Darshan: ದರ್ಶನ್‌ಗೆ ಗುಡ್ ನ್ಯೂಸ್! ದಾಸನ ಇದೊಂದು ಬೇಡಿಕೆಗೆ ಅಸ್ತು ಎಂದ ಹೈಕೋರ್ಟ್! | | ACTPnews

News18


Last Updated:

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ನಟ ದರ್ಶನ್ (Darshan) ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆ ಮಹತ್ವದ ತಿರುವು ಪಡೆದುಕೊಂಡಿದೆ.

News18
News18

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ನಟ ದರ್ಶನ್ (Darshan) ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆ ಮಹತ್ವದ ತಿರುವು ಪಡೆದುಕೊಂಡಿದೆ. ಸಾಕ್ಷ್ಯ ವಿಚಾರಣೆ ನಡೆಯುವ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಖುದ್ದು ಹಾಜರಾಗಲು ಅವಕಾಶ ನೀಡಬೇಕು ಎಂದು ದರ್ಶನ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು. ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಪೀಠದ ಮುಂದೆ ಅರ್ಜಿಯ ವಿಚಾರಣೆ ನಡೆದಿದ್ದು, ಸಾಕ್ಷಿಗಳ ಪಾಟೀ ಸವಾಲಿನ ಸಂದರ್ಭದಲ್ಲಿ ದರ್ಶನ್ ಖುದ್ದು ಹಾಜರಾಗಲು ಅವಕಾಶ ನೀಡುವ ಬಗ್ಗೆ ನ್ಯಾಯಾಲಯ ಮಹತ್ವದ ಸೂಚನೆ ನೀಡಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಸದ್ಯ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈ ವಿಚಾರಣೆಯ ಸಂದರ್ಭದಲ್ಲಿ ಕೆಲವು ಸಾಕ್ಷಿಗಳ ಹೇಳಿಕೆ ಮತ್ತು ಪಾಟೀ ಸವಾಲು ನಡೆಯುವ ವೇಳೆ ತಾವು ಖುದ್ದಾಗಿ ನ್ಯಾಯಾಲಯದಲ್ಲಿ ಹಾಜರಾಗಲು ಅವಕಾಶ ನೀಡಬೇಕು ಎಂದು ದರ್ಶನ್ ಪರ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದರು.

ದರ್ಶನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಶುಕ್ರವಾರ ಹೈಕೋರ್ಟ್‌ನಲ್ಲಿ ನಡೆಯಿತು. ಏಳು ಸಾಕ್ಷಿಗಳ ವಿಚಾರಣೆ ನಡೆಯುವ ಸಂದರ್ಭದಲ್ಲಿ ದರ್ಶನ್ ಖುದ್ದು ಹಾಜರಾಗುವುದು ಅಗತ್ಯವಾಗಿದೆ ಎಂದು  ವಕೀಲರು ನ್ಯಾಯಾಲಯದ ಮುಂದೆ ಮನವಿ ಮಾಡಿದರು.

ದರ್ಶನ್ ಪರ ವಕೀಲರು ನಿರ್ದಿಷ್ಟವಾಗಿ ಏಳು ಸಾಕ್ಷಿಗಳ ವಿಚಾರಣೆ ವೇಳೆ ತಮ್ಮ ಕಕ್ಷಿದಾರರು ನ್ಯಾಯಾಲಯದಲ್ಲಿ ಖುದ್ದು ಹಾಜರಾಗಲು ಅವಕಾಶ ನೀಡಬೇಕು ಎಂದು ಕೋರಿದರು. ಸಾಕ್ಷಿಗಳ ಪಾಟೀ ಸವಾಲಿನ ಸಂದರ್ಭದಲ್ಲಿ ಆರೋಪಿಯ ಉಪಸ್ಥಿತಿ ಅಗತ್ಯವಾಗಬಹುದು ಎಂಬ ಕಾರಣವನ್ನು ಅರ್ಜಿಯ ವಿಚಾರಣೆಯ ವೇಳೆ ಮುಂದಿಡಲಾಯಿತು.

ದರ್ಶನ್‌ಗೆ ಖುದ್ದು ಹಾಜರಾಗಲು ಅವಕಾಶ ನೀಡುವ ವಿಚಾರದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಸ್‌ಪಿಪಿ ಪ್ರಸನ್ನ ಕುಮಾರ್ ಕೂಡ ವಾದ ಮಂಡಿಸಿದರು. ದರ್ಶನ್ ಯಾವ ದಿನಗಳಲ್ಲಿ ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕು ಎಂಬುದಕ್ಕೆ ಸೂಕ್ತ ಸಮಯ ಮತ್ತು ದಿನಾಂಕ ನಿಗದಿಪಡಿಸುವಂತೆ ಎಸ್‌ಪಿಪಿ ಮನವಿ ಮಾಡಿದರು.

ವಿಚಾರಣೆಯ ಪ್ರಕ್ರಿಯೆ ಯಾವುದೇ ರೀತಿಯಲ್ಲಿ ವಿಳಂಬವಾಗದಂತೆ ನಿರ್ದಿಷ್ಟ ಸಾಕ್ಷಿಗಳ ವಿಚಾರಣೆಗೆ ಸಂಬಂಧಿಸಿದ ದಿನಗಳಲ್ಲಿ ಮಾತ್ರ ದರ್ಶನ್ ಖುದ್ದು ಹಾಜರಾಗುವ ವ್ಯವಸ್ಥೆ ಇರಬೇಕು ಎಂಬ ವಿಚಾರವೂ ನ್ಯಾಯಾಲಯದ ಮುಂದೆ ಚರ್ಚೆಯಾಯಿತು.

ಇದನ್ನೂ ಓದಿ: Nani in Bengaluru: ಸಿಲಿಕಾನ್​ ಸಿಟಿಗೆ ಬಂದ ಕಿಚ್ಚನ ಫ್ರೆಂಡ್, ಬೆಂಗಳೂರಲ್ಲಿ ನಾನಿ

ದರ್ಶನ್ ಖುದ್ದು ಹಾಜರಾತಿ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಗಳ ಹಿತದೃಷ್ಟಿಯಿಂದ ಇಂತಹ ಅವಕಾಶವನ್ನು ಪರಿಗಣಿಸಬಹುದಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಆದರೆ ಈ ಅವಕಾಶವನ್ನು ಬಳಸಿಕೊಂಡು ವಿಚಾರಣೆಯ ದಿನಾಂಕ ಅಥವಾ ಸಾಕ್ಷಿಗಳ ವಿಚಾರಣೆಯ ಕ್ರಮವನ್ನು ಆರೋಪಿಗಳು ನಿರ್ಧರಿಸುವಂತಾಗಬಾರದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಸಾಕ್ಷಿಗಳ ವಿಚಾರಣೆ ಯಾವ ದಿನ ನಡೆಯಬೇಕು ಎಂದು ಆರೋಪಿಗಳು ನ್ಯಾಯಾಲಯಕ್ಕೆ ಸೂಚಿಸುವಂತಿಲ್ಲ. ನ್ಯಾಯಾಲಯ ನಿಗದಿಪಡಿಸುವ ವೇಳಾಪಟ್ಟಿಯಂತೆ ವಿಚಾರಣೆ ನಡೆಯಬೇಕು ಎಂಬ ಅಂಶವನ್ನು ಪೀಠ ಒತ್ತಿ ಹೇಳಿದೆ.

ವರದಿ: ಮುನಿರಾಜು ಕೆ.ಜಿ ನ್ಯೂಸ್ 18 ಕನ್ನಡ ಪ್ರತಿನಿಧಿ, ಬೆಂಗಳೂರು



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports