Mango: ಕಲ್ಲಂಗಡಿ ಆಯ್ತು, ಈಗ ಮ್ಯಾಂಗೋ ಶಾಕ್! ವಿಷವಾದ ಮಾವು, ಒಂದೇ ಕುಟುಂಬದ 7 ಮಂದಿ ಆಸ್ಪತ್ರೆಗೆ ದಾಖಲು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂಕೇತಿಕ ಚಿತ್ರ!


Last Updated:

Summer Fruit Safety: ಬೇಸಿಗೆಯ ಬಿಸಿಲಿಗೆ ತಂಪು ನೀಡಬೇಕಿದ್ದ ಕಲ್ಲಂಗಡಿ ಹಣ್ಣು ತಂದಿಟ್ಟ ಗಂಡಾಂತರ ಮಾಸುವ ಮುನ್ನವೇ, ಈಗ ‘ಮ್ಯಾಂಗೋ ಶಾಕ್’ ಎದುರಾಗಿದೆ. ಮಾವಿನ ಸೀಕರಣೆ ಸವಿದ ಒಂದೇ ಕುಟುಂಬದ ಏಳು ಮಂದಿ ತೀವ್ರ ಅಸ್ವಸ್ಥಗೊಂಡು ನೇರವಾಗಿ ಆಸ್ಪತ್ರೆ ಮೆಟ್ಟಿಲೇರಿದ್ದಾರೆ. ಮಾವಿನ ರಸ ಏಕಾಏಕಿ ವಿಷಪ್ರಾಯವಾಗಿದ್ದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ.

ಸಾಂಕೇತಿಕ ಚಿತ್ರ!
ಸಾಂಕೇತಿಕ ಚಿತ್ರ!

ಬೇಸಿಗೆಯ ಬಿಸಿಲಿಗೆ ತಂಪು ನೀಡಬೇಕಿದ್ದ ಕಲ್ಲಂಗಡಿ ಹಣ್ಣು(Watermelon) ತಂದಿಟ್ಟ ಗಂಡಾಂತರ ಮಾಸುವ ಮುನ್ನವೇ, ಈಗ ‘ಮ್ಯಾಂಗೋ ಶಾಕ್’ ಎದುರಾಗಿದೆ. ಮಾವಿನ ಸೀಕರಣೆ (Mango Juice) ಸವಿದ ಒಂದೇ ಕುಟುಂಬದ ಏಳು ಮಂದಿ ತೀವ್ರ ಅಸ್ವಸ್ಥಗೊಂಡು ನೇರವಾಗಿ ಆಸ್ಪತ್ರೆ (Hospital) ಮೆಟ್ಟಿಲೇರಿದ್ದಾರೆ. ಮಾವಿನ ರಸ ಏಕಾಏಕಿ ವಿಷಪ್ರಾಯವಾಗಿದ್ದು ಹೇಗೆ? ಕಲ್ಲಂಗಡಿ ದುರಂತದ ಬೆನ್ನಲ್ಲೇ ಸಂಭವಿಸಿದ ಈ ಶಾಕಿಂಗ್  (Shocking) ಘಟನೆಯ ಹಿಂದಿನ ಅಸಲಿ ರಹಸ್ಯ ಇಲ್ಲಿದೆ.

ಆಹಾರ ಸುರಕ್ಷತೆ ಕುರಿತು ಆತಂಕ ಸೃಷ್ಟಿ!

ಮಹಾರಾಷ್ಟ್ರದ ಅಹಿಲ್ಯಾನಗರ ಜಿಲ್ಲೆಯಲ್ಲಿ ಮಾವಿನ ಸೀಕರಣೆ (ಮಾವಿನ ರಸ) ಸೇವಿಸಿದ ಬಳಿಕ ಒಂದೇ ಕುಟುಂಬದ ಏಳು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಭಾರೀ ಆತಂಕಕ್ಕೆ ಕಾರಣವಾಗಿದೆ. ಬೇಸಿಗೆಯ ಸಮಯದಲ್ಲಿ ಮಾವಿನ ಹಣ್ಣಿನ ಸೀಸನ್ ಜೋರಾಗಿರುವ ನಡುವೆಯೇ ನಡೆದ ಈ ಘಟನೆ ಜನರಲ್ಲಿ ಆಹಾರ ಸುರಕ್ಷತೆ ಕುರಿತು ಆತಂಕ ಸೃಷ್ಟಿಸಿದೆ.

ಘಟನೆ ನಡೆದಿದ್ದೆಲ್ಲಿ?

ಅಹಿಲ್ಯಾನಗರ ಜಿಲ್ಲೆಯ ಶೇವಗಾಂವ್ ನಗರದ ಆರೇ ವಸ್ತಿ ಪ್ರದೇಶದಲ್ಲಿ ವಾಸಿಸುವ ಜಯಭಾಯ್ ಕುಟುಂಬದವರು ಕೆಲವು ದಿನಗಳ ಹಿಂದೆ ಮಾರುಕಟ್ಟೆಯಿಂದ ಮಾವುಗಳನ್ನು ಖರೀದಿಸಿದ್ದರು. ಶನಿವಾರ ಸಂಜೆ ಆ ಮಾವುಗಳಿಂದ ಮನೆಯಲ್ಲೇ ಸೀಕರಣೆ ತಯಾರಿಸಿ ಕುಟುಂಬದ ಸದಸ್ಯರೆಲ್ಲರೂ ಸೇವಿಸಿದ್ದರು. ಆದರೆ ಕೆಲವೇ ಹೊತ್ತಿನಲ್ಲಿ ಕುಟುಂಬದ ಸದಸ್ಯರಿಗೆ ತಲೆಸುತ್ತು, ವಾಂತಿ, ದೇಹದ ಸಮತೋಲನ ಕಳೆದುಕೊಳ್ಳುವುದು, ಮೂರ್ಛೆ ಹೋಗುವಂತಹ ಲಕ್ಷಣಗಳು ಕಾಣಿಸಿಕೊಂಡವು. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಕುಟುಂಬದವರು ತಕ್ಷಣವೇ ಎಲ್ಲರನ್ನು ಆಸ್ಪತ್ರೆಗೆ ಕರೆದೊಯ್ದರು.

