Last Updated:
ನೆದರ್‌ಲ್ಯಾಂಡ್ಸ್‌ನ ಲೈಡನ್ ಸಂಗ್ರಹಾಲಯದಲ್ಲಿದ್ದ ಚೋಳರ ಅನೈಮಂಗಲಂ ತಾಮ್ರ ಫಲಕಗಳು ದೀರ್ಘ ರಾಜತಾಂತ್ರಿಕ ಪ್ರಯತ್ನದ ಬಳಿಕ ನರೇಂದ್ರ ಮೋದಿ ಅವರಿಗೆ ಹಸ್ತಾಂತರವಾಗಿ ಭಾರತಕ್ಕೆ ಮರಳಿವೆ
ಬೆಂಗಳೂರು: ಸುಮಾರು 150 ರಿಂದ 160 ವರ್ಷಗಳ ಕಾಲ ನೆದರ್‌ಲ್ಯಾಂಡ್ಸ್‌ನ ಲೈಡನ್ ವಿಶ್ವವಿದ್ಯಾಲಯದ ಸಂಗ್ರಹಾಲಯದಲ್ಲಿ ಕೂತಿದ್ದ ಅಮೂಲ್ಯ ಚೋಳರ (Cholas) ತಾಮ್ರ ಫಲಕಗಳು ಅಂತಿಮವಾಗಿ ತಾಯ್ನಾಡು ಭಾರತಕ್ಕೆ ಮರಳಿ ಬಂದಿವೆ. ಮೇ 15-16, 2026 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರಿಗೆ ನೆದರ್‌ಲ್ಯಾಂಡ್ಸ್ ಪ್ರಧಾನಮಂತ್ರಿ ರಾಬ್ ಜೆಟ್ಟನ್ ಅವರು ಈ ಫಲಕಗಳ ಹಸ್ತಾಂತರ (Hand Over) ನಡೆಯಿತು. ಇದು ಭಾರತ-ನೆದರ್‌ಲ್ಯಾಂಡ್ಸ್ ನಡುವಿನ ಸಾಂಸ್ಕೃತಿಕ ರಾಜತಾಂತ್ರಿಕತೆಯ ಅತ್ಯಂತ ಮಹತ್ವದ (Important) ಮೈಲಿಗಲ್ಲಾಗಿದ್ದು, ಭಾರತ ಕನಿಷ್ಠ 14 ವರ್ಷಗಳ ಕಾಲ ಸಕ್ರಿಯ ರಾಜತಾಂತ್ರಿಕ ಪ್ರಯತ್ನ ನಡೆಸಿ ಈ ಫಲಕಗಳನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದೆ.
ʼಅನೈಮಂಗಲಂ ತಾಮ್ರ ಫಲಕಗಳುʼ ಎಂದೇ ಪ್ರಸಿದ್ಧವಾಗಿರುವ ಈ ಫಲಕಗಳು “Larger Leiden Plates” ಎಂದು ಗುರುತಿಸಿಕೊಂಡಿವೆ. ಇವುಗಳ ಆಕಾರ, ರೂಪ ಹಾಗೂ ಶೈಲಿಯ ವಿವರ ನೋಡಿದರೆ ಅಚ್ಚರಿ ಉಂಟಾಗುತ್ತದೆ. 21 ದೊಡ್ಡ ತಾಮ್ರ ಫಲಕಗಳು ಮತ್ತು 3 ಚಿಕ್ಕ ಫಲಕಗಳು ಸೇರಿ ಒಟ್ಟು 24 ಫಲಕಗಳ ಈ ಸಂಚಿ ಸುಮಾರು 30 ಕಿಲೋಗ್ರಾಂ ತೂಕ ಹೊಂದಿದ್ದು, ರಾಜೇಂದ್ರ ಚೋಳ I ರ ರಾಜಮುದ್ರೆ ಹೊಂದಿದ ಬೃಹತ್ ಕಂಚಿನ ಉಂಗುರದಿಂದ ಒಟ್ಟಿಗೆ ಬಂಧಿಸಲಾಗಿದೆ.
ಫಲಕಗಳಲ್ಲಿರುವ ಶಾಸನ ವಿವರ ಅತ್ಯಂತ ಮಹತ್ವದ್ದು. ಮೊದಲ 5 ಫಲಕಗಳು ಸಂಸ್ಕೃತ ಭಾಷೆಯಲ್ಲಿ ಗ್ರಂಥ ಲಿಪಿಯಲ್ಲಿ ಚೋಳ ವಂಶಾವಳಿಯ ವಿವರ ಹೊಂದಿದ್ದು, ವಿಷ್ಣುವಿನಂತಹ ಪೌರಾಣಿಕ ಪೂರ್ವಜರಿಂದ ಆರಂಭಿಸಿ ರಾಜರ ಸಾಧನೆಗಳನ್ನು ದಾಖಲಿಸಿದೆ. ಉಳಿದ ಫಲಕಗಳು ತಮಿಳು ಭಾಷೆಯಲ್ಲಿ ಭೂ ದಾನ ಮತ್ತು ಆಡಳಿತ ವಿವರಗಳನ್ನು ಒಳಗೊಂಡಿದ್ದು ಚೋಳ ಆಡಳಿತದ ನಿಖರತೆ ಮತ್ತು ಕ್ರಮಬದ್ಧತೆಗೆ ಸಾಕ್ಷಿಯಾಗಿದೆ.

ಐತಿಹಾಸಿಕ ವಿಷಯದ ದೃಷ್ಟಿಯಿಂದ ಈ ಫಲಕಗಳು ಅತ್ಯಂತ ಅಮೂಲ್ಯ. ಬೃಹದೀಶ್ವರ ದೇವಾಲಯ ನಿರ್ಮಿಸಿ ಖ್ಯಾತಿ ಗಳಿಸಿದ ಮಹಾನ್ ಚೋಳ ಚಕ್ರವರ್ತಿ ರಾಜರಾಜ ಚೋಳ I (ಕ್ರಿ.ಶ. 985–1014) ತಮಿಳುನಾಡಿನ ನಾಗಪಟ್ಟಣಂ ಸಮೀಪದ ಅನೈಮಂಗಲಂ ಗ್ರಾಮ ಮತ್ತು ಅದರ ರಾಜಸ್ವವನ್ನು ಚೂಡಾಮಣಿ ವಿಹಾರ (Chudamani Vihara) ಬೌದ್ಧ ಮಠಕ್ಕೆ ನೀಡುವ ಮೌಖಿಕ ವಾಗ್ದಾನ ಮಾಡಿದ್ದರು. ಅವರ ಪುತ್ರ ರಾಜೇಂದ್ರ ಚೋಳ I (ಕ್ರಿ.ಶ. 1012–1042) ಈ ವಾಗ್ದಾನವನ್ನು ಚಿರಸ್ಥಾಯಿಯಾಗಿಸಲು ಅದನ್ನು ತಾಮ್ರ ಫಲಕಗಳಲ್ಲಿ ಕೆತ್ತಿಸಿದರು.


ಸಾರ್ವಭೌಮ ಭಾರತದ ಕುರುಹು ಈ ತಾಮ್ರ ಫಲಕಗಳು
1862ರಲ್ಲಿ ಲೈಡನ್ ವಿಶ್ವವಿದ್ಯಾಲಯಕ್ಕೆ ದಾನವಾಗಿ ನೀಡಲ್ಪಟ್ಟ ಇವು ಅಲ್ಲಿನ ಏಷ್ಯನ್ ಸಂಗ್ರಹಾಲಯದಲ್ಲಿ ಸಂರಕ್ಷಿಸಲ್ಪಟ್ಟಿದ್ದವು. UNESCO ಸೇರಿದಂತೆ ಬಹುಪಕ್ಷೀಯ ವೇದಿಕೆಗಳ ಮೂಲಕ ನಡೆಸಿದ ದೀರ್ಘ ರಾಜತಾಂತ್ರಿಕ ಮಾತುಕತೆ ಮತ್ತು ನೆದರ್‌ಲ್ಯಾಂಡ್ಸ್‌ನ ವಸಾಹತುಶಾಹಿ ಸಂಗ್ರಹಗಳ ಮರಳಿ ನೀಡುವ ನೀತಿ ಬದಲಾವಣೆ ಹಾಗೂ ಲೈಡನ್ ವಿಶ್ವವಿದ್ಯಾಲಯ ಮತ್ತು ಡಚ್ ಸರ್ಕಾರದ ಸ್ವಯಂಪ್ರೇರಿತ ಒಪ್ಪಿಗೆಯಿಂದ ಈ ಐತಿಹಾಸಿಕ ಹಸ್ತಾಂತರ ಸಾಧ್ಯವಾಯಿತು. ಈ ಫಲಕಗಳ ವಾಪಸಾತಿ ಭಾರತದ ಸಾಂಸ್ಕೃತಿಕ ರಾಜತಾಂತ್ರಿಕತೆಯ ಜಾಗತಿಕ ಮಾನ್ಯತೆ, ತಮಿಳು ಭಾಷೆ ಮತ್ತು ಚೋಳ ನಾಗರಿಕತೆಯ ಹಿರಿಮೆ ಹಾಗೂ ಭಾರತದ ಪ್ರಾಚೀನ ಸಾಗರ ಶಕ್ತಿಯ ಸಾಕ್ಷಿಯನ್ನು ಜ್ವಾಜಲ್ಯಮಾನಗೊಳಿಸಿದೆ, ಇದು ಇಡೀ ಭಾರತಕ್ಕೆ ಹೆಮ್ಮೆಯ ಕ್ಷಣ.
Bangalore [Bangalore],Bangalore,Karnataka
May 16, 2026 10:17 PM IST













