Last Updated:
ಜಾಗತಿಕ ಮಾರುಕಟ್ಟೆಯಲ್ಲಿ ಎಲ್‌ಪಿಜಿ ದರ ಏರಿಕೆಯಾಗಿದ್ದರೂ ದೇಶೀಯ ಗ್ರಾಹಕರಿಗೆ ಸಬ್ಸಿಡಿ ಮುಂದುವರಿಯಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಉಜ್ವಲ ಯೋಜನೆ ಫಲಾನುಭವಿಗಳಿಗೆ ಹೆಚ್ಚುವರಿ ₹300 ನೇರ ಸಬ್ಸಿಡಿಯೂ ಮುಂದುವರಿಯಲಿದೆ.
ಬೆಂಗಳೂರು: ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಸಂಘರ್ಷ, ಹಾರ್ಮುಜ್ ಜಲಸಂಧಿಯ ಮೇಲಿನ ಉದ್ವಿಗ್ನತೆ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಎಲ್‌ಪಿಜಿ (LPG) ದರ ಏರಿಕೆಯ ನಡುವೆಯೂ ದೇಶೀಯ ಗ್ರಾಹಕರಿಗೆ ಕೇಂದ್ರ ಸರ್ಕಾರ ಸಮಾಧಾನಕರ ಸುದ್ದಿ ನೀಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಗಳು ಏರಿದ್ದರೂ, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ನಿಯಂತ್ರಣದಲ್ಲಿಟ್ಟು ಸಬ್ಸಿಡಿ ವ್ಯವಸ್ಥೆಯನ್ನು (Subsidy) ಮುಂದುವರಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಈ ಕುರಿತು ಲೋಕಸಭೆಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಹಾಯಕ ಸಚಿವ ಸುರೇಶ್ ಗೋಪಿ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ.
ಜೂನ್ 2026ರ ಲೆಕ್ಕಾಚಾರದ ಪ್ರಕಾರ, 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಅಂತಾರಾಷ್ಟ್ರೀಯ ಮಾರುಕಟ್ಟೆ ಆಧಾರಿತ ಬೆಲೆ ಸುಮಾರು ₹1,695 ಆಗಿದೆ. ಆದರೆ ಗ್ರಾಹಕರ ಮೇಲಿನ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಭಾರತದಲ್ಲಿ ಗೃಹಬಳಕೆಯ ಸಿಲಿಂಡರ್ ಚಿಲ್ಲರೆ ಬೆಲೆಯನ್ನು ಸುಮಾರು ₹942ರ ಮಟ್ಟದಲ್ಲಿ ಕಾಯ್ದುಕೊಳ್ಳಲಾಗಿದೆ. ಈ ಕಾರಣದಿಂದ ಸರ್ಕಾರ ಹಾಗೂ ತೈಲ ಮಾರಾಟ ಕಂಪನಿಗಳು ಪ್ರತಿ ಸಿಲಿಂಡರ್‌ಗೆ ₹500ಕ್ಕೂ ಹೆಚ್ಚು ಪರೋಕ್ಷ ಸಬ್ಸಿಡಿ ನೀಡುತ್ತಿವೆ. ಜೂನ್ ತಿಂಗಳಲ್ಲಿ ಈ ಪರೋಕ್ಷ ಸಬ್ಸಿಡಿ ₹700ಕ್ಕೂ ಹೆಚ್ಚಿತ್ತು.
ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY) ಅಡಿಯಲ್ಲಿ ಇರುವ 10.5 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಈಗಲೂ ಪ್ರತಿ ಸಿಲಿಂಡರ್‌ಗೆ ₹300 ನೇರ ಸಬ್ಸಿಡಿ ನೀಡಲಾಗುತ್ತಿದೆ. ಈ ನೇರ ಸಬ್ಸಿಡಿ ಹಾಗೂ ಪರೋಕ್ಷ ಸಬ್ಸಿಡಿ ಸೇರಿ, ಉಜ್ವಲ ಯೋಜನೆಯ ಫಲಾನುಭವಿಗಳು ಸುಮಾರು ₹640ಕ್ಕೆ ಎಲ್‌ಪಿಜಿ ಸಿಲಿಂಡರ್ ಪಡೆಯುತ್ತಿದ್ದಾರೆ.
ಅದರ ಭಾಗವಾಗಿ,
ದೇಶೀಯ ಎಲ್‌ಪಿಜಿ ಉತ್ಪಾದನೆ ಹೆಚ್ಚಿಸಲಾಗಿದೆ. ಆಮದು ಮೂಲಗಳನ್ನು ವೈವಿಧ್ಯಗೊಳಿಸಲಾಗಿದೆ. ಗೃಹಬಳಕೆಯ ಗ್ರಾಹಕರಿಗೆ ಆದ್ಯತೆ ನೀಡಲಾಗಿದೆ. ಅಗತ್ಯ ಸಂಗ್ರಹ (ಸ್ಟಾಕ್) ವ್ಯವಸ್ಥೆಯನ್ನು ಬಲಪಡಿಸಲಾಗಿದೆ.
ಇದರ ಪರಿಣಾಮವಾಗಿ ದೇಶದಲ್ಲಿ ಎಲ್‌ಪಿಜಿ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗಿದೆ.
ಮಾರ್ಚ್‌ನಿಂದ ಜೂನ್ 2026ರ ಅವಧಿಯಲ್ಲಿ ದೇಶಾದ್ಯಂತ 56 ಕೋಟಿಗೂ ಹೆಚ್ಚು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಿತರಿಸಲಾಗಿದೆ. ಇದರಲ್ಲಿ 12 ಕೋಟಿಗೂ ಹೆಚ್ಚು ಸಿಲಿಂಡರ್‌ಗಳು ಉಜ್ವಲ ಯೋಜನೆ ಫಲಾನುಭವಿಗಳಿಗೆ ವಿತರಿಸಲಾಗಿದೆ.
ಜಾಗತಿಕ ಬೆಲೆ ಏರಿಕೆಯ ನಡುವೆಯೂ ಗ್ರಾಹಕರಿಗೆ ಕಡಿಮೆ ದರದಲ್ಲಿ ಸಿಲಿಂಡರ್ ಒದಗಿಸಲು ಸರ್ಕಾರ ಹಾಗೂ ತೈಲ ಮಾರಾಟ ಕಂಪನಿಗಳು ಭಾರಿ ಆರ್ಥಿಕ ಹೊರೆ ಹೊರುತ್ತಿವೆ. ಜೂನ್ 30, 2026ರ ವೇಳೆಗೆ ಎಲ್‌ಪಿಜಿ ಮೇಲಿನ ಅಂಡರ್-ರಿಕವರಿ (Under Recovery) ₹51 ಸಾವಿರ ಕೋಟಿಗೂ ಅಧಿಕವಾಗಿದೆ. ಇದರ ಜೊತೆಗೆ, ಸಾರ್ವಜನಿಕ ತೈಲ ಕಂಪನಿಗಳಿಗೆ ಪರಿಹಾರವಾಗಿ 2025-26 ಹಾಗೂ 2026-27ನೇ ಸಾಲಿಗೆ ₹30,000 ಕೋಟಿ ಅನುದಾನಕ್ಕೂ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ವಾಣಿಜ್ಯ ಸಿಲಿಂಡರ್ ದರದಲ್ಲಿ ಇಳಿಕೆ
ಇದೇ ವೇಳೆ, ಜುಲೈ 1, 2026ರಿಂದ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ₹183.50ರಷ್ಟು ಕಡಿತ ಮಾಡಲಾಗಿದೆ. ಆದರೆ 14.2 ಕೆಜಿ ಗೃಹಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಜಾಗತಿಕ ರಾಜಕೀಯ ಉದ್ವಿಗ್ನತೆ, ಕಚ್ಚಾ ಇಂಧನ ಹಾಗೂ ಎಲ್‌ಪಿಜಿ ದರ ಏರಿಕೆಯ ನಡುವೆಯೂ ದೇಶೀಯ ಗ್ರಾಹಕರಿಗೆ ತಕ್ಷಣದ ಬೆಲೆ ಏರಿಕೆಯ ಹೊರೆ ಬೀಳದಂತೆ ಸಬ್ಸಿಡಿ ಮತ್ತು ಬೆಲೆ ನಿಯಂತ್ರಣ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಮುಂದುವರಿಸಿರುವುದು ಅಡುಗೆ ಅನಿಲ ಬಳಕೆದಾರರಿಗೆ ದೊಡ್ಡ ನೆಮ್ಮದಿ ತಂದಿದೆ.
Chitradurga,Chitradurga,Karnataka
Jul 25, 2026 10:50 AM IST














