ವರ್ಷ ಮೊದಲ ತಂಡವಾಗಿ ಪ್ಲೇಆಫ್ ಪ್ರವೇಶಿಸಿದೆ.
2026ರ ಐಪಿಎಲ್ನ (IPL 2026) 61ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (PBKS vs RCB) 23 ರನ್ಗಳ ರೋಚಕ ಜಯ ಸಾಧಿಸಿ ಮೊದಲ ತಂಡವಾಗಿ ಪ್ಲೇ ಆಫ್ ಸ್ಥಾನವನ್ನ ಖಚಿತಪಡಿಸಿಕೊಂಡಿದೆ. ಧರ್ಮಶಾಲಾ ಮೈದಾನದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆರ್ಸಿಬಿ ಕಳಪೆ ಆರಂಭ ಪಡೆದರೂ, ಕೊಹ್ಲಿ (58), ವೆಂಕಟೇಶ್ ಅಯ್ಯರ್ (73) ಅರ್ಧಶತಕ ಹಾಗೂ ದೇವದತ್ ಪಡಿಕ್ಕಲ್ (45) ಅಬ್ಬರದ ನೆರವಿನಿಂದ ಆರ್ಸಿಬಿ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 222 ರನ್ಗಳಿಸಿತ್ತು. ಗೆಲ್ಲಲೇಬೇಕಾದ ಪಂದ್ಯದಲ್ಲಿ 223 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಪಂಜಾಬ್ ತಂಡ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 199 ರನ್ಗಳಿಸಲಷ್ಟೇ ಶಕ್ತವಾಯಿತು. ಪಂಜಾಬ್ ಪರ 56 ರನ್ಗಳಿಸಿ ಗರಿಷ್ಠ ಸ್ಕೋರರ್ ಆಗಿದ್ದರು.
223 ರನ್ಗಳ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಕೆಟ್ಟ ಆರಂಭ ಪಡೆದುಕೊಂಡಿತು. ಮೊದಲ ಓವರ್ನಲ್ಲೇ ಪ್ರಿಯಾಂಶ್ ಆರ್ಯ ಖಾತೆ ತೆರೆಯದೇ ಭುವನೇಶ್ವರ್ ಕುಮಾರ್ ಬೌಲಿಂಗ್ನಲ್ಲಿ ಶೆಫರ್ಡ್ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ಪ್ರಭಸಿಮ್ರನ್ ಸಿಂಗ್ 5 ಎಸೆತಗಳನ್ನಾಡಿ 2 ರನ್ಗಳಿಸಿ ಭುವನೇಶ್ವರ್ ಕುಮಾರ್ ಬೌಲಿಂಗ್ನಲ್ಲಿ ದೇವದತ್ ಪಡಿಕ್ಕಲ್ಗೆ ಕ್ಯಾಚ್ ನೀಡಿ ಔಟ್ ಆದರು. ನಾಯಕ ಶ್ರೇಯಸ್ ಅಯ್ಯರ್ ಕೂಡ ಕೇವಲ 3 ಎಸೆತಗಳಲ್ಲಿ 1 ರನ್ಗಳಿಸಿ ನಿರ್ಗಮಿಸಿದರು.
ಪಂಜಾಬ್ ಕಿಂಗ್ಸ್ ಪವರ್ ಪ್ಲೇ ಒಳಗೆ 3 ಪ್ರಮುಖ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಈ ಹಂತದಲ್ಲಿ ಒಂದಾದ ಕೊನೊಲಿ ಹಾಗೂ ಸೂರ್ಯಂಶ್ ಶೆಡ್ಗೆ 43 ರನ್ ಸೇರಿಸಿ ಚೇತರಿಕೆ ನೀಡಿದರು. ಆದರೆ ಶೆಫರ್ಡ್ ಬೌಲಿಂಗ್ನಲ್ಲಿ ಕೊನೊಲಿ ಬೆಥೆಲ್ಗೆ ಕ್ಯಾಚ್ ನೀಡಿ ಔಟ್ ಆದರು. 5ನೇ ವಿಕೆಟ್ಗೆ ಜೊತೆಯಾಟ ಸೂರ್ಯಾಂಶ್ ಶೆಡ್ಗೆ ಹಾಗೂ ಮಾರ್ಕಸ್ ಸ್ಟೋಯ್ನಿಸ್ 31 ರನ್ ಸೇರಿಸಿದರು. 22 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್ಗಳ ಸಹಿತ 35 ರನ್ಗಳಿಸಿ ಸುಯಾಶ್ ಶರ್ಮಾ ಬೌಲಿಂಗ್ನಲ್ಲಿ ಕೊಹ್ಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಪಂಜಾಬ್ ತಂಡ 93ಕ್ಕೆ5 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನ ಭೀತಿ ಎದುರಿಸಿತ್ತು.
ಈ ಹಂತದಲ್ಲಿ ಜೊತೆಯಾದ ಸ್ಟೋಯ್ನಿಸ್ ಹಾಗೂ ಶಶಾಂಕ್ ಸಿಂಗ್ 6ನೇ ವಿಕೆಟ್ ಜೊತೆಯಾಟದಲ್ಲಿ 67 ರನ್ ಸೇರಿಸಿ ತಂಡವನ್ನ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡುವಂತೆ ಮಾಡಿದರು. ಆದರೆ 17ನೇ ಓವರ್ನಲ್ಲಿ ಹ್ಯಾಜಲ್ವುಡ್ 25 ಎಸೆತಗಳಲ್ಲಿ 37 ರನ್ಗಳಿಸಿದ್ದ ಮಾರ್ಕಸ್ ಸ್ಟೋಯ್ನಿಸ್ರನ್ನ ಎಲ್ಬಿಡಬ್ಲ್ಯೂ ಮಾಡಿ ಪಂದ್ಯವನ್ನ ಮತ್ತೆ ಆರ್ಸಿಬಿ ಕಡೆಗೆ ತಂದು ನಿಲ್ಲಿಸಿದರು. ಶಶಾಂಕ್ ಸಿಂಗ್ 27 ಎಸೆತಗಳಲ್ಲಿ ತಲಾ 4 ಬೌಂಡರಿ, ಸಿಕ್ಸರ್ಗಳ ಸಹಿತ 56 ರನ್ ಗಳಿಸಿ ಕೊನೆಯವರೆಗೂ ಹೋರಾಡಿ 20ನೇ ಓವರ್ನಲ್ಲಿ ರಸಿಕ್ ಸಲಾಮ್ ಬೌಲಿಂಗ್ನಲ್ಲಿ ಕೊಹ್ಲಿಗೆ ಕ್ಯಾಚ್ ನೀಡಿ ಔಟ್ ಆದರು. ಅಜ್ಮತ್ವುಲ್ಲಾ ಒಮರ್ಝೈ 10 ಎಸೆತಗಳಲ್ಲಿ 14 ರನ್ಗಳಿಸಿದರು.
ಆರ್ಸಿಬಿ ಪರ ಎಂದಿನಂತೆ ಭುವನೇಶ್ವರ್ ಕುಮಾರ್ ಇಂದೂ ಕೂಡ 38 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು. ಯುವ ಬೌಲರ್ ರಸಿಕ್ ಸಲಾಮ್ ಕೂಡ 36 ರನ್ ನೀಡಿ 3 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು. ಜೋಶ್ ಹ್ಯಾಜಲ್ವುಡ್ ಮೊದಲ ಎರಡು ಓವರ್ಗಳಲ್ಲಿ 26 ರನ್ ಬಿಟ್ಟುಕೊಟ್ಟರೂ, ಕೊನೆಯ ಎರಡೂ ಓವರ್ಗಳಲ್ಲಿ ಕೇವಲ 10 ರನ್ ಬಿಟ್ಟುಕೊಟ್ಟರು. ಒಟ್ಟಾರೆ 36 ರನ್ ಬಿಟ್ಟುಕೊಟ್ಟು 1 ವಿಕೆಟ್ ಪಡೆದರು. ಸುಯಾಶ್ ಶರ್ಮಾ 50 ರನ್ಗೆ 1 ವಿಕೆಟ್ ಪಡೆದು ದುಬಾರಿಯಾದರು. ರೊಮ್ಯಾರಿಯೋ ಶೆಫರ್ಡ್ 8ಕ್ಕೆ1 ವಿಕೆಟ್ ಪಡೆದು ಮಿಂಚಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 222 ರನ್ಗಳಿಸಿತ್ತು. ವಿರಾಟ್ ಕೊಹ್ಲಿ 37 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ಗಳ ಸಹಿತ 58 ರನ್, ವೆಂಕಟೇಶ್ ಅಯ್ಯರ್ 40 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್ಗಳ ಸಹಿತ ಅಜೇಯ 73 ರನ್, 25 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ಗಳ ಸಹಿತ 45 ಹಾಗೂ ಟಿಮ್ ಡೇವಿಡ್ 12 ಎಸೆತಗಳಲ್ಲಿ 28 ರನ್ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು.
ಈ ಗೆಲುವಿನೊಂದಿಗೆ ಆರ್ಸಿಬಿ 9ನೇ ಜಯ ಸಾಧಿಸಿತು. 13 ಪಂದ್ಯಗಳನ್ನಾಡಿದ್ದು, 9 ಜಯ ಹಾಗೂ 4 ಸೋಲು ಕಂಡಿದೆ. 18 ಅಂಕಗಳಿಸಿರುವ ಆರ್ಸಿಬಿ ಅಗ್ರಸ್ಥಾನದಲ್ಲಿದ್ದು, ಮೊದಲ ತಂಡವಾಗಿ ಪ್ಲೇಆಫ್ ಪ್ರವೇಶಿಸಿದೆ. ಇನ್ನು ಸೋಲು ಕಂಡ ಪಂಜಾಬ್ ಕಿಂಗ್ಸ್ ತಂಡ ತನ್ನ ಪ್ಲೇ ಆಫ್ ಚಾನ್ಸ್ಗಾಗಿ ಬೇರೆ ತಂಡಗಳ ಫಲಿತಾಂಶವನ್ನ ಅವಲಂಭಿಸಬೇಕಾಗಿದೆ.













