Last Updated:
ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ (CWG 2026) ಕ್ರೀಡಾಕೂಟದ ಮಹಿಳೆಯರ 48 ಕೆಜಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಮೀರಾಬಾಯಿ ಚಾನು ಚಿನ್ನದ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಹೆಮ್ಮ ತಂದಿದ್ದಾರೆ.
ವಿಶ್ವಪ್ರಸಿದ್ಧ ವೇಟ್‌ಲಿಫ್ಟರ್ ಸೈಖೋಮ್ ಮೀರಾಬಾಯಿ ಚಾನು (Mirabai Chanu) ಅವರು ಮತ್ತೊಮ್ಮೆ ಜಾಗತಿಕ ವೇದಿಕೆಯಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ (CWG 2026) ಕ್ರೀಡಾಕೂಟದ ಮಹಿಳೆಯರ 48 ಕೆಜಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಮೀರಾಬಾಯಿ ಚಾನು ಅವರು ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತಕ್ಕೆ ಈ ಬಾರಿಯ ಕ್ರೀಡಾಕೂಟದ ಮೊದಲ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ. ಈ ಐತಿಹಾಸಿಕ ಗೆಲುವಿನೊಂದಿಗೆ ಅವರು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸತತ ಮೂರು ಚಿನ್ನದ ಪದಕಗಳನ್ನು ಗೆದ್ದ ಅಪರೂಪದ ಸಾಧನೆಗೆ ಪಾತ್ರರಾಗಿದ್ದಾರೆ.
ಸ್ಪರ್ಧೆಯಲ್ಲಿ ಆರಂಭದಿಂದಲೇ ಸಂಪೂರ್ಣ ಮುನ್ನಡೆ ಕಾಯ್ದುಕೊಂಡಿದ್ದ ಚಾನು, ಸ್ನ್ಯಾಚ್ ವಿಭಾಗದಲ್ಲಿ 85 ಕೆಜಿ ಭಾರ ಎತ್ತುವ ಮೂಲಕ ಭದ್ರ ಬುನಾದಿ ಹಾಕಿದರು. ಆ ಬಳಿಕ ನಡೆದ ಕ್ಲೀನ್ ಅಂಡ್ ಜರ್ಕ್ ವಿಭಾಗದಲ್ಲಿ 105 ಕೆಜಿ ಭಾರವನ್ನು ಅತ್ಯಂತ ಯಶಸ್ವಿಯಾಗಿ ಎತ್ತುವ ಮೂಲಕ ಒಟ್ಟು 190 ಕೆಜಿ ತೂಕದೊಂದಿಗೆ ಅಗ್ರಸ್ಥಾನ ಪಡೆದರು. ಇವರ ಈ ಅಪ್ರತಿಮ ಪ್ರದರ್ಶನದ ಹತ್ತಿರಕ್ಕೂ ಬರಲು ಇತರ ದೇಶಗಳ ಸ್ಪರ್ಧಿಗಳಿಗೆ ಸಾಧ್ಯವಾಗಲಿಲ್ಲ. ಬೆಳ್ಳಿ ಮತ್ತು ಕಂಚು ಪದಕ ಗೆದ್ದ ಕ್ರೀಡಾಪಟುಗಳಿಗಿಂತ ಮೀರಾಬಾಯಿ ಅವರು ಭಾರಿ ಅಂತರದ ಮುನ್ನಡೆ ಸಾಧಿಸಿ ದೇಶದ ಹೆಮ್ಮೆಯನ್ನು ಹೆಚ್ಚಿಸಿದರು. ಮೀರಾಬಾಯಿ ಚಾನು ಬೆಳ್ಳಿ ಪದಕ ವಿಜೇತೆಗಿಂತ 22 ಕಿಲೋಗ್ರಾಂಗಳಷ್ಟು ಹೆಚ್ಚು ತೂಕ ಎತ್ತಿದರು.
ಮಣಿಪುರ ಮೂಲದ 31 ವರ್ಷದ ಈ ಅನುಭವಿ ವೇಟ್‌ಲಿಫ್ಟರ್ ಪಾಲಿಗೆ ಕಾಮನ್‌ವೆಲ್ತ್ ಕ್ರೀಡಾಕೂಟವು ಸದಾ ಯಶಸ್ಸಿನ ವೇದಿಕೆಯಾಗಿದೆ. ಇದಕ್ಕೂ ಮುನ್ನ ಅವರು 2018ರ ಗೋಲ್ಡ್ ಕೋಸ್ಟ್ ಮತ್ತು 2022ರ ಬರ್ಮಿಂಗ್ಹ್ಯಾಮ್ ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲೂ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು. ಇದೀಗ 2026ರ ಗ್ಲ್ಯಾಸ್ಗೋ ಆವೃತ್ತಿಯಲ್ಲೂ ಹ್ಯಾಟ್ರಿಕ್ ಚಿನ್ನದ ಪದಕ ಸಾಧನೆ ಮಾಡುವ ಮೂಲಕ ಭಾರತೀಯ ವೇಟ್‌ಲಿಫ್ಟಿಂಗ್ ಇತಿಹಾಸದಲ್ಲಿ ತಮ್ಮ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆದಿದ್ದಾರೆ. ಗಾಯದ ಸಮಸ್ಯೆಗಳು ಮತ್ತು ತೀವ್ರ ಪೈಪೋಟಿಯ ನಡುವೆಯೂ ಅವರು ಕಠಿಣ ತರಬೇತಿಯ ಮೂಲಕ ಕಂಬ್ಯಾಕ್ ಮಾಡಿರುವುದು ಅವರ ಕ್ರೀಡಾ ಸ್ಫೂರ್ತಿಗೆ ಸಾಕ್ಷಿಯಾಗಿದೆ.
ಮಹಿಳೆಯರ 48 ಕೆಜಿ ವಿಭಾಗದಲ್ಲಿ, ಮೀರಾಬಾಯಿ ಚಾನು 85 ಕೆಜಿ ತೂಕ ಎತ್ತುವ ಮೂಲಕ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಮೀರಾಬಾಯಿ ಮೊದಲು 82 ಕೆಜಿ ಎತ್ತುವ ಮೂಲಕ ಕಾಮನ್‌ವೆಲ್ತ್ ಕ್ರೀಡಾಕೂಟ (CWG) ದಾಖಲೆಯನ್ನು ಸ್ಥಾಪಿಸಿದರು. ನಂತರ ತನ್ನ ಮೂರನೇ ಪ್ರಯತ್ನದಲ್ಲಿ ಸುಲಭವಾಗಿ 85 ಕೆಜಿ ಎತ್ತುವ ಮೂಲಕ ಹೊಸ ಕಾಮನ್‌ವೆಲ್ತ್ ದಾಖಲೆಯನ್ನು ಸ್ಥಾಪಿಸಿದರು. ಒಟ್ಟಾರೆ 190ಕೆಜಿ ಬಾರ ಎತ್ತಿದ ಚಾನು ಕಾಮನ್‌ವೆಲ್ತ್ ಗೇಮ್ ಇತಿಹಾಸದಲ್ಲೇ ಈ ವಿಭಾಗದಲ್ಲಿ ಅತಿ ಹೆಚ್ಚು ತೂಕ ಎತ್ತಿದ ದಾಖಲೆಗೆ ಪಾತ್ರರಾದರು.
ಕಾಮನ್‌ವೆಲ್ತ್ ಕ್ರೀಡಾಕೂಟದ (CWG) ಇತಿಹಾಸದಲ್ಲಿ ಯಾವುದೇ ಕ್ರೀಡಾಪಟು ಎತ್ತಿದ ಅತ್ಯಧಿಕ ತೂಕ ಇದಾಗಿದೆ. ಇದು ಕೇವಲ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಸೀಮಿತವಾಗಿಲ್ಲ. ಯಾವುದೇ ಪ್ರಮುಖ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ (ವಿಶ್ವ ಚಾಂಪಿಯನ್‌ಶಿಪ್‌ಗಳು, ಒಲಿಂಪಿಕ್ಸ್, ಇತ್ಯಾದಿ) ಕಾಮನ್‌ವೆಲ್ತ್ ದೇಶದ ಕ್ರೀಡಾಪಟು ಸಾಧಿಸಿದ ಅತ್ಯಧಿಕ ತೂಕ ಇದಾಗಿದೆ.
2026 ರ ಕಾಮನ್‌ವೆಲ್ತ್ ಕ್ರೀಡಾಕೂಟದ ನಾಲ್ಕನೇ ದಿನದಂದು, ಭಾರತವು ಇತರ ಕ್ರೀಡೆಗಳಿಂದಲೂ ಶುಭ ಸುದ್ದಿ ಪಡೆದಿದೆ. ಪುರುಷರ 60 ಕೆಜಿ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ, ರಿಷಿಕಾಂತ್ ಸಿಂಗ್ ತಮ್ಮ ಮೊದಲ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಒಟ್ಟು 264 ಕೆಜಿ (121 ಕೆಜಿ ಸ್ನ್ಯಾಚ್ + 143 ಕೆಜಿ ಕ್ಲೀನ್ ಮತ್ತು ಜರ್ಕ್) ಎತ್ತುವ ಮೂಲಕ ಬೆಳ್ಳಿ ಪದಕವನ್ನು ಗೆದ್ದರು, ಇದು ಭಾರತದ ಎರಡನೇ ಪದಕವಾಗಿದೆ.














