Last Updated:
ದಿನಕ್ಕೆ 25 ಸಾವಿರ ಮನೆಗಳಿಗೆ ವಿದ್ಯುತ್ ನೀಡುತ್ತಿದ್ದ ಪ್ರಮುಖ ಘಟಕ 2 ತಿಂಗಳ ಕಾಲ ಸ್ಥಗಿತಗೊಂಡಿದೆ. ಇದರ ಪರಿಣಾಮ ವಿದ್ಯುತ್ ಪೂರೈಕೆಯ ಮೇಲೆ ಬೀಳುತ್ತದೆಯೇ? ಸಂಪೂರ್ಣ ವರದಿ ಓದಿ
ಶಿವಮೊಗ್ಗ: ಮುಂಗಾರು ಮಳೆಗಾಗಿ (Monsoon) ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಕರ್ನಾಟಕದ ಜನತೆಗೆ ಇದೀಗ ಬರಸಿಡಿಲೆರಗಿದಂತಾಗಿದೆ! ಹೌದು, ಕಳೆದ ಒಂದು ವಾರದಿಂದ ಶರಾವತಿ (Sharavati) ಜಲಾನಯನ ಪ್ರದೇಶದಲ್ಲಿ ವರುಣ ದೇವ ಸಂಪೂರ್ಣವಾಗಿ ಕೈಕೊಟ್ಟಿದ್ದು, ಶಿವಮೊಗ್ಗ (Shivamogga) ಜಿಲ್ಲೆಯ ಸಾಗರ ತಾಲೂಕಿನ ಪ್ರಸಿದ್ಧ ಲಿಂಗನಮಕ್ಕಿ ಜಲವಿದ್ಯುತ್ ಕೇಂದ್ರದಲ್ಲಿ ವಿದ್ಯುತ್ ಉತ್ಪಾದನೆಯನ್ನು ದಿಢೀರನೆ ತಾತ್ಕಾಲಿಕವಾಗಿ (Temporary) ಸ್ಥಗಿತಗೊಳಿಸಲಾಗಿದೆ.
ಜೂನ್ 2026 ರ ಅಂತ್ಯದ ವೇಳೆಗೆ ರಾಜ್ಯದಲ್ಲಿ ಬರೋಬ್ಬರಿ ಶೇಕಡಾ 41 ರಷ್ಟು ಮಳೆಯ ಭಾರಿ ಕೊರತೆ ಉಂಟಾಗಿದ್ದು, ಜಲಾನಯನ ಪ್ರದೇಶದಲ್ಲಿ ಒಳಹರಿವು ಗಣನೀಯವಾಗಿ ತಗ್ಗಿದೆ. ಇದರ ನೇರ ಪರಿಣಾಮವಾಗಿ ದಿನದಿಂದ ದಿನಕ್ಕೆ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಪಾತಾಳಕ್ಕೆ ಕುಸಿಯುತ್ತಿರುವುದು ಇಡೀ ರಾಜ್ಯವನ್ನೇ ಕತ್ತಲೆಗೆ ದೂಡುವ ಆತಂಕ ಸೃಷ್ಟಿಸಿದೆ!
ಈ ಬಗ್ಗೆ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (KPCL) ವಿದ್ಯುತ್ ವಿಭಾಗದ ಮುಖ್ಯ ಇಂಜಿನಿಯರ್ ಆನಂದ್ ಕುಮಾರ್ ಅವರು ನೀಡಿರುವ ಮಾಹಿತಿ ಕೇಳಿದರೆ ನೀವು ನಿಜಕ್ಕೂ ಆಶ್ಚರ್ಯಪಡ್ತೀರ! ಗರಿಷ್ಠ 1,819 ಅಡಿ ಸಾಮರ್ಥ್ಯ ಹೊಂದಿರುವ ಲಿಂಗನಮಕ್ಕಿ ಅಣೆಕಟ್ಟು ಕೇವಲ ಒಂದೇ ಒಂದು ಕೇಂದ್ರವಲ್ಲ, ಬದಲಾಗಿ ಶರಾವತಿ ಕಣಿವೆಯಲ್ಲಿರುವ ಶರಾವತಿ, ಗೇರುಸೊಪ್ಪ ಹಾಗೂ ಮಹಾತ್ಮ ಗಾಂಧಿ ವಿದ್ಯುತ್ ಕೇಂದ್ರಗಳು ಸೇರಿದಂತೆ ಒಟ್ಟು ಐದು ಪ್ರಮುಖ ಜಲವಿದ್ಯುತ್ ಕೇಂದ್ರಗಳಿಗೆ ಪ್ರಮುಖ ಜೀವನಾಡಿಯಾಗಿದೆ.
ಪ್ರಸ್ತುತ ಲಿಂಗನಮಕ್ಕಿ ಪವರ್ ಹೌಸ್ನಲ್ಲಿ ತಲಾ 27.5 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಬೃಹತ್ ಘಟಕಗಳಿದ್ದು, ಒಟ್ಟು 55 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಆದರೆ, ಈಗ ಎದುರಾಗಿರುವ ತೀವ್ರ ನೀರಿನ ಅಭಾವದಿಂದಾಗಿ ಈ ಪೈಕಿ 27.5 ಮೆಗಾವ್ಯಾಟ್ ಸಾಮರ್ಥ್ಯದ ಒಂದು ಘಟಕದ ಕೆಲಸವನ್ನು ಅಧಿಕಾರಿಗಳು ಅನಿವಾರ್ಯವಾಗಿ ಸದ್ಯಕ್ಕೆ ಸಂಪೂರ್ಣವಾಗಿ ನಿಲ್ಲಿಸಿದ್ದಾರೆ ಎಂದು ಟಿವಿ9, ನವಸಮಾಜ ವರದಿ ಮಾಡಿದೆ.
ಜುಲೈ-ಆಗಸ್ಟ್ ಭರವಸೆ ಬೇಡುತ್ತಿದೆ ಜಲಾಶಯ
ಸದ್ಯದ ಈ ಸೂಕ್ಷ್ಮ ಪರಿಸ್ಥಿತಿಯನ್ನು ಅರಿತಿರುವ ಕೆಪಿಸಿಎಲ್ ಅಧಿಕಾರಿಗಳು ಲಭ್ಯವಿರುವ ನೀರನ್ನು ಅತ್ಯಂತ ಮಿತವಾಗಿ ಬಳಸುವ ಕಠಿಣ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ರಾಜ್ಯದ ಒಟ್ಟು ವಿದ್ಯುತ್ ಬೇಡಿಕೆಯನ್ನು ಪೂರೈಸುವಲ್ಲಿ ಶರಾವತಿ ಜಲವಿದ್ಯುತ್ ಯೋಜನೆ ಅತ್ಯಂತ ಪ್ರಮುಖ ಪಾತ್ರ ವಹಿಸುವುದರಿಂದ, ರಾಜ್ಯ ಸರ್ಕಾರವು ಈ ಕೊರತೆಯನ್ನು ನೀಗಿಸಲು ಥರ್ಮಲ್, ಸೌರ ವಿದ್ಯುತ್ ಹಾಗೂ ಕೇಂದ್ರದಿಂದ ವಿದ್ಯುತ್ ಖರೀದಿಸುವ ಮೂಲಕ ಸಮತೋಲನ ಸಾಧಿಸಲು ಹರಸಾಹಸ ಪಡುತ್ತಿದೆ. ಮುಂಬರುವ ಜುಲೈ-ಆಗಸ್ಟ್ ತಿಂಗಳಲ್ಲಿ ವರುಣನ ಕೃಪೆಯಾಗಿ ಮುಂಗಾರು ಮಳೆ ಮತ್ತೆ ಚುರುಕಾದರೆ ಮಾತ್ರ ವಿದ್ಯುತ್ ಉತ್ಪಾದನೆ ಸಹಜ ಸ್ಥಿತಿಗೆ ಮರಳಲಿದ್ದು, ಅಲ್ಲಿಯವರೆಗೂ ರಾಜ್ಯದ ಜನತೆ ವಿದ್ಯುತ್ ಕಡಿತದ ಟೆನ್ಶನ್ನಲ್ಲೇ ದಿನ ದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ!
Bangalore [Bangalore],Bangalore,Karnataka













