Last Updated:
ಏನೆಂದರೆ ಏನೂ ಸುಳಿವು ಸಿಗದೆ ಪತ್ತೆಯಾಗದ ಮೃತದೇಹದಲ್ಲಿ ಪೊಲೀಸರು ಗಮನಿಸಿದ್ದು ಆಕೆಯ ಕೈಯಲ್ಲಿದ್ದ ಟ್ಯಾಟೂವನ್ನು. ಮೃತ ಮಹಿಳೆಯ ಕೈಮೇಲೆ ಒಡಿಶಾ ಭಾಷೆಯಲ್ಲಿ ಇದ್ದ ಟ್ಯಾಟೂನಲ್ಲಿ ‘ಜಗನ್’ ಎಂದು ಬರೆಯಲಾಗಿತ್ತು.
ಕೊಯಮತ್ತೂರು: ಕಳೆದ ಜೂನ್ 24ರಂದು ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಕೊವೈ ಪುದೂರಿನ ಮುಳ್ಳಿನ ಪೊದೆಗಳೊಳಗೆ (Crime News) ಅರೆಬೆತ್ತಲೆ ಸ್ಥಿತಿಯಲ್ಲಿ ಮಹಿಳೆಯೊಬ್ಬಳ ಶವ ಪತ್ತೆಯಾಗಿತ್ತು. ಸಣ್ಣ ಸುಳಿವು ಸಿಗದ ರೀತಿಯಲ್ಲಿ ಪತ್ತೆಯಾದ ಅಪರಿಚಿತ ಶವದ ಬೆನ್ನು ಹತ್ತಿದ ಪೊಲೀಸರು ಒಂದು ವಾರದ ಬಳಿಕ ಆಘಾತಕಾರಿ ಅಂಶವನ್ನು ಪತ್ತೆ ಹಚ್ಚಿದ್ದಾರೆ.
ಕಳೆದ ಜೂನ್ 24ರಂದು ಕೊವೈ ಪುದೂರಿನ ಮುಳ್ಳಿನ ಪೊದೆಗಳೊಳಗೆ ಅರೆಬೆತ್ತಲೆ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಮದುಕ್ಕರೈ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜಪ್ಪಲ್ಲಂ ಉತ್ತರ ಪ್ರದೇಶದ ಎಂಜಿಆರ್ ನಗರ ರಸ್ತೆಯಲ್ಲಿರುವ ಖಾಸಗಿ ಕಾಲೇಜಿನ ಬಳಿ ಬೆಳಿಗ್ಗೆ 10.40 ರ ಸುಮಾರಿಗೆ ಮೃತದೇಹ ಪತ್ತೆಯಾಗಿತ್ತು.
ಪ್ರಾಥಮಿಕ ತನಿಖೆಯ ಪ್ರಕಾರ, ಪೊಲೀಸರಿಗೆ ಯಾವುದೇ ಒಂದು ಕುರುಹು ಪತ್ತೆಯಾಗಿರಲಿಲ್ಲ. ಮೃತರ ವಯಸ್ಸು 25 ರಿಂದ 35 ವರ್ಷ ಎಂದು ಪೊಲೀಸರು ಊಹಿಸಿದ್ದರು. ಕೊಳೆಯುವ ಹಂತಕ್ಕೆ ತಲುಪಿದ್ದ ಮಹಿಳೆಯ ಮೃತದೇಹವನ್ನು ಗಮನಿಸಿದ ಪೊಲೀಸರು ಸುಮಾರು ಎರಡು ದಿನಗಳ ಹಿಂದೆ ಸಾವನ್ನಪ್ಪಿರಬಹುದು ಎಂದು ಶಂಕಿಸಿದ್ದರು.
ಈ ಬಗ್ಗೆ ಅದೇ ದಿನ ಮಾಹಿತಿ ನೀಡಿದ್ದ ಕೊಯಮತ್ತೂರು ಗ್ರಾಮೀಣ ಎಸ್ಪಿ ಎ ಪವನ್ ಕುಮಾರ್ ರೆಡ್ಡಿ, ‘ದೇಹದ ಮೇಲೆ ಯಾವುದೇ ಗಾಯಗಳು ಗೋಚರಿಸುತ್ತಿಲ್ಲ. ತನಿಖೆ ನಡೆಯುತ್ತಿದೆ. ತನಿಖೆಯ ಭಾಗವಾಗಿ ಪೊಲೀಸರು ಹತ್ತಿರದ ಪ್ರದೇಶಗಳಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೊಯಮತ್ತೂರು ಇಎಸ್‌ಐ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದಷ್ಟೇ ಹೇಳಿದ್ದರು.
ಆದರೆ ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಜುಲೈ 5ರ ಭಾನುವಾರ ಕೊನೆಗೂ ಒಡಿಶಾ ಮೂಲದ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು ಈ ಪ್ರಕರಣಕ್ಕೆ ತೆರೆ ಎಳೆದಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮದುಕ್ಕರೈ ಪೊಲೀಸರು 5000ಕ್ಕೂ ಹೆಚ್ಚು ಫೋನ್ ಕರೆಗಳು, 200 ಸಿಸಿ ಟಿವಿ ಫೂಟೇಜ್‌ಗಳು ಮತ್ತು ಮೊಬೈಲ್ ಟವರ್ ಡೇಟಾವನ್ನು ಪರಿಶೀಲಿಸಿ ಈ ಕೇಸ್‌ಗೆ ತೆರೆ ಎಳೆದಿದ್ದಾರೆ.
ಏನೆಂದರೆ ಏನೂ ಸುಳಿವು ಸಿಗದೆ ಪತ್ತೆಯಾಗದ ಮೃತದೇಹದಲ್ಲಿ ಪೊಲೀಸರು ಗಮನಿಸಿದ್ದು ಆಕೆಯ ಕೈಯಲ್ಲಿದ್ದ ಟ್ಯಾಟೂವನ್ನು. ಮೃತ ಮಹಿಳೆಯ ಕೈಮೇಲೆ ಒಡಿಶಾ ಭಾಷೆಯಲ್ಲಿ ಇದ್ದ ಟ್ಯಾಟೂನಲ್ಲಿ ‘ಜಗನ್’ ಎಂದು ಬರೆಯಲಾಗಿತ್ತು. ಟ್ಯಾಟೂ ಮತ್ತು ಭಾಷೆ ಪೊಲೀಸರನ್ನು ಒಡಿಶಾದತ್ತ ದೃಷ್ಟಿ ನೆಡುವಂತೆ ಮಾಡಿದೆ. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಫೋನ್ ಕರೆ, ಮೊಬೈಲ್ ಟವರ್ ಮತ್ತು ಸಿಸಿಟಿವಿ ದೃಶ್ಯ ಆಧರಿಸಿ ಮೃತ ಮಹಿಳೆಯ ಗಂಡ ಜಗನ್ನಾಥ್ ಪ್ರಧಾನ್ ಎಂಬಾತನನ್ನು ಒಡಿಶಾದಲ್ಲಿ ಬಂಧಿಸಿದ್ದಾರೆ.
ಈ ವೇಳೆ ಬಾಯ್ಬಿಟ್ಟಿರುವ ಮಹಿಳೆಯ ಗಂಡ ಜಗನ್ನಾಥ್ ಪ್ರಧಾನ್, ತನ್ನ ಪತ್ನಿ ಇತರ ಪುರುಷರೊಂದಿಗೆ ಮಾತನಾಡುತ್ತಿದ್ದಾಳೆ ಎಂಬ ಸಂಶಯದಿಂದ ಉಸಿರು ಕಟ್ಟಿಸಿ ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ. ಹೀಗಾಗಿ ಸಂದೇಹಾಸ್ಪದ ಸಾವು ಎಂದು ದಾಖಲಾಗಿದ್ದ ಈ ಪ್ರಕರಣವನ್ನು ಈಗ ಪೊಲೀಸರು ಕೊಲೆ ಪ್ರಕರಣ ಎಂದು ನಿರ್ಧಾರಕ್ಕೆ ಬಂದಿದ್ದಾರೆ.
Madukkarai,Coimbatore,Tamil Nadu
Jul 06, 2026 12:15 PM IST













