Last Updated:
ಗುಜರಾತ್ನಲ್ಲಿ ಹೇಳ ಹೆಸರಿಲ್ಲದಂತಾಗಿರುವ ಕಾಂಗ್ರೆಸ್ ಪಾರ್ಟಿ, ಚುನಾವಣೆಯನ್ನು ಗೆಲ್ಲಲು ಪಣ ತೊಟ್ಟಿದೆ. ಎಲೆಕ್ಷನ್ ಗೆಲ್ಲಲು ಹಾಲಿವುಡ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ಗಾಂಧಿನಗರ ಮಹಾನಗರ ಪಾಲಿಕೆ (GMC) ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ರಂಗೇರಿದೆ. ಬಿಜೆಪಿ (BJP), ಕಾಂಗ್ರೆಸ್ (Congress) ಮತ್ತು ಆಮ್ ಆದ್ಮಿ ಪಕ್ಷ ತಮ್ಮ ಪ್ರಚಾರವನ್ನು ತೀವ್ರಗೊಳಿಸಿವೆ. ಗುಜರಾತ್ನಲ್ಲಿ (Gujarat) ಹೇಳ ಹೆಸರಿಲ್ಲದಂತಾಗಿರುವ ಕಾಂಗ್ರೆಸ್ ಪಾರ್ಟಿ, ಸ್ಥಳೀಯ ಚುನಾವಣೆಯನ್ನು ಗೆಲ್ಲಲು ಪಣ ತೊಟ್ಟಿದೆ. ಎಲೆಕ್ಷನ್ ಗೆಲ್ಲಲು ಹಾಲಿವುಡ್ (Hollywood) ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಕುಡಾಸನ್ನ ಇಂದ್ರಧನುಷ್ ಸೊಸೈಟಿಯಲ್ಲಿ ವಾಸಿಸುತ್ತಿರುವ ಧ್ರುವ ಪಟೇಲ್, ಪ್ರದರ್ಶನ ಕಲೆಗಳಲ್ಲಿ (Performing Arts) ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಟನೆಯ ಜೊತೆಗೆ ಸಮಾಜಮುಖಿ ಕೆಲಸಗಳು ಮತ್ತು ಪ್ರಾಣಿ ಕಲ್ಯಾಣ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸುಮಾರು ಎರಡು ಲಕ್ಷಕ್ಕೂ ಅಧಿಕ ಫಾಲೋವರ್ಗಳನ್ನು ಹೊಂದಿರುವ ಇವರ ಜನಪ್ರಿಯತೆ, ಈಗ ಚುನಾವಣಾ ಕಣದಲ್ಲಿ ಇವರಿಗೆ ಪ್ಲಸ್ ಪಾಯಿಂಟ್ ಆಗಿದೆ.
ಧ್ರುವ್ ಪಟೇಲ್ ಅವರ ಸಿನಿಪಯಣವು ಸಾಕಷ್ಟು ರೋಚಕವಾಗಿದೆ. ಬಾಲಿವುಡ್ ಸ್ಟಾರ್ ರಣದೀಪ್ ಹೂಡಾ ನಟಿಸಿದ್ದ ಜನಪ್ರಿಯ ಹಾಲಿವುಡ್ ಚಿತ್ರ ‘ಎಕ್ಸ್ಟ್ರಾಕ್ಷನ್’ ಚಿತ್ರದಲ್ಲಿ ಧ್ರುವ್ ಪ್ರಮುಖವಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ, ಗುಜರಾತಿ ಚಲನಚಿತ್ರ ‘ಸ್ನೇಹ್ನಾ ಸಗ್ಪನ್’ ನಲ್ಲೂ ನಟಿಸಿರುವ ಇವರು, ಖ್ಯಾತ ನಟ ಅನುಪಮ್ ಖೇರ್ ಅವರ ನಟನೆ ತರಬೇತಿ ತಂಡದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.
ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿರುವ ಧ್ರುವ್ ಪಟೇಲ್, ತಮ್ಮ ಜೀವನದುದ್ದಕ್ಕೂ ಬಿಜೆಪಿಯ ಆಡಳಿತವನ್ನೇ ನೋಡಿದ್ದು, ಚುನಾವಣಾ ಸಮಯದ ಭರವಸೆಗಳಿಗೂ ಮತ್ತು ವಾಸ್ತವ ನೆಲಮಟ್ಟದ ಪರಿಸ್ಥಿತಿಗೂ ಬಹಳ ವ್ಯತ್ಯಾಸವಿದೆ ಎಂಬುದನ್ನು ಮನಗಂಡು ಕಾಂಗ್ರೆಸ್ ಸೇರಿದ್ದಾಗಿ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಹೆಚ್ಚಿನ ಸ್ವಾತಂತ್ರ್ಯವಿದೆ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಇದೇ ಅಕ್ಟೋಬರ್ 11 ರಂದು ನಡೆಯಲಿರುವ ಗಾಂಧಿನಗರ ಮಹಾನಗರ ಪಾಲಿಕೆ ಚುನಾವಣೆಗೆ ಮೂರು ಪಕ್ಷಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ನಟನೆ, ಸೋಶಿಯಲ್ ಮೀಡಿಯಾ ಸ್ಟಾರ್ ಗಿರಿಯಿಂದ ಹಿಡಿದು ಸಮಾಜ ಸೇವೆಯವರೆಗೆ ವಿಭಿನ್ನ ಹಾದಿ ಮೂಲಕ ಬಂದಿರುವ ಧ್ರುವ್ ಪಟೇಲ್ ಅವರ ಈ ಮೊದಲ ಚುನಾವಣಾ ರಾಜಕೀಯ ಪ್ರವೇಶವು ವಾರ್ಡ್ 9 ರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಅಕ್ಟೋಬರ್ 13 ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಹೊರಬೀಳಲಿದೆ.














