India vs World XI: ಭಾರತದ ಕ್ರಿಕೆಟ್​​ಗೆ 100 ವರ್ಷದ ಸಂಭ್ರಮದಂದು ಬಿಸಿಸಿಐನ ಮಹತ್ವದ ನಿರ್ಧಾರ: 31 ವರ್ಷಗಳ ನಂತರ ವಿಶೇಷ ಪಂದ್ಯ? | ಕ್ರೀಡಾ ಸುದ್ದಿ | ACTPnews

ಭಾರತ ತಂಡ


Last Updated:

ಶತಮಾನೋತ್ಸವದ ಆಚರಣೆಗಳ ಭಾಗವಾಗಿ 2028ರಲ್ಲಿ ಇಂಡಿಯಾ XI ಮತ್ತು ವಿಶ್ವದ ಇತರ ತಂಡಗಳ XI ನಡುವೆ ಐತಿಹಾಸಿಕ ಪಂದ್ಯವೊಂದು ನಡೆಸಲು ಬಯಸಿದೆ.

ಭಾರತ ತಂಡ
ಭಾರತ ತಂಡ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತನ್ನ 100 ವರ್ಷಗಳ ಪ್ರಯಾಣವನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆ ನಡೆಸುತ್ತಿದೆ. ಈ ಐತಿಹಾಸಿಕ ಮೈಲಿಗಲ್ಲನ್ನು ಆಚರಿಸಲು ಡಿಸೆಂಬರ್ 2027 ರಿಂದ ಆರಂಭಗೊಂಡು 2028 ರ ಪೂರ್ತಿ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಕ್ರಿಕೆಟ್ ಇತಿಹಾಸದಲ್ಲಿ ಈ ಶತಮಾನೋತ್ಸವದ (100th Anniversary) ಆಚರಣೆಗಳನ್ನು ಸ್ಮರಣೀಯವಾಗಿಸಲು, ಬಿಸಿಸಿಐ ವಿಶೇಷ ಪಂದ್ಯವೊಂದನ್ನು ಆಯೋಜಿಸಲು ಯೋಜಿಸುತ್ತಿದೆ. 2028ರ ಶತಮಾನೋತ್ಸವದ ಮುನ್ನುಡಿಯಾಗಿ, 2027 ರಲ್ಲಿ ನಡೆಯಲಿರುವ 20ನೇ ಆವೃತ್ತಿಯ ಐಪಿಎಲ್ (IPL) ಅನ್ನು ಸಹ ಅತ್ಯಂತ ಅದ್ಧೂರಿಯಾಗಿ ಆಚರಿಸಲು ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಶತಮಾನೋತ್ಸವದ ಆಚರಣೆಗಳ ಭಾಗವಾಗಿ 2028ರಲ್ಲಿ ಇಂಡಿಯಾ XI ಮತ್ತು ವಿಶ್ವದ ಇತರ ತಂಡಗಳ XI (Rest of the World) ನಡುವೆ ಐತಿಹಾಸಿಕ ಪಂದ್ಯವೊಂದು ನಡೆಸಲು ಬಯಸಿದೆ. ಇದು ಸಾಕಾರಗೊಂಡರೆ, ಭಾರತೀಯ ಕ್ರಿಕೆಟ್ ದಿಗ್ಗಜರು ಪ್ರಪಂಚದ ವಿವಿಧ ದೇಶಗಳ ಅಗ್ರಗಣ್ಯ ಆಟಗಾರರೊಂದಿಗೆ ಒಂದೇ ಮೈದಾನದಲ್ಲಿ ಆಡುವುದನ್ನು ವೀಕ್ಷಿಸುವ ಅಪರೂಪದ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.

ಬಿಸಿಸಿಐ ವಾರ್ಷಿಕ ಸಭೆಯಲ್ಲಿ ನಿರ್ಧಾರ

ಬಿಸಿಸಿಐನ ವಾರ್ಷಿಕ ಸಾಮಾನ್ಯ ಸಭೆ (AGM) ಈಗಾಗಲೇ ಈ ಶತಮಾನೋತ್ಸವ ಆಚರಣೆಯ ಯೋಜನೆಗಳಿಗೆ ಅನುಮೋದನೆ ನೀಡಿದೆ. ಕೇವಲ ಒಂದು ಪಂದ್ಯವಷ್ಟೇ ಅಲ್ಲದೆ, ಕಳೆದ ಶತಮಾನದಲ್ಲಿ ಭಾರತೀಯ ಕ್ರಿಕೆಟ್‌ನ ಪ್ರಯಾಣ ಮತ್ತು ಜಾಗತಿಕ ಕ್ರಿಕೆಟ್ ಅಂಗಳದಲ್ಲಿ ಭಾರತ ಸಾಧಿಸಿರುವ ಮೈಲಿಗಲ್ಲುಗಳನ್ನು ಪ್ರತಿಬಿಂಬಿಸುವ ವಿವಿಧ ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸಲು ಬಿಸಿಸಿಐ ಉದ್ದೇಶಿಸಿದೆ.

1994ರಲ್ಲಿ ಮೊದಲ ಪಂದ್ಯ

ಭಾರತ ತಂಡವು ರೆಸ್ಟ್ ಆಫ್ ದಿ ವರ್ಲ್ಡ್ XI ತಂಡವನ್ನು ಎದುರಿಸುತ್ತಿರುವುದು ಇದೇ ಮೊದಲೇನಲ್ಲ. ಈ ಎರಡು ತಂಡಗಳ ನಡುವೆ ಸೀಮಿತ ಓವರ್‌ಗಳ ಪ್ರದರ್ಶನ ಪಂದ್ಯಗಳನ್ನು ಈ ಹಿಂದೆ 1994-95ರ ಋತುವಿನಲ್ಲಿ ಆಯೋಜಿಸಲಾಗಿತ್ತು. ಅವುಗಳಲ್ಲಿ ಮೊದಲನೆಯದು 1994ರ ಜೂನ್ 1ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ 45 ಓವರ್‌ಗಳ ಹಗಲು-ರಾತ್ರಿ ಪಂದ್ಯವಾಗಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ XI, 45 ಓವರ್‌ಗಳಲ್ಲಿ 4 ವಿಕೆಟ್‌ಗೆ 263 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತ್ತು. ‘ಮಾಸ್ಟರ್ ಬ್ಲಾಸ್ಟರ್’ ಸಚಿನ್ ತೆಂಡೂಲ್ಕರ್ ಭರ್ಜರಿ ಶತಕ (151 ರನ್) ಸಿಡಿಸಿದರೆ, ವಿನೋದ್ ಕಾಂಬ್ಳಿ (45 ರನ್) ಕೂಡ ಉತ್ತಮ ಪ್ರದರ್ಶನ ನೀಡಿದ್ದರು. 264 ರನ್‌ಗಳ ಗುರಿಯನ್ನು ಬೆನ್ನಟ್ಟಿದ ‘ರೆಸ್ಟ್ ಆಫ್ ದಿ ವರ್ಲ್ಡ್’ ತಂಡವು, ನಿಗದಿತ 45 ಓವರ್‌ಗಳಲ್ಲಿ 9 ವಿಕೆಟ್‌ಗೆ 198 ರನ್‌ಗಳಿಗೆ ಸೀಮಿತಗೊಂಡಿತ್ತು.

31 ವರ್ಷಗಳ ಬಳಿಕ ಐತಿಹಾಸಿಕ ಪಂದ್ಯ

ಎರಡನೇ ಪಂದ್ಯವು 1995ರ ಮಾರ್ಚ್ 24ರಂದು ಕಟಕ್‌ನ ಬರಾಬತಿ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲೂ ಭಾರತ ತಂಡವು 5 ವಿಕೆಟ್‌ಗಳ ಅಂತರದಿಂದ ಜಯಭೇರಿ ಬಾರಿಸಿತು. ಇಲ್ಲಿಯವರೆಗೆ ಈ ಎರಡು ತಂಡಗಳ ನಡುವೆ ನಡೆದ ಕೊನೆಯ ಪಂದ್ಯ ಇದಾಗಿದೆ. ಸುಮಾರು 31 ವರ್ಷಗಳ ನಂತರ ಈ ಎರಡು ತಂಡಗಳು ಮತ್ತೆ ಮುಖಾಮುಖಿಯಾಗಲು ಸಜ್ಜಾಗಿವೆ.

ಐಸಿಸಿ ವಿಶ್ವ ಇಲೆವೆನ್ ಪಂದ್ಯಗಳು

ಐಸಿಸಿ ವಿಶ್ವ ಇಲೆವೆನ್ (ICC World XI) ತಂಡವು ಇದುವರೆಗೆ ಒಟ್ಟು ಒಂಬತ್ತು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದೆ, ಅವುಗಳಲ್ಲಿ ಜನವರಿ 2005 ರಲ್ಲಿ ಏಷ್ಯಾ ಇಲೆವೆನ್ ವಿರುದ್ಧ ಒಂದು ಏಕದಿನ (ODI) ಪಂದ್ಯ, ಅಕ್ಟೋಬರ್ 2005 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೂರು ಏಕದಿನ ಹಾಗೂ ಒಂದು ಟೆಸ್ಟ್ ಪಂದ್ಯ, ಸೆಪ್ಟೆಂಬರ್ 2017 ರಲ್ಲಿ ಪಾಕಿಸ್ತಾನ ವಿರುದ್ಧ ಮೂರು ಟಿ20 (T20I) ಪಂದ್ಯಗಳು ಮತ್ತು ಮೇ 2018 ರಲ್ಲಿ ಲಾರ್ಡ್ಸ್ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಒಂದು ಟಿ20 ಪಂದ್ಯ ಸೇರಿವೆ. ಆದರೆ, ಭಾರತ ತಂಡವು ಇದುವರೆಗೆ ಐಸಿಸಿ ವಿಶ್ವ ಇಲೆವೆನ್ ವಿರುದ್ಧ ಯಾವುದೇ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಡಿಲ್ಲ. 1994 ಹಾಗೂ 1995ರ ಪಂದ್ಯಗಳಿಗೆ ಐಸಿಸಿ ಮಾನ್ಯತೆ ಇರಲಿಲ್ಲ, ಇದೀಗ ಅಧಿಕೃತ ಪಂದ್ಯಗಳನ್ನಾಡಲು ಸಜ್ಜಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed