Last Updated:
ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಟ್ರೋಲಿಂಗ್ ವಿರುದ್ಧ ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada) ಖ್ಯಾತಿಯ ನಟ ಧ್ರುವಂತ್ (Actor Dhruvanth) ಸಿಡಿದೆದ್ದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಟ್ರೋಲಿಂಗ್ ವಿರುದ್ಧ ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada) ಖ್ಯಾತಿಯ ನಟ ಧ್ರುವಂತ್ (Actor Dhruvanth) ಸಿಡಿದೆದ್ದಿದ್ದಾರೆ. ತಮ್ಮ ಬಗ್ಗೆ ಉದ್ದೇಶಪೂರ್ವಕವಾಗಿ ಅಶ್ಲೀಲ, ಅವಾಚ್ಯ ಹಾಗೂ ಮಾನಹಾನಿಕಾರಕ ಪೋಸ್ಟ್ಗಳನ್ನು ಹರಡಲಾಗುತ್ತಿದೆ ಎಂದು ಆರೋಪಿಸಿರುವ ಅವರು, ಸಂಬಂಧಪಟ್ಟ ಟ್ರೋಲ್ ಪೇಜ್ಗಳ (Troll Pages) ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇತ್ತೀಚೆಗೆ ಧ್ರುವಂತ್ ನೀಡಿದ್ದ ಸಂದರ್ಶನದ ಕೆಲವು ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ಅವುಗಳನ್ನು ತಿರುಚಿ ಅಶ್ಲೀಲವಾಗಿ ಟ್ರೋಲ್ ಮಾಡಲಾಗುತ್ತಿದೆ ಎಂದು ಧ್ರುವಂತ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೆ ಈ ರೀತಿಯ ಪೋಸ್ಟ್ಗಳು ಮತ್ತು ಕಾಮೆಂಟ್ಗಳು ತಮ್ಮ ವೈಯಕ್ತಿಕ ಹಾಗೂ ವೃತ್ತಿಜೀವನಕ್ಕೆ ಹಾನಿ ಉಂಟುಮಾಡುತ್ತಿವೆ ಎಂದು ಆರೋಪಿಸಿದ್ದಾರೆ.
ಧ್ರುವಂತ್ ಸಲ್ಲಿಸಿರುವ ದೂರಿನ ಪ್ರಕಾರ, ತಾವು ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ನಟನಾಗಿ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 12ರ ಫೈನಲಿಸ್ಟ್ ಆಗಿ ಸಮಾಜದಲ್ಲಿ ಗೌರವ ಗಳಿಸಿದ್ದಾರೆ. ಆದರೆ ಕೆಲವು ಸಾಮಾಜಿಕ ಜಾಲತಾಣ ಖಾತೆಗಳು ಉದ್ದೇಶಪೂರ್ವಕವಾಗಿ ತಮ್ಮ ವಿರುದ್ಧ ಅವಾಚ್ಯ, ಅಶ್ಲೀಲ, ಮಾನಹಾನಿಕಾರಕ ಹಾಗೂ ಬೆದರಿಕೆ ಹಾಕುವ ರೀತಿಯ ಪೋಸ್ಟ್ಗಳು, ಕಾಮೆಂಟ್ಗಳು ಮತ್ತು ಸಂದೇಶಗಳನ್ನು ಪ್ರಕಟಿಸುತ್ತಿವೆ ಎಂದು ಆರೋಪಿಸಿದ್ದಾರೆ.
ತಮ್ಮ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದಲೇ ಕೆಲವರು ಸುಳ್ಳು ಆರೋಪಗಳನ್ನು ಹರಡುತ್ತಿದ್ದಾರೆ. ಅವಾಚ್ಯ ಪದಗಳಿಂದ ನಿಂದನೆ ಮಾಡುವುದು, ಸಾರ್ವಜನಿಕವಾಗಿ ಅವಮಾನಿಸುವುದು ಹಾಗೂ ಬೆದರಿಕೆ ಹಾಕುವ ಮೂಲಕ ವೃತ್ತಿಪರ ಬದುಕಿಗೆ ಹಾನಿ ಉಂಟುಮಾಡುತ್ತಿದ್ದಾರೆ ಎಂದು ಧ್ರುವಂತ್ ಆರೋಪಿಸಿದ್ದಾರೆ.
ಈ ಪ್ರಕರಣ ಸಂಬಂಧ ಧ್ರುವಂತ್ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಹಾಗೂ ಬಸವೇಶ್ವರ ನಗರ ಸೈಬರ್ ಸೆಲ್ನಲ್ಲಿ ಅಧಿಕೃತ ದೂರು ಸಲ್ಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದೂರಿನ ಆಧಾರದ ಮೇಲೆ ಮುಂದಿನ ತನಿಖೆ ಕೈಗೊಳ್ಳುವ ಸಾಧ್ಯತೆಯಿದೆ.
Bangalore [Bangalore],Bangalore,Karnataka














