Dam Water Level: ಕರ್ನಾಟಕದ ಯಾವ ಡ್ಯಾಂ ತುಂಬಿದೆ? ಯಾವ ಜಲಾಶಯದಲ್ಲಿ ನೀರು ಕಡಿಮೆ? ಇಲ್ಲಿದೆ ಸಂಪೂರ್ಣ ವರದಿ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಜಲಾಶಯಗಳ ಮಟ್ಟ


Last Updated:

ಕರ್ನಾಟಕದ 14 ಪ್ರಮುಖ ಜಲಾಶಯಗಳ ಆಗಸ್ಟ್‌ 1ರ ನೀರಿನ ಮಟ್ಟ ಪ್ರಕಟವಾಗಿದೆ. ಯಾವ ಡ್ಯಾಂ ಭರ್ತಿಯ ಹಂತದಲ್ಲಿದೆ? ಎಲ್ಲಿ ನೀರಿನ ಸಂಗ್ರಹ ಕಡಿಮೆಯಿದೆ? ಒಳಹರಿವು ಹಾಗೂ ಹೊರಹರಿವಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಜಲಾಶಯಗಳ ಮಟ್ಟ
ಜಲಾಶಯಗಳ ಮಟ್ಟ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು (Monsoon) ಚುರುಕುಗೊಂಡ ಬೆನ್ನಲ್ಲೇ ಬಹುತೇಕ ಜಲಾಶಯಗಳಿಗೆ ನೀರಿನ ಒಳಹರಿವು ಏಕಾಏಕಿ ಹೆಚ್ಚಾಗಿದ್ದು,  ಅಧಿಕೃತ ಅಂಕಿ-ಅಂಶಗಳು ಅಕ್ಷರಶಃ ಬೆಚ್ಚಿಬೀಳಿಸುವಂತಿವೆ. ಒಂದೆಡೆ ಪ್ರವಾಹದ ಭೀತಿಯಾದರೆ, ಮತ್ತೊಂದೆಡೆ ನೀರಿಲ್ಲದ ಹಾಹಾಕಾರ! ಹೌದು, ರಾಜ್ಯದ ಪ್ರಮುಖ ಜಲಾಶಯಗಳ (Dam) ಪೈಕಿ ಹಾರಂಗಿ ಜಲಾಶಯವು ಅತ್ಯಧಿಕ ಶೇ. 95ರಷ್ಟು ನೀರಿನ ಸಂಗ್ರಹದೊಂದಿಗೆ ಬಹುತೇಕ ಭರ್ತಿಯಾಗಿ ಅಪಾಯದ ಮುನ್ಸೂಚನೆ ನೀಡುತ್ತಿದೆ. ಇದರ ಬೆನ್ನಲ್ಲೇ ಅಲಮಟ್ಟಿ ಶೇ. 92, ನಾರಾಯಣಪುರ ಶೇ. 89, ವಾಣಿವಿಲಾಸ ಸಾಗರ ಶೇ. 77, ಹೇಮಾವತಿ ಶೇ. 70 ಹಾಗೂ ಘಟಪ್ರಭಾ ಜಲಾಶಯದಲ್ಲಿ ಶೇ. 69ರಷ್ಟು ನೀರಿನ ಸಂಗ್ರಹಣೆಯಾಗಿದ್ದು, ನದಿ ತೀರದ ಜನರಲ್ಲಿ ನಡುಕ ಹುಟ್ಟಿಸಿದೆ.

ಕಬಿನಿಯ ದಾಖಲೆ!

ಕಬಿನಿ ಜಲಾಶಯದ ದಿನಾಂಕ 02-08-2026 ರ ಬೆಳಿಗ್ಗೆ 8.00 ಗಂಟೆಯ ವರದಿಯ ಪ್ರಕಾರ, ಜಲಾಶಯದ ಗರಿಷ್ಠ ಮಟ್ಟವು 2284.00 ಅಡಿಗಳಾಗಿದ್ದು, ಇಂದಿನ ನೀರಿನ ಮಟ್ಟ 2281.95 ಅಡಿಗಳಷ್ಟಿದೆ (ಕಳೆದ ವರ್ಷ ಇದೇ ದಿನ 2281.72 ಅಡಿ ಇತ್ತು). ಜಲಾಶಯದ ಗರಿಷ್ಠ ಸಂಗ್ರಹಣಾ ಸಾಮರ್ಥ್ಯ 19.52 ಟಿಎಂಸಿ ಆಗಿದ್ದು, ಇಂದಿನ ಒಟ್ಟು ನೀರಿನ ಸಂಗ್ರಹ 18.20 ಟಿಎಂಸಿ (ಕಳೆದ ವರ್ಷ 18.07 ಟಿಎಂಸಿ) ಹಾಗೂ ಬಳಕೆಗೆ ಲಭ್ಯವಿರುವ (ಲೈವ್) ನೀರಿನ ಪ್ರಮಾಣ 8.39 ಟಿಎಂಸಿ (ಕಳೆದ ವರ್ಷ 8.26 ಟಿಎಂಸಿ) ಇದೆ. ಜಲಾಶಯಕ್ಕೆ ಒಟ್ಟು 23,009 ಕ್ಯೂಸೆಕ್ಸ್ ಒಳಹರಿವಿದ್ದು (ಕಳೆದ ವರ್ಷ 7,080 ಕ್ಯೂಸೆಕ್ಸ್), ನದಿಗೆ 9,958 ಕ್ಯೂಸೆಕ್ಸ್ (ಕಳೆದ ವರ್ಷ 500 ಕ್ಯೂಸೆಕ್ಸ್) ನೀರನ್ನು ಹರಿಸಲಾಗುತ್ತಿದೆ. ಎಡದಂಡೆ (LBC) ಮತ್ತು ಬಲದಂಡೆ (RBC) ನಾಲೆಗಳಿಗೆ ಇಂದು ಯಾವುದೇ ನೀರನ್ನು ಬಿಟ್ಟಿಲ್ಲ (0 ಕ್ಯೂಸೆಕ್ಸ್), ಆದರೆ ಕಳೆದ ವರ್ಷ ಇದೇ ದಿನ ನಾಲೆಗಳಿಗೆ ಒಟ್ಟು 500 ಕ್ಯೂಸೆಕ್ಸ್ ನೀರನ್ನು ಬಿಡಲಾಗಿತ್ತು. ಅಂತೆಯೇ, ಲಿಫ್ಟ್ ಮೂಲಕವೂ ಯಾವುದೇ ನೀರನ್ನು ಹರಿಸಲಾಗಿಲ್ಲ (0 ಕ್ಯೂಸೆಕ್ಸ್). ಜಲಾಶಯದ ಒಟ್ಟು ಹೊರಹರಿವು 9,958 ಕ್ಯೂಸೆಕ್ಸ್ (ಕಳೆದ ವರ್ಷ 5,500 ಕ್ಯೂಸೆಕ್ಸ್) ಆಗಿದೆ. ಇದಲ್ಲದೆ, 9.95 ಎಂಸಿಎಫ್‌ಟಿ (mcft) ಯಷ್ಟು ನೀರು ಆವಿಯಾಗಿ ನಷ್ಟವಾಗಿದ್ದು, ಜಲಾಶಯದ ವ್ಯಾಪ್ತಿಯಲ್ಲಿ ಒಟ್ಟು 70 ಎಂಎಂ ಮಳೆಯಾಗಿರುತ್ತದೆ.

ಮಲೆನಾಡು-ಕರಾವಳಿ ಭಾಗದ ಡ್ಯಾಂಗಳಲ್ಲಿ ನೀರಿಲ್ಲ

ಆದರೆ, ನಾಣ್ಯಕ್ಕೊಂದು ಎರಡನೇ ಮುಖವಿರುವಂತೆ, ಮಲೆನಾಡು ಹಾಗೂ ಕರಾವಳಿ ಭಾಗದ ಪ್ರಮುಖ ಡ್ಯಾಂಗಳ ಕಥೆ ಕೇಳಿದರೆ ನೀವೇ ಶಾಕ್ ಆಗ್ತೀರಾ! ರಾಜ್ಯಕ್ಕೆ ಬೆಳಕು ನೀಡುವ ಲಿಂಗನಮಕ್ಕಿ ಜಲಾಶಯದಲ್ಲಿ ಕೇವಲ ಶೇ. 34ರಷ್ಟು ನೀರಿದ್ದರೆ, ವರಾಹಿ ಶೇ. 36, ತುಂಗಭದ್ರಾ ಶೇ. 37, ಸೂಪಾ ಶೇ. 39, ಮಲಪ್ರಭಾ ಶೇ. 42 ಹಾಗೂ ಭದ್ರಾ ಜಲಾಶಯದಲ್ಲಿ ಕೇವಲ ಶೇ. 56ರಷ್ಟು ಮಾತ್ರ ನೀರಿನ ಸಂಗ್ರಹ ದಾಖಲಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಜಲಾಶಯಗಳಿಗೆ ಹರಿದುಬರುತ್ತಿರುವ ಪ್ರಚಂಡ ಒಳಹರಿವಿನ ಲೆಕ್ಕಾಚಾರ ನೋಡಿದರೆ ಎದೆ ಝಲ್ ಎನ್ನುತ್ತದೆ! ಆಗಸ್ಟ್ 1ರಂದು ನಾರಾಯಣಪುರ ಡ್ಯಾಂಗೆ ಬರೋಬ್ಬರಿ 1,11,645 ಕ್ಯೂಸೆಕ್, ಅಲಮಟ್ಟಿಗೆ 92,500 ಕ್ಯೂಸೆಕ್, ಲಿಂಗನಮಕ್ಕಿಗೆ 38,183 ಕ್ಯೂಸೆಕ್, ಸೂಪಾಗೆ 26,004 ಕ್ಯೂಸೆಕ್, ತುಂಗಭದ್ರಾಕ್ಕೆ 22,051 ಕ್ಯೂಸೆಕ್, ಘಟಪ್ರಭಾಗೆ 17,004 ಕ್ಯೂಸೆಕ್, ಕೆಆರ್‌ಎಸ್‌ಗೆ 13,522 ಕ್ಯೂಸೆಕ್, ಭದ್ರಾಗೆ 12,983 ಕ್ಯೂಸೆಕ್, ಕಬಿನಿಗೆ 11,747 ಕ್ಯೂಸೆಕ್ ಹಾಗೂ ಹೇಮಾವತಿಗೆ 11,686 ಕ್ಯೂಸೆಕ್‌ನಷ್ಟು ಬೃಹತ್ ಪ್ರಮಾಣದ ಒಳಹರಿವು ದಾಖಲಾಗಿದೆ.

ಜಲಾನಯನ ಪ್ರದೇಶವಾರು ಲೆಕ್ಕಾಚಾರ

ಡ್ಯಾಂಗಳ ಸುರಕ್ಷತೆಗಾಗಿ ಇದೇ ವೇಳೆ ನದಿಗಳಿಗೆ ಅಪಾರ ಪ್ರಮಾಣದ ನೀರನ್ನು ಹರಿಸಲಾಗುತ್ತಿದ್ದು, ನಾರಾಯಣಪುರದಿಂದ 1,11,645 ಕ್ಯೂಸೆಕ್, ಅಲಮಟ್ಟಿಯಿಂದ 1,10,433 ಕ್ಯೂಸೆಕ್, ಹಾರಂಗಿಯಿಂದ 10,058 ಕ್ಯೂಸೆಕ್, ತುಂಗಭದ್ರಾದಿಂದ 3,003 ಕ್ಯೂಸೆಕ್, ಲಿಂಗನಮಕ್ಕಿಯಿಂದ 2,032 ಕ್ಯೂಸೆಕ್, ಕೆಆರ್‌ಎಸ್‌ನಿಂದ 1,565 ಕ್ಯೂಸೆಕ್ ಹಾಗೂ ಘಟಪ್ರಭಾ ಜಲಾಶಯದಿಂದ 1,556 ಕ್ಯೂಸೆಕ್ ನೀರನ್ನು ದಿಢೀರನೆ ಹೊರಬಿಡಲಾಗಿದೆ. ಇನ್ನು ಜಲಾನಯನ ಪ್ರದೇಶವಾರು ಲೆಕ್ಕಾಚಾರವನ್ನು ಬಿಡಿಸಿ ಹೇಳುವುದಾದರೆ, 328.21 ಟಿಎಂಸಿ ಸಾಮರ್ಥ್ಯದ ಹೈಡಲ್ ಜಲಾಶಯಗಳಲ್ಲಿ ಸದ್ಯ 119.31 ಟಿಎಂಸಿ (ಶೇ. 36), 114.57 ಟಿಎಂಸಿ ಸಾಮರ್ಥ್ಯದ ಕಾವೇರಿ ಜಲಾನಯನದಲ್ಲಿ 69.91 ಟಿಎಂಸಿ (ಶೇ. 61) ಹಾಗೂ 422.45 ಟಿಎಂಸಿ ಸಾಮರ್ಥ್ಯದ ಕೃಷ್ಣಾ ಜಲಾನಯನದಲ್ಲಿ 272.73 ಟಿಎಂಸಿ (ಶೇ. 65) ನೀರು ಸಂಗ್ರಹವಾಗಿದೆ.

ಪಾತಾಳಕ್ಕಿಳಿದ ನೀರಿನ ಪ್ರಮಾಣ!

ಇದನ್ನೂ ಓದಿ: ISRO Jobs: ಇಸ್ರೋದಲ್ಲಿ ಬೃಹತ್‌ ನೇಮಕಾತಿ; ಡಿಪ್ಲೋಮಾ ಆಗಿದ್ದರೂ ಸಾಕು, ಅರ್ಜಿ ಶುಲ್ಕವೂ ಇಲ್ಲ! ಅಪ್ಲೈ ಮಾಡುವುದು ಹೇಗೆ?

ಒಟ್ಟಾರೆಯಾಗಿ ಹೇಳುವುದಾದರೆ, ರಾಜ್ಯದ 14 ಪ್ರಮುಖ ಜಲಾಶಯಗಳ ಒಟ್ಟು ಸಾಮರ್ಥ್ಯ 895.65 ಟಿಎಂಸಿ ಆಗಿದ್ದು, ಆಗಸ್ಟ್‌ 1ರ ವೇಳೆಗೆ 485.38 ಟಿಎಂಸಿ (ಶೇ. 54ರಷ್ಟು) ಮಾತ್ರ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ ಬರೋಬ್ಬರಿ 727.14 ಟಿಎಂಸಿ ನೀರು ಸಂಗ್ರಹವಾಗಿತ್ತು ಎಂಬುದನ್ನು ನೆನಪಿಸಿಕೊಂಡರೆ, ಈ ಬಾರಿ ನೀರಿನ ಪ್ರಮಾಣ ಎಷ್ಟೊಂದು ಪಾತಾಳಕ್ಕಿಳಿದಿದೆ ಎಂಬ ಸತ್ಯ ಅರಿವಾಗುತ್ತದೆ. ಆದರೆ, ವರುಣನ ಕೃಪೆ ಮುಂದುವರಿದಿರುವುದರಿಂದ ಮುಂದಿನ ದಿನಗಳಲ್ಲಿ ಡ್ಯಾಂಗಳ ಮುಖಂಡಗಳು ಬದಲಾಗುವ ಸಂಪೂರ್ಣ ನಿರೀಕ್ಷೆಯಿದೆ!



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports