IND vs ZIM: ಕೊನೆಯ ಪಂದ್ಯದಲ್ಲಿ ಭಾರತಕ್ಕೆ 35 ರನ್‌ಗಳ ಭರ್ಜರಿ ಜಯ! ಜಿಂಬಾಬ್ವೆ ವಿರುದ್ಧ 3-0ಯಲ್ಲಿ ಸರಣಿ ವೈಟ್‌ವಾಶ್ ಮಾಡಿದ ಟೀಮ್ ಇಂಡಿಯಾ | ಕ್ರೀಡಾ ಸುದ್ದಿ | ACTPnews

ಭಾರತ ತಂಡ


Last Updated:

ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಜಿಂಬಾಬ್ವೆ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 157 ರನ್​ಗಳಿಸಲಷ್ಟೇ ಶಕ್ತವಾಗಿ 35 ರನ್​ಗಳ ಸೋಲೊಪ್ಪಿಕೊಂಡಿತು.

ಭಾರತ ತಂಡ
ಭಾರತ ತಂಡ

ಜಿಂಬಾಬ್ವೆ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡ (India vs Zimbabwe) ಭರ್ಜರಿ ಜಯ ಸಾಧಿಸಿ, 3 ಪಂದ್ಯಗಳ ಟಿ20 ಸರಣಿಯನ್ನ 3-0ಯಲ್ಲಿ ವೈಟ್‌ವಾಶ್ ಮಾಡಿದೆ. ಈಗಾಗಲೇ ಸರಣಿ ಗೆಲುವು ಸಾಧಿಸಿದ್ದರಿಂದ, ಈ ಔಪಚಾರಿಕ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಜಿಂಬಾಬ್ವೆ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 157 ರನ್‌ಗಳಿಸಲಷ್ಟೇ ಶಕ್ತವಾಗಿ 35 ರನ್‌ಗಳ ಸೋಲೊಪ್ಪಿಕೊಂಡಿತು. ರಯಾನ್ ಬರ್ಲ್ ಅಜೇಯ 54 ರನ್‌ಗಳಿಸಿ ತಂಡದ ಗರಿಷ್ಠ ಸ್ಕೋರರ್ ಆದರು.

ಮೊದಲ ಎಸೆತದಲ್ಲೇ ಮಯಾಂಕ್ ಬಿಗ್ ಶಾಕ್

193 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಜಿಂಬಾಬ್ವೆ ತಂಡ ಮೊದಲ ಓವರ್‌ನಲ್ಲಿಯೇ ಮೊದಲ ವಿಕೆಟ್ ಕಳೆದುಕೊಂಡಿತು. ಮಯಾಂಕ್ ಯಾದವ್ ಅತಿಥೇಯ ತಂಡದ ಓಪನರ್ ಬ್ರಿಯಾನ್ ಬೆನೆಟ್‌ಗೆ ಖಾತೆ ತೆರೆಯಲು ಅವಕಾಶ ನೀಡಲಿಲ್ಲ. ಬೆನೆಟ್ ವೈಭವ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. 3ನೇ ಕ್ರಮಾಂಕದಲ್ಲಿ ಬಂದ ಡಿಯಾನ್ ಮೇಯರ್ಸ್ (19) ಬೆನ್ ಕರ್ರನ್ ಜೊತೆಗೂಡಿ 34 ರನ್ ಸೇರಿಸಿ ಆರಂಭಿಕ ಆಘಾತದಿಂದ ಪಾರು ಮಾಡಿದರು.

ಪವರ್ ಪ್ಲೇಯಲ್ಲಿ 3 ವಿಕೆಟ್ ಕಳೆದುಕೊಂಡ ಜಿಂಬಾಬ್ವೆ

ಆದರೆ ಯಶ್ ಠಾಕೂರ್ 4ನೇ ಓವರ್‌ನಲ್ಲಿ ಜಿಂಬಾಬ್ವೆಗೆ ಡಬಲ್ ಶಾಕ್ ಕೊಟ್ಟರು. 4 ಮತ್ತು 5ನೇ ಎಸೆತದಲ್ಲಿ ಕ್ರಮವಾಗಿ ಮೇಯರ್ಸ್ (19) ಹಾಗೂ ನಾಯಕ ಸಿಕಂದರ್ ರಾಜಾ (0) ವಿಕೆಟ್ ಪಡೆದು ಜಿಂಬಾಬ್ವೆ ಚೇಸ್‌ಗೆ ದೊಡ್ಡ ಆಘಾತ ನೀಡಿದರು. ಬೆನ್ ಕರ್ರನ್ ಕೂಡ 19 ಎಸೆತಗಳಲ್ಲಿ 20 ರನ್ ಸಿಡಿಸಿ ಮಯಾಂಕ್ ಯಾದವ್‌ಗೆ 2ನೇ ಬಲಿಯಾದರು.

