Last Updated:
ಡ್ಯಾನಿಶ್ ಅಬ್ದಿ, ವೃಶಾಲಿ ಪ್ರಸಾದೆ ಮೇ 6, 2026 ರಂದು ರಾಮಸೇತು ಮಾರ್ಗದಲ್ಲಿ 32 ಕಿಮೀ ಈಜಲು ಸಜ್ಜು, ಮಣಿಪಾಲ್ ಆಸ್ಪತ್ರೆಗಳು ಆರೋಗ್ಯ ಸಂದೇಶದ ಅಭಿಯಾನಕ್ಕೆ ಬೆಂಬಲ
ಬೆಂಗಳೂರು: ಭಾರತ (India) ಮತ್ತು ಶ್ರೀಲಂಕಾ (Sri Lanka) ನಡುವೆ ಕೇವಲ ನಕ್ಷೆಯ ಗೆರೆಗಳಿಲ್ಲ, ಸಾವಿರಾರು ವರ್ಷಗಳ ಪುರಾಣ ಮತ್ತು ಸಂಸ್ಕೃತಿಯ ಬೆಸುಗೆಯಿದೆ. ಈಗ ಆ ಬೆಸುಗೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಮಣಿಪಾಲ್ (Manipal) ಆಸ್ಪತ್ರೆಗಳು (Hospital) ಒಂದು ರೋಚಕ ಸಾಹಸಕ್ಕೆ ಮುನ್ನುಡಿ ಬರೆದಿದೆ. ಪೌರಾಣಿಕ ‘ರಾಮಸೇತು’ ಮಾರ್ಗದಲ್ಲಿ ಮೊಟ್ಟಮೊದಲ ಬಾರಿಗೆ ಭಾರತೀಯ ದಂಪತಿ ಈಜುವ ಮೂಲಕ ಇತಿಹಾಸ ನಿರ್ಮಿಸಲು ಸಜ್ಜಾಗಿದ್ದಾರೆ.
ಕ್ರೀಡಾಪಟುಗಳಾದ ಡ್ಯಾನಿಶ್ ಅಬ್ದಿ ಮತ್ತು ವೃಶಾಲಿ ಪ್ರಸಾದೆ ಈ ಅಸಾಧಾರಣ ಸವಾಲನ್ನು ಕೈಗೆತ್ತಿಕೊಂಡಿದ್ದಾರೆ. ಮೇ 6, 2026 ರಂದು ಶ್ರೀಲಂಕಾದ ತಲೈಮನ್ನಾರ್ನಿಂದ ಈ ಸಾಹಸ ಶುರುವಾಗಿದೆ. ಸುಮಾರು 32 ಕಿಲೋಮೀಟರ್ ಉದ್ದದ ಸಮುದ್ರದ ಹಾದಿಯನ್ನು ಕೇವಲ 8 ರಿಂದ 12 ಗಂಟೆಗಳಲ್ಲಿ ಈಜುವ ಮೂಲಕ ಭಾರತದ ಧನುಷ್ಕೋಡಿಯನ್ನು ತಲುಪಲಿದ್ದಾರೆ. ಇದು ಬರಿ ಈಜಲ್ಲ, ಎರಡು ರಾಷ್ಟ್ರಗಳ ಏಕತೆಯ ಸಂಕೇತ ಎಂದು ದಿ ವೈರ್ ಡಾಟ್ ಇನ್ ವೆಬ್ ಸೈಟ್ ವರದಿ ಮಾಡಿದೆ.
ಕೇವಲ ಕ್ರೀಡೆಯಷ್ಟೇ ಅಲ್ಲದೆ, ಆರೋಗ್ಯ ಮತ್ತು ದೈಹಿಕ ಸ್ಥಿತಿಸ್ಥಾಪಕತ್ವದ ಸಂದೇಶವನ್ನು ಸಾರಲು ಮಣಿಪಾಲ್ ಹೆಲ್ತ್ ಎಂಟರ್ ಪ್ರೈಸಸ್ ಈ ಉಪಕ್ರಮಕ್ಕೆ ಕೈಜೋಡಿಸಿದೆ. “ಈ ಈಜು ಕೇವಲ ಶಾರೀರಿಕ ಸಹಿಷ್ಣುತೆಯಲ್ಲ, ಇದು ಭಾರತ ಮತ್ತು ಶ್ರೀಲಂಕಾ ನಡುವಿನ ಸಾಂಸ್ಕೃತಿಕ ಸಂಬಂಧದ ಪ್ರತಿಬಿಂಬ” ಎನ್ನುತ್ತಾರೆ ಮಣಿಪಾಲ್ ಗ್ರೂಪ್ನ ಸಿಒಒ ಶ್ರೀ ಕಾರ್ತಿಕ್ ರಾಜಗೋಪಾಲ್. ಶ್ರೀಲಂಕಾದ ರೋಗಿಗಳಿಗೆ ಭಾರತವು ನೆಚ್ಚಿನ ಆರೋಗ್ಯ ತಾಣವಾಗಿದ್ದು, ಈ ಅಭಿಯಾನವು ಆ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸಲಿದೆ.
ಇದುವರೆಗೆ ಇಂತಹ ಓಪನ್ ವಾಟರ್ ಈಜು ಸಾಹಸಗಳಲ್ಲಿ ಪಾಶ್ಚಿಮಾತ್ಯರದ್ದೇ ಮೇಲುಗೈ ಇತ್ತು. ಆದರೆ ಈಗ ಡ್ಯಾನಿಶ್ ಮತ್ತು ವೃಶಾಲಿ ಜೋಡಿ ಜಾಗತಿಕ ನಕ್ಷೆಯಲ್ಲಿ ಭಾರತದ ಹೆಸರನ್ನು ಅಚ್ಚೊತ್ತಲು ಹೊರಟಿದ್ದಾರೆ. “ಆರೋಗ್ಯ ಮತ್ತು ಸ್ವಾಸ್ಥ್ಯದ ಸಂದೇಶದೊಂದಿಗೆ ಎರಡು ದೇಶಗಳನ್ನು ಸಂಪರ್ಕಿಸಲು ನಾವು ಉತ್ಸುಕರಾಗಿದ್ದೇವೆ” ಎಂದು ಈ ದಂಪತಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
Bangalore [Bangalore],Bangalore,Karnataka
May 07, 2026 12:10 PM IST













