Last Updated:
Myanmar: ಉತ್ತರ ಮ್ಯಾನ್ಮಾರ್ನ ಶಾನ್ ಪ್ರಾಂತ್ಯದ ನಾಮ್ಕಾಮ್ ಪಟ್ಟಣದಲ್ಲಿ ಭೀಕರ ಗಣಿಗಾರಿಕೆ ಸ್ಫೋಟಕಗಳ ಸ್ಫೋಟದಲ್ಲಿ ಕನಿಷ್ಠ 46 ಜನರು ಸಾವನ್ನಪ್ಪಿದ್ದಾರೆ ಮತ್ತು 70 ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.
ನೇಪ್ಯಿಡಾವ್ (ಮಯನ್ಮಾರ್): ಮ್ಯಾನ್ಮಾರ್ನ (Myanmar) ಉತ್ತರ ಭಾಗದಿಂದ ಬಂದ ಸುದ್ದಿ ಕೇಳಿ ಇಡೀ ಪ್ರಪಂಚ ಬೆಚ್ಚಿಬಿದ್ದಿದೆ. ಹೌದು, ಚೀನಾ ಗಡಿಯಿಂದ ಕೇವಲ 3 ಕಿಲೋಮೀಟರ್ ದೂರದಲ್ಲಿರುವ ನಾಮ್ಕಾಮ್ (Nomcom) ಪಟ್ಟಣದ ಕೌಂಗ್ಟುಪ್ ಗ್ರಾಮದಲ್ಲಿನ ಗಣಿಗಾರಿಕೆ ಪ್ರದೇಶದಲ್ಲಿ (Mining Area) ಭೀಕರ ಸ್ಫೋಟವು (Massive Explosion) ಇಡೀ ಪ್ರದೇಶವನ್ನೇ ನಡುಗಿಸಿದೆ. ಇದರ ಪರಿಣಾಮವಾಗಿ ಕನಿಷ್ಠ 46 ಜನರು ಸಾವನ್ನಪ್ಪಿದ್ದಾರೆ ಮತ್ತು 70 ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ.
ವರದಿಗಳ ಪ್ರಕಾರ, ಕಲ್ಲು ಕ್ವಾರಿ ಹಾಗೂ ಗಣಿಗಾರಿಕೆ ಉದ್ದೇಶಗಳಿಗಾಗಿ ಬಳಸಲಾಗುವ ಜೆಲಿಗ್ನೈಟ್ ಸ್ಫೋಟಕಗಳನ್ನು ವಸತಿ ಕಟ್ಟಡವೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿತ್ತು. ಭಾನುವಾರ ಮಧ್ಯಾಹ್ನ ಸುಮಾರು 12 ಗಂಟೆಯ ಹೊತ್ತಿಗೆ ಈ ಸ್ಫೋಟಕಗಳು ಇದ್ದಕ್ಕಿದ್ದಂತೆ ಸ್ಫೋಟಗೊಂಡಿವೆ ಎನ್ನಲಾಗಿದ್ದು, ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಆರಂಭದಲ್ಲಿ ಸ್ಥಳೀಯ ನಿವಾಸಿಗಳು ಇದನ್ನು ಮಿಲಿಟರಿ ನಡೆಸಿದ ವೈಮಾನಿಕ ದಾಳಿ ಇರಬಹುದೆಂದು ಭಾವಿಸಿದ್ದರು.
ಸ್ಥಳೀಯ ರಕ್ಷಣಾ ಸಿಬ್ಬಂದಿ ನೀಡಿರುವ ಮಾಹಿತಿಯ ಪ್ರಕಾರ, ಭಾನುವಾರ ಸಂಜೆಯ ವೇಳೆಗೆ ಅವಶೇಷಗಳ ಅಡಿಯಿಂದ 46 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇವರಲ್ಲಿ ಆರು ಅಮಾಯಕ ಮಕ್ಕಳು ಸೇರಿದ್ದಾರೆ. ಗಾಯಗೊಂಡಿರುವ 74 ಕ್ಕೂ ಹೆಚ್ಚು ಜನರನ್ನು ತಕ್ಷಣವೇ ಸ್ಥಳೀಯ ನಾಮ್ಕಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
A serious #explosion occurred at noon on Sunday in Kaungtat village in Nankham township, #Myanmar. Thick smoke rose from the blast site, and several buildings were damaged. Local #fire and rescue teams have arrived at the scene to assist. The cause of the incident and details… pic.twitter.com/KNtYq4NelL
— CCTV Asia Pacific (@CCTVAsiaPacific) May 31, 2026
ಮುಂದುವರೆದು, ಈ ಸ್ಫೋಟದಿಂದಾಗಿ ಸುತ್ತಮುತ್ತಲಿನ ಸುಮಾರು 100 ಕ್ಕೂ ಹೆಚ್ಚು ವಸತಿ ಕಟ್ಟಡಗಳು ಸಂಪೂರ್ಣವಾಗಿ ನೆಲಸಮಗೊಂಡಿದ್ದು, ಇಡೀ ನೆರೆಹೊರೆ ಧ್ವಂಸಗೊಂಡಿದೆ. ಏತನ್ಮಧ್ಯೆ, ಕುಸಿದು ಬಿದ್ದಿರುವ ಕಾಂಕ್ರೀಟ್ ಅವಶೇಷಗಳ ಅಡಿಯಲ್ಲಿ ಇನ್ನೂ ಅನೇಕರು ಸಿಲುಕಿರುವ ಆತಂಕವಿದ್ದು, ಸ್ಥಳೀಯ ಸ್ವಯಂಸೇವಕರು ಮತ್ತು ರಕ್ಷಣಾ ಪಡೆಗಳು ಜೆಸಿಬಿ ಹಾಗೂ ಆಧುನಿಕ ಉಪಕರಣಗಳ ಸಹಾಯದಿಂದ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.
ಪ್ರಸ್ತುತ ಈ ಪ್ರದೇಶವು ಮ್ಯಾನ್ಮಾರ್ನ ಮಿಲಿಟರಿ ಸರ್ಕಾರದ ವಿರುದ್ಧ ಸಶಸ್ತ್ರ ಹೋರಾಟ ನಡೆಸುತ್ತಿರುವ ಜನಾಂಗೀಯ ಬಂಡುಕೋರ ಗುಂಪಾದ ತಾಂಗ್ ನ್ಯಾಷನಲ್ ಲಿಬರೇಶನ್ ಆರ್ಮಿ (TNLA) ನಿಯಂತ್ರಣದಲ್ಲಿದೆ. ಟಿಎನ್ಎಲ್ಎ ಸಂಘಟನೆಯ ಆರ್ಥಿಕ ವಿಭಾಗವೇ ಈ ಸ್ಫೋಟಕಗಳನ್ನು ತಂದು ಇಲ್ಲಿ ಶೇಖರಿಸಿಟ್ಟಿತ್ತು ಎಂದು ಹೇಳಲಾಗುತ್ತಿದೆ.
ಜನನಿಬಿಡ ವಸತಿ ಪ್ರದೇಶದೊಳಗೆ ಇಂತಹ ಅಪಾಯಕಾರಿ ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿದ್ದಕ್ಕೆ ಸ್ಥಳೀಯ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲಾಗುತ್ತಿದೆ ಎಂದು ಟಿಎನ್ಎಲ್ಎ ಆಡಳಿತ ಪ್ರಕಟಿಸಿದೆ.
May 31, 2026 10:30 PM IST













