Last Updated:
ಆಗಸ್ಟ್ 29ರಂದು ಭಾರತದ ಜೊತೆ ಮಾತುಕತೆ ನಡೆಸಿದ್ದ ಚೀನಾ ಇನ್ನು, ಗಡಿ ಉಲ್ಲಂಘನೆ ಮಾಡುವುದಿಲ್ಲ ಎಂದು ಹೇಳಿತ್ತು. ಆದರೆ, ಅದೇ ದಿನ ರಾತ್ರಿ ಮತ್ತೆ ಕ್ಯಾತೆ ತೆಗೆದಿತ್ತು. ಹೀಗಾಗಿ ನಾವು ಚೀನಾವನ್ನು ನಂಬುವಂತಿಲ್ಲ ಎಂದಿವೆ ಮೂಲಗಳು.
ನವದೆಹಲಿ (ಸಪ್ಟೆಂಬರ್ 10): ಜೂನ್ 15 ರಂದು ಪೂರ್ವ ಲಡಾಖ್‌ನಲ್ಲಿ ನಡೆದ ಗಾಲ್ವಾನ್ ಕಣಿವೆ ಘರ್ಷಣೆಯ ಸಂದರ್ಭದಲ್ಲಿ ಚೀನಾದ ಸೇನೆ ಭಾರತೀಯ ಸೈನಿಕರ ಮೇಲೆ ದಾಳಿ ನಡೆಸಿ 20ಕ್ಕೂ ಹೆಚ್ಚು ಭಾರತೀಯ ಸೈನಿಕರನ್ನು ಅಮಾನುಷವಾಗಿ ಕೊಂದಿತ್ತು. ಈ ನಂತರ ಎರಡೂ ದೇಶಗಳ ನಡುವಿನ ಗಡಿ ಬಿಕ್ಕಟ್ಟು ಮತ್ತಷ್ಟು ಉದ್ವಿಗ್ನ ಸ್ಥಿತಿಗೆ ತಲುಪಿದ್ದು, ದಿನದಿಂದ ದಿನಕ್ಕೆ ಕಾವು ಏರುತ್ತಲೇ ಇದೆ. ಈ ಉದ್ವಿಗ್ನತೆಯ ಪಥವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಸೇನಾ ಮೂಲಗಳು ತಿಳಿಸಿವೆ. ಅಲ್ಲದೆ, ಎರಡೂ ದೇಶಗಳ ನಡುವೆ ಯುದ್ಧದ ವಾತಾವರಣ ಈವರೆಗೆ ಸೃಷ್ಟಿಯಾಗಿಲ್ಲ ಎಂದು ಮೂಲಗಳು ಸ್ಪಷ್ಟನೆ ನೀಡಿವೆ.
“ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ದಿನದಿಂದ ದಿನಕ್ಕೆ ಹದಗೆಡುತ್ತಲೇ ಇದೆ. ಎರಡೂ ರಾಷ್ಟ್ರಗಳ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಯಾವ ರೀತಿ ಆಗಲಿದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ, ಈವರೆಗೆ ಯುದ್ಧ ಭೀತಿ ಎದುರಾಗಿಲ್ಲ,” ಎಂದು ಸರ್ಕಾರಿ ಮೂಲಗಳು ನ್ಯೂಸ್18ಗೆ ತಿಳಿಸಿವೆ.
ಮುಖಪಾರಿ ಶಿಖರ ಮತ್ತು ರೆಜಾಂಗ್-ಲಾ ಪ್ರದೇಶಗಳಲ್ಲಿನ ಭಾರತೀಯ ಸೈನ್ಯವನ್ನು ಆಯಕಟ್ಟಿನ ಎತ್ತರದಿಂದ ಹಿಂದಕ್ಕೆ ಸರಿಸುವುದು ಚೀನಾ ಸೈನ್ಯದ ಉದ್ದೇಶವಾಗಿದೆ. ಕಳೆದ ಮೂರು-ನಾಲ್ಕು ದಿನಗಳಲ್ಲಿ ಇದೇ ಕಾರ್ಯತಂತ್ರದದ ಮೇಲೆ ಚೀನಾ ಎತ್ತರದ ಪ್ರದೇಶವನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಿದೆ. ಅಲ್ಲದೆ, ಸೋಮವಾರ ಸಂಜೆ ವೇಳೆಗೆ ಗಡಿಯಲ್ಲಿರುವ ಕಬ್ಬಿಣದ ಬೇಲಿಯನ್ನು ಚೀನಾ ಸೇನೆ ಹಾನಿಗೊಳಿಸಿದೆ ಎನ್ನಲಾಗಿತ್ತು. ಮೊಲ್ಡೊ ಪ್ರದೇಶವನ್ನು ಚೀನಾ ಸೇನೆ ವಶಪಡಿಸಿಕೊಳ್ಳಲು ಮುಂದಾಗಿದ್ದರೂ ಇದನ್ನು ಕಡೆಗಣಿಸಿರುವ ಭಾರತ ಸೇನೆ ಪಾಂಗೊಂಗ್ ಸರೋವರದ ದಕ್ಷಿಣದ ದಂಡೆಯ ಸುತ್ತಲಿನ ಶಿಖರಗಳಲ್ಲಿ ಪ್ರಾಬಲ್ಯವನ್ನು ಸಾಧಿಸುತ್ತಿದೆ.













