Last Updated:
Donald Trump: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ತಮ್ಮ ಕುರ್ಚಿ ಉಳಿಸಿಕೊಳ್ಳುವ ಹೋರಾಟದಲ್ಲಿದ್ದಾರೆ. ನವೆಂಬರ್ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಗಳೇ ಅವರ ದೊಡ್ಡ ಚಿಂತೆಯಾಗಿದೆ. ತಮ್ಮ ಅಧಿಕಾರಾವಧಿಯಲ್ಲಿ ಯಾವುದೇ ವಿದೇಶಿ ಯುದ್ಧದಲ್ಲಿ ತೊಡಗುವುದಿಲ್ಲ ಎಂದು ಚುನಾವಣಾ ಭರವಸೆ ನೀಡಿದ್ದ ಟ್ರಂಪ್, ಈಗ ಇರಾನ್ ಬಿಕ್ಕಟ್ಟಿನಿಂದ ಬೇಗನೆ ಹೊರಬರಲು ತುದಿಗಾಲಲ್ಲಿ ನಿಂತಿದ್ದಾರೆ. ಆ ಕುರಿತ ವರದಿ ಇಲ್ಲಿದೆ.
ವಾಷಿಂಗ್ಟನ್ (ಅಮೆರಿಕ): ಸುಖಾಸುಮ್ಮನೆ 8 ಯುದ್ಧಗಳನ್ನ (War) ನಿಲ್ಲಿಸಿದೆ ಎಂದು ಬೊಬ್ಬೆ ಹೊಡೆಯುತ್ತಾ ನೊಬೆಲ್ ಶಾಂತಿ (Nobel Peace) ಪ್ರಶಸ್ತಿಗಾಗಿ ಪಟ್ಟು ಹಿಡಿದು ಕೊನೆಗೆ ಅದು ಸಿಗದೇ ಹೋದಾಗ, ವಿಶ್ವ ಶಾಂತಿಗಾಗಿ ಎನ್ನುತ್ತಾ ಇರಾನ್ ಮೇಲೆ ಯುದ್ಧ ಸಾರಿ, ಏನೂ ಮಾಡಲಾಗದೆ ಕೊನೆಗೆ ಶಾಂತಿ ಒಪ್ಪಂದ ಮಾಡಿಕೊಂಡ ಡೊನಾಲ್ಡ್ ಟ್ರಂಪ್ರ (Donald Trump) ಅಮೆರಿಕ ಅಧ್ಯಕ್ಷ (America President) ಸ್ಥಾನಕ್ಕೆ ಕುತ್ತು ಬಂದಿದೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ.
ಹೌದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜೊತೆ ಆದಷ್ಟು ಬೇಗ ಶಾಂತಿ ಒಪ್ಪಂದ ಮಾಡಿಕೊಳ್ಳಲು ಉತ್ಸುಕರಾಗಿದ್ದಾರೆ ಎನ್ನಲಾಗಿದ್ದು, ಅದಕ್ಕಾಗಿಯೇ, ಶಾಂತಿ ಮಾತುಕತೆಯಿಂದ ಇಸ್ರೇಲ್ ಅನ್ನೂ ದೂರ ಇಟ್ಟಿದ್ದಾರೆ. ಇದರೊಂದಿಗೆ, ಇರಾನ್ ಜೊತೆಗಿನ ಶಾಂತಿ ಒಪ್ಪಂದವನ್ನ 60 ದಿನಗಳಲ್ಲಿ ಸಂಪೂರ್ಣವಾಗಿ ಜಾರಿಗೆ ತರಬೇಕು ಇಲ್ಲದಿದ್ದರೆ, ಸುಂಕ ವಿಧಿಸುವುದಾಗಿ ಇರಾನ್ಗೆ ಟ್ರಂಪ್ ಪದೇ ಪದೇ ಬೆದರಿಕೆ ಹಾಕುತ್ತಿದ್ದಾರೆ. ಹಾಗಾದ್ರೆ, ಟ್ರಂಪ್ ನಿಜವಾಗಿಯೂ ಶಾಂತಿ ಬಯಸುತ್ತಿದ್ದಾರಾ? ಇಲ್ಲಾ ಕೇವಲ ಇದು ರಾಜಕೀಯ ಗಿಮಿಕ್?
ವಾಸ್ತವವಾಗಿ, ಅಮೆರಿಕದಲ್ಲಿ ಮುಂಬರುವ ನವೆಂಬರ್ 2026 ರಂದು ಮಧ್ಯಂತರ ಚುನಾವಣೆಗಳು ನಡೆಯಲಿವೆ. ಚುನಾವಣೆಯಲ್ಲಿ ರಿಪಬ್ಲಿಕನ್ ಪಾರ್ಟಿಗೆ ಯಾವುದೇ ನಷ್ಟವಾಗದಂತೆ ತಡೆಯುವ ಸಲುವಾಗಿಯೇ, ಇರಾನ್ ಜೊತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಪರಿಸ್ಥಿತಿಯನ್ನು ಸರಿಪಡಿಸಲು ಟ್ರಂಪ್ ಬಯಸುತ್ತಾರೆ. ಯಾಕಂದ್ರೆ, ಅಧ್ಯಕ್ಷೀಯ ಚುನಾವಣೆ ವೇಳೆ, ಟ್ರಂಪ್ ಅವರು ತಮ್ಮ ಪ್ರಚಾರದ ವೇಳೆ, ಯಾವುದೇ ರೀತಿಯ ವಿದೇಶಿ ಯುದ್ಧಗಳಿಂದ ದೂರವಿರುವುದಾಗಿ ಭರವಸೆ ನೀಡಿದ್ದರು. ಆದ್ರೆ, ಇರಾನ್ನಲ್ಲಿ ನಡೆದಿದ್ದು ಅದಕ್ಕೆ ತದ್ವಿರುದ್ಧವಾಗಿತ್ತು. ಇನ್ನೂ, ಅಮೆರಿಕ ವಿದೇಶಾಂಗ ನೀತಿಯ ತಜ್ಞ ಮ್ಯಾಟ್ ಡಸ್ ಪ್ರಕಾರ, “ಅಮೆರಿಕದ ಸಾರ್ವಜನಿಕರು ದೀರ್ಘ ಯುದ್ಧಗಳಿಂದ ಬೇಸತ್ತಿದ್ದಾರೆ. ಟ್ರಂಪ್ ಇದನ್ನು ಬಹುಶಃ ಅರ್ಥಮಾಡಿಕೊಳ್ಳುವ ಸಾಧ್ಯತೆಯಿದೆ, ಅದಕ್ಕಾಗಿಯೇ ಅವರು ಶಾಂತಿ ಒಪ್ಪಂದಕ್ಕೆ ಆತುರದಲ್ಲಿದ್ದಾರೆ” ಎಂದು ಪ್ರತಿಪಾದಿಸಿದ್ದಾರೆ.
ಮುಂಬರುವ ಮಧ್ಯಂತರ ಚುನಾವಣೆಗಾಗಿ ಟ್ರಂಪ್, ರಿಪಬ್ಲಿಕನ್ ಪಕ್ಷದಲ್ಲಿ ತಮ್ಮ ಬಿಗಿ ಹಿಡಿತವನ್ನ ಗಟ್ಟಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಯಾಕಂದ್ರೆ, ಅಮೆರಿಕದಲ್ಲಿ ಓರ್ವ ಅಧ್ಯಕ್ಷನ ಅವಧಿಯ ಮಧ್ಯದಲ್ಲಿ ನಡೆಯುವ ಮಧ್ಯಂತರ ಚುನಾವಣೆಗಳು, ಆತನ ಆಡಳಿತದ ಮೊದಲ ಎರಡು ವರ್ಷಗಳ ರಿಪೋರ್ಟ್ ಕಾರ್ಡ್ ಇದ್ದಂತೆ. ಅದರಂತೆ, ಈ ಚುನಾವಣೆಯ ವೇಳೆ, ಅಮೆರಿಕ ಕಾಂಗ್ರೆಸ್ನ ಕೆಳಮನೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನ ಎಲ್ಲಾ 435 ಸ್ಥಾನಗಳು ಮತ್ತು ಮೇಲ್ಮನೆ ಸೆನೆಟ್ನ ಮೂರನೇ ಒಂದು ಭಾಗದಷ್ಟು ಸದಸ್ಯರ ಆಯ್ಕೆಯಾಗುತ್ತಾರೆ.
ಇದರೊಂದಿಗೆ ಹಲವು ರಾಜ್ಯಗಳಲ್ಲಿ ರಾಜ್ಯಪಾಲರು ಮತ್ತು ಶಾಸಕಾಂಗಕ್ಕೂ ಚುನಾವಣೆ ನಡೆಯುತ್ತದೆ. ಸಾರ್ವಜನಿಕರು ಅತೃಪ್ತರಾದರೆ ರಿಪಬ್ಲಿಕನ್ ಪಕ್ಷಕ್ಕೆ ನಷ್ಟವಾಗುತ್ತದೆ. ಬಹುಮತ ಕಳೆದುಕೊಂಡರೆ ಟ್ರಂಪ್ಗೆ ಕಾನೂನು ಜಾರಿ ಮತ್ತು ನೀತಿಗಳನ್ನು ಮುಂದುವರಿಸುವುದು ಕಷ್ಟವಾಗುತ್ತದೆ. ಇದರೊಂದಿಗೆ, 2 ವರ್ಷಗಳ ನಂತರ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಬೆಂಬಲಿತ ವ್ಯಕ್ತಿಯನ್ನ ಪಕ್ಷದ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕೆ ಇಳಿಸುವುದು ಕಷ್ಟವಾಗುತ್ತದೆ. ಅದರಂತೆ, ಇರಾನ್ ಯುದ್ಧ ಮುಂದುವರಿದರೆ ತಮ್ಮ ಇಮೇಜ್ಗೆ ಧಕ್ಕೆಯಾಗುವ ಭಯ ಟ್ರಂಪ್ಗಿದೆ ಎನ್ನಲಾಗಿದೆ.
ಟ್ರಂಪ್ ವಿವಾದಾತ್ಮಕ ವ್ಯಕ್ತಿಯಾದರೂ, ಡೆಮೋಕ್ರಾಟ್ಗಳು ಇನ್ನೂ ಸ್ಪಷ್ಟ ಪರ್ಯಾಯ ಕಾರ್ಯಸೂಚಿ ಮಂಡಿಸಿಲ್ಲ ಎನ್ನಲಾಗಿದೆ. ಇರಾನ್ ಯುದ್ಧ, ಆರ್ಥಿಕತೆ ಮತ್ತು ಚೀನಾ ವಿರೋಧಿ ನೀತಿಯಂತಹ ವಿಷಯಗಳಲ್ಲಿ ಡೆಮೋಕ್ರಾಟ್ಗಳು ಟ್ರಂಪ್ರನ್ನು ಗುರಿಯಾಗಿಸಬಹುದು. ಯಾಕೆಂದರೆ ಟ್ರಂಪ್ ಸ್ವತಃ ವಿದೇಶಿ ಯುದ್ಧಗಳಿಂದ ದೂರವಿರುವುದಾಗಿ ಹೇಳಿದ್ದರು. ಆದರೆ ಇರಾನ್ ವಿಶ್ವದ ಅತಿದೊಡ್ಡ ಭಯೋತ್ಪಾದನಾ ಪ್ರಾಯೋಜಕ ಎಂದು ವಾದಿಸುತ್ತಾ ರಣಕಣಕ್ಕೆ ಇಳಿದಿದ್ದರು.
ಮುಂದುವರೆದು, ಈ ಮಧ್ಯಂತರ ಚುನಾವಣೆಯಲ್ಲಿ ಆರ್ಥಿಕತೆಯೇ ಪ್ರಮುಖ ವಿಷಯವಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ತಜ್ಞರು, “ಇಂಧನ ಬೆಲೆ ಇಳಿಕೆ, ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಸ್ಥಿತಿ ಸುಧಾರಿಸಿದೆ ಎಂದು ಮತದಾರರು ಭಾವಿಸಿದರೆ ಟ್ರಂಪ್ಗೆ ಲಾಭವಾಗುತ್ತದೆ. ಆದರೆ ಇರಾನ್ ಸಂಘರ್ಷದಿಂದ ಆರ್ಥಿಕ ಅನಿಶ್ಚಿತತೆ ಹೆಚ್ಚಾದರೆ ಮತ್ತು ಸರ್ಕಾರದ ಕಾರ್ಯವೈಖರಿ ಕಳಪೆಯಾಗಿದೆ ಎಂದು ಜನರು ಭಾವಿಸಿದರೆ ರಿಪಬ್ಲಿಕನ್ ನಾಯಕರು ಹಿನ್ನಡೆ ಅನುಭವಿಸಬಹುದು”. ಹೀಗಾಗಿ ಶಾಂತಿ ಒಪ್ಪಂದದಲ್ಲಿ ಇರಾನ್ನ ಬಹುತೇಕ ಷರತ್ತುಗಳಿಗೆ ಅಮೆರಿಕ ಒಪ್ಪಿಕೊಳ್ಳುವ ಸಾಧ್ಯತೆ ಇದೆ.













