Last Updated:
ಮ್ಯಾರಥಾನ್‌ಗೆ ಸಿದ್ಧರಾಗುತ್ತಿರುವವರಿಗೆ ಓಡುವ ಉತ್ಸಾಹದಷ್ಟೇ ದೇಹದಲ್ಲಿ ನೀರಿನ ಸರಿಯಾದ ಪ್ರಮಾಣವೂ ಮುಖ್ಯ. ಮ್ಯಾರಥಾನ್ ಶುರು ಮಾಡುವ ಮುನ್ನ, ಓಡುತ್ತಿರುವಾಗ ಮತ್ತು ಓಟ ಮುಗಿದ ನಂತರ ನೀರು ಸರಿಯಾಗಿ ಕುಡಿಯದಿದ್ದರೆ ಗುರಿ ತಲುಪುವುದು ಕಷ್ಟವಾಗಬಹುದು.
ಅಕ್ಟೋಬರ್ 11ರಂದು ನ್ಯೂಸ್18 ಕನ್ನಡ (News18 Kannada) ಆಯೋಜಿಸುತ್ತಿರುವ ‘ನಮ್ಮ ರನ್ ಬೆಂಗಳೂರು 2026’ಗೆ (Namma Run Bengaluru) ಸಿದ್ಧರಾಗುತ್ತಿರುವ ಓಟಗಾರರಿಗೆ ತರಬೇತಿ, ಶೂ(Shoe), ಮಾರ್ಗದ ಪರಿಚಯ ಎಲ್ಲವೂ ಮುಖ್ಯ. ಆದರೆ ಇವೆಲ್ಲಕ್ಕಿಂತಲೂ ಮೊದಲು ಗಮನಿಸಬೇಕಾದ ಸಣ್ಣ ವಿಷಯವೊಂದಿದೆ . ದೇಹ(Body)ಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು (Water) ತಲುಪುವುದು. ಹೌದು, ಮ್ಯಾರಥಾನ್‌ಗೆ ಸಿದ್ಧರಾಗುತ್ತಿರುವವರಿಗೆ ಓಡುವ (Run) ಉತ್ಸಾಹದಷ್ಟೇ ದೇಹದಲ್ಲಿ ನೀರಿನ ಸರಿಯಾದ ಪ್ರಮಾಣವೂ ಮುಖ್ಯ. ಮ್ಯಾರಥಾನ್ ಶುರು ಮಾಡುವ ಮುನ್ನ, ಓಡುತ್ತಿರುವಾಗ ಮತ್ತು ಓಟ ಮುಗಿದ ನಂತರ ನೀರು ಸರಿಯಾಗಿ ಕುಡಿಯದಿದ್ದರೆ ಗುರಿ ತಲುಪುವುದು ಕಷ್ಟವಾಗಬಹುದು.
ಮ್ಯಾರಥಾನ್ ಓಡುವವರಲ್ಲಿ ಹೆಚ್ಚಿನವರು ಎಷ್ಟು ದೂರ ಓಡಬೇಕು, ಎಷ್ಟು ವೇಗವಾಗಿ ಓಡಬೇಕು ಎಂಬುದನ್ನೇ ನೋಡುತ್ತಾರೆ. ಆದರೆ ಸರಿಯಾದ ಸಮಯಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದಿದ್ದರೆ ಸ್ನಾಯುಗಳು ಬೇಗ ಆಯಾಸವಾಗುತ್ತವೆ. ತಲೆತಿರುಗುವಿಕೆ ಅಥವಾ ಇದ್ದಕ್ಕಿದ್ದಂತೆ ದಣಿವು ಬರಬಹುದು.
ಓಟದ ಮೊದಲು, ಓಟದ ನಡುವೆ ಮತ್ತು ಓಟ ಮುಗಿದ ನಂತರ ಬೇಕಾಗುವ ನೀರಿನ ಪ್ರಮಾಣ ಒಂದೇ ಆಗಿರುವುದಿಲ್ಲ. ಹಾಗಾದರೆ ಈ ಮೂರು ಹಂತಗಳಲ್ಲೂ ನೀರನ್ನು ಹೇಗೆ ಕುಡಿಯಬೇಕು? ಎಷ್ಟು ಕುಡಿಯಬೇಕು, ಯಾವ ಸಮಯದಲ್ಲಿ ಕುಡಿಯಬೇಕು ಎಂದು ಸರಿಯಾಗಿ ತಿಳಿದುಕೊಂಡರೆ ಮಾತ್ರ ‘ನಮ್ಮ ರನ್ ಬೆಂಗಳೂರು’ನಂತಹ ಮ್ಯಾರಥಾನ್ ಅನ್ನು ಸುಲಭವಾಗಿ ಮುಗಿಸಬಹುದು.
ಮ್ಯಾರಥಾನ್ ಓಡುವ ಮೊದಲು ದೇಹದಲ್ಲಿ ಸಾಕಷ್ಟು ನೀರು ಇರಬೇಕು. ಓಟಕ್ಕೆ ಎರಡು-ಮೂರು ದಿನ ಮೊದಲಿನಿಂದಲೇ ಸ್ವಲ್ಪ ಹೆಚ್ಚು ನೀರು ಕುಡಿಯಿರಿ. ಮೂತ್ರದ ಬಣ್ಣ ತಿಳಿ ಹಳದಿಯಾಗಿರುವಂತೆ ನೋಡಿಕೊಳ್ಳಿ. ಅದು ದೇಹಕ್ಕೆ ಸಾಕಷ್ಟು ನೀರು ಇದೆ ಎಂದು ತೋರಿಸುತ್ತದೆ.
ಓಟದ ದಿನ ಬೆಳಿಗ್ಗೆ, ಓಟ ಶುರುವಾಗುವ ಎರಡು-ಮೂರು ಗಂಟೆ ಮೊದಲು 500 ರಿಂದ 600 ಮಿಲಿ ನೀರನ್ನು ನಿಧಾನವಾಗಿ ಕುಡಿಯಿರಿ. ಓಟ ಶುರುವಾಗುವ 10 ರಿಂದ 20 ನಿಮಿಷ ಮೊದಲು ಇನ್ನೊಮ್ಮೆ 150 ರಿಂದ 250 ಮಿಲಿ ನೀರನ್ನು ಸ್ವಲ್ಪ ಸ್ವಲ್ಪವಾಗಿ ಕುಡಿಯಿರಿ. ಒಂದೇ ಸಲಕ್ಕೆ ಹೆಚ್ಚು ನೀರು ಕುಡಿಯಬೇಡಿ. ಹಾಗೆ ಮಾಡಿದರೆ ಹೊಟ್ಟೆ ಉಬ್ಬಿ ಅಸ್ವಸ್ಥತೆ ಆಗಬಹುದು.
ಓಡುವಾಗ ಬಾಯಾರಿಕೆ ಬರುವವರೆಗೆ ಕಾಯಬೇಡಿ. ಸಮಯಕ್ಕೆ ಸರಿಯಾಗಿ ನೀರು ಕುಡಿಯಿರಿ. ಸಾಮಾನ್ಯವಾಗಿ ಪ್ರತಿ 15–20 ನಿಮಿಷಕ್ಕೊಮ್ಮೆ 100–200 ಮಿಲಿ ನೀರನ್ನು ಸಣ್ಣ ಸಣ್ಣ ಗುಟುಕುಗಳಲ್ಲಿ ಕುಡಿಯಿರಿ. ಒಂದು ಗಂಟೆಗೆ ಸುಮಾರು 400–800 ಮಿಲಿ ನೀರು ಸಾಕು. ಬಿಸಿಲು, ಗಾಳಿಯ ತೇವ ಮತ್ತು ನೀವು ಎಷ್ಟು ಬೆವರುತ್ತೀರಿ ಎಂಬುದಕ್ಕೆ ತಕ್ಕಂತೆ ಈ ಪ್ರಮಾಣವನ್ನು ಹೆಚ್ಚಿಸಿ ಅಥವಾ ಕಡಿಮೆ ಮಾಡಿ.
ಒಂದು ಗಂಟೆಗಿಂತ ಹೆಚ್ಚು ಓಡುವವರು ನೀರಿನ ಜೊತೆಗೆ ಸ್ವಲ್ಪ ಉಪ್ಪು ಅಥವಾ ಎಲೆಕ್ಟ್ರೋಲೈಟ್ ಇರುವ ಪಾನೀಯವನ್ನೂ ಕುಡಿಯಬಹುದು. ನೀರಿನ ಸ್ಥಳದಲ್ಲಿ ನಿಲ್ಲಿಸಿ ಕುಡಿಯುವುದಕ್ಕಿಂತ, ಓಡುತ್ತಿರುವಾಗಲೇ ಸಣ್ಣ ಪ್ರಮಾಣದಲ್ಲಿ ನೀರು ಕುಡಿಯುವುದು ಉತ್ತಮ.
ಓಟ ಮುಗಿದ ತಕ್ಷಣ 400 ರಿಂದ 600 ಮಿಲಿ ನೀರು ಅಥವಾ ಎಲೆಕ್ಟ್ರೋಲೈಟ್ ಪಾನೀಯ ಕುಡಿಯಿರಿ. ಮುಂದಿನ 2 ರಿಂದ 4 ಗಂಟೆಗಳಲ್ಲಿ ಬೆವರಿನಲ್ಲಿ ಕಳೆದುಹೋದ ನೀರಿಗಿಂತ ಸುಮಾರು ಒಂದೂವರೆ ಪಟ್ಟು ಹೆಚ್ಚು ನೀರು ಕುಡಿಯಿರಿ. ಓಟದ ಮೊದಲು ಮತ್ತು ನಂತರ ತೂಕ ತಿಳಿದಿದ್ದರೆ, ಅರ್ಧ ಕಿಲೋ ತೂಕ ಕಡಿಮೆಯಾದರೆ 500 ರಿಂದ 750 ಮಿಲಿ ನೀರು ಕುಡಿಯುವುದು ಒಳ್ಳೆಯದು.
ನೀರಿನ ಜೊತೆಗೆ ಸ್ವಲ್ಪ ಉಪ್ಪು, ಹಣ್ಣಿನ ರಸ ಅಥವಾ ಮಜ್ಜಿಗೆ ಕುಡಿದರೆ ದೇಹಕ್ಕೆ ಬೇಕಾದ ಖನಿಜಗಳು ಬೇಗ ಮರಳುತ್ತವೆ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)