ಬರ್ಲ್ ಹೋರಾಟ ವ್ಯರ್ಥ

ಜಿಂಬಾಬ್ವೆ 65 ರನ್‌ಗಳಾಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತ್ತು. ಆದರೆ ರಯಾನ್ ಬರ್ಲ್ ಹಾಗೂ ಮಾಧೆವೆರೆ 5ನೇ ವಿಕೆಟ್ ಜೊತೆಯಾಟದಲ್ಲಿ 60 ರನ್ ಸೇರಿಸಿ ತಂಡದ ಮೊತ್ತವನ್ನ ಸೋಲಿನ ಅಂತರವನ್ನ ಕಡಿಮೆ ಮಾಡಿದರು. ಮಧೆವೆರೆ 25 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್‌ಗಳ ಸಹಿತ 28 ರನ್‌ಗಳಿಸಿ ಔಟ್ ಆದರು. ಇವರ ವಿಕೆಟ್ ಬೆನ್ನಲ್ಲೇ ಜಿಂಬಾಬ್ವೆ ಸ್ಕೋರ್ ಗತಿಗೂ ಕಡಿವಾಣ ಬಿದ್ದಿತು. 7ನೇ ಕ್ರಮಾಂಕದಲ್ಲಿ ಬಂದ ವಿಕೆಟ್ ಕೀಪರ್ ಮರುಮಾನಿ ಕೇವಲ 1 ರನ್‌ಗಳಿಸಿ ಅಶೋಕ್ ಶರ್ಮಾ ಬೌಲಿಂಗ್‌ನಲ್ಲಿ ಔಟ್ ಆದರು. ಕೊನೆಯವರೆಗೂ ಅಜೇಯರಾಗಿ ಉಳಿದ ರಯಾನ್ ಬರ್ಲ್ 43 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ ಅಜೇಯ 54 ರನ್‌ಗಳಿಸಿ ತಂಡದ ಮೊತ್ತವನ್ನ 150ರ ಗಡಿ ದಾಟಿಸಿದರು. ಬ್ರಾಡ್ ಇವನ್ಸ್ 14 ರನ್‌ಗಳಿಸಿದರು.

ಭಾರತದ ಪರ ಮಯಾಂಕ್ ಯಾದವ್ 29ಕ್ಕೆ3, ಯಶ್ ಠಾಕೂರ್ 45ಕ್ಕೆ2, ಅಶೋಕ್ ಶರ್ಮಾ 20ಕ್ಕೆ1, ರವಿ ಬಿಷ್ಣೋಯ್ 24ಕ್ಕೆ1 ವಿಕೆಟ್ ಪಡೆದರು.

ಭಾರತದ ಇನ್ನಿಂಗ್ಸ್

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ವೈಭವ್ ಸೂರ್ಯವಂಶಿ ಸಿಡಿಸಿದ ಅರ್ಧಶತಕ (49 ಎಸೆತ, 8 ಬೌಂಡರಿ, 4 ಸಿಕ್ಸರ್), ಇಶಾನ್ ಕಿಶನ್ (26 ಎಸೆತಗಳಲ್ಲಿ 29), ಶ್ರೇಯಸ್ ಅಯ್ಯರ್ (18 ಎಸೆತಗಳಲ್ಲಿ 27) ಹಾಗೂ ರಿಂಕು ಸಿಂಗ್ (14 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 24) ಉತ್ತಮ ಬ್ಯಾಟಿಂಗ್ ನೆರವಿನಿಂದ 192 ರನ್‌ಗಳಿಸಿತ್ತು.

3-0ಯಲ್ಲಿ ಸರಣಿ ಗೆದ್ದ ಭಾರತ

ಐಪಿಎಲ್ ಬಳಿಕ ನಡೆದ ಮೊದಲ ಟಿ20 ಸರಣಿಯಲ್ಲಿ ಭಾರತ ತಂಡ ಐರ್ಲೆಂಡ್ ವಿರುದ್ಧ 0-2, ಇಂಗ್ಲೆಂಡ್ ವಿರುದ್ಧ 0-4 ಅಂತರದಲ್ಲಿ ಸರಣಿ ಕಳೆದುಕೊಂಡಿತ್ತು. ಈ ಎರಡೂ ಸರಣಿಗೂ ಶ್ರೇಯಸ್ ಅಯ್ಯರ್ ನಾಯಕರಾಗಿದ್ದರು. ಅವರ ನೇತೃತ್ವದಲ್ಲಿ ಭಾರತ ತಂಡ ಒಂದು ಗೆಲುವಿಲ್ಲದೆ 6 ಸೋಲು ಕಂಡಿತ್ತು. ಹಾಗಾಗಿ ಅಯ್ಯರ್‌ಗೆ ನಾಯಕತ್ವ ಪ್ರತಿಷ್ಠೆ ಉಳಿಸಿಕೊಳ್ಳಲು ಈ ಸರಣಿ ನಿರ್ಣಾಯಕವಾಗಿತ್ತು. ಇದೀಗ ಜಿಂಬಾಬ್ವೆ ವಿರುದ್ಧ 3-0ಯಲ್ಲಿ ಗೆಲ್ಲುವ ಮೂಲಕ ಮೊದಲ ಸರಣಿ ಜಯ ಸಾಧಿಸಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

IND vs ZIM: ಕೊನೆಯ ಪಂದ್ಯದಲ್ಲಿ ಭಾರತಕ್ಕೆ 35 ರನ್‌ಗಳ ಭರ್ಜರಿ ಜಯ! ಜಿಂಬಾಬ್ವೆ ವಿರುದ್ಧ 3-0ಯಲ್ಲಿ ಸರಣಿ ವೈಟ್‌ವಾಶ್ ಮಾಡಿದ ಟೀಮ್ ಇಂಡಿಯಾ



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports