Last Updated:
14 ದೇಶಗಳು ಭಾಗವಹಿಸಲಿರುವ ಈ ಮೆಗಾ ಟೂರ್ನಿಯನ್ನು ಮೂರು ಆಫ್ರಿಕನ್ ರಾಷ್ಟ್ರಗಳಾದ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದ ಒಟ್ಟು 12 ಕ್ರೀಡಾಂಗಣಗಳಲ್ಲಿ ಜಂಟಿಯಾಗಿ ಆಯೋಜಿಸಲಾಗುತ್ತಿದೆ. ದಕ್ಷಿಣ ಆಫ್ರಿಕಾದ 8, ಜಿಂಬಾಬ್ವೆಯಲ್ಲಿ 3 ಹಾಗೂ ನಮೀಬಿಯಾದ ಒಂದು ಮೈದಾನದಲ್ಲಿ ಟೂರ್ನಿ ನಡೆಯಲಿದೆ.
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಆಯೋಜಿಸಲಿರುವ ಮುಂಬರುವ 2027ರ ಪುರುಷರ ಏಕದಿನ ವಿಶ್ವಕಪ್ ಕ್ರಿಕೆಟ್ ಮಹಾಸಮರವು ಮಹಾತ್ಮ ಗಾಂಧೀಜಿಯವರ ಸ್ಮರಣಾರ್ಥವಾಗಿ ಅವರ ಜನ್ಮದಿನವಾದ ಅಕ್ಟೋಬರ್ 2 ರಂದು (ಗಾಂಧಿ ಜಯಂತಿ) ಆರಂಭವಾಗುವ ಸಾಧ್ಯತೆಯಿದೆ. ಆತಿಥೇಯ ರಾಷ್ಟ್ರಗಳಲ್ಲೊಂದಾದ ದಕ್ಷಿಣ ಆಫ್ರಿಕಾ ಮತ್ತು ಜಾಗತಿಕ ಕ್ರಿಕೆಟ್‌ನ ಶಕ್ತಿ ಕೇಂದ್ರವಾಗಿರುವ ಭಾರತ ಎರಡರ ಇತಿಹಾಸದಲ್ಲೂ ಮಹಾತ್ಮ ಗಾಂಧೀಜಿ ಅವರು ಪ್ರಮುಖ ಪಾತ್ರ ವಹಿಸಿರುವುದನ್ನು ಗೌರವಿಸಲು ಐಸಿಸಿ ಈ ಮಹತ್ವದ ನಿರ್ಧಾರ ಕೈಗೊಳ್ಳುತ್ತಿದೆ ಎಂದು ಪ್ರಮುಖ ಕ್ರೀಡಾ ಮಾಧ್ಯಮ ಕ್ರಿಕ್‌ಬಜ್ ವರದಿ ಮಾಡಿದೆ.














