Bengaluru Suburban Rail: ಬೆಂಗಳೂರಿಗರಿಗೆ ಗುಡ್ ನ್ಯೂಸ್! ಬರೋಬ್ಬರಿ ಸಾವಿರ ಪ್ರಯಾಣಿಕರು, 5 ನಿಮಿಷಕ್ಕೊಂದು ಟ್ರೈನ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

Bengaluru Suburban Rail: ಬೆಂಗಳೂರಿಗರಿಗೆ ಗುಡ್ ನ್ಯೂಸ್! ಬರೋಬ್ಬರಿ ಸಾವಿರ ಪ್ರಯಾಣಿಕರು, 5 ನಿಮಿಷಕ್ಕೊಂದು ಟ್ರೈನ್! | ಬೆಂಗಳೂರು ನಗರ ನ್ಯೂಸ್ (Bengaluru Urban News)


ಮೆಟ್ರೋ ರೀತಿಯ ಬೋಗಿಗಳು, ಇದರ ವಿಶೇಷತೆಗಳೇನು?

ಬೆಂಗಳೂರು  ಉಪನಗರ ರೈಲುಗಳು ಸಂಪೂರ್ಣವಾಗಿ ಸ್ಟೇನ್‌ಲೆಸ್ ಸ್ಟೀಲ್‌ನಿಂದ ಮಾಡಲ್ಪಟ್ಟಿದ್ದು, ಭಾರತೀಯ ರೈಲ್ವೆಯಂತೆಯೇ 25kV ಓವರ್‌ಹೆಡ್ ಟ್ರ್ಯಾಕ್ಷನ್ ತಂತ್ರಜ್ಞಾನದಲ್ಲಿ ಚಲಿಸಲಿವೆ. ಮೆಟ್ರೋದಂತೆಯೇ ಪ್ರಯಾಣಿಕರು ಮುಖಾಮುಖಿಯಾಗಿ ಕೂರುವ ಆಸನ ವ್ಯವಸ್ಥೆ (Longitudinal bench seats) ಇರಲಿದೆ. ಈ ರೈಲುಗಳು 3, 6 ಮತ್ತು 9 ಬೋಗಿಗಳ ಸಂಯೋಜನೆಯಲ್ಲಿ ಸಂಚರಿಸಲಿವೆ.

ಲಗೇಜ್‌ ಇಡಲು ರ‍್ಯಾಕ್‌ಗಳು ಹಾಗೂ ಸೈಕಲ್ ನಿಲ್ಲಿಸಲು ಪ್ರತ್ಯೇಕ ಸ್ಟ್ಯಾಂಡ್‌ಗಳನ್ನು ಅಳವಡಿಸುವ ಯೋಜನೆ ಇದೆ. ಆದರೆ ವಿನ್ಯಾಸದ ಅಂತಿಮ ಹಂತದಲ್ಲಿ ಇದು ನಿರ್ಧಾರವಾಗಲಿದೆ. ಪ್ರತಿ 3 ಬೋಗಿಗಳ ರೈಲು ಸುಮಾರು 1,000 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುತ್ತದೆ.

4,270 ಕೋಟಿ ರೂಪಾಯಿ ವೆಚ್ಚದ ಬೃಹತ್ ಯೋಜನೆ

ಒಟ್ಟು 148 ಕಿಲೋಮೀಟರ್ ಉದ್ದದ ಈ ಯೋಜನೆಗಾಗಿ ಒಟ್ಟು 306 ಬೋಗಿಗಳನ್ನು ಖರೀದಿಸಲಾಗುತ್ತಿದೆ. ಇದಕ್ಕೆ ಅಂದಾಜು 4,270.30 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಕರ್ನಾಟಕ ಸರ್ಕಾರ ಮತ್ತು ಭಾರತೀಯ ರೈಲ್ವೆ ಸಮಾನವಾಗಿ ಈ ವೆಚ್ಚವನ್ನು ಭರಿಸಲಿವೆ. ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಈ ಎಲ್ಲಾ ಬೋಗಿಗಳನ್ನು ತಯಾರಿಸಲಿದೆ. ಈಗಾಗಲೇ ಕಾರಿಡಾರ್ 2 ಮತ್ತು 4 ಕ್ಕಾಗಿ ಮೊದಲ 153 ಬೋಗಿಗಳನ್ನು ಪೂರೈಸಲು ಮೇ 6 ರಂದು ಕಾರ್ಯ ಆದೇಶ ನೀಡಲಾಗಿದೆ.

ರೈಲು ಸಂಚಾರ ಯಾವಾಗ ಆರಂಭ?

ಬಿ-ರೈಡ್ (Bi-RIDE) ವ್ಯವಸ್ಥಾಪಕ ನಿರ್ದೇಶಕರಾದ ಲಕ್ಷ್ಮಣ್ ಸಿಂಗ್ ಅವರ ಪ್ರಕಾರ, 2027ರ ನವೆಂಬರ್‌ನಲ್ಲಿ ಮೊದಲ ಪ್ರೊಟೊಟೈಪ್ ರೈಲು ಬಂದ ನಂತರ, ಪ್ರತಿ ತಿಂಗಳು ತಲಾ 3 ಬೋಗಿಗಳಿರುವ ಮೂರು ರೈಲುಗಳು ಪೂರೈಕೆಯಾಗಲಿವೆ. ‘ನಾವು ಡಿಸೆಂಬರ್ 2028ರಲ್ಲಿ ಮೊದಲ ಮಾರ್ಗವನ್ನು (ಕಾರಿಡಾರ್ 2) ಸಾರ್ವಜನಿಕ ಮುಕ್ತಗೊಳಿಸಲು ಯೋಜಿಸಿದ್ದೇವೆ. ಆರಂಭದಲ್ಲಿ ಪೀಕ್ ಅವರ್‌ಗಳಲ್ಲಿ ಪ್ರತಿ 5 ನಿಮಿಷಕ್ಕೊಂದರಂತೆ ಈ ರೈಲುಗಳು ಸಂಚರಿಸಲಿವೆ’ ಎಂದು ಲಕ್ಷ್ಮಣ್ ಸಿಂಗ್ ತಿಳಿಸಿದ್ದಾರೆ.

ಕಾರಿಡಾರ್‌ಗಳ ಡೆಡ್‌ಲೈನ್ ಹೀಗಿದೆ

ಕಾರಿಡಾರ್ 2 (ಬೈಯಪ್ಪನಹಳ್ಳಿ – ಚಿಕ್ಕಬಾಣಾವರ): ಡಿಸೆಂಬರ್ 2028

ಕಾರಿಡಾರ್ 4 (ಹೀಲಲಿಗೆ – ರಾಜಾನುಕುಂಟೆ): ಜೂನ್ 2029

ಕಾರಿಡಾರ್ 1 (ಕೆಎಸ್ಆರ್ ಬೆಂಗಳೂರು – ದೇವನಹಳ್ಳಿ): ಮಾರ್ಚ್ 2030

ಕಾರಿಡಾರ್ 3 (ಕೆಂಗೇರಿ – ವೈಟ್‌ಫೀಲ್ಡ್): ಮಾರ್ಚ್ 2030

ಕಾಮಗಾರಿ ಪ್ರಗತಿ ಹಾಗೂ ಲ್ಯಾಂಡ್ ಅಕ್ವಿಸಿಷನ್

ಕಾರಿಡಾರ್ 4 ರ ಹೀಲಲಿಗೆ-ರಾಜಾನುಕುಂಟೆ ನಡುವಿನ ಉಳಿದ 24.34 ಕಿಮೀ ಮಾರ್ಗಕ್ಕೆ ಜುಲೈನಲ್ಲಿ ಟೆಂಡರ್ ಕರೆಯುವ ನಿರೀಕ್ಷೆ ಇದೆ. ಕಾರಿಡಾರ್ 2 ರ ಕಾಮಗಾರಿಯನ್ನು ಈಗಾಗಲೇ ಪಿಜೆಬಿ ಇಂಜಿನಿಯರ್ಸ್ ಮತ್ತು ಪಿಜೆಬಿ-ಸಿವಿಸಿಸಿ ಜಂಟಿ ಸಂಸ್ಥೆಗೆ ವಹಿಸಲಾಗಿದೆ. ಇನ್ನು ಕೆಎಸ್ಆರ್ ಬೆಂಗಳೂರಿನಿಂದ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಕಾರಿಡಾರ್ 1 ಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು, ಶೇಕಡಾ 90 ರಷ್ಟು ಭೂಸ್ವಾಧೀನ ಪೂರ್ಣಗೊಂಡ ಬಳಿಕ ನವೆಂಬರ್ 2026 ರಿಂದ ಫೆಬ್ರವರಿ 2027 ರ ನಡುವೆ ಟೆಂಡರ್ ಕರೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಲದೇವನಹಳ್ಳಿಯಲ್ಲಿ 200 ಕೋಟಿ ವೆಚ್ಚದ ಬೃಹತ್ ಡಿಪೋ

ರೈಲುಗಳ ನಿರ್ವಹಣೆಗಾಗಿ ಸೋಲದೇವನಹಳ್ಳಿಯಲ್ಲಿ ಪ್ರತ್ಯೇಕ ಡಿಪೋ ನಿರ್ಮಿಸಲು ಬಿ-ರೈಡ್ ನಿರ್ಧರಿಸಿದೆ. ಜೂನ್ 12 ರಂದು ಇದಕ್ಕೆ ಟೆಂಡರ್ ಕರೆಯಲಾಗಿದ್ದು, 200.03 ಕೋಟಿ ರೂ. ವೆಚ್ಚದ ಈ ಡಿಪೋ ಕಾಮಗಾರಿ 24 ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ. ಈ ಡಿಪೋ ಪ್ರಸ್ತಾಪಿತ ಪೆರಿಫೆರಲ್ ರಿಂಗ್ ರೋಡ್ ಬಳಿ ಬರಲಿದ್ದು, 6 ಸ್ಟೇಬ್ಲಿಂಗ್ ಲೈನ್‌ಗಳು, 6 ಇನ್ಸ್‌ಪೆಕ್ಷನ್ ಲೈನ್‌ಗಳು ಮತ್ತು 4 ರಿಪೇರಿ ಲೈನ್‌ಗಳನ್ನು ಹೊಂದಿರಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed