Last Updated:
ಒಂದು ಕಡೆ ರಾವಲ್ಪಿಂಡಿಯ ಅದಿಯಾಲಾ ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರ ಆರೋಗ್ಯ ತಪಾಸಣೆಗಾಗಿ ವೈದ್ಯರ ತಂಡ ಆಗಮಿಸಿದ್ದರೆ, ಮತ್ತೊಂದು ಕಡೆ ಲಾಹೋರ್ನಲ್ಲಿ ಅವರ ಸಹೋದರಿ ಅಲೀಮಾ ಖಾನ್ ಅವರನ್ನು ಪೊಲೀಸರು ಬಂಧಿಸಿರುವುದು ಪಾಕ್ ರಾಜಕೀಯದಲ್ಲಿ ಕೋಲಹಲ ಎಬ್ಬಿಸಿದೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರ ರಾಜಕೀಯ ಪಕ್ಷವಾದ ‘ಪಾಕಿಸ್ತಾನ್ ತೆಹ್ರಿಕ್-ಎ-ಇನ್ಸಾಫ್’ (PTI) ಸೆಪ್ಟೆಂಬರ್ 27 ರಂದು ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನಾ ಮೆರವಣಿಗೆಗೆ ಕೆಲವೇ ದಿನಗಳು ಬಾಕಿ ಇರುವಾಗ, ಇಮ್ರಾನ್ ಖಾನ್ ಅವರ ಸಹೋದರಿ ಅಲೀಮಾ ಖಾನ್ (Aleema Khan) ಅವರನ್ನು ಲಾಹೋರ್ ಪೊಲೀಸರು ಬಂಧಿಸಿದ್ದಾರೆ. ಅಲೀಮಾ ಖಾನ್ ಅವರನ್ನು ಲಾಹೋರ್ನಲ್ಲಿರುವ ಅವರ ಮನೆಯಿಂದ ವಶಕ್ಕೆ ಪಡೆಯಲಾಗಿದೆ ಎಂದು ಪಿಟಿಐ ಪಂಜಾಬ್ ಪ್ರಾಂತ್ಯದ ವಕ್ತಾರರು ದೃಢಪಡಿಸಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಒಂದು ಕಡೆ ರಾವಲ್ಪಿಂಡಿಯ ಅದಿಯಾಲಾ ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರ ಆರೋಗ್ಯ ತಪಾಸಣೆಗಾಗಿ ವೈದ್ಯರ ತಂಡ ಆಗಮಿಸಿದ್ದರೆ, ಮತ್ತೊಂದು ಕಡೆ ಲಾಹೋರ್ನಲ್ಲಿ ಅವರ ಸಹೋದರಿ ಅಲೀಮಾ ಖಾನ್ ಅವರನ್ನು ಪೊಲೀಸರು ಬಂಧಿಸಿರುವುದು ಪಾಕ್ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದೆ.
ಈ ಬೆಳವಣಿಗೆಯು ಪಿಟಿಐ (PTI) ಪಕ್ಷವು ಸೆಪ್ಟೆಂಬರ್ 27 ರಂದು ನಡೆಸಲು ಯೋಜಿಸಿರುವ ಬೃಹತ್ ಮೆರವಣಿಗೆಗೆ ಮುನ್ನವೇ ನಡೆದಿದೆ. ಇಮ್ರಾನ್ ಖಾನ್ ಅವರ ಜೈಲು ವಾಸವನ್ನು ಖಂಡಿಸಿ ಮತ್ತು ಅವರ ತಕ್ಷಣದ ಬಿಡುಗಡೆಗೆ ಆಗ್ರಹಿಸಿ ಹಮ್ಮಿಕೊಳ್ಳಲಾಗಿರುವ ಅಭಿಯಾನದ ಭಾಗವಾಗಿ ಪಕ್ಷವು ಈ ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದೆ. ಪಿಟಿಐ ಅಧ್ಯಕ್ಷ ಗೋಹರ್ ಅಲಿ ಖಾನ್ ಅವರು ಸೆಪ್ಟೆಂಬರ್ 27ರ ಈ ಜನಸಜ್ಜುಗೊಳಿಸುವಿಕೆಯನ್ನು “ನ್ಯಾಯದ ಮೆರವಣಿಗೆ” (Justice March) ಎಂದು ಕರೆದಿದ್ದಾರೆ.
ಪಿಟಿಐ (PTI) ಪಕ್ಷವು ಹಮ್ಮಿಕೊಂಡಿರುವ ಯೋಜಿತ ಪ್ರತಿಭಟನೆಯ ಹಿನ್ನೆಲೆಯಲ್ಲಿ, ಅಧಿಕಾರಿಗಳು ತಮ್ಮ ಮುಂಜಾಗ್ರತಾ ಸಿದ್ಧತೆಗಳನ್ನು ತೀವ್ರಗೊಳಿಸುತ್ತಿರುವ ಬೆನ್ನಲ್ಲೇ ಅಲೀಮಾ ಖಾನ್ ಅವರ ಬಂಧನ ನಡೆದಿದೆ.’ಡಾನ್’ (Dawn) ಪತ್ರಿಕೆಯ ವರದಿಯ ಪ್ರಕಾರ, ಸೆಪ್ಟೆಂಬರ್ 27ರ ಪ್ರತಿಭಟನೆಗೆ ಮುನ್ನ ಇಸ್ಲಾಮಾಬಾದ್ನಲ್ಲಿ ಪಿಟಿಐನ ನಾಲ್ವರು ಕಾರ್ಯಕರ್ತರು ಮತ್ತು ನಾಯಕರನ್ನು ಸಹ ವಶಕ್ಕೆ ಪಡೆಯಲಾಗಿದೆ.
ಈ ಪ್ರತಿಭಟನೆಯನ್ನು ಸಂಘಟಿಸಲು ಆಯೋಜಿಸಲಾಗಿದ್ದ ಸಭೆಗೆ ಸಂಬಂಧಿಸಿದಂತೆ ಈ ಬಂಧನಗಳನ್ನು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿಭಟನೆಯನ್ನು ಹಿಂಪಡೆಯುವಂತೆ ಮಾಡಲು ಹಲವು ಪ್ರಯತ್ನಗಳು ವಿಫಲವಾಗಿದೆ. ಪಿಟಿಐ ಪಕ್ಷವು ಸೆಪ್ಟೆಂಬರ್ 27ರ ಮೆರವಣಿಗೆಯನ್ನು ನಡೆಸಲು ದೃಢವಾಗಿ ಮುಂದುವರಿದಿದೆ. ಈ ಹೋರಾಟ ಇಮ್ರಾನ್ ಖಾನ್ ಅವರ ಬಿಡುಗಡೆಯ ಬೇಡಿಕೆಗಳು ಮತ್ತು ದೇಶದ ನ್ಯಾಯಾಂಗ ವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳಿಗೆ ಮುಡಿಪಾಗಿದೆ ಎಂದು ಪಕ್ಷವು ಹೇಳಿದೆ.
ಅದಿಯಾಲಾ ಜೈಲಿನಲ್ಲಿ ಬಂಧಿಯಾಗಿರುವ ಇಮ್ರಾನ್ ಖಾನ್ ಅವರ ಆರೋಗ್ಯವನ್ನು ಪರೀಕ್ಷಿಸಲು ಪಿಐಎಂಎಸ್ (PIMS) ಮತ್ತು ಶಿಫಾ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಭೇಟಿ ನೀಡಿದೆ. ಜೈಲಿನ ಮೂಲಗಳ ಪ್ರಕಾರ, ವೈದ್ಯರು ಅವರ ಕಣ್ಣುಗಳು, ರಕ್ತದೊತ್ತಡ (BP) ಮತ್ತು ಹೃದಯದ ತಪಾಸಣೆ ನಡೆಸಲಿದ್ದಾರೆ. ಇಮ್ರಾನ್ ಖಾನ್ ಅವರ ಬಲಗಣ್ಣಿನ ದೃಷ್ಟಿ ದೀರ್ಘಕಾಲದಿಂದ ಸಮಸ್ಯೆಯಲ್ಲಿದ್ದು, ಅವರ ಕುಟುಂಬ ಮತ್ತು ಕಾನೂನು ತಂಡವು ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತ್ತು. ಆದರೆ, ಜೈಲು ಆಡಳಿತವು ಅವರ ಕಣ್ಣಿನ ಆರೋಗ್ಯ ಸುಧಾರಿಸುತ್ತಿದೆ ಎಂದು ಈ ಹಿಂದೆ ವರದಿ ನೀಡಿತ್ತು.
ಆದರೆ ಇಮ್ರಾನ್ ಖಾನ್ ಅವರ ವೈದ್ಯಕೀಯ ತಪಾಸಣೆಯ ಸುದ್ದಿಯ ಬೆನ್ನಲ್ಲೇ, ಲಾಹೋರ್ನಲ್ಲಿರುವ ಅವರ ನಿವಾಸದಿಂದ ಸಹೋದರಿ ಅಲೀಮಾ ಖಾನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಂಧನವನ್ನು ಇಮ್ರಾನ್ ಖಾನ್ ಅವರ ‘ಪಿಟಿಐ’ (PTI) ಪಕ್ಷದ ಪಂಜಾಬ್ ವಕ್ತಾರರು ಖಚಿತಪಡಿಸಿದ್ದಾರೆ. ಆದರೆ, ಪೊಲೀಸರು ಅಥವಾ ಸರ್ಕಾರದಿಂದ ಈ ಬಂಧನದ ಕುರಿತು ತಕ್ಷಣಕ್ಕೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಮುಂದಿನ ಸೆಪ್ಟೆಂಬರ್ 27 ರಂದು ಇಮ್ರಾನ್ ಖಾನ್ ಅವರ ತಕ್ಷಣದ ಬಿಡುಗಡೆಗೆ ಆಗ್ರಹಿಸಿ ಪಿಟಿಐ ಪಕ್ಷವು ದೇಶಾದ್ಯಂತ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಅಲೀಮಾ ಖಾನ್ ಅವರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಪ್ರತಿಭಟನೆಯನ್ನು ಹತ್ತಿಕ್ಕಲು ಇಸ್ಲಾಮಾಬಾದ್ ರಾಜಧಾನಿಯಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗಿದ್ದು, ಬಸ್ ನಿಲ್ದಾಣಗಳು, ಗೆಸ್ಟ್ ಹೌಸ್ ಸೇರಿದಂತೆ ಪ್ರಮುಖ ಸ್ಥಳಗಳ ಮೇಲೆ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ.
ವಿಶ್ವಕಪ್ ವಿಜೇತ ಮಾಜಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಮೂರು ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಜೈಲುವಾಸ ಅನುಭವಿಸುತ್ತಿದ್ದಾರೆ. ಅವರ ಇಬ್ಬರು ಪುತ್ರರು ಸೇರಿದಂತೆ ಅವರ ಕುಟುಂಬದವರು, ಇಮ್ರಾನ್ ಖಾನ್ ಅವರ ಆರೋಗ್ಯದ ಕುರಿತು ಪದೇ ಪದೇ ಕಳವಳ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಪಾಕಿಸ್ತಾನದ ವಾಸ್ತವಿಕ ನಾಯಕ ಹಾಗೂ ಸೇನಾ ಮುಖ್ಯಸ್ಥರಾದ ಆಸಿಮ್ ಮುನೀರ್ ಅವರು ಈ ವಿಷಯದಲ್ಲಿ ಸಂಚು ರೂಪಿಸಿದ್ದಾರೆ ಎಂದೂ ಸಹ ಅವರು ಆರೋಪಿಸಿದ್ದಾರೆ.














