ಹೌದು, ಮಧ್ಯಪ್ರದೇಶದ ಗ್ವಾಲಿಯರ್‌ನ ಝಾನ್ಸಿ ರಸ್ತೆ ಪೊಲೀಸ್ ಠಾಣೆ ಪ್ರದೇಶದ ನಾಕಾ ಚಂದ್ರವದ್ನಿ ಪ್ರದೇಶದ ಯುವಕನೊಬ್ಬ ಬಡ ಮಹಿಳೆಯ ಸೋಗಿನಲ್ಲಿದ್ದ ಯುವತಿಯನ್ನು ಮದುವೆಯಾಗಿದ್ದ. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ, ಇಡೀ ಕುಟುಂಬವನ್ನೇ ಬೆಚ್ಚಿಬೀಳಿಸುವ ರಹಸ್ಯವೊಂದು ಬಹಿರಂಗವಾಯಿತು. ಅದುವೇ, ಮದುವೆಯ ವಿಧಿವಿಧಾನಗಳನ್ನು ಮಾಡಿ ವಧುವನ್ನು ಸಹೋದರ ಎಂದು ಬಿಟ್ಟುಕೊಟ್ಟ ವ್ಯಕ್ತಿಯೇ ಆಕೆಯ ನಿಜವಾದ ಪತಿ ಎಂದು ತಿಳಿದುಬಂದಿದೆ. ಈ ಮೂಲಕ ಮಧ್ಯಪ್ರದೇಶದಲ್ಲಿ ಅತಿ ದೊಡ್ಡ ವಂಚನೆಯ ದಂಧೆಯೊಂದು ಬೆಳಕಿಗೆ ಬಂದಿದೆ.
ನ್ಯೂಸ್ 18 ಹಿಂದಿ ವರದಿ ಮಾಡಿರುವಂತೆ, ಗ್ವಾಲಿಯರ್ ನಿವಾಸಿಯಾದ ರತನ್ಗೆ ವಿವಾಹವಾಗಲು ವಧುವಿನ ಅವಶ್ಯಕತೆಯಿತ್ತು. ಈ ಸಂದರ್ಭದಲ್ಲಿ ಕೆಲವು ಮಧ್ಯವರ್ತಿಗಳು ಆತನಿಗೆ ಒಂದು ಸಂಬಂಧವನ್ನು ಪರಿಚಯಿಸಿದರು. ಹುಡುಗಿ ಸೋನು ಚೌಹಾಣ್ ಬಡ ಕುಟುಂಬದವಳಾಗಿದ್ದು, ವಿವಾಹದ ಎಲ್ಲಾ ಖರ್ಚುಗಳನ್ನು ವರನ ಕಡೆಯವರೇ ಭರಿಸಬೇಕೆಂದು ನಂಬಿಸಲಾಯಿತು. ಇನ್ನು, ವಿವಾಹದ ಆಸೆಯಲ್ಲಿದ್ದ ಯುವಕ ಇದಕ್ಕೆ ಒಪ್ಪಿ, ಮದುವೆಯ ಸಿದ್ಧತೆ, ಆಭರಣ ಮತ್ತು ಬಟ್ಟೆಗಳಿಗಾಗಿ ಸುಮಾರು 7 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾನೆ ಎನ್ನಲಾಗಿದೆ.
7 ಲಕ್ಷ ಖರ್ಚು ಮಾಡಿದ ವರನಿಗೆ ಮಹಾ ದೋಖಾ!
ಇನ್ನು, ಮದುವೆಯ ನಂತರ, ರತನ್ ತನ್ನ ಹೆಂಡತಿ ತನ್ನ ಮೊಬೈಲ್ ಫೋನ್‌ನಲ್ಲಿ ನಿರಂತರವಾಗಿ ಯಾರೊಂದಿಗೂ ಚಾಟ್ ಮಾಡುತ್ತಿರುವುದನ್ನು ಗಮನಿಸಿದನು. ಅನುಮಾನಗೊಂಡು, ಅವನು ಫೋನ್ ಪರಿಶೀಲಿಸಿದನು. ಆದರೆ, ವಾಟ್ಸಾಪ್ ಚಾಟ್ ಓದಿದ ಕ್ಷಣ ಅವನಿಗೆ ಗರ ಬಡಿದಂತಾಗಿದೆ. ಯಾಕಂದ್ರೆ, ಮದುವೆಯಲ್ಲಿ ಯಾರು ವಧುವಿನ ಸಹೋದರನಂತೆ ನಟಿಸಿ ಕನ್ಯಾದಾನ ಮಾಡಿದ್ದನೋ, ಅವನೇ ಆಕೆಯ ನಿಜವಾದ ಪತಿ ಎಂಬ ಆಘಾತಕಾರಿ ವಿಷಯ ತಿಳಿಯಿತು. ಆಕೆ ಈಗಾಗಲೇ ವಿವಾಹಿತಳಾಗಿದ್ದು, ತನ್ನ ಪತಿಯೊಂದಿಗೆ ಸೇರಿಕೊಂಡೇ ಈ ನಕಲಿ ಮದುವೆಯ ಸಂಚು ರೂಪಿಸಿದ್ದಳು. ಅದರಲ್ಲೂ, ಆ ಇಬ್ಬರೂ 2024 ರಲ್ಲಿ ಆಗ್ರಾದ ಆರ್ಯ ಸಮಾಜ ದೇವಸ್ಥಾನದಲ್ಲಿ ವಿವಾಹವಾಗಿದ್ದರು ಎನ್ನಲಾಗಿದೆ.
ಮುಂದುವರೆದು, ಸಂತ್ರಸ್ತ ರತನ್ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಇದು ಕೇವಲ ಒಂದು ಕುಟುಂಬದ ಕೃತ್ಯವಲ್ಲದೆ, ಇದೊಂದು ದೊಡ್ಡ ದರೋಡೆಕೋರ ವಧು ಗ್ಯಾಂಗ್ ಎಂದು ಪೊಲೀಸರು ಶಂಕಿಸಿದ್ದಾರೆ. ಅದರಲ್ಲೂ ಮದುವೆಗೆ ಹಾಜರಿದ್ದ ಹಲವಾರು ಜನರು ನಕಲಿ ಸಂಬಂಧಿಕರಂತೆ ನಟಿಸುತ್ತಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಇನ್ನೂ, ಸೋನು ಚೌಹಾಣ್ ಅವರ ತಾಯಿ ಮಾಯಾ ದೇವಿಯೇ ಹುಡುಗಿಯ ತಾಯಿಯಾಗಿ ಕನ್ಯಾದಾನ ಮಾಡಿದರು. ಇದರೊಂದಿಗೆ, ಸೋನು ಸಹೋದರಿ ಶಿಲ್ಪಿ, ಭಾವ ರಾಘವೇಂದ್ರ ಮತ್ತು ಸಹೋದರ ಸತ್ಯೇಂದ್ರ ಕೂಡ ಹುಡುಗಿಯ ಕುಟುಂಬದ ಸಂಬಂಧಿಕರಂತೆ ನಟಿಸಿ ಮದುವೆಗೆ ಹಾಜರಾಗಿದ್ದರು.
ಏತನ್ಮಧ್ಯೆ, ಈ ಇಡೀ ಗ್ಯಾಂಗ್ ಬಹಳ ಸಮಯದಿಂದ ಈ ರೀತಿಯ ವಂಚನೆಯಲ್ಲಿ ಭಾಗಿಯಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಮದುವೆಯ ನಂತರ ಆರೋಪಿಗಳು ನಗದು ಮತ್ತು ಆಭರಣಗಳೊಂದಿಗೆ ಪರಾರಿಯಾಗಲು ಯೋಜಿಸುತ್ತಿದ್ದರು ಎಂದು ರತನ್ ಕುಟುಂಬ ಆರೋಪಿಸಿದೆ. ಆದರೆ ಅವರು ಮಾಡುವ ಮೊದಲೇ ಮೊಬೈಲ್ ಚಾಟ್ ಸತ್ಯವನ್ನು ಬಹಿರಂಗಪಡಿಸಿತು. ನಂತರ ಕುಟುಂಬವು ವಧುವನ್ನು ಬಂಧಿಸಿ ನೇರವಾಗಿ ಝಾನ್ಸಿ ರಸ್ತೆ ಪೊಲೀಸ್ ಠಾಣೆಗೆ ಕರೆದೊಯ್ದಿತು.
ಅದರಂತೆ, ಈ ಘಟನೆಯು ವಿವಾಹದಂತಹ ಪವಿತ್ರ ಬಂಧವನ್ನು ಲಾಭಕ್ಕಾಗಿ ಬಳಸಿಕೊಳ್ಳುವ ಕ್ರಿಮಿನಲ್‌ಗಳ ಬಗ್ಗೆ ಎಚ್ಚರಿಕೆ ನೀಡಿದೆ. ಹಾಗಾಗಿ, ಅಪರಿಚಿತ ಮಧ್ಯವರ್ತಿಗಳ ಮೂಲಕ ಸಂಬಂಧ ಬೆಳೆಸುವಾಗ ಹಿನ್ನೆಲೆ ತಪಾಸಣೆ ಮಾಡುವುದು ಎಷ್ಟು ಮುಖ್ಯ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.












