Last Updated:
ಹರ್ಮನ್ಪ್ರೀತ್ ಕೌರ್ ನಾಯಕತ್ವದಲ್ಲಿ ಕಳೆದ ವರ್ಷ ಭಾರತ ತಂಡ ಏಕದಿನ ವಿಶ್ವಕಪ್ ಎತ್ತಿ ಹಿಡಿದಿತ್ತು. ಆದರೆ ಕಳೆದ ಮೂರು ನಾಲ್ಕು ವರ್ಷಗಳಿಂದ ಹರ್ಮನ್ಪ್ರೀತ್ ಕೌರ್ ವೈಯಕ್ತಿಕ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲ. ಆದರೂ ನಾಯಕತ್ವದ ಜವಾಬ್ದಾರಿಯಿಂದ ಅವರು ತಂಡದಲ್ಲಿ ಉಳಿದುಕೊಂಡು ಬರುತ್ತಿದ್ದಾರೆ.
ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ (Team India) ತಕ್ಷಣವೇ ನಾಯಕತ್ವ ಬದಲಾವಣೆ ಪ್ರಕ್ರಿಯೆ ಆರಂಭವಾಗಬೇಕು ಎಂದು ಟೀಮ್ ಇಂಡಿಯಾ ಮಾಜಿ ದಿಗ್ಗಜ ಆಟಗಾರ್ತಿ ಡಯಾನಾ ಎಡುಲ್ಜಿ ( Diana Edulji) ಒತ್ತಾಯಿಸಿದ್ದಾರೆ. ಪ್ರಸ್ತುತ ನಾಯಕಿ ಹರ್ಮನ್ಪ್ರೀತ್ ಕೌರ್ (Harmanpreet Kaur) ಅವರು ಗೌರವಯುತವಾಗಿ ತಮ್ಮ ಸ್ಥಾನದಿಂದ ಕೆಳಗಿಳಿದು, ಉಪನಾಯಕಿಯಾಗಿರುವ ಅನುಭವಿ ಸ್ಮೃತಿ ಮಂಧಾನ ಅವರಿಗೆ ನಾಯಕತ್ವದ ಜವಾಬ್ದಾರಿ ಬಿಟ್ಟುಕೊಡಬೇಕೆಂದು ಅವರು ವಿನಂತಿ ಮಾಡಿದ್ದಾರೆ. ಏಕದಿನ ವಿಶ್ವ ಚಾಂಪಿಯನ್ ಆಗಿರುವ ಭಾರತ ತಂಡವು ಭವಿಷ್ಯದ ದೃಷ್ಟಿಯಿಂದ ಈಗಿನಿಂದಲೇ ನಾಯಕತ್ವದ ಉತ್ತರಾಧಿಕಾರ ಯೋಜನೆಯನ್ನು ರೂಪಿಸಬೇಕಾಗಿದೆ ಎಂದು ಎಡುಲ್ಜಿ ಅಭಿಪ್ರಾಯಪಟ್ಟಿದ್ದಾರೆ.
ಹರ್ಮನ್ಪ್ರೀತ್ ಕೌರ್ ನಾಯಕತ್ವದಲ್ಲಿ ಕಳೆದ ವರ್ಷ ಭಾರತ ತಂಡ ಏಕದಿನ ವಿಶ್ವಕಪ್ ಎತ್ತಿ ಹಿಡಿದಿತ್ತು. ಆದರೆ ಕಳೆದ ಮೂರು ನಾಲ್ಕು ವರ್ಷಗಳಿಂದ ಹರ್ಮನ್ಪ್ರೀತ್ ಕೌರ್ ವೈಯಕ್ತಿಕ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲ. ಆದರೂ ನಾಯಕತ್ವದ ಜವಾಬ್ದಾರಿಯಿಂದ ಅವರು ತಂಡದಲ್ಲಿ ಉಳಿದುಕೊಂಡು ಬರುತ್ತಿದ್ದಾರೆ. ಇತ್ತೀಚಿಗೆ ಟಿ20ಯಲ್ಲಿ ಅವರ ಪ್ರದರ್ಶನ ತೀರ ಕಳಪೆಯಾಗಿದೆ. ಭಾರತ ಏಷ್ಯಾಕಪ್ ಗೆದ್ದರೂ, ಟೂರ್ನಿಯಲ್ಲಿ ಅವರ ಪ್ರದರ್ಶನ ತುಂಬಾ ಕಳಪೆಯಾಗಿತ್ತು. ಹಾಗಾಗಿ ಅವರನ್ನ ನಾಯಕತ್ವದಿಂದ ಕೆಳಗೀಳಿಸಬೇಕೆಂದು ಅಭಿಮಾನಿಗಳು ಹಾಗೂ ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ. ಇದೀಗ ಎಡುಲ್ಜಿ ಕೂಡ ಅದೇ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
” ನಾವು ಈಗಾಗಲೇ ಸ್ಮೃತಿ ಮಂಧಾನ ಅವರನ್ನು ಸುದೀರ್ಘ ಕಾಲದಿಂದ ಕಾಯಿಸುತ್ತಿದ್ದೇವೆ. ಮುಂದಿನ ಏಕದಿನ ವಿಶ್ವಕಪ್ ಬರುವ ಹೊತ್ತಿಗೆ ಹರ್ಮನ್ಪ್ರೀತ್ ಅವರಿಗೆ 40 ವರ್ಷ ವಯಸ್ಸಾಗಲಿದ್ದು, ಈಗಿನಿಂದಲೇ ಸ್ಮೃತಿಗೆ ನಾಯಕತ್ವ ನೀಡಿ ಭವಿಷ್ಯದ ತಂಡವನ್ನು ಕಟ್ಟಬೇಕಿದೆ. ಭವಿಷ್ಯದ ನಾಯಕತ್ವವನ್ನು ಗಮನದಲ್ಲಿಟ್ಟುಕೊಂಡು ಯುವ ಆಟಗಾರ್ತಿಯರಾದ ಜೆಮಿಮಾ ರೋಡ್ರಿಗಸ್ ಮತ್ತು ಶೆಫಾಲಿ ವರ್ಮಾ ಅಂತಹವರಿಗೆ ಉಪನಾಯಕತ್ವದ ಜವಾಬ್ದಾರಿ ನೀಡಿ ಸಿದ್ಧಪಡಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಭಾರತ ತಂಡವು 2025ರ ವಿಶ್ವಕಪ್ ಗೆದ್ದ ಬೆನ್ನಲ್ಲೇ ಮತ್ತೊಬ್ಬ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಕೂಡ ನಾಯಕತ್ವ ಬದಲಾವಣೆ ಅಗತ್ಯವಿದೆ ಎಂದಿದ್ದರು. “ಹರ್ಮನ್ ಅದ್ಭುತ ಬ್ಯಾಟರ್ ಮತ್ತು ಫೀಲ್ಡರ್ ಹೌದಾದರೂ, ತಂತ್ರಗಾರಿಕೆಯಲ್ಲಿ ಕೆಲವೊಮ್ಮೆ ಎಡವುತ್ತಾರೆ. ನಾಯಕತ್ವದ ಹೊರೆ ಇಲ್ಲದಿದ್ದರೆ ಅವರು ಬ್ಯಾಟಿಂಗ್ನಲ್ಲಿ ಇನ್ನಷ್ಟು ಕೊಡುಗೆ ನೀಡಬಹುದು” ಎಂದು ರಂಗಸ್ವಾಮಿ ಹೇಳಿದ್ದರು.
ಟಿ20 ಮಾದರಿಯಲ್ಲಿ ಹರ್ಮನ್ಪ್ರೀತ್ ಅವರ ಇತ್ತೀಚಿನ ಕಳಪೆ ಫಾರ್ಮ್ನಿಂದಾಗಿ ನಾಯಕತ್ವ ಬದಲಾವಣೆಯ ಕೂಗು ಮತ್ತಷ್ಟು ತೀವ್ರಗೊಂಡಿದೆ. ಆದಾಗ್ಯೂ, ಹರ್ಮನ್ಪ್ರೀತ್ ಕೌರ್ ನಾಯಕತ್ವ ಬಿಟ್ಟುಕೊಡುವ ಯಾವುದೇ ಮುನ್ಸೂಚನೆ ನೀಡಿಲ್ಲ. ಸದ್ಯ ಚೀನಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ನಲ್ಲಿ ಭಾರತ ತಂಡವನ್ನು ಅವರೇ ಮುನ್ನಡೆಸುತ್ತಿದ್ದು, ಸೆಪ್ಟೆಂಬರ್ 18 ರಂದು ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಜಪಾನ್ ಸವಾಲನ್ನು ಎದುರಿಸಲಿದೆ.














