ಮೆಟ್ರೋ ರೀತಿಯ ಬೋಗಿಗಳು, ಇದರ ವಿಶೇಷತೆಗಳೇನು?
ಲಗೇಜ್ ಇಡಲು ರ್ಯಾಕ್ಗಳು ಹಾಗೂ ಸೈಕಲ್ ನಿಲ್ಲಿಸಲು ಪ್ರತ್ಯೇಕ ಸ್ಟ್ಯಾಂಡ್ಗಳನ್ನು ಅಳವಡಿಸುವ ಯೋಜನೆ ಇದೆ. ಆದರೆ ವಿನ್ಯಾಸದ ಅಂತಿಮ ಹಂತದಲ್ಲಿ ಇದು ನಿರ್ಧಾರವಾಗಲಿದೆ. ಪ್ರತಿ 3 ಬೋಗಿಗಳ ರೈಲು ಸುಮಾರು 1,000 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುತ್ತದೆ.
ಒಟ್ಟು 148 ಕಿಲೋಮೀಟರ್ ಉದ್ದದ ಈ ಯೋಜನೆಗಾಗಿ ಒಟ್ಟು 306 ಬೋಗಿಗಳನ್ನು ಖರೀದಿಸಲಾಗುತ್ತಿದೆ. ಇದಕ್ಕೆ ಅಂದಾಜು 4,270.30 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಕರ್ನಾಟಕ ಸರ್ಕಾರ ಮತ್ತು ಭಾರತೀಯ ರೈಲ್ವೆ ಸಮಾನವಾಗಿ ಈ ವೆಚ್ಚವನ್ನು ಭರಿಸಲಿವೆ. ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಈ ಎಲ್ಲಾ ಬೋಗಿಗಳನ್ನು ತಯಾರಿಸಲಿದೆ. ಈಗಾಗಲೇ ಕಾರಿಡಾರ್ 2 ಮತ್ತು 4 ಕ್ಕಾಗಿ ಮೊದಲ 153 ಬೋಗಿಗಳನ್ನು ಪೂರೈಸಲು ಮೇ 6 ರಂದು ಕಾರ್ಯ ಆದೇಶ ನೀಡಲಾಗಿದೆ.
ಬಿ-ರೈಡ್ (Bi-RIDE) ವ್ಯವಸ್ಥಾಪಕ ನಿರ್ದೇಶಕರಾದ ಲಕ್ಷ್ಮಣ್ ಸಿಂಗ್ ಅವರ ಪ್ರಕಾರ, 2027ರ ನವೆಂಬರ್ನಲ್ಲಿ ಮೊದಲ ಪ್ರೊಟೊಟೈಪ್ ರೈಲು ಬಂದ ನಂತರ, ಪ್ರತಿ ತಿಂಗಳು ತಲಾ 3 ಬೋಗಿಗಳಿರುವ ಮೂರು ರೈಲುಗಳು ಪೂರೈಕೆಯಾಗಲಿವೆ. ‘ನಾವು ಡಿಸೆಂಬರ್ 2028ರಲ್ಲಿ ಮೊದಲ ಮಾರ್ಗವನ್ನು (ಕಾರಿಡಾರ್ 2) ಸಾರ್ವಜನಿಕ ಮುಕ್ತಗೊಳಿಸಲು ಯೋಜಿಸಿದ್ದೇವೆ. ಆರಂಭದಲ್ಲಿ ಪೀಕ್ ಅವರ್ಗಳಲ್ಲಿ ಪ್ರತಿ 5 ನಿಮಿಷಕ್ಕೊಂದರಂತೆ ಈ ರೈಲುಗಳು ಸಂಚರಿಸಲಿವೆ’ ಎಂದು ಲಕ್ಷ್ಮಣ್ ಸಿಂಗ್ ತಿಳಿಸಿದ್ದಾರೆ.
ಕಾರಿಡಾರ್ಗಳ ಡೆಡ್ಲೈನ್ ಹೀಗಿದೆ
ಕಾರಿಡಾರ್ 2 (ಬೈಯಪ್ಪನಹಳ್ಳಿ – ಚಿಕ್ಕಬಾಣಾವರ): ಡಿಸೆಂಬರ್ 2028
ಕಾರಿಡಾರ್ 4 (ಹೀಲಲಿಗೆ – ರಾಜಾನುಕುಂಟೆ): ಜೂನ್ 2029
ಕಾರಿಡಾರ್ 1 (ಕೆಎಸ್ಆರ್ ಬೆಂಗಳೂರು – ದೇವನಹಳ್ಳಿ): ಮಾರ್ಚ್ 2030
ಕಾರಿಡಾರ್ 3 (ಕೆಂಗೇರಿ – ವೈಟ್ಫೀಲ್ಡ್): ಮಾರ್ಚ್ 2030
ಕಾರಿಡಾರ್ 4 ರ ಹೀಲಲಿಗೆ-ರಾಜಾನುಕುಂಟೆ ನಡುವಿನ ಉಳಿದ 24.34 ಕಿಮೀ ಮಾರ್ಗಕ್ಕೆ ಜುಲೈನಲ್ಲಿ ಟೆಂಡರ್ ಕರೆಯುವ ನಿರೀಕ್ಷೆ ಇದೆ. ಕಾರಿಡಾರ್ 2 ರ ಕಾಮಗಾರಿಯನ್ನು ಈಗಾಗಲೇ ಪಿಜೆಬಿ ಇಂಜಿನಿಯರ್ಸ್ ಮತ್ತು ಪಿಜೆಬಿ-ಸಿವಿಸಿಸಿ ಜಂಟಿ ಸಂಸ್ಥೆಗೆ ವಹಿಸಲಾಗಿದೆ. ಇನ್ನು ಕೆಎಸ್ಆರ್ ಬೆಂಗಳೂರಿನಿಂದ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಕಾರಿಡಾರ್ 1 ಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು, ಶೇಕಡಾ 90 ರಷ್ಟು ಭೂಸ್ವಾಧೀನ ಪೂರ್ಣಗೊಂಡ ಬಳಿಕ ನವೆಂಬರ್ 2026 ರಿಂದ ಫೆಬ್ರವರಿ 2027 ರ ನಡುವೆ ಟೆಂಡರ್ ಕರೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲುಗಳ ನಿರ್ವಹಣೆಗಾಗಿ ಸೋಲದೇವನಹಳ್ಳಿಯಲ್ಲಿ ಪ್ರತ್ಯೇಕ ಡಿಪೋ ನಿರ್ಮಿಸಲು ಬಿ-ರೈಡ್ ನಿರ್ಧರಿಸಿದೆ. ಜೂನ್ 12 ರಂದು ಇದಕ್ಕೆ ಟೆಂಡರ್ ಕರೆಯಲಾಗಿದ್ದು, 200.03 ಕೋಟಿ ರೂ. ವೆಚ್ಚದ ಈ ಡಿಪೋ ಕಾಮಗಾರಿ 24 ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ. ಈ ಡಿಪೋ ಪ್ರಸ್ತಾಪಿತ ಪೆರಿಫೆರಲ್ ರಿಂಗ್ ರೋಡ್ ಬಳಿ ಬರಲಿದ್ದು, 6 ಸ್ಟೇಬ್ಲಿಂಗ್ ಲೈನ್ಗಳು, 6 ಇನ್ಸ್ಪೆಕ್ಷನ್ ಲೈನ್ಗಳು ಮತ್ತು 4 ರಿಪೇರಿ ಲೈನ್ಗಳನ್ನು ಹೊಂದಿರಲಿದೆ.












