Last Updated:
ಹನುಮಾನ್ ಅಂಶ್ (Hanuman Ansh) ಚಿತ್ರದ ಯಶಸ್ಸಿನ ಹಿಂದೆ ಇರುವ ಆಧ್ಯಾತ್ಮಿಕ ನಂಟಿನ ಬಗ್ಗೆ ನಿರ್ಮಾಪಕಿ ರಾಗಿಣಿ ಸೋನಾ (Ragini Sona) ಹಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಹನುಮಾನ್ ಅಂಶ್ (Hanuman Ansh) ಚಿತ್ರದ ಯಶಸ್ಸಿನ ಹಿಂದೆ ಇರುವ ಆಧ್ಯಾತ್ಮಿಕ ನಂಟಿನ ಬಗ್ಗೆ ನಿರ್ಮಾಪಕಿ ರಾಗಿಣಿ ಸೋನಾ (Ragini Sona) ಹಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ನೀಮ್ ಕರೋಲಿ ಬಾಬಾ ಜೀವನ ಮತ್ತು ಸಂದೇಶವನ್ನು ಆಧರಿಸಿರುವ ಈ ಚಿತ್ರವು ಪ್ರೇಕ್ಷಕರ ಗಮನ ಸೆಳೆದಿದ್ದು, ವಿಶ್ವದಾದ್ಯಂತ 329.30 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ ಎಂದು ವರದಿಯಾಗಿದೆ.
ಹನುಮಾನ್ ಅಂಶ್ ಚಿತ್ರ ಬಿಡುಗಡೆಗೂ ಮುನ್ನ ನೀಮ್ ಕರೋಲಿ ಬಾಬಾ ಪುತ್ರಿ ಗಿರಿಜಾ ಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲು ರಾಗಿಣಿ ಸೋನಾ ಮತ್ತು ನಿರ್ದೇಶಕ ವಿಶಾಲ್ ಚತುರ್ವೇದಿ ಪ್ರಯತ್ನಿಸಿದ್ದರು. ಆ ಬಳಿಕ ದೂರವಾಣಿ ಮೂಲಕ ಮಾತುಕತೆ ನಡೆಸಲಾಗಿತ್ತು. ಚಿತ್ರವನ್ನು ನೋಡಲು ಆಸಕ್ತಿ ಇದೆಯೇ ಎಂದು ಚಿತ್ರತಂಡ ಕೇಳಿದಾಗ, ಸೂಕ್ತ ಸಮಯ ಬಂದಿದೆ ಎಂದು ಅನಿಸಿದಾಗ ತಾವು ಸಿನಿಮಾ ನೋಡುವುದಾಗಿ ಗಿರಿಜಾ ಜಿ ಹೇಳಿದ್ದರಂತೆ.
ಆ ಬಳಿಕ ಗಿರಿಜಾ ಅವರು ಹನುಮಾನ್ ಅಂಶ್ ಚಿತ್ರವನ್ನು ಸುಮಾರು 15 ಬಾರಿ ವೀಕ್ಷಿಸಿದ್ದಾರೆ. ಪ್ರತಿ ಬಾರಿ ಸಿನಿಮಾ ನೋಡಿದಾಗಲೂ ಅವರು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ ಎಂದು ನಿರ್ಮಾಪಕಿ ಹೇಳಿದ್ದಾರೆ. ಈ ಸಂಗತಿ ಚಿತ್ರತಂಡಕ್ಕೆ ಮತ್ತಷ್ಟು ವಿಶೇಷ ಅನುಭವ ನೀಡಿದೆ.
ತಾವು ಆರನೇ ವಯಸ್ಸಿನಲ್ಲಿ ನೀಮ್ ಕರೋಲಿ ಬಾಬಾ ಅವರನ್ನು ಭೇಟಿಯಾಗಿದ್ದ ಸಂಗತಿಯನ್ನು ರಾಗಿಣಿ ತಿಳಿಸಿದರು. ತಮ್ಮ ತಂದೆ ನೈನಿತಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭವನ್ನೂ ಅವರು ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಗಿರಿಜಾ ಜಿ ರಾಗಿಣಿಯ ತಂದೆಯ ಹೆಸರನ್ನು ಮಾತ್ರವಲ್ಲದೆ, ಆಗ್ರಾದಲ್ಲಿದ್ದ ಅವರ ತಂದೆಯ ಮನೆಯ ಸ್ಥಳದ ಬಗ್ಗೆಯೂ ಹೇಳಿದರೆಂದು ರಾಗಿಣಿ ತಿಳಿಸಿದ್ದಾರೆ.
ರಾಗಿಣಿ ಅವರ ಪ್ರಕಾರ, ಗಿರಿಜಾ ಜಿ ತಮ್ಮ ಸಹೋದರನ ಹೆಸರನ್ನೂ ಪ್ರಸ್ತಾಪಿಸಿದ್ದರು. ಇಷ್ಟೊಂದು ಹಳೆಯ ವಿಚಾರಗಳನ್ನು ಅವರು ಹೇಗೆ ತಿಳಿದುಕೊಂಡರು ಎಂಬ ಪ್ರಶ್ನೆಯನ್ನು ರಾಗಿಣಿ ಕಣ್ಣೀರಿನಿಂದಲೇ ಕೇಳಿದ್ದರಂತೆ. ಅದಕ್ಕೆ ಗಿರಿಜಾ ಜಿ, ತನಗೆ ಇದಕ್ಕೆ ಯಾವುದೇ ಉತ್ತರ ಗೊತ್ತಿಲ್ಲ, ಆದರೆ ಎಲ್ಲವೂ ಕಣ್ಣಮುಂದೆ ಕಾಣಿಸುತ್ತಿತ್ತು ಎಂದು ಪ್ರತಿಕ್ರಿಯಿಸಿದ್ದಾಗಿ ರಾಗಿಣಿ ಹೇಳಿದ್ದಾರೆ.
ಈ ಅನುಭವದ ಬಳಿಕ ಹನುಮಾನ್ ಅಂಶ್ ಚಿತ್ರದ ಭಾಗವಾಗಲು ತಮ್ಮನ್ನು ಬಾಬಾ ಅವರೇ ಆಯ್ಕೆ ಮಾಡಿದ್ದಾರೆ ಎಂಬ ನಂಬಿಕೆ ಮೂಡಿತು ಎಂದು ರಾಗಿಣಿ ಹೇಳಿದ್ದಾರೆ. ತಮ್ಮ ಪಾಲಿಗೆ ಇದು ಸಾಮಾನ್ಯ ಭೇಟಿಗಿಂತಲೂ ಹೆಚ್ಚು ಅರ್ಥಪೂರ್ಣವಾದ ಅನುಭವವಾಗಿತ್ತು ಎಂದು ವಿವರಿಸಿದ್ದಾರೆ.
ನೀಮ್ ಕರೋಲಿ ಬಾಬಾ ಅವರ ಪುತ್ರಿ ಗಿರಿಜಾ ಜಿ ಅವರನ್ನು ಭೇಟಿಯಾದಾಗ ಅವರ ಸರಳತೆ ಮತ್ತು ಜೀವನಶೈಲಿ ತಮ್ಮ ಗಮನ ಸೆಳೆದಿತ್ತು ಎಂದು ರಾಗಿಣಿ ಹೇಳಿದ್ದಾರೆ. ಬಾಬಾ ಅವರ ಪ್ರಮುಖ ಸಂದೇಶವಾದ ಎಲ್ಲರನ್ನೂ ಪ್ರೀತಿಸಿ, ಎಲ್ಲರಿಗೂ ಅನ್ನ ನೀಡಿ ಎಂಬ ತತ್ವವನ್ನು ಗಿರಿಜಾ ಜಿ ತಮ್ಮ ಜೀವನದಲ್ಲೂ ಪಾಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಹನುಮಾನ್ ಅಂಶ್ ಚಿತ್ರವು ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಸಂದೇಶವನ್ನು ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರಿಗೆ ತಲುಪಿಸುವ ಮಾಧ್ಯಮವಾಗಿದೆ ಎಂದು ರಾಗಿಣಿ ಹೇಳಿದ್ದಾರೆ. ಚಿತ್ರಕ್ಕೆ ಸಿಕ್ಕಿರುವ ಪ್ರತಿಕ್ರಿಯೆ ಮತ್ತು ಬಾಬಾ ಅವರ ಕುಟುಂಬದಿಂದ ದೊರೆತ ಬೆಂಬಲವು ತಮ್ಮ ಪಾಲಿಗೆ ಮರೆಯಲಾಗದ ಅನುಭವ ಎಂದು ತಿಳಿಸಿದ್ದಾರೆ.














