Last Updated:
ಬೆಂಗಳೂರು ವೈರಲ್ ಇನ್‌ಸ್ಟಾಗ್ರಾಂನಲ್ಲಿ ಅಕ್ಷಯ್ ಸಿ.ಎನ್ ತಮ್ಮ ಜೀವನಶೈಲಿ ಬದಲಾಯಿಸದೆ ಬೆಂಗಳೂರಿನ ಖರ್ಚು ಕಡಿಮೆ ಮಾಡಿದ ವಿಧಾನ, ಅನಗತ್ಯ ವೆಚ್ಚ ನಿಯಂತ್ರಣ, ವೀಕೆಂಡ್ ಪ್ಲಾನಿಂಗ್, ಲೈಫ್‌ಸ್ಟೈಲ್ ಒತ್ತಡ ತ್ಯಾಗ ಹಂಚಿಕೆ
ಬೆಂಗಳೂರಿನಂತಹ ನಗರದಲ್ಲಿ (Bengaluru City) ಜೀವನ ನಡೆಸುವಾಗ ಎಷ್ಟು ಹಣ ಸಂಪಾದಿಸಿದರೂ (Money) ಸಾಕಾಗುವುದಿಲ್ಲ ಎಂಬ ಭಾವನೆ ಹಲವರಿಗಿದೆ. ಪ್ರತಿದಿನದ ಪ್ರಯಾಣ ವೆಚ್ಚ, ಹೊರಗಿನಿಂದ ಆಹಾರ ಆರ್ಡರ್ (Online Order) ಮಾಡುವುದು, ವಾರಾಂತ್ಯದ ಸುತ್ತಾಟಗಳು ಹಾಗೂ ಜೀವನಶೈಲಿಗೆ ಹೊಂದಿಕೊಳ್ಳುವ ಖರ್ಚುಗಳು ನಿಧಾನವಾಗಿ ಹೆಚ್ಚಾಗಿ, ಅರಿವಾಗುವಷ್ಟರಲ್ಲಿ ಉಳಿತಾಯ (Savings) ಮಾಡಿಕೊಂಡಿದ್ದ ಹಣವನ್ನು ಕಡಿಮೆ ಮಾಡುತ್ತವೆ. ಆದ್ದರಿಂದ ಆದಾಯದ ಜೊತೆಗೆ ಖರ್ಚಿನ ಮೇಲೂ ಗಮನಹರಿಸುವುದು ಮುಖ್ಯ.
ಅಕ್ಷಯ್ ಸಿ.ಎನ್ ಅವರು ‘ಬೆಂಗಳೂರು ವೈರಲ್’ ಎಂಬ ಇನ್‌ಸ್ಟಾಗ್ರಾಂ ಖಾತೆಯನ್ನು ಮುನ್ನಡೆಸುತ್ತಿದ್ದಾರೆ. ಈ ಖಾತೆಯಲ್ಲಿ ಇತ್ತೀಚೆಗೆ ಅವರು ತಮ್ಮ ಖರ್ಚುಗಳನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ವಿವರಿಸುವ ವೀಡಿಯೊವನ್ನು ‘ನನ್ನ ಜೀವನ ಶೈಲಿಯನ್ನು ಬದಲಾಯಿಸದೆ ನನ್ನ ಬೆಂಗಳೂರಿನ ಖರ್ಚುಗಳನ್ನು ಹೇಗೆ ಕಡಿಮೆ ಮಾಡಿಕೊಂಡೆ’ ಎಂಬ ಶೀರ್ಷಿಕೆ ನೀಡಿ ಪೋಸ್ಟ್ ಮಾಡಿದ್ದರು.
ನಾನು ಹೆಚ್ಚು ಆಕರ್ಷಕ ಪ್ರದೇಶವನ್ನು ಆಯ್ಕೆ ಮಾಡುವ ಬದಲು ಮೆಟ್ರೋ ನಿಲ್ದಾಣದ ಹತ್ತಿರ ಮನೆಗೆ ಸ್ಥಳಾಂತರಗೊಂಡೆ. ಆರಂಭದಲ್ಲಿ ಬಾಡಿಗೆ ಸ್ವಲ್ಪ ಹೆಚ್ಚಾಗಿದೆ ಎಂದು ಅನಿಸಿತು. ಆದರೆ ಪ್ರತಿದಿನದ ಪ್ರಯಾಣ, ಇಂಧನ ವೆಚ್ಚ ಮತ್ತು ಆಟೋ ಖರ್ಚುಗಳಲ್ಲಿ ಸಾಕಷ್ಟು ಹಣ ಉಳಿಯಿತು. ಜೊತೆಗೆ ಟ್ರಾಫಿಕ್ ತೊಂದರೆ ಕಡಿಮೆಯಾಗಿ ಮನಸ್ಸಿನ ಒತ್ತಡವೂ ಇಳಿಯಿತು ಎಂದು ಬರೆದುಕೊಂಡಿದ್ದಾರೆ.
‘ಪ್ರತಿ ತಿಂಗಳು ಮಾಡುವ ಸಣ್ಣಸಣ್ಣ ಖರ್ಚುಗಳನ್ನು ನಾನು ನಿಲ್ಲಿಸಿದೆ. ಕ್ವಿಕ್ ಡೆಲಿವರಿ ಸೇವೆಗಳು, ಆಟೋ ಪ್ರಯಾಣ, ವಿವಿಧ ಸಬ್‌ಸ್ಕ್ರಿಪ್ಷನ್‌ಗಳು ಹಾಗೂ ಆನ್‌ಲೈನ್‌ನಲ್ಲಿ ಮಾಡುವ ಚಿಕ್ಕ ಖರೀದಿ, ಇವುಗಳು ಪ್ರತಿ ತಿಂಗಳು ದೊಡ್ಡ ಮೊತ್ತದ ಖರ್ಚಾಗುತ್ತಿವೆ ಎಂಬುದನ್ನು ಅರಿತುಕೊಂಡು, ಬೆಂಗಳೂರಿನಂತಹ ನಗರದಲ್ಲಿ ಇಂತಹ ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿದಾಗ ಹಣವನ್ನು ಹೆಚ್ಚು ಉಳಿತಾಯ ಮಾಡಬಹುದು’ ಎಂದು ಅಕ್ಷಯ್ ಹೇಳಿದ್ದಾರೆ.
‘ಬೆಂಗಳೂರಿನ ಜನ ವೀಕೆಂಡ್ ಬಂದರೆ ಸಾಕು ಹೊರಗಡೆ ಸುತ್ತಾಡಲು ಯೋಚಿಸುತ್ತಾರೆ. ಹಾಗಾಗಿ ಅಕ್ಷಯ್ ಅವರು ವೀಕೆಂಡ್ ಪ್ಲಾನಿಂಗ್ ಬಗ್ಗೆಯೂ ಕೂಡ ಮಾತನಾಡಿದ್ದಾರೆ. ನಾನು ಅನವಶ್ಯಕ ಖರ್ಚನ್ನು ಕಡಿಮೆ ಮಾಡಿ ವೀಕೆಂಡನ್ನು ಮುಂಚಿತವಾಗಿ ಪ್ಲಾನಿಂಗ್ ಮಾಡಲು ಪ್ರಾರಂಭಿಸಿದೆ. ಯಾವುದೇ ಯೋಜನೆ ಇಲ್ಲದೆ ಕೆಫೆಗಳಿಗೆ ಹೋಗುವುದು, ಪಬ್‌ಗಳಲ್ಲಿ ಸಮಯ ಕಳೆಯುವುದು ಮತ್ತು ಕ್ಷಣಿಕ ಆಸೆಯಿಂದ ಮಾಡುವ ಖರ್ಚುಗಳು ಬೆಂಗಳೂರಿನಲ್ಲಿ ಗೊತ್ತಾಗದಂತೆ ಉಳಿತಾಯವನ್ನು ಕಡಿಮೆ ಮಾಡುತ್ತವೆ. ಆದ್ದರಿಂದ ಖರ್ಚುಗಳನ್ನು ನಿಯಂತ್ರಿಸಲು ಮತ್ತು ಹಣವನ್ನು ಉಳಿಸಿಕೊಳ್ಳಲು ಮುಂಚಿತ ಯೋಜನೆ ಬಹಳ ಮುಖ್ಯ’ ಎಂದು ಅವರು ಹೇಳಿದ್ದಾರೆ.
ಅಕ್ಷಯ್ ಅವರು ಅನವಶ್ಯಕ ಟ್ರೆಂಡ್ ಮತ್ತು ಅಪ್‌ಗ್ರೇಡ್ ಬಗ್ಗೆಯೂ ಮಾತನಾಡಿದ್ದಾರೆ. ಇತರರು ಹೊಸ ಗ್ಯಾಜೆಟ್‌ಗಳನ್ನು ಖರೀದಿಸುತ್ತಿದ್ದಾರೆ ಎಂಬ ಕಾರಣಕ್ಕೆ ನಾನು ಕೂಡ ಅಪ್‌ಗ್ರೇಡ್ ಮಾಡಬೇಕು ಎಂಬ ಮನೋಭಾವವನ್ನು ಬಿಟ್ಟೆ. ಬೆಂಗಳೂರಿನ ಕೆಲಸದಲ್ಲಿ ಕೆಲವೊಮ್ಮೆ ಇತರರ ಜೀವನಶೈಲಿಗೆ ತಕ್ಕಂತೆ ಬದುಕಬೇಕು ಎಂಬ ಒತ್ತಡ ಸದ್ದಿಲ್ಲದೆ ಮೂಡುತ್ತದೆ. ಆದರೆ ಸಾಮಾಜಿಕವಾಗಿ ಹೊಂದಿಕೊಳ್ಳಲು ಅಥವಾ ಟ್ರೆಂಡ್‌ಗಳನ್ನು ಹಿಂಬಾಲಿಸಲು ಅನಗತ್ಯ ಖರ್ಚು ಮಾಡುವ ಬದಲು, ನಿಜವಾಗಿಯೂ ಅಗತ್ಯವಿದ್ದಾಗ ಮಾತ್ರ ಖರೀದಿ ಮಾಡುವ ಅಭ್ಯಾಸ ಬೆಳೆಸಿಕೊಂಡೆ. ಇದರಿಂದ ಹಣದ ಉಳಿತಾಯವೂ ಹೆಚ್ಚಾಯಿತು ಮತ್ತು ಅನಗತ್ಯ ಒತ್ತಡವೂ ಕಡಿಮೆಯಾಯಿತು ಎಂದು ಹೇಳಿದ್ದಾರೆ.
ಅಕ್ಷಯ್ ಅವರ ಪ್ರಕಾರ, ಪ್ರತಿದಿನ ಹೊರಗೆ ಊಟ ಮಾಡುವ ಬದಲು ಕೆಲವೊಮ್ಮೆ ಮನೆಯಲ್ಲೇ ಅಡುಗೆ ಮಾಡಿ ತಿನ್ನುವ ಅಭ್ಯಾಸವು ಅವರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತಂದಿತು. ಇದರಿಂದ ಖರ್ಚು ಕಡಿಮೆಯಾಗುವುದರ ಜೊತೆಗೆ ಆರೋಗ್ಯವೂ ಉತ್ತಮವಾಯಿತು. ಸಣ್ಣ ಅಭ್ಯಾಸದ ಬದಲಾವಣೆಯೇ ಹಣ ಉಳಿಸಲು ಮತ್ತು ಉತ್ತಮ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ತಮ್ಮ ಅನುಭವವನ್ನು ಹಂಚಿಕೊಂಡ ಅಕ್ಷಯ್, ‘ಹೆಚ್ಚು ಸಂಬಳ ಸಿಕ್ಕರೆ ಮಾತ್ರ ಹಣಕಾಸಿನ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಬೆಂಗಳೂರಿನಂತಹ ನಗರದಲ್ಲಿ ಉತ್ತಮ ಹಣಕಾಸಿನ ಅಭ್ಯಾಸಗಳು, ಯೋಜಿತ ಖರ್ಚು ಮತ್ತು ಜವಾಬ್ದಾರಿಯುತ ಜೀವನಶೈಲಿಯೇ ನಿಜವಾದ ಉಳಿತಾಯಕ್ಕೆ ಕಾರಣವಾಗುತ್ತವೆ’ ಎಂದು ಹೇಳಿದ್ದಾರೆ.
ಈ ವೀಡಿಯೊಗೆ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಹಲವಾರು ಪ್ರತಿಕ್ರಿಯೆಗಳು ಬಂದಿವೆ. ಒಬ್ಬ ಬಳಕೆದಾರರು ‘ಹೌದು, ಇದು ನಿಜ’ ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ‘ನಾನು ಸಹ ಇದೇ ರೀತಿ ಹಣ ಉಳಿಸಲು ಪ್ರಾರಂಭಿಸುತ್ತೇನೆ’ ಎಂದು ಕಾಮೆಂಟ್ ಮಾಡಿದ್ದಾರೆ. ಮೂರನೇ ಬಳಕೆದಾರರು ‘ಹೌದು, ಅವೆಲ್ಲವೂ ಬಹಳ ಪ್ರಸ್ತುತವೆಂದು ನನಗೆ ಅನಿಸುತ್ತದೆ’ ಎಂದು ಹೇಳಿದರು. ಇನ್ನೊಬ್ಬ ಇನ್‌ಸ್ಟಾಗ್ರಾಮ್ ಬಳಕೆದಾರರು, ‘ನಾನು ನಿಮ್ಮೊಂದಿಗೆ ಒಪ್ಪುತ್ತೇನೆ ಬ್ರದರ್’ ಎಂದು ಹೇಳಿದ್ದಾರೆ.
Bangalore [Bangalore],Bangalore,Karnataka













