ಬೆಂಗಳೂರಿನ 79 ಇಂದಿರಾ ಕ್ಯಾಂಟೀನ್ಗಳಲ್ಲಿ ನಂದಿನಿ ಹಾಲಿನ ಮಳಿಗೆ ಸ್ಥಾಪಿಸಲು ಜಿಬಿಎ ಪ್ರಸ್ತಾವನೆ. 100 ಚದರ ಅಡಿ ಜಾಗ, 5 ವರ್ಷಗಳ ಗುತ್ತಿಗೆ.
ಇಂದಿರಾ ಕ್ಯಾಂಟೀನ್ ನಂದಿನಿ ಔಟ್ಲೆಟ್
ಬೆಂಗಳೂರಿನಲ್ಲಿ (Bengaluru) ಜನಸಾಮಾನ್ಯರ ಹಸಿವು (Hunger) ನೀಗಿಸುತ್ತಿರುವ ಇಂದಿರಾ ಕ್ಯಾಂಟೀನ್ಗಳ (Indira Canteen) ಸ್ವರೂಪ ಬದಲಾಗಲಿದೆ. ಹೌದು, ಗ್ರೇಟರ್ ಬೆಂಗಳೂರು ಪ್ರಾಧಿಕಾರವು (ಜಿಬಿಎ) ನಗರದ 79 ಇಂದಿರಾ ಕ್ಯಾಂಟೀನ್ಗಳ ಆವರಣದಲ್ಲಿ ನಂದಿನಿ ಹಾಲಿನ ಮಳಿಗೆಗಳನ್ನು (Nandini Outlets) ಸ್ಥಾಪಿಸಲು ಹೊಸ ಪ್ರಸ್ತಾವನೆಯನ್ನು ರೂಪಿಸಿದೆ.
100 ಚದರ ಅಡಿ ಜಾಗ, 5 ವರ್ಷಗಳ ಗುತ್ತಿಗೆ
ಬೆಂಗಳೂರು ಸಹಕಾರಿ ಹಾಲು ಒಕ್ಕೂಟ ನಿಯಮಿತಕ್ಕೆ (ಬಮುಲ್) ನೆರವಾಗುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಆಯ್ದ ಇಂದಿರಾ ಕ್ಯಾಂಟೀನ್ಗಳಲ್ಲಿ ಸುಮಾರು 100 ಚದರ ಅಡಿ ಜಾಗವನ್ನು ಬಮುಲ್ಗೆ ಐದು ವರ್ಷಗಳ ಗುತ್ತಿಗೆಗೆ ನೀಡಲು ಉದ್ದೇಶಿಸಲಾಗಿದೆ. ಇದರೊಂದಿಗೆ ಬಮುಲ್ ಮನವಿಯ ಮೇರೆಗೆ ನಗರದಾದ್ಯಂತ 114 ಖಾಲಿ ನಿವೇಶನಗಳನ್ನು ಸಹ ಗುರುತಿಸಲಾಗುತ್ತಿದೆ ಎಂದು ಟಿವಿ9 ವರದಿ ಮಾಡಿದೆ.
ಕ್ಯಾಂಟೀನ್ಗಳಿಗೆ ಜನಸಂಖ್ಯೆ ಇಳಿಕೆ ಕಾರಣವೇ?
ಇತ್ತೀಚಿನ ದಿನಗಳಲ್ಲಿ ಇಂದಿರಾ ಕ್ಯಾಂಟೀನ್ಗಳಿಗೆ ಭೇಟಿ ನೀಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಒದಗಿಸುತ್ತಿರುವ ಆಹಾರದ ಗುಣಮಟ್ಟ ಹಾಗೂ ವೈವಿಧ್ಯತೆ ಕುಸಿದಿರುವುದು ಇದಕ್ಕೆ ಕಾರಣ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಜಿಬಿಎಗೆ ಹೊಸ ಆದಾಯದ ಮೂಲವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಈ ಜಾಗಗಳನ್ನು ಮಾಸಿಕ ಬಾಡಿಗೆ ಆಧಾರದ ಮೇಲೆ ನೀಡಲಾಗುತ್ತಿದ್ದು, ಸ್ಥಳದ ಮಾರ್ಗದರ್ಶಿ ಮೌಲ್ಯದ ಆಧಾರದ ಮೇಲೆ ಬಾಡಿಗೆ ಮೊತ್ತವನ್ನು ನಿಗದಿಪಡಿಸಲಾಗಿದೆ. ಅಶೋಕನಗರದಲ್ಲಿ 1,965 ಹಾಗೂ ಹಲಸೂರು ಗೇಟ್ ಬಳಿ 7,031 ವರೆಗೆ ಮಾಸಿಕ ಬಾಡಿಗೆ ನಿಗದಿಪಡಿಸುವ ಪ್ರಸ್ತಾವನೆ ಇದೆ.
ಊಟದ ಜಾಗದ ಕೊರತೆಯ ಆತಂಕ
ನಂದಿನಿ ಹಾಲಿನ ಉತ್ಪನ್ನಗಳು ಜನರಿಗೆ ಸುಲಭವಾಗಿ ಲಭ್ಯವಾಗಲಿದ್ದರೂ, ಈ ಕ್ರಮದಿಂದ ಇಂದಿರಾ ಕ್ಯಾಂಟೀನ್ಗಳಲ್ಲಿ ಬಡವರು ಊಟ ಮಾಡಲು ಇರುವ ಜಾಗ ಕಡಿಮೆಯಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ. ಮೂಲತಃ ಬಮುಲ್ಗೆ 15 ವರ್ಷಗಳ ಗುತ್ತಿಗೆ ನೀಡಲು ಚಿಂತಿಸಲಾಗಿತ್ತಾದರೂ, ನಗರಾಭಿವೃದ್ಧಿ ಇಲಾಖೆಯ ಸೂಚನೆಯಂತೆ ಬಿಬಿಎಂಪಿ ಆಸ್ತಿ ನಿರ್ವಹಣಾ ನಿಯಮಗಳು-2024ರ ಪ್ರಕಾರ ಗುತ್ತಿಗೆ ಅವಧಿಯನ್ನು ಗರಿಷ್ಠ ಐದು ವರ್ಷಗಳಿಗೆ ಸೀಮಿತಗೊಳಿಸಲಾಗಿದೆ.