Indian Railways: ಕೇವಲ 5 ರೂಪಾಯಿಗಾಗಿ ಕೇಸ್! ಕೊನೆಗೂ ರೈಲ್ವೆ ವಿರುದ್ಧ ಕೋರ್ಟ್‌ನಲ್ಲಿ ಗೆದ್ದ ಪ್ರಯಾಣಿಕ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

Indian Railways Refund Case: ಒಂದು ರೂಪಾಯಿಯೂ ನಮ್ಮ ಬೆವರಿನ ಫಲ. ಕಷ್ಟಪಟ್ಟು ದುಡಿದ ಹಣ ಸಣ್ಣ ಮೊತ್ತ ಎನಿಸಿದರೂ ಅದಕ್ಕೆ ಬೆಲೆ ಇದೆ. ಆದರೆ ಅದೇ ಹಣ ನಮಗೆ ಸಿಗದಿದ್ದರೆ? ಹೌದು, ಟಿಕೆಟ್ ರದ್ದು ಮಾಡಿದ ನಂತರ ಪ್ರಯಾಣಿಕನಿಗೆ ವಾಪಸ್ ಕೊಡಬೇಕಿದ್ದ ಕೇವಲ 5 ರೂಪಾಯಿಯನ್ನು ನೀಡಲು ಭಾರತೀಯ ರೈಲ್ವೆ ಹಿಂದೇಟು ಹಾಕಿತು. ಆದರೆ, ಅದೇ 5 ರೂಪಾಯಿಗಾಗಿ ಪಟ್ಟುಬಿಡದೆ ಕೋರ್ಟ್ ಮೆಟ್ಟಿಲೇರಿದ ಗ್ರಾಹಕನಿಗೆ ಕೊನೆಗೆ ಸಿಕ್ಕಿದ್ದು ಬರೋಬ್ಬರಿ 10 ಸಾವಿರ ರೂಪಾಯಿ! ಆ ಕುರಿತ ವರದಿ ಇಲ್ಲಿದೆ.

News18
News18

Indian Railways: ಒಂದು ರೂಪಾಯಿಯೂ ನಮ್ಮ ಬೆವರಿನ ಫಲ. ಕಷ್ಟಪಟ್ಟು ದುಡಿದ ಹಣ (Money) ಸಣ್ಣ ಮೊತ್ತ ಎನಿಸಿದರೂ ಅದಕ್ಕೆ ಬೆಲೆ ಇದೆ. ಆದರೆ ಅದೇ ಹಣ ನಮಗೆ ಸಿಗದಿದ್ದರೆ? ಹೌದು, ಟಿಕೆಟ್ ರದ್ದು (Ticket Cancel) ಮಾಡಿದ ನಂತರ ಪ್ರಯಾಣಿಕನಿಗೆ ವಾಪಸ್ ಕೊಡಬೇಕಿದ್ದ ಕೇವಲ 5 ರೂಪಾಯಿಯನ್ನು ನೀಡಲು ಭಾರತೀಯ ರೈಲ್ವೆ (Indian Railways) ಹಿಂದೇಟು ಹಾಕಿತು. ಆದರೆ, ಅದೇ 5 ರೂಪಾಯಿಗಾಗಿ ಪಟ್ಟುಬಿಡದೆ ಕೋರ್ಟ್ (Court) ಮೆಟ್ಟಿಲೇರಿದ ಗ್ರಾಹಕನಿಗೆ ಕೊನೆಗೆ ಸಿಕ್ಕಿದ್ದು ಬರೋಬ್ಬರಿ 10 ಸಾವಿರ ರೂಪಾಯಿ! ಆ ಕುರಿತ ವರದಿ ಇಲ್ಲಿದೆ.

ಏನಿದು ಘಟನೆ?

ಲುಧಿಯಾನದ ನಿವಾಸಿ ಪ್ರೇಮ್‌ಜಿತ್ ಸಿಂಗ್ ಅವರು 2023ರ ಫೆಬ್ರವರಿ 28ರಂದು ಹಿಸಾರ್‌ನಿಂದ ಲುಧಿಯಾನಕ್ಕೆ ಪ್ರಯಾಣಿಸಲು ಎರಡು ರೈಲು ಟಿಕೆಟ್‌ಗಳನ್ನು 330 ರೂಪಾಯಿಗೆ ಖರೀದಿಸಿದ್ದರು. ವೈಯಕ್ತಿಕ ಕಾರಣಗಳಿಂದ ಪ್ರಯಾಣದ ಒಂದು ದಿನ ಮೊದಲು ಟಿಕೆಟ್‌ಗಳನ್ನು ರದ್ದುಗೊಳಿಸಿದರು. ರದ್ದತಿ ಶುಲ್ಕವಾಗಿ 240 ರೂಪಾಯಿ ಕಡಿತಗೊಂಡ ನಂತರ ಅವರಿಗೆ 90 ರೂಪಾಯಿ ಮರುಪಾವತಿ ಬರಬೇಕಿತ್ತು. ಆದರೆ ಅವರ ಬ್ಯಾಂಕ್ ಖಾತೆಗೆ ಕೇವಲ 85 ರೂಪಾಯಿ ಮಾತ್ರ ಜಮೆಯಾಗಿತ್ತು.

ಸ್ಪಷ್ಟ ಉತ್ತರ ಸಿಗದೆ ನ್ಯಾಯಾಲಯದ ಮೊರೆ

ಕಡಿಮೆ ಮರುಪಾವತಿಯ ಬಗ್ಗೆ ಪ್ರೇಮ್‌ಜಿತ್ ಸಿಂಗ್ ರೈಲ್ವೆ ಸಹಾಯವಾಣಿ, ಟಿಕೆಟ್ ಕೌಂಟರ್ ಸಿಬ್ಬಂದಿ ಮತ್ತು ನಿಲ್ದಾಣದ ಅಧಿಕಾರಿಗಳನ್ನು ಸಂಪರ್ಕಿಸಿದರು. ಆದರೆ ಎಲ್ಲಿಯೂ ಸ್ಪಷ್ಟ ಉತ್ತರ ಸಿಗಲಿಲ್ಲ. 5 ರೂಪಾಯಿ ಕಡಿತಕ್ಕೆ ಕಾರಣ ತಿಳಿಯದೆ ಬೇಸತ್ತ ಅವರು ಕೊನೆಗೆ ಕಾನೂನು ನೋಟಿಸ್ ಕಳುಹಿಸಿ ಲುಧಿಯಾನ ಜಿಲ್ಲಾ ಗ್ರಾಹಕ ಆಯೋಗದ ಮೊರೆ ಹೋದರು.

ರೈಲ್ವೆ ವಾದವೇನು?

ವಿಚಾರಣೆ ವೇಳೆ ರೈಲ್ವೆ ಇಲಾಖೆಯು, “5 ರೂಪಾಯಿಯನ್ನು ತಾವು ಕಡಿತಗೊಳಿಸಿಲ್ಲ, ಬದಲಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮರುಪಾವತಿ ಶುಲ್ಕವಾಗಿ ಕಡಿತ ಮಾಡಿದೆ” ಎಂದು ಹೇಳಿತು. ಆದರೆ ಆಯೋಗದ ಪರಿಶೀಲನೆಯಲ್ಲಿ ಬೇರೆಯದೇ ಅಂಶ ಬೆಳಕಿಗೆ ಬಂದಿತು. 2017ರ ರೈಲ್ವೆ ಮಂಡಳಿಯ ಅಧಿಸೂಚನೆಯ ಪ್ರಕಾರ, ಪಿಒಎಸ್ ಯಂತ್ರಗಳ ಮೂಲಕ 1000 ರೂಪಾಯಿವರೆಗಿನ ಮರುಪಾವತಿಗೆ 5 ರೂಪಾಯಿ ಶುಲ್ಕ ವಿಧಿಸಲು ಅವಕಾಶ ಇದೆ. ಆದರೆ ಈ ಮಾಹಿತಿಯನ್ನು ಟಿಕೆಟ್ ಕೌಂಟರ್‌ಗಳಲ್ಲಿ ಸ್ಪಷ್ಟವಾಗಿ ಪ್ರದರ್ಶಿಸುವುದು ರೈಲ್ವೆಯ ಜವಾಬ್ದಾರಿ ಎಂದು ಆಯೋಗ ಹೇಳಿದೆ.

ಆಯೋಗದ ಮಹತ್ವದ ತೀರ್ಪು:

ಅಧ್ಯಕ್ಷ ಸಂಜೀವ್ ಬಾತ್ರಾ ಮತ್ತು ಸದಸ್ಯೆ ಮೋನಿಕಾ ಭಗತ್ ಅವರನ್ನೊಳಗೊಂಡ ಪೀಠವು ಪ್ರಕರಣದ ವಿಚಾರಣೆ ನಡೆಸಿತು. ಪ್ರಯಾಣಿಕರಿಗೆ ಮುಂಚಿತವಾಗಿ ಮಾಹಿತಿ ನೀಡದಿರುವುದು ಸೇವಾ ಲೋಪ ಮತ್ತು ಅನ್ಯಾಯದ ವ್ಯಾಪಾರ ಪದ್ಧತಿ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಹಾಗಾಗಿ, ರೈಲ್ವೆ ಇಲಾಖೆಗೆ 30 ದಿನಗಳ ಒಳಗೆ ಪ್ರೇಮ್‌ಜಿತ್ ಸಿಂಗ್ ಅವರಿಗೆ 5 ರೂಪಾಯಿ ಮರುಪಾವತಿ ಮಾಡುವ ಜೊತೆಗೆ 10,000 ರೂಪಾಯಿ ವೆಚ್ಚವನ್ನು ಪಾವತಿಸುವಂತೆ ಆದೇಶಿಸಿತು.

ವಿಳಂಬವಾದರೆ ದಿನಕ್ಕೆ 200 ರೂ. ದಂಡ!

ಏತನ್ಮಧ್ಯೆ, ನಿಗದಿತ 30 ದಿನಗಳ ಒಳಗೆ ಹಣ ಪಾವತಿ ಮಾಡದಿದ್ದರೆ ದಿನಕ್ಕೆ 200 ರೂಪಾಯಿ ಹೆಚ್ಚುವರಿ ದಂಡ ವಿಧಿಸಲಾಗುವುದು ಎಂದು ಆಯೋಗ ಎಚ್ಚರಿಕೆ ನೀಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed