Last Updated:
ಪುಣೆಯಲ್ಲಿ ನಡೆದ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಹೊಸ ಹೊಸ ಸಂಗತಿಗಳು ಬೆಳಕಿಗೆ ಬರುತ್ತಿದೆ. ಪ್ರಮುಖ ಆರೋಪಿ ಸಿಯಾ ಗೋಯಲ್ ಅವರ ಸ್ನ್ಯಾಪ್ಚಾಟ್ ಚಾಟ್ಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ, ಅದರಲ್ಲಿ ಮದುವೆ ಬಗ್ಗೆ ಸ್ಫೋಟಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ (Pune) ನಡೆದ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal) ಕೊಲೆ ಪ್ರಕರಣ ದಿನಕ್ಕೊಂದು ಆಘಾತಕಾರಿ ಟ್ವಿಸ್ಟ್ಗಳನ್ನು ಪಡೆದುಕೊಳ್ಳುತ್ತಿದೆ. ಕೇತನ್ ಅವರ ನಿಶ್ಚಿತಾರ್ಥವಾಗಿದ್ದ ಭಾವಿ ಪತ್ನಿ ಸಿಯಾ ಗೋಯಲ್ (Siya Goyal) ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ (Chethan Chowdary) ಸದ್ಯ ಜೈಲು ಪಾಲಾಗಿದ್ದಾರೆ. ತನಿಖೆ ತೀವ್ರಗೊಂಡಂತೆಲ್ಲಾ ಇವರಿಬ್ಬರು ಸೇರಿ ಎಷ್ಟು ವ್ಯವಸ್ಥಿತವಾಗಿ ಮತ್ತು ಕ್ರೂರವಾಗಿ ಈ ಕೊಲೆಗೆ ಸಂಚು ರೂಪಿಸಿದ್ದರು ಎಂಬ ರೋಚಕ ಸಂಗತಿಗಳು ಡಿಜಿಟಲ್ ಪುರಾವೆಗಳ ಮೂಲಕ ಹೊರಬರುತ್ತಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಮತ್ತೊಂದು ಡಿಜಿಟಲ್ ಸಾಕ್ಷ್ಯ ಪತ್ತೆಯಾಗಿದೆ. ಸಿಯಾ ತನ್ನ ಸ್ನೇಹಿತೆಯೊಂದಿಗೆ ಮಾಡಿರುವ ಮೆಸೇಜ್ ಲಭ್ಯವಾಗಿದೆ. ಇದರಲ್ಲಿ ಮದುವೆ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ವಿಚಾರಣೆಯ ಸಮಯದಲ್ಲಿ ಆರೋಪಿಗಳಾದ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಸಾಮಾನ್ಯ ಭಾಷೆಯಲ್ಲಿ ಮಾತನಾಡುತ್ತಿರಲಿಲ್ಲ. ಪೊಲೀಸರು ಇವರ ಮೊಬೈಲ್ ಫೋನ್ಗಳಿಂದ ವಶಪಡಿಸಿಕೊಂಡ ಡಿಜಿಟಲ್ ಡೇಟಾವನ್ನು ಪರಿಶೀಲಿಸಿದಾಗ, ಅವರಿಬ್ಬರೂ ವಿಭಿನ್ನ ಸನ್ನೆಗಳು ಹಾಗೂ ವಿಶೇಷ ‘ಸಂಕೇತ ಪದಗಳ’ (Code Words) ಮೂಲಕ ಸಂವಹನ ನಡೆಸುತ್ತಿದ್ದುದು ಬೆಳಕಿಗೆ ಬಂದಿದೆ.
ಇದರ ಬೆನ್ನಲ್ಲೇ, ಪುಣೆ ಪೊಲೀಸರಿಗೆ ಸಿಯಾ ಗೋಯಲ್ ಅವರ ‘ಸ್ನ್ಯಾಪ್ ಚಾಟ್’ (Snapchat) ಖಾತೆಯಿಂದ ಮತ್ತೊಂದು ಪ್ರಮುಖ ಸುಳಿವು ಸಿಕ್ಕಿದೆ. ಮೇ 24 ಮತ್ತು 25 ರ ನಡುವೆ ಸಿಯಾ ತನ್ನ ಸ್ನೇಹಿತೆಯೊಬ್ಬಳ ಜೊತೆ ನಡೆಸಿದ ಸಂಭಾಷಣೆ ಪತ್ತೆಯಾಗಿದೆ. ಆ ಚಾಟ್ನಲ್ಲಿ ಸಿಯಾ, ‘ನಿಮ್ಮ ಆಧಾರ್ ಕಾರ್ಡ್ ನನಗೆ ಕಳುಹಿಸಿ. ನಾನು ನಡೆಯದ ಮದುವೆಗೆ (Never Happening Wedding) ಟಿಕೆಟ್ ಬುಕ್ ಮಾಡಬೇಕಾಗಿದೆ. ದಯವಿಟ್ಟು ಹೇಗಾದರೂ ಕಳುಹಿಸಿ’ ಎಂದು ಕೇಳಿದ್ದಾಳೆ. ಅದಕ್ಕೆ ಆಕೆಯ ಸ್ನೇಹಿತೆ ‘ಸರಿ, ನಾನು ಅದನ್ನು ವಾಟ್ಸಾಪ್ನಲ್ಲಿ ಕಳುಹಿಸಿದ್ದೇನೆ’ ಎಂದು ಉತ್ತರಿಸಿದ್ದಾಳೆ. ಆದರೆ, ಸಿಯಾಗೆ ಆಧಾರ್ ಕಾರ್ಡ್ ಕಳುಹಿಸಿದ ಆ ನಿಗೂಢ ಸ್ನೇಹಿತೆ ಯಾರು ಎಂಬ ಬಗ್ಗೆ ಪೊಲೀಸರು ಇನ್ನು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಪೊಲೀಸ್ ವಿಚಾರಣೆಯ ವೇಳೆ ಆರೋಪಿಗಳು ನೀಡಿರುವ ಮತ್ತೊಂದು ಹೇಳಿಕೆ ಇಡೀ ತನಿಖಾ ತಂಡವನ್ನೇ ಬೆಚ್ಚಿಬೀಳಿಸಿದೆ. ಸಿಯಾ ಮತ್ತು ಚೇತನ್ ಇಬ್ಬರೂ ಕೇತನ್ ಅವರನ್ನು ಕೊಲ್ಲುವ ಮುನ್ನ ‘ಕೊಲೆಯ ಪೂರ್ವಾಭ್ಯಾಸ’ (Murder Rehearsal) ನಡೆಸಿದ್ದಾಗಿ ಒಪ್ಪಿಕೊಂಡಿದ್ದಾರೆ.
ಯೋಜನೆಯ ಪ್ರಕಾರ, ಇಬ್ಬರೂ ಮೊದಲು ಪುಣೆಯ ಲುಲ್ಲಾ ನಗರದ ಮಿಲಿಟರಿ ಪ್ರದೇಶದ ಬಳಿ ಇರುವ ಗುಡ್ಡಗಾಡು ಪ್ರದೇಶಕ್ಕೆ ಹೋಗಿದ್ದರು. ಅಲ್ಲಿ ಒಬ್ಬ ವ್ಯಕ್ತಿಯನ್ನು ಬೆಟ್ಟದಿಂದ ಕೆಳಗೆ ತಳ್ಳಿ ಸಾಯಿಸಲು ಸಾಧ್ಯವೇ? ಹಾಗೆ ತಳ್ಳಿದರೆ ಸಾಕ್ಷ್ಯ ಸಿಗದಂತೆ ಹೇಗೆ ತಪ್ಪಿಸಿಕೊಳ್ಳಬಹುದು? ಎಂಬುದನ್ನು ಖುದ್ದಾಗಿ ಪರೀಕ್ಷಿಸಿದ್ದರು. ಈ ಭೀಕರ ಪೂರ್ವಾಭ್ಯಾಸದ ಬಳಿಕವೇ ಅವರು ಕೇತನ್ ಕೊಲೆಗೆ ಮುಂದಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಿಯಾ ಗೋಯಲ್ ಮತ್ತು ಸಹ ಆರೋಪಿ ಚೇತನ್ ಚೌಧರಿ ಅವರ ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಲೋನಾವಾಲ ಗ್ರಾಮೀಣ ಪೊಲೀಸರು ಶುಕ್ರವಾರ ಇಬ್ಬರನ್ನೂ ಮತ್ತೊಮ್ಮೆ ವಡ್ಗಾಂವ್ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಹೆಚ್ಚಿನ ತನಿಖೆಗಾಗಿ ಪೊಲೀಸರು ಇನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಯನ್ನು ಕೋರಿದ್ದರಾದರೂ, ನ್ಯಾಯಾಲಯವು ಇಬ್ಬರು ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ (Judicial Custody) ಒಪ್ಪಿಸಿ ಆದೇಶಿಸಿದೆ.

ಲೋನಾವಾಲ ಗ್ರಾಮೀಣ ಪೊಲೀಸರು ಈ ಪ್ರಕರಣದಲ್ಲಿ ಅತ್ಯಂತ ಸೂಕ್ಷ್ಮವಾಗಿ ತನಿಖೆ ನಡೆಸುತ್ತಿದ್ದಾರೆ. ಜುಲೈ 2 ರಂದು ಪೊಲೀಸರು ಸಿಯಾ ಗೋಯಲ್ ಅವರನ್ನು ಆಕೆಯ ಮನೆಗೆ ಕರೆದೊಯ್ದು ತನಿಖೆ ನಡೆಸಿದ್ದರು. ಈ ವೇಳೆ ಕೊಲೆಯ ದಿನ ಆಕೆ ಧರಿಸಿದ್ದ ಮತ್ತು ತನಿಖೆಗೆ ಅತ್ಯಂತ ನಿರ್ಣಾಯಕ ಸಾಕ್ಷ್ಯವಾಗಿರುವ ಪ್ಯಾಂಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೇತನ್ ಅಗರ್ವಾಲ್ ಕೊಲೆಯಾದ ಸ್ಥಳಕ್ಕೆ ಇಬ್ಬರೂ ಆರೋಪಿಗಳನ್ನು ಕರೆದೊಯ್ದು, ಇಡೀ ಅಪರಾಧ ಹೇಗೆ ನಡೆಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು ಇಡೀ ಘಟನೆಯ ‘ದೃಶ್ಯ ಪುನರ್ನಿರ್ಮಾಣ’ (Scene Reconstruction) ಮಾಡಲಾಗಿದೆ. ಡಿಜಿಟಲ್ ಪುರಾವೆಗಳ ಪರಿಶೀಲನೆ ಹಾಗೂ ಇಬ್ಬರನ್ನೂ ಮುಖಾಮುಖಿ ಕೂರಿಸಿ ನಡೆಸಿರುವ ಗಂಟೆಗಳ ಕಾಲದ ವಿಚಾರಣೆಯಿಂದಾಗಿ ಕೊಲೆಯ ಹಿಂದಿನ ಎಲ್ಲಾ ರಹಸ್ಯಗಳು ಒಂದೊಂದಾಗಿ ಕಳಚಿಕೊಳ್ಳುತ್ತಿದ್ದು, ಕೇತನ್ ಕುಟುಂಬಕ್ಕೆ ನ್ಯಾಯ ಸಿಗುವ ನಿರೀಕ್ಷೆ ದಟ್ಟವಾಗಿದೆ.
Pune,Maharashtra













