Last Updated:
ನಾಳೆ ಅಂದರೆ, ಭಾನುವಾರ ಐಪಿಎಲ್ 2026 ರ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗುಜರಾತ್ ವಿರುದ್ಧ ಆರ್ಸಿಬಿಯ ಸ್ಪೋಟಕ ಬ್ಯಾಟರ್ ಫಿಲ್ ಸಾಲ್ಟ್ ಆಡುವ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ.
ಐಪಿಎಲ್ 2026 ರ ಸೀಸನ್‌ನ ಫೈನಲ್ ಪಂದ್ಯವು ರಾಯಲ್ ಚಾಂಪಿಯನ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವೆ ಅಹಮದಾಬಾದ್‌ನಲ್ಲಿ ನಡೆಯಲಿದೆ. ಫೈನಲ್ ಪಂದ್ಯದಲ್ಲಿ ಗುಜರಾತ್ ವಿರುದ್ಧ ಆರ್ಸಿಬಿಯ ಸ್ಪೋಟಕ ಬ್ಯಾಟರ್ ಫಿಲ್ ಸಾಲ್ಟ್ ಆಡುವ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಈಗ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ತಂಡದ ಫಿಲ್ ಸಾಲ್ಟ್ ಆಡುವ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ . ಸಾಲ್ಟ್ ಕೆಲವು ಸಮಯದಿಂದ ಗಾಯದಿಂದ ಬಳಲುತ್ತಿದ್ದಾರೆ. ಇನ್ನೂ ಸಾಲ್ಟ್ ಮೈದಾನಕ್ಕೆ ಮರಳಿಲ್ಲ. ಇಂತಹ ಸಂದರ್ಭದಲ್ಲಿ ಫೈನಲ್‌ಗೂ ಮುನ್ನ ಪಾಟೀದಾರ್ ಸಾಲ್ಟ್ ಆಡುವ ಬಗ್ಗೆ ಬಗ್ಗೆ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಏಪ್ರಿಲ್ 18 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಸಮಯದಲ್ಲಿ ಫಿಲ್ ಸಾಲ್ಟ್ ಅವರು ತಮ್ಮ ಬೆರಳಿಗೆ ಗಾಯ ಮಾಡಿಕೊಂಡರು . ನಂತರ ಅವರು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ (ECB) ಕೋರಿಕೆಯ ಮೇರೆಗೆ ಮೇ ಆರಂಭದಲ್ಲಿ ಇಂಗ್ಲೆಂಡ್‌ಗೆ ಮರಳಿದರು.
ಆರ್‌ಸಿಬಿ ಪ್ಲೇಆಫ್‌ಗೆ ಅರ್ಹತೆ ಪಡೆದ ನಂತರ ಸಾಲ್ಟ್ ಮತ್ತೆ ತಂಡವನ್ನು ಸೇರಿಕೊಂಡರು. ಇದರ ಹೊರತಾಗಿಯೂ, ಅವರು ಇನ್ನೂ ಆಡಿಲ್ಲ. ಕಳೆದ ಎರಡು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಜೊತೆಗೆ ವೆಂಕಟೇಶ್ ಅಯ್ಯರ್ ಇನ್ನಿಂಗ್ಸ್ ಅನ್ನು ತೆರೆಯುತ್ತಿದ್ದಾರೆ. ಹೀಗಾಗಿ ಸಾಲ್ಟ್ ಬ್ಯಾಟಿಂಗ್ ನೋಡಲು ಆರ್‌ಸಿಬಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಫೈನಲ್ ಪಂದ್ಯಕ್ಕೂ ಮುನ್ನ ಮಾತನಾಡಿದ ಆರ್‌ಸಿಬಿ ನಾಯಕ ರಜತ್ ಪಾಟೀದಾರ್, ಫಿಲ್ ಸಾಲ್ಟ್ ನಮ್ಮ ತಂಡದೊಂದಿಗೆ ತರಬೇತಿ ಪಡೆಯುತ್ತಿದ್ದಾರೆ. ವೈದ್ಯರ ತಂಡವು ಅವರನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಪಿಚ್ ನೋಡಿದ ನಂತರ ಮತ್ತು ಆರಂಭಿಕ ಸಂಯೋಜನೆಯ ಬಗ್ಗೆ ಚರ್ಚಿಸಿದ ನಂತರ ನಾವು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ರಜತ್ ಪಾಟೀದಾರ್ ಹೇಳಿಕೆಯನ್ನು ಹಲವು ರೀತಿಯಲ್ಲಿ ಚರ್ಚಿಸಲಾಗುತ್ತಿದೆ. ರಜತ್ ಪಾಟೀದಾರ್ ಹೇಳಿಕೆ ಪ್ರಕಾರ, ಫೈನಲ್ ಪಂದ್ಯದಲ್ಲಿ ಫಿಲ್ ಸಾಲ್ಟ್ ಆಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಫಿಲ್ ಸಾಲ್ಟ್ ಅವರ ಪ್ರದರ್ಶನದ ಬಗ್ಗೆ ನೋಡುವುದಾರೆ, ಅವರು 2026 ರ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ಪರ ಆರು ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಅವರು 168 ರ ಪ್ರಭಾವಶಾಲಿ ಸ್ಟ್ರೈಕ್ ರೇಟ್‌ನಲ್ಲಿ 202 ರನ್ ಗಳಿಸಿದ್ದಾರೆ. ಒಟ್ಟಾರೆ ಸಾಲ್ಟ್ 40 ಐಪಿಎಲ್ ಪಂದ್ಯಗಳಲ್ಲಿ 1,258 ರನ್ ಕಲೆ ಹಾಕಿದ್ದಾರೆ. ಆರ್‌ಸಿಬಿ ಅಹಮದಾಬಾದ್‌ನಲ್ಲಿ ಮತ್ತೊಂದು ಟ್ರೋಫಿ ಗೆಲುವು ಸಾಧಿಸಲು ಆಶಿಸಿದರೆ, ಫಿಲ್ ಸಾಲ್ಟ್ ಅವರ ಕಮ್ಬ್ಯಾಕ್ ಪ್ರಮುಖವಾಗಿದೆ. ಆದಾಗ್ಯೂ, ಅವರು ಸಂಪೂರ್ಣವಾಗಿ ಫಿಟ್ ಆಗಿಲ್ಲದಿದ್ದರೆ, ವೆಂಕಟೇಶ್ ಅಯ್ಯರ್ ಮತ್ತೊಮ್ಮೆ ವಿರಾಟ್ ಕೊಹ್ಲಿ ಜೊತೆಗೆ ಇನ್ನಿಂಗ್ಸ್ ತೆರೆಯಬಹುದು.













