Last Updated:
ಎಲ್ ನಿನೋ ಪ್ರಭಾವದಿಂದ ಜಗತ್ತಿನಾದ್ಯಂತ ತೀವ್ರ ಆತಂಕ. ಐಎಂಡಿ ಮಾಹಿತಿಯ ಅನ್ವಯ, ಜೂನ್ 1-13 ವರೆಗೆ ದೇಶದ ಶೇಕಡಾ 54 ಜಿಲ್ಲೆಗಳಲ್ಲಿ ಭಾರೀ ಮಳೆಯ ಕೊರತೆ ಎದುರಾಗಿದ್ದು, ಉಳಿದ ಶೇಕಡಾ 46 ಜಿಲ್ಲೆಗಳಲ್ಲಿ ಮಾತ್ರ ಉತ್ತಮ ಮಳೆಯಾಗಿದೆ.
ಬೇಸಿಗೆ ಕಡಿಮೆಯಾಗಿ ಮಳೆಗಾಲ (Monsoon Rains 2026) ಆರಂಭವಾಗಿ ತಿಂಗಳು ಕಳೆದರೂ ಬಿಸಿಲು ಮಾತ್ರ ಕಡಿಮೆಯಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ವೇಗವಾಗಿ ತೀವ್ರ ರೂಪ ಪಡೆದುಕೊಳ್ಳುತ್ತಿರುವ ‘ಎಲ್ ನಿನೋ’ ಪ್ರಭಾವ (El Niño). ದಿನದಿಂದ ದಿನಕ್ಕೆ ತೀವ್ರ ರೂಪ ಪಡೆದುಕೊಳ್ಳುತ್ತಿರುವ ಎಲ್ ನಿನೋ ಬಗ್ಗೆ ಜಗತ್ತಿನಾದ್ಯಂತ ವಿಜ್ಞಾನಿಗಳು, ತಜ್ಞರು ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಎಂದು ಕಾಣದಂತಹ ಇತಿಹಾಸದಲ್ಲಿಯೇ ವಾತಾವರಣ ಎದುರಾದ ಅತ್ಯಂತ ಬಲವಾದ ಬದಲಾವಣೆಗಳಲ್ಲಿ ಒಂದಾಗಿ ನಿಲ್ಲಲಿದೆ ಎಂದು ಅಮೆರಿಕದ ನ್ಯಾಷನಲ್ ಓಷಿಯಾನಿಕ್ ಅಂಡ್ ಅಟ್ಮಾಸ್ಫಿಯರ್ ಅಡ್ಮಿನಿಸ್ಟ್ರೇಷನ್ (ಎನ್ಒಎಎ) ಗುರುತಿಸಿದೆ. ಈ ವರ್ಷದ ಅಂತ್ಯದ ವೇಳೆಗೆ ಇದು ಮತ್ತಷ್ಟು ತೀವ್ರವಾಗಿ (Rainfall Deficit), ಉತ್ತರ ಗೋಳಾರ್ಧದ ಚಳಿಗಾಲದಲ್ಲಿ ಇದು ಗರಿಷ್ಠ ಮಟ್ಟವನ್ನು ತಲುಪುವ ನಿರೀಕ್ಷೆಯಿದೆ ಎಂದು ಹೇಳಿದೆ.
ಹವಾಮಾನ ತಜ್ಞ ಜೆಕೆ ಹೌಸ್‌ಫಾದರ್ ಅವರು 14 ರೀತಿಯ ಹವಾಮಾನ ಮಾದರಿಗಳಿಂದ ಸಂಗ್ರಹಿಸಿದ 667 ಮುನ್ಸೂಚನೆಗಳ ವಿಶ್ಲೇಷಣೆಯ ಅನ್ವಯ, ಸದ್ಯ ಇರುವ ಎಲ್ ನಿನೋ ಈ ಹಿಂದಿಗಿಂತ ಹೆಚ್ಚಿನ ನಷ್ಟವನ್ನು ಸೃಷ್ಟಿ ಮಾಡುತ್ತದೆ ಎಂದು ಅಂದಾಜು ಮಾಡಿದ್ದಾರೆ. ಅಂದರೆ ಈ ಹಿಂದೆ 1982-83, 1997-98, 2015-16 ವರ್ಷಗಳ ದಾಖಲೆಗಳನ್ನು ಮುರಿಯುವ ಮುನ್ಸೂಚನೆ ಇದ್ದು, 2015-16ರಲ್ಲಿ ಗರಿಷ್ಠ ಅಂದರೆ 2.70 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ವ್ಯತ್ಯಾಸ ದಾಖಲಾಗಿತ್ತು. ಆದರೆ ಈ ಬಾರಿ ಇದು 3.6 ಡಿಗ್ರಿ ಸೆಲ್ಸಿಯಸ್ ವರೆಗೂ ಹೆಚ್ಚಳವಾಗುವ ಮುನ್ಸೂಚನೆ ಇದೆ ಎಂದು ಅಂದಾಜು ಮಾಡುತ್ತಿದ್ದಾರೆ.
ಎನ್ಒಎಎ ಡೇಟಾ ಅನ್ವಯ, ಜುಲೈ 13ರ ವೇಳೆಗೆ ಪೆಸಿಫಿಕ್ ಮಹಾಸಮುದ್ರದಲ್ಲಿನ ನಿನೋ 3.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ವ್ಯತ್ಯಾಸ 2.2 ಡಿಗ್ರಿ ಸೆಲ್ಸಿಯಸ್ಗೆ ಸೇರಿತ್ತು. 1982 ರಿಂದ ಸಂಗ್ರಹವಾಗಿರುವ ಉಪಗ್ರಹ ಮಾಹಿತಿಯನ್ನು ಪರಿಶೀಲನೆ ನಡೆಸಿದರೆ, ಒಂದು ಕ್ಯಾಲೆಂಡರ್ ವರ್ಷದಲ್ಲಿ ಇಷ್ಟು ಬೇಗ ಈ ಮಟ್ಟದ ತಾಪಮಾನ ದಾಖಲಾಗಿರೋದು ಇದೇ ಮೊದಲು. ಈ ಪ್ರಮಾಣದಲ್ಲಿ ಉಷ್ಣಾಂಶ ಹೆಚ್ಚಳವಾಗಿದೆ ಅಂದರೆ ಮುಂಬರುವ ದಿನಗಳು ತೀವ್ರವಾಗಿ ಇರಲಿದೆ. ಭಾರೀ ಬಿರುಗಾಳಿ, ಪ್ರವಾಹ ಹಾಗೂ ಬರಗಾಲವನ್ನು ಎದುರಿಸಬೇಕಾದ ಸೂಚನೆಗಳು ಇದಾಗಿದೆ ಎಂದು ಅಂದಾಜು ಮಾಡಲಾಗಿದೆ ಎಂದು ಟಿವಿ9 ತೆಲುಗು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಭಾರತ ಹವಾಮಾನ ಇಲಾಖೆ (ಐಎಂಡಿ) ಅನ್ವಯ, ಈ ವರ್ಷ ಭಾರತ ಮಾನ್ಸೂನ್ ಮಾರುತಗಳು ಸುರಿಸುವ ಮಳೆಯ ಪ್ರಮಾಣ ದೀರ್ಘಕಾಲದ ಸರಾಸರಿಯಲ್ಲಿ ಶೇಕಡಾ 90ರಷ್ಟು ಮಾತ್ರ ಆಗುವ ನಿರೀಕ್ಷೆ ಇದೆ. ಸಾಮಾನ್ಯವಾಗಿ ಎಲ್ ನಿನೊದ ಪರಿಣಾಮವನ್ನು ಕಡಿಮೆ ಮಾಡುವ ‘ಹಿಂದೂ ಮಹಾಸಾಗರದ ದ್ವಿಧ್ರುವಿ’ ಈ ಬಾರಿ ತಟಸ್ಥವಾಗಿದೆ. ಅಂದರೆ, ಎಲ್ ನಿನೊದಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡುವ ನೈಸರ್ಗಿಕ ಪರಿಹಾರವೂ ಈ ಬಾರಿ ಕೆಲಸ ಮಾಡಿಲ್ಲ. ಈ ಕಾರಣದಿಂದಲೇ ಕಳೆದ ಜೂನ್ ತಿಂಗಳಿನಲ್ಲಿ ಸಾಮಾನ್ಯಕ್ಕಿಂತ ಶೇಕಡಾ 40ರಷ್ಟು ಮಳೆ ಕಡಿಮೆಯಾಗಿದೆ. ಕಳೆದ 126 ವರ್ಷಗಳಿಗೆ ಹೋಲಿಕೆ ಮಾಡಿದರೆ, ದೇಶದಲ್ಲಿ ದಾಖಲಾದ ಐದನೇ ಅತ್ಯಂತ ಕಡಿಮೆ ಮಳೆಯ ಪ್ರಮಾಣ ಜೂನ್ನಲ್ಲಿ ದಾಖಲಾಗಿದೆ.
Low pressure induced rainfall activities continuing over several parts of Odisha & adjoining Chhattisgarh and north coastal Andhra Pradesh. pic.twitter.com/BGIdaEXqvM
— India Meteorological Department (@Indiametdept) July 16, 2026
ಇದು ಭಾರತದ ಮೇಲೆ ತೀವ್ರ ಪರಿಣಾಮವನ್ನು ಉಂಟು ಮಾಡಿದ್ದು, ದೇಶದ 741 ಜಿಲ್ಲೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜಿಲ್ಲೆಗಳು ಮಳೆಯ ಕೊರತೆಯನ್ನು ಎದುರಿಸುತ್ತಿದೆ. ಇದರಿಂದ ಈ ಬಾರಿಯ ಖಾರಿಫ್ ಬಿತ್ತನೆಯ ಮೇಲೆ ಭಾರೀ ಹೊಡೆತ ಬಿದ್ದಿದೆ. ಜುಲೈ 10ರ ವೇಳೆಗೆ ದೇಶದಲ್ಲಿ ನಡೆಯಬೇಕಿದ್ದ ಬಿತ್ತನೆ ಕಾರ್ಯದಲ್ಲಿ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗಿದೆ. ಭಾರತ ಕೃಷಿ ಸಚಿವಾಲಯದ ಮಾಹಿತಿಯ ಅನ್ವಯ, ಭಾರತದ ಅತಿದೊಡ್ಡ ಬೆಳೆಯಾದ ಭತ್ತದ ನಾಟಿಯಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇಕಡಾ 8.6ರಷ್ಟು ಕಡಿಮೆಯಾಗಿದೆ. ಭಾರತದಲ್ಲಿ 114.69 ಲಕ್ಷ ಹೆಕ್ಟೇರ್ ಗಳಲ್ಲಿ ಭತ್ತ ನಾಟಿ ಮಾಡಲಾಗುತ್ತದೆ. ಕಳೆದ ವರ್ಷ 125.33 ಲಕ್ಷ ಹೆಕ್ಟೇರ್ನಲ್ಲಿ ಭತ್ತ ನಾಟಿ ಮಾಡಲಾಗಿತ್ತು, ಆದರೆ ಈ ಬಾರಿ ಇದು ಶೇಕಡಾ 8.6ರಷ್ಟು ಕಡಿಮೆಯಾಗಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಐಎಂಡಿ ಮಾಹಿತಿಯ ಅನ್ವಯ, ಜೂನ್ 1-13 ವರೆಗೆ ದೇಶದ ಶೇಕಡಾ 54 ಜಿಲ್ಲೆಗಳಲ್ಲಿ ಭಾರೀ ಮಳೆಯ ಕೊರತೆ ಎದುರಾಗಿದ್ದು, ಉಳಿದ ಶೇಕಡಾ 46 ಜಿಲ್ಲೆಗಳಲ್ಲಿ ಮಾತ್ರ ಉತ್ತಮ ಮಳೆಯಾಗಿದೆ. ಎಲ್ ನಿನೊ ಪ್ರಭಾವವನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿಗಳ ಕಚೇರಿಯಿಂದ ಕೇಂದ್ರ ಕೃಷಿ ಸಚಿವಾಲಯದ ವರೆಗೂ ವಿವಿಧ ಹಂತಗಳಲ್ಲಿ ಪರಿಶೀಲನಾ ಸಭೆಗಳನ್ನು ನಡೆಸಲಾಗಿದೆ. ಬಂಗಾಳಕೊಲ್ಲಿಯ ವಾಯುವ್ಯ ಭಾಗದಲ್ಲಿ ವಾಯುಭಾರ ಕುಸಿತದಿಂದ ಹೊಸ ಚಂಡಮಾರುತದ ರಚನೆ ಆಗುತ್ತಿರುವುದರಿಂದ ಮಧ್ಯ ಮತ್ತು ಪೂರ್ವ ಭಾರತದಲ್ಲಿ ಅಲ್ಪಾವಧಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಡೋಲತ್ ಕ್ಯಾಪಿಟಲ್ ವರದಿ ಮಾಡಿದೆ.














