Last Updated:
ಮಂಗಳೂರು ಅಪಘಾತದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದ ರಿಯಾಜ್ ಅಹ್ಮದ್ ಮಾನವೀಯತೆಗೆ ಹೈಕೋರ್ಟ್ ಶ್ಲಾಘನೆ, 1 ವರ್ಷದ ಜೈಲು 1 ದಿನಕ್ಕೆ ಕಡಿತ, 1 ಲಕ್ಷ ಪರಿಹಾರ ಷರತ್ತು
ಬೆಂಗಳೂರು: ಸಾಮಾನ್ಯವಾಗಿ ರಸ್ತೆ ಅಪಘಾತ (Accident) ಸಂಭವಿಸಿದ ತಕ್ಷಣ ಚಾಲಕರು ಜನಾಕ್ರೋಶಕ್ಕೆ ಹೆದರಿ ಅಥವಾ ಪೊಲೀಸರ ಭಯದಿಂದ ಸ್ಥಳದಿಂದಲೇ ಪರಾರಿಯಾಗುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ಚಾಲಕ ಅಪಘಾತವಾದ ತಕ್ಷಣ ಓಡಿಹೋಗದೆ ಮಾಡಿದ ಆ ಒಂದು ಮಾನವೀಯ ಕೆಲಸ, ಆತನಿಗೆ ಕೋರ್ಟ್ (Court) ವಿಧಿಸಿದ್ದ 1 ವರ್ಷದ ಜೈಲು ಶಿಕ್ಷೆಯನ್ನು ಕೇವಲ 1 ದಿನಕ್ಕೆ ಕಡಿತಗೊಳಿಸುವಂತೆ ಮಾಡಿದೆ! ಹೌದು, ಹೈಕೋರ್ಟ್ (High Court) ಇತಿಹಾಸದಲ್ಲೇ ಅತ್ಯಂತ ಅಪರೂಪದ ಹಾಗೂ ಹೃದಯಸ್ಪರ್ಶಿ ತೀರ್ಪೊಂದನ್ನು (Verdict) ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪಕ್ಷಿಕೆರೆಯ ನಿವಾಸಿ ರಿಯಾಜ್ ಅಹ್ಮದ್ ಎಂಬುವವರು 2015ರ ಜುಲೈ 15ರಂದು ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ ಪಡಂಪಣಂಬೂರು ಚೆಕ್ ಪೋಸ್ಟ್ ಬಳಿ ಕಾರು ಚಲಾಯಿಸುತ್ತಿದ್ದಾಗ, ಆನಂದ್ ಶೆಟ್ಟಿ ಎಂಬ ಪಾದಚಾರಿಗೆ ಡಿಕ್ಕಿ ಹೊಡೆದಿದ್ದರು. ಮರುದಿನವೇ ಆನಂದ್ ಶೆಟ್ಟಿ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಮಂಗಳೂರಿನ ಸೆಷನ್ಸ್ ನ್ಯಾಯಾಲಯ ಚಾಲಕ ರಿಯಾಜ್‌ಗೆ 1 ವರ್ಷದ ಸಾಧಾರಣ ಜೈಲು ಶಿಕ್ಷೆ ಮತ್ತು 5,000 ರೂಪಾಯಿ ದಂಡ ವಿಧಿಸಿತ್ತು. ಆದರೆ ಹೈಕೋರ್ಟ್ ಮೆಟ್ಟಿಲೇರಿದಾಗ ಈ ಕಥೆಗೆ ಭರ್ಜರಿ ಟ್ವಿಸ್ಟ್ ಸಿಕ್ಕಿದೆ!
1 ವರ್ಷದ ಶಿಕ್ಷೆ ಕೇವಲ 1 ದಿನಕ್ಕೆ ಕಡಿತವಾಗಲು ಕಾರಣವಾದ ಆ 3 ಅಂಶಗಳು
ನ್ಯಾಯಮೂರ್ತಿ ವಿ. ಶ್ರೀಷಾನಂದ ಅವರಿದ್ದ ಏಕಸದಸ್ಯ ಪೀಠವು ಈ ಪ್ರಕರಣದಲ್ಲಿ ಚಾಲಕನಿಗೆ ಕೇವಲ ಒಂದೇ ದಿನ (ಅಂದಿನ ನ್ಯಾಯಾಲಯದ ಕಲಾಪ ಮುಗಿಯುವವರೆಗೆ) ಶಿಕ್ಷೆ ವಿಧಿಸಲು ಪ್ರಮುಖ ಕಾರಣಗಳು ಇಲ್ಲಿವೆ:
- ಅಪಘಾತ ನಡೆದ ತಕ್ಷಣ ಚಾಲಕ ರಿಯಾಜ್ ಮತ್ತು ಆತನ ಮಗ ಅಲ್ಲಿಂದ ಓಡಿಹೋಗಲಿಲ್ಲ! ಬದಲಿಗೆ ಗಂಭೀರವಾಗಿ ಗಾಯಗೊಂಡಿದ್ದ ನಂದ್ ಶೆಟ್ಟಿ ಅವರನ್ನು ಸ್ವತಃ ತಮ್ಮದೇ ಕಾರಿನಲ್ಲಿ ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದರು.
- ನಂತರದ ದಿನಗಳಲ್ಲಿ ಸ್ವತಃ ರಿಯಾಜ್ ಕೂಡ ಮತ್ತೊಂದು ಭೀಕರ ಅಪಘಾತಕ್ಕೆ ಒಳಗಾಗಿ ಬಲಗಾಲಿಗೆ ರಾಡ್ ಅಳವಡಿಸಿಕೊಂಡಿದ್ದಾರೆ. ಸದ್ಯ ಅವರಿಗೆ ವೃತ್ತಿಪರ ಚಾಲನೆ ಮಾಡಲು ಸಾಧ್ಯವಾಗದೆ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದಾರೆ ಎಂಬ ಕಣ್ಣೀರಿನ ಸಂಗತಿ ನ್ಯಾಯಾಲಯದ ದಾಖಲೆಗಳಿಂದ ಗೊತ್ತಾಗಿದೆ.
- ನ್ಯಾಯಾಲಯದ ಸಲಹೆಯಂತೆ ಮೃತರ ಕುಟುಂಬಕ್ಕೆ ಹೆಚ್ಚುವರಿ ಪರಿಹಾರ ನೀಡಲು ರಿಯಾಜ್ ಒಪ್ಪಿಕೊಂಡ ಹಿನ್ನೆಲೆಯಲ್ಲಿ, ಮೃತರ ಪತ್ನಿ ಮತ್ತು ಮಗ ಕೂಡ ಶಿಕ್ಷೆ ಕಡಿಮೆ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ.
ಆದರೆ ಕೋರ್ಟ್ ಹಾಕಿರುವ ಆ ಒಂದು ಖಡಕ್ ಷರತ್ತು ಏನು?
ಹೈಕೋರ್ಟ್ ರಿಯಾಜ್ ಅವರ ಶಿಕ್ಷೆಯನ್ನು 1 ದಿನಕ್ಕೆ ಕಡಿತಗೊಳಿಸಿದ್ದರೂ ಒಂದು ಕಟ್ಟುನಿಟ್ಟಿನ ಷರತ್ತನ್ನು ವಿಧಿಸಿದೆ. ರಿಯಾಜ್ ಅವರು ಮೃತರ ಪತ್ನಿ ಮತ್ತು ಮಗನಿಗೆ ಒಟ್ಟು 1 ಲಕ್ಷ ರೂಪಾಯಿ ಹೆಚ್ಚುವರಿ ಪರಿಹಾರ ನೀಡಬೇಕು. ಈ ಮೊತ್ತವನ್ನು ತಲಾ 50,000 ರೂಪಾಯಿಗಳಂತೆ ಎರಡು ಕಂತುಗಳಲ್ಲಿ ಜೂನ್ 30ರ ಒಳಗಾಗಿ ಕಡ್ಡಾಯವಾಗಿ ಪಾವತಿಸಬೇಕು. ಒಂದು ವೇಳೆ ಈ ಹಣ ಪಾವತಿಸಲು ವಿಫಲವಾದರೆ, ಹಳೆಯ 1 ವರ್ಷದ ಜೈಲು ಶಿಕ್ಷೆ ತಾನಾಗಿಯೇ ಮರುಸ್ಥಾಪನೆಯಾಗಲಿದೆ ಎಂದು ಹೈಕೋರ್ಟ್ ಖಡಕ್ ಎಚ್ಚರಿಕೆ ನೀಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ತನ್ನ ಪ್ರಕಟಣೆಯಲ್ಲಿ ವರದಿ ಮಾಡಿದೆ. ಒಟ್ಟಿನಲ್ಲಿ, ಕಷ್ಟದ ಸಮಯದಲ್ಲಿ ಓಡಿಹೋಗದೆ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದ ಚಾಲಕನ ಮಾನವೀಯ ಗುಣಕ್ಕೆ ಹೈಕೋರ್ಟ್ ಶಹಬ್ಬಾಸ್ ಎಂದಿದ್ದು, ಇಂದಿನ ಸಮಾಜಕ್ಕೆ ಇದೊಂದು ಅತ್ಯಂತ ಮಾದರಿ ತೀರ್ಪಾಗಿದೆ!
Bangalore [Bangalore],Bangalore,Karnataka