ಖಾಸಗಿ ಆಸ್ಪತ್ರೆಯಲ್ಲಿ ಅಸ್ವಸ್ಥರಿಗೆ ಚಿಕಿತ್ಸೆ!

ಅಸ್ವಸ್ಥರಾದವರಲ್ಲಿ ಭಾವುಸಾಹೇಬ್ ಜಗನ್ನಾಥ್ ಜಯಭಾಯ್, ರೇಣುಕಾ ಜಯಭಾಯ್, ಸಾಗರ್ ಜಯಭಾಯ್, ಅಭಿಜಿತ್ ಜಯಭಾಯ್, ಪೂನಂ ಜಯಭಾಯ್, ಶೀತಲ್ ಜಯಭಾಯ್ ಹಾಗೂ ನಾಲ್ಕು ವರ್ಷದ ಬಾಲಕಿ ಅವನಿ ಸೇರಿದ್ದಾರೆ. ಸದ್ಯ ಎಲ್ಲರಿಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ವೈದ್ಯರು ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆತಿರುವುದರಿಂದ ಅಪಾಯ ತಪ್ಪಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

ವೈದ್ಯರು ಹೇಳಿದ್ದೇನು?

ವೈದ್ಯರ ಪ್ರಾಥಮಿಕ ಪರಿಶೀಲನೆಯ ಪ್ರಕಾರ, ಆಹಾರ ವಿಷಬಾಧೆಯೇ ಈ ಅಸ್ವಸ್ಥತೆಗೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ ವಿಷಬಾಧೆ ನಿಖರವಾಗಿ ಹೇಗೆ ಉಂಟಾಯಿತು, ಮಾವಿನಲ್ಲೇ ರಾಸಾಯನಿಕ ಅಂಶಗಳಿದ್ದವೆಯೇ ಅಥವಾ ಸೀಕರಣೆ ತಯಾರಿಸುವಾಗ ಏನಾದರೂ ದೋಷ ಸಂಭವಿಸಿತೇ ಎಂಬುದರ ಕುರಿತು ಆರೋಗ್ಯ ಇಲಾಖೆ ತನಿಖೆ ಆರಂಭಿಸಿದೆ. ಮಾವುಗಳನ್ನು ಕೃತಕವಾಗಿ ಬೇಯಿಸಲು ಬಳಸುವ ಕೆಲವು ರಾಸಾಯನಿಕ ಪದಾರ್ಥಗಳು ಆರೋಗ್ಯಕ್ಕೆ ಹಾನಿಕಾರಕವಾಗಿರಬಹುದು ಎಂಬ ಆತಂಕವೂ ವ್ಯಕ್ತವಾಗಿದೆ.

ಸ್ಥಳೀಯರಲ್ಲಿ ಹೆಚ್ಚಿದ ಆತಂಕ!

ಈ ಘಟನೆ ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದ್ದು, ಮಾರುಕಟ್ಟೆಯಲ್ಲಿ ಮಾರಾಟವಾಗುವ ಹಣ್ಣುಗಳ ಗುಣಮಟ್ಟದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಕೆಲವೇ ದಿನಗಳ ಹಿಂದೆ ಕಲ್ಲಂಗಡಿ ಸೇವಿಸಿ ಅಸ್ವಸ್ಥರಾದ ಪ್ರಕರಣಗಳು ವರದಿಯಾಗಿದ್ದವು. ಇದೀಗ ಮಾವಿನ ಸೀಕರಣೆಯಿಂದ ಏಳು ಮಂದಿ ಆಸ್ಪತ್ರೆಗೆ ದಾಖಲಾಗಿರುವುದು ಜನರನ್ನು ಬೆಚ್ಚಿಬೀಳಿಸಿದೆ.

ಆರೋಗ್ಯ ತಜ್ಞರು ಹೇಳುವುದೇನು?

ಆರೋಗ್ಯ ತಜ್ಞರು ಹಣ್ಣುಗಳನ್ನು ಖರೀದಿಸುವಾಗ ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ. ಹಣ್ಣುಗಳನ್ನು ಚೆನ್ನಾಗಿ ತೊಳೆದು, ಅವು ಸ್ವಾಭಾವಿಕವಾಗಿ ಹಣ್ಣಾಗಿದೆಯೇ ಎಂಬುದನ್ನು ಗಮನಿಸಿ ಸೇವಿಸಬೇಕು. ವಿಶೇಷವಾಗಿ ಮಕ್ಕಳಿಗೆ ನೀಡುವ ಮೊದಲು ಸುರಕ್ಷತೆ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಈ ಘಟನೆ ಬೇಸಿಗೆಯಲ್ಲಿ ಜನರು ತಿನ್ನುವ ಹಣ್ಣುಗಳ ಗುಣಮಟ್ಟದ ಮೇಲೆ ಮತ್ತೊಮ್ಮೆ ಕಣ್ಣಿಟ್ಟುಕೊಳ್ಳಬೇಕೆಂಬ ಎಚ್ಚರಿಕೆಯ ಗಂಟೆ ಮೊಳಗಿಸಿದೆ. ತನಿಖಾ ವರದಿ ಹೊರಬಂದ ಬಳಿಕ ನಿಖರ ಕಾರಣ ತಿಳಿಯಲಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed