Last Updated:
ಬ್ರೆಂಡನ್ ಮೆಕಲಮ್ 2022ರಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ಹೆಡ್ ಕೋಚ್ ಆಗಿ ನೇಮಕವಾದ ನಂತರ ‘ಬಾಜ್‌ಬಾಲ್’ ಎಂಬ ಹೊಸ ಆಟದ ಶೈಲಿಯನ್ನು ಪರಿಚಯಿಸಿದ್ದರು. ಧೈರ್ಯಶಾಲಿ ಬ್ಯಾಟಿಂಗ್, ಆಕ್ರಮಣಕಾರಿ ಬೌಲಿಂಗ್ ಮತ್ತು ಗೆಲ್ಲುವ ಮನೋಭಾವವನ್ನು ತಂಡದಲ್ಲಿ ಬೆಳೆಸಿದ್ದರು.
ವಿಶ್ವಚಾಂಪಿಯನ್ ಭಾರತದ ವಿರುದ್ಧ 4-0ಯಲ್ಲಿ ಟಿ20 ಸರಣಿ (T20 Series) ಗೆದ್ದ ನಂತರವೂ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಅಚ್ಚರಿ ನಿರ್ಧಾರ ತೆಗೆದುಕೊಂಡಿದೆ. ಸಮ್ಮರ್ ಟೆಸ್ಟ್ ಸೀಸನ್ (Test Season) ಆರಂಭಕ್ಕೂ ಮುನ್ನವೇ ತಂಡದ ಹೆಡ್ ಕೋಚ್ ಬ್ರೆಂಡನ್ ಮೆಕಲಮ್ ಅವರನ್ನ ಟೆಸ್ಟ್ ತಂಡದ ಟೆಸ್ಟ್ ಹೆಡ್ ಕೋಚ್ ಹುದ್ದೆಯಿಂದ ಕೆಳಗಿಳಿಸಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ (ECB) ಇದನ್ನು ಭಾನುವಾರ ಸಂಜೆ ಈ ಮಾಹಿತಿಯನ್ನ ದೃಢಪಡಿಸಿದೆ. ಆಶ್ಚರ್ಯವೆಂದರೆ ಮೆಕಲಮ್ ಟೆಸ್ಟ್ ತಂಡದ ಜವಾಬ್ದಾರಿಯಿಂದ ಹೊರಗುಳಿದರೂ, ವೈಟ್ ಬಾಲ್ (ಏಕದಿನ ಮತ್ತು ಟಿ20) ತಂಡಗಳೊಂದಿಗೆ ಮುಂದುವರಿಯಲಿದ್ದಾರೆ ಎಂದು ಹೇಳಿಕೆಯಲ್ಲಿ ಇಸಿಬಿ ತಿಳಿಸಿದೆ.
ಬ್ರೆಂಡನ್ ಮೆಕಲಮ್ 2022ರಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ಹೆಡ್ ಕೋಚ್ ಆಗಿ ನೇಮಕವಾದ ನಂತರ ‘ಬಾಜ್‌ಬಾಲ್’ ಎಂಬ ಹೊಸ ಆಟದ ಶೈಲಿಯನ್ನು ಪರಿಚಯಿಸಿದ್ದರು. ಧೈರ್ಯಶಾಲಿ ಬ್ಯಾಟಿಂಗ್, ಆಕ್ರಮಣಕಾರಿ ಬೌಲಿಂಗ್ ಮತ್ತು ಗೆಲ್ಲುವ ಮನೋಭಾವವನ್ನು ತಂಡದಲ್ಲಿ ಬೆಳೆಸಿದ್ದರು. ಇದರಿಂದ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್‌ನಲ್ಲಿ ಹಲವು ಸ್ಮರಣೀಯ ಕ್ಷಣಗಳನ್ನು ಸೃಷ್ಟಿಸಿತು. ಆದರೆ ಇತ್ತೀಚಿನ ದಿನಗಳಲ್ಲಿ ತಂಡದ ಫಲಿತಾಂಶಗಳು ನಿರಾಶಾದಾಯಕವಾಗಿದ್ದವು. ಇದರ ಜೊತೆಗೆ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದು ದೊಡ್ಡ ಆಘಾತವಾಯಿತು. ಸ್ಟೋಕ್ಸ್ ಅವರು ನೈಟ್‌ಕ್ಲಬ್ ಘಟನೆಯ ನಂತರ ಎರಡನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದರು.
ಆರಂಭದಲ್ಲಿ ಬಾಜ್‌ಬಾಲ್ ಶೈಲಿಯಿಂದ ಸತತ ಗೆಲುವು ಸಾಧಿಸಿದ್ದರೂ, ಇತ್ತೀಚಿನ ದಿನಗಳಲ್ಲಿ ಇಂಗ್ಲೆಂಡ್ ತಂಡದ ಪ್ರದರ್ಶನ ತೀರಾ ಕಳಪೆಯಾಗಿತ್ತು. ಇಂಗ್ಲೆಂಡ್ ತಂಡ ತನ್ನ ಕೊನೆಯ 12 ಟೆಸ್ಟ್ ಪಂದ್ಯಗಳಲ್ಲಿ 8 ಪಂದ್ಯಗಳನ್ನು ಸೋತು, ಕೇವಲ 3 ಪಂದ್ಯಗಳನ್ನಷ್ಟೇ ಗೆದ್ದಿದೆ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲೇ ನಡೆದ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 1-2 ರಿಂದ ಐತಿಹಾಸಿಕ ಸೋಲು ಅನುಭವಿಸಿತು. ಇದು ಮೆಕಲಂ ಅವರ ವಜಾಕ್ಕೆ ತಕ್ಷಣದ ಕಾರಣವಾಯಿತು. ಇದಕ್ಕೂ ಮುನ್ನ ನಡೆದ ಆಶಸ್ (Ashes) ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 1-4 ರ ಭಾರಿ ಸೋಲನ್ನು ಇಂಗ್ಲೆಂಡ್ ಕಂಡಿತ್ತು.
ಇಂಗ್ಲೆಂಡ್ ಪುರುಷ ತಂಡದ ಮ್ಯಾನೇಜಿಂಗ್ ಡೈರೆಕ್ಟರ್ ರಾಬರ್ಟ್ ಕೀ ಅವರು ಮೆಕಲಮ್ ಅವರ ಕೊಡುಗೆಯನ್ನು ಹೊಗಳಿದ್ದಾರೆ. “ಇಂಗ್ಲೆಂಡ್ ತಂಡದ ಇತ್ತೀಚಿನ ಇತಿಹಾಸದಲ್ಲಿ ಅನೇಕ ಸ್ಮರಣೀಯ ಕ್ಷಣಗಳು ಬ್ರೆಂಡನ್ ಮುಂದಾಳತ್ವದಲ್ಲಿ ನಡೆದಿವೆ. ತಂಡದ ಮನೋಭಾವವನ್ನು ಬದಲಾಯಿಸಿದ ಅವರು ಹೊಸ ತಲೆಮಾರಿನ ಆಟಗಾರರನ್ನು ಬೆಳೆಸಿದ್ದಾರೆ. ಅವರು ಟೆಸ್ಟ್ ತಂಡವನ್ನು ಉತ್ತಮ ಸ್ಥಿತಿಗೆ ತಂದು ಬಿಟ್ಟು ಹೋಗುತ್ತಿದ್ದಾರೆ” ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
“ಟೆಸ್ಟ್ ತಂಡವನ್ನು ಕೋಚಿಂಗ್ ಮಾಡುವುದು ನನಗೆ ಬಹಳ ಇಷ್ಟವಾಗಿತ್ತು. ನಾವು ಒಟ್ಟಿಗೆ ಸಾಧಿಸಿದ ವಿಷಯಗಳ ಬಗ್ಗೆ ಅತ್ಯಂತ ಹೆಮ್ಮೆಯಿದೆ. ನಾವು ಈ ಪಯಣದಲ್ಲಿ ಅದ್ಭುತ ಎತ್ತರಗಳನ್ನ ಮತ್ತು ಕೆಲವು ಕಷ್ಟದ ದಿನಗಳನ್ನ ಕಳೆದಿದ್ದೇವೆ. ಇದು ಈಗಿನ ತಂಡಕ್ಕೆ ಗೌರವ ಮತ್ತು ಸಂತೋಷದ ವಿಷಯ. ಆಟಗಾರರು, ಸಿಬ್ಬಂದಿ ಮತ್ತು ಅಭಿಮಾನಿಗಳಿಗೆ ಧನ್ಯವಾದಗಳು. ಟೆಸ್ಟ್ ತಂಡದಲ್ಲಿ ಬಹಳ ಟ್ಯಾಲೆಂಟ್ ಇದೆ. ಅವರು ಭವಿಷ್ಯದಲ್ಲಿ ಯಶಸ್ಸು ಕಾಣುತ್ತಾರೆ ಎಂದು ನಂಬುತ್ತೇನೆ” ಎಂದು ಹೇಳಿದ್ದಾರೆ.
ಈಗ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಹೆಡ್ ಕೋಚ್ ಮತ್ತು ನಾಯಕ ಇಬ್ಬರೂ ಇಲ್ಲ. ಮ್ಯಾನೇಜಿಂಗ್ ಡೈರೆಕ್ಟರ್ ರಾಬರ್ಟ್ ಕೀ ಅವರ ಮೇಲೆ ಒತ್ತಡ ಹೆಚ್ಚಾಗಿದೆ. ಬಾಜ್ ಬಾಲ್ ಯುಗದ ಅಂತ್ಯವಾಗುತ್ತಿದೆ ಎಂಬುದು ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ. ಮುಂದೆ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ಹೇಗೆ ಮುಂದುವರಿಯುತ್ತದೆ ಎಂಬುದನ್ನು ಅಭಿಮಾನಿಗಳು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ.














