Darshan: ಮಾಫಿ ಸಾಕ್ಷಿ ಹೇಳಿಕೆ ಪ್ರಕ್ರಿಯೆ ಶುರು, ದೇವರ ಹೆಸ್ರಲ್ಲಿ ಪ್ರಮಾಣಿಸಿ ಹೇಳಿಕೆ ಆರಂಭಿಸಿದ ಪ್ರದೋಷ್ | | ACTPnews

News18


Last Updated:

ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ ಹೇಳಿಕೆ ಆರಂಭಿಸಿರುವ ಪ್ರದೋಷ್, ಆರೋಪಿಗಳ ಶರಣಾಗತಿ, ರೇಣುಕಾಸ್ವಾಮಿ ಮೃತದೇಹ ವಿಲೇವಾರಿ ಹಾಗೂ ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಇಂದು ಮಾಹಿತಿ ನೀಡುತ್ತಿದ್ದಾರೆ ಎನ್ನಲಾಗಿದೆ.

News18
News18

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಮಾಫಿ ಸಾಕ್ಷಿಯಾಗಿರುವ ಪ್ರದೋಷ್ ರಾವ್ (Pradosh) ಹೇಳಿಕೆ ದಾಖಲಿಸುವ ಪ್ರಕ್ರಿಯೆ ಇದೀಗ ಮೂರನೇ ದಿನಕ್ಕೆ ಕಾಲಿಟ್ಟಿದೆ. ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಪ್ರದೋಷ್ ಹೇಳಿಕೆ ದಾಖಲಿಸುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಹಲವು ಪ್ರಮುಖ ವಿಚಾರಗಳು ನ್ಯಾಯಾಲಯದ ಮುಂದೆ ಬರುತ್ತಿವೆ. ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ ಹೇಳಿಕೆ ಆರಂಭಿಸಿರುವ ಪ್ರದೋಷ್, ಆರೋಪಿಗಳ ಶರಣಾಗತಿ, ರೇಣುಕಾಸ್ವಾಮಿ ಮೃತದೇಹ ವಿಲೇವಾರಿ ಹಾಗೂ ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಇಂದು ಮಾಹಿತಿ ನೀಡುತ್ತಿದ್ದಾರೆ ಎನ್ನಲಾಗಿದೆ.

ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ ಹೇಳಿಕೆ

ಮಾಫಿ ಸಾಕ್ಷಿಯಾಗಿ ನ್ಯಾಯಾಲಯದ ಮುಂದೆ ಹೇಳಿಕೆ ನೀಡುವ ಸಂದರ್ಭದಲ್ಲಿ ಪ್ರದೋಷ್ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ಪ್ರಕರಣಕ್ಕೆ ಸಂಬಂಧಿಸಿದ ಘಟನೆಗಳ ಕುರಿತು ತಮ್ಮ ಹೇಳಿಕೆಯನ್ನು ದಾಖಲಿಸುವ ಪ್ರಕ್ರಿಯೆ ಮುಂದುವರಿದಿದೆ. ಮಾಫಿ ಸಾಕ್ಷಿಯ ಹೇಳಿಕೆ ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆಯಲ್ಲಿ ಪ್ರಮುಖ ದಾಖಲೆಯಾಗುವ ಸಾಧ್ಯತೆ ಇರುವುದರಿಂದ, ನ್ಯಾಯಾಲಯದ ಮುಂದೆ ನೀಡಲಾಗುತ್ತಿರುವ ಪ್ರತಿಯೊಂದು ಮಾಹಿತಿಯನ್ನೂ ದಾಖಲಿಸಲಾಗುತ್ತಿದೆ.

ಶರಣಾಗತಿ ಬಗ್ಗೆ ಪ್ರದೋಷ್ ಹೇಳಿಕೆ

ಇಂದಿನ ವಿಚಾರಣೆಯಲ್ಲಿ ಪ್ರಕರಣದ ಆರೋಪಿಗಳು ಶರಣಾಗಿರುವ ವಿಚಾರದ ಬಗ್ಗೆಯೂ ಪ್ರದೋಷ್ ಹೇಳಿಕೆ ನೀಡುತ್ತಿದ್ದಾರೆ ಎನ್ನಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯಲ್ಲಿ ಆರೋಪಿಗಳ ಶರಣಾಗತಿ ಹಾಗೂ ನಂತರ ನಡೆದ ಬೆಳವಣಿಗೆಗಳು ಪ್ರಮುಖ ಅಂಶಗಳಾಗಿವೆ. ಈ ಹಿನ್ನೆಲೆಯಲ್ಲಿ ಆ ಸಂದರ್ಭದಲ್ಲಿ ನಡೆದ ಘಟನೆಗಳ ಕುರಿತು ಪ್ರದೋಷ್ ನೀಡುತ್ತಿರುವ ಮಾಹಿತಿಯನ್ನು ನ್ಯಾಯಾಲಯ ದಾಖಲಿಸುತ್ತಿದೆ.

ಬಾಡಿ ಡಿಸ್ಪೋಸಲ್, ಸಾಕ್ಷ್ಯ ನಾಶದ ಬಗ್ಗೆ ವಿಚಾರಣೆ

ರೇಣುಕಾಸ್ವಾಮಿ ಮೃತದೇಹವನ್ನು ವಿಲೇವಾರಿ ಮಾಡಿದ ವಿಚಾರ ಮತ್ತು ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದ ಅಂಶಗಳ ಬಗ್ಗೆಯೂ ಮೂರನೇ ದಿನದ ಹೇಳಿಕೆಯಲ್ಲಿ ಪ್ರದೋಷ್ ಮಾಹಿತಿ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣದ ತನಿಖೆಯ ಪ್ರಮುಖ ಹಂತಗಳಿಗೆ ಸಂಬಂಧಿಸಿದ ಈ ವಿಚಾರಗಳು ನ್ಯಾಯಾಲಯದ ಮುಂದೆ ದಾಖಲಾಗುತ್ತಿರುವುದರಿಂದ, ಪ್ರದೋಷ್ ಹೇಳಿಕೆ ಪ್ರಕ್ರಿಯೆಯತ್ತ ಗಮನ ನೆಟ್ಟಿದೆ.

ಇನ್ ಕ್ಯಾಮೆರಾ ಪ್ರೊಸೀಡಿಂಗ್ಸ್

ಪ್ರದೋಷ್ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಇನ್ ಕ್ಯಾಮೆರಾ ರೀತಿಯಲ್ಲಿ ನಡೆಯುತ್ತಿದೆ. ಹೀಗಾಗಿ ವಿಚಾರಣೆಯ ಸಂಪೂರ್ಣ ವಿವರಗಳು ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ. ಪ್ರಕರಣದ ಆರೋಪಿಗಳು ಮತ್ತು ಅವರ ಪರ ವಕೀಲರಿಗೆ ಮಾತ್ರ ವಿಚಾರಣೆಯ ಸಂದರ್ಭದಲ್ಲಿ ಅವಕಾಶ ನೀಡಲಾಗಿದೆ ಎನ್ನಲಾಗಿದೆ.

ವಿಸಿ ಮೂಲಕ ದರ್ಶನ್, ಪವಿತ್ರಾ ಗೌಡ ಹಾಜರಿ

ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ ಆರೋಪಿಗಳು ವೀಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದಾರೆ.

ವರದಿ- ಮಾದೇಶ್, ಪ್ರತಿನಿಧಿ, ನ್ಯೂಸ್ 18 ಕನ್ನಡ ಬೆಂಗಳೂರು



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports