INDW vs ENGW Test: ಇಂಗ್ಲೆಂಡ್ ವಿರುದ್ಧದ ಟೆಸ್ಟ್​​ ಪಂದ್ಯದಲ್ಲಿ ಭಾರತ ತಂಡಕ್ಕೆ ರೋಚಕ ಗೆಲುವು! 142 ವರ್ಷಗಳ ನಂತರ ಈ ಸಾಧನೆ ಮಾಡಿದ ಮೊದಲ ತಂಡ | ಕ್ರೀಡಾ ಸುದ್ದಿ | ACTPnews

ಭಾರತ  ಮಹಿಳಾ ತಂಡ


Last Updated:

ಶತಮಾನದ ಇತಿಹಾಸವುಳ್ಳ ಲಾರ್ಡ್ಸ್​​ನಲ್ಲಿ ನಡೆದ ಮೊದಲ ಮಹಿಳಾ ಟೆಸ್ಟ್ ಪಂದ್ಯದಲ್ಲಿ ಹರ್ಮನ್​ಪ್ರೀತ್ ಕೌರ್ (Harmanpreet Kaur)​ ಬಳಗ ಇಂಗ್ಲೆಂಡ್ ವಿರುದ್ಧ ಬರೋಬ್ಬರಿ 270 ರನ್​ಗಳ ದಾಖಲೆಯ ಜಯ ಸಾಧಿಸಿದೆ.

ಭಾರತ  ಮಹಿಳಾ ತಂಡ
ಭಾರತ ಮಹಿಳಾ ತಂಡ

ಕ್ರಿಕೆಟ್‌ನ ಮೆಕ್ಕಾ, ಕ್ರಿಕೆಟ್ ಕಾಶಿ ಎಂದೇ ಖ್ಯಾತಿ ಪಡೆದ ಲಾರ್ಡ್ಸ್‌ನಲ್ಲಿ ಭಾರತ ಮಹಿಳಾ ತಂಡ (India vs England) ಐತಿಹಾಸಿಕ ಗೆಲುವು ದಾಖಲಿಸಿದೆ. ಶತಮಾನದ ಇತಿಹಾಸವುಳ್ಳ ಲಾರ್ಡ್ಸ್​​ನಲ್ಲಿ ನಡೆದ ಮೊದಲ ಮಹಿಳಾ ಟೆಸ್ಟ್ ಪಂದ್ಯದಲ್ಲಿ ಹರ್ಮನ್​ಪ್ರೀತ್ ಕೌರ್ (Harmanpreet Kaur)​ ಬಳಗ ಇಂಗ್ಲೆಂಡ್ ವಿರುದ್ಧ ಬರೋಬ್ಬರಿ 270 ರನ್​ಗಳ ದಾಖಲೆಯ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ, ಹರ್ಮನ್‌ಪ್ರೀತ್ ಪಡೆ ಐತಿಹಾಸಿಕ ಲಾರ್ಡ್ಸ್‌ನಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದ ಮೊದಲ ಮಹಿಳಾ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಲಾರ್ಡ್ಸ್ ಮೈದಾನದಲ್ಲಿ ಮೊದಲ ಪುರುಷರ ಟೆಸ್ಟ್​ ಪಂದ್ಯ ನಡೆದ 142 ವರ್ಷಗಳ ಬಳಿಕ ಮೊದಲ ಮಹಿಳಾ ಟೆಸ್ಟ್ ಪಂದ್ಯದಲ್ಲಿ ಭಾರತ ಜಯಬೇರಿ ಭಾರಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.

ಮೊದಲ ಇನ್ನಿಂಗ್ಸ್ ಹೈಲೈಟ್ಸ್

ಇಂಗ್ಲೆಂಡ್ ಮತ್ತು ಭಾರತ ಮಹಿಳಾ ತಂಡಗಳ ನಡುವಿನ ಏಕೈಕ ಟೆಸ್ಟ್ ಶುಕ್ರವಾರ ಲಂಡನ್‌ನ ಲಾರ್ಡ್ಸ್‌ನಲ್ಲಿ ಪ್ರಾರಂಭವಾಯಿತು. ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 285 ರನ್‌ಗಳಿಸಿ ಆಲೌಟ್ ಆಗಿತ್ತು.

ಮೊದಲ ಇನ್ನಿಂಗ್ಸ್​​ನಲ್ಲಿ ಆರಂಭಿಕ ಆಟಗಾರ್ತಿಯರಲ್ಲಿ ಶಫಾಲಿ ವರ್ಮಾ ಶೂನ್ಯಕ್ಕೆ ಔಟಾದರೆ, ಸ್ಮೃತಿ ಮಂಧಾನ ಅರ್ಧಶತಕ (83) ಬಾರಿಸಿ ಗಮನ ಸೆಳೆದಿದ್ದರು. ನಾಯಕಿ ಹರ್ಮನ್‌ಪ್ರೀತ್ ಕೌರ್ (58) ಮತ್ತು ದೀಪ್ತಿ ಶರ್ಮಾ (57) ಕೂಡ ಅರ್ಧಶತಕ ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ಜೆಮಿಮಾ ರೋಡ್ರಿಗಸ್ (35) ಕೂಡ ಗಮನಾರ್ಹ ಕೊಡುಗೆ ನೀಡಿದ್ದರು.

ಇಂಗ್ಲೆಂಡ್ ಪರ ಸೋಫಿ ಎಕ್ಲೆಸ್ಟೋನ್ 3, ಲಾರೆನ್ ಫಿಲ್ಲರ್, ಇಸ್ಸಿ ವಾಂಗ್, ಮ್ಯಾಡಿ ವಿಲಿಯರ್ಸ್ ತಲಾ 2 ವಿಕೆಟ್ ಹಾಗೂ ಲಾರೆನ್ ಬೆಲ್ 1 ವಿಕೆಟ್ ಪಡೆದಿದ್ದರು.

ಕ್ರಾಂತಿ ಗೌಡ್ ದಾಳಿಗೆ ಸಿಲುಕಿದ ಇಂಗ್ಲೆಂಡ್

ನಂತರ ಇಂಗ್ಲೆಂಡ್ ಭಾರತದ ಮಾರಕ ದಾಳಿಗೆ ತತ್ತರಿಸಿದ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 170 ರನ್‌ಗಳಿಗೆ ಪತನಗೊಂಡಿತು. ವಿಕೆಟ್ ಕೀಪರ್-ಬ್ಯಾಟರ್ ಆಮಿ ಜೋನ್ಸ್ ಏಕಾಗಿ ಹೋರಾಟ ನಡೆಸಿ ಅರ್ಧಶತಕ (52) ಸಿಡಿಸಿದ್ದರು. ನಾಯಕಿ ನ್ಯಾಟ್ ಸೀವರ್​ ಬ್ರಂಟ್​ 44 ರನ್​ಗಳಿಸಿ ಎರಡನೇ ಗರಿಷ್ಠ ಸ್ಕೋರರ್ ಆಗಿದ್ದರು.

ಭಾರತೀಯ ಬೌಲರ್‌ಗಳಲ್ಲಿ, ವೇಗಿ ಕ್ರಾಂತಿ ಗೌಡ್ ಐದು ವಿಕೆಟ್‌ಗಳನ್ನು ಪಡೆಯುವ ಮೂಲಕ ಇಂಗ್ಲೆಂಡ್ ಬ್ಯಾಟಿಂಗ್ ಧ್ವಂಸ ಮಾಡಿದರು. ಲಾರ್ಡ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದ ಮೊದಲ ಮಹಿಳಾ ಬೌಲರ್ ಎಂಬ ಇತಿಹಾಸವನ್ನು ಅವರು ನಿರ್ಮಿಸಿದರು. ಉಳಿದವರಲ್ಲಿ ಸಯಾಲಿ ಸತ್ಘರೆ ಮತ್ತು ಸ್ನೇಹ್ ರಾಣಾ ತಲಾ ಎರಡು ವಿಕೆಟ್‌ಗಳನ್ನು ಪಡೆದು ಮಿಂಚಿದರು.

ಐತಿಹಾಸಿಕ ಶತಕ ಸಿಡಿಸಿದ ಭಾಟಿಯಾ

115 ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಏಳು ವಿಕೆಟ್‌ಗಳಿಗೆ 341 ರನ್‌ಗಳಿಗೆ ಡಿಕ್ಲೇರ್ ಮಾಡಿತು. ವಿಕೆಟ್ ಕೀಪರ್-ಬ್ಯಾಟರ್ ಯಾಸ್ತಿಕಾ ಭಾಟಿಯಾ ಶತಕ (113) ಐತಿಹಾಸಿಕ ಶತಕ ಸಿಡಿಸಿದರೆ, ಸ್ಮೃತಿ ಮಂಧಾನ 70 ರನ್​ ಹಾಗೂ ರಿಚಾ ಘೋಷ್ ಅಜೇಯ 50 ರನ್​ಗಳಿಸಿದರು.

ಪರಿಣಾಮವಾಗಿ, ಟೀಮ್ ಇಂಡಿಯಾ ಇಂಗ್ಲೆಂಡ್‌ಗೆ 457 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಭಾನುವಾರ ನಾಲ್ಕನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ಆರು ವಿಕೆಟ್ ನಷ್ಟಕ್ಕೆ ಕೇವಲ 130 ರನ್ ಗಳಿಸಿತ್ತು. ಕೊನೆಯ ದಿನವಾದ ಇಂದು ಇಂಗ್ಲೆಂಡ್ ನಿನ್ನೆಯ ಮೊತ್ತಕ್ಕೆ 55 ರನ್​ ಸೇರಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಇಂಗ್ಲೆಂಡ್ ಪರ ಮೊದಲ ಇನ್ನಿಂಗ್ಸ್​​ನಲ್ಲಿ ಅರ್ಧಶತಕ ಸಿಡಿಸಿದ್ದ ಆ್ಯಮಿ ಜೋನ್ಸ್ (54) ಹಾಗೂ ಸೋಫಿ ಎಕ್ಲೆಸ್ಟೋನ್​ (50) ಅರ್ಧಶತಕ ಸಿಡಿಸಿದರು. ಇಂಗ್ಲೆಂಡ್ ತಂಡ 2ನೇ ಇನ್ನಿಂಗ್ಸ್​​ನಲ್ಲಿ 186ಕ್ಕೆ ಆಲೌಟ್ ಆಯಿತು.

ಭಾರತದ ಪರ ಸ್ನೇಹ್ ರಾಣಾ 4 ವಿಕೆಟ್ ಪಡೆದರೆ, ಕ್ರಾಂತಿ ಗೌಡ್, ಸಯಾಲಿ ಸತ್ಘರೆ ಹಾಗೂ ದೀಪ್ತಿ ಶರ್ಮಾ ತಲಾ 2 ವಿಕೆಟ್ ಪಡೆದು ಮಿಂಚಿದರು.

142 ವರ್ಷಗಳ ಬಳಿಕ ಮೊದಲ ಪಂದ್ಯ

ಲಾರ್ಡ್ಸ್ ಮೈದಾನದಲ್ಲಿ ಪುರುಷರ ಮೊದಲ ಟೆಸ್ಟ್ ಪಂದ್ಯ ನಡೆದ 142 ವರ್ಷಗಳ ಬಳಿಕ ಇಲ್ಲಿ ಮೊದಲ ಬಾರಿಗೆ ಮಹಿಳಾ ಟೆಸ್ಟ್ ಪಂದ್ಯ ಆಯೋಜನೆಗೊಂಡಿತ್ತು. ಈ ಮಹತ್ವದ ಪಂದ್ಯದಲ್ಲೇ ಭಾರತದ ವನಿತೆಯರು ಇಂಗ್ಲೆಂಡ್‌ಗೆ ಮಣ್ಣು ಮುಕ್ಕಿಸಿ ವಿಜಯ ಪತಾಕೆ ಹಾರಿಸಿದ್ದಾರೆ. ಈ ಮೂಲಕ ಲಾರ್ಡ್ಸ್ ಮೈದಾನದಲ್ಲಿ ಮೊದಲ ಜಯ ಸಾಧಿಸಿದ ತಂಡ ಎಂಬ ತಮ್ಮ ಹೆಸರನ್ನ ಲಾರ್ಡ್ಸ್ ಆನರ್ಸ್ ಬೋರ್ಡ್​ನಲ್ಲಿ ಬರೆದುಕೊಂಡಿದೆ. ಯಾಸ್ತಿಕಾ ಭಾಟಿಯಾ ಶತಕ ಸಿಡಿಸಿದ ಮೊದಲ ಮಹಿಳಾ ಬ್ಯಾಟರ್ ಹಾಗೂ ಕ್ರಾಂತಿ ಗೌಡ್ 5 ವಿಕೆಟ್ ಪಡೆದು ಗೌರವ ಫಲಕದಲ್ಲಿ ಮೊದಲಿಗರಾಗಿ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

INDW vs ENGW Test: ಇಂಗ್ಲೆಂಡ್ ವಿರುದ್ಧದ ಟೆಸ್ಟ್​​ ಪಂದ್ಯದಲ್ಲಿ ಭಾರತ ತಂಡಕ್ಕೆ ರೋಚಕ ಗೆಲುವು! 142 ವರ್ಷಗಳ ನಂತರ ಈ ಸಾಧನೆ ಮಾಡಿದ ಮೊದಲ ತಂಡ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed