Last Updated:
ಜಪಾನ್ನ ಐಚಿ-ನಾಗೋಯಾದಲ್ಲಿ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಅಧಿಕೃತವಾಗಿ ಆರಂಭವಾಗಲು ಎರಡು ದಿನಗಳು ಬಾಕಿ ಇರುವಾಗಲೇ ಚೀನಾ ತಂಡಕ್ಕೆ ಈ ಭಾರಿ ಆಘಾತ ಎದುರಾಗಿದೆ.
ಚೀನಾ ಮಹಿಳಾ ಕ್ರಿಕೆಟ್ ತಂಡವು ಒಂದೇ ಒಂದು ಎಸೆತವನ್ನು ಎದುರಿಸದೆ ಅಥವಾ ಮೈದಾನಕ್ಕೆ ಇಳಿಯದೆ 2026ರ ಏಷ್ಯನ್ ಗೇಮ್ಸ್ ಟೂರ್ನಿಯಿಂದ ಹೊರಬಿದ್ದಿದೆ. ಜಪಾನ್ನ ಐಚಿ-ನಾಗೋಯಾದಲ್ಲಿ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಅಧಿಕೃತವಾಗಿ ಆರಂಭವಾಗಲು ಎರಡು ದಿನಗಳು ಬಾಕಿ ಇರುವಾಗಲೇ ಚೀನಾ ತಂಡಕ್ಕೆ ಈ ಭಾರಿ ಆಘಾತ ಎದುರಾಗಿದೆ.ನಿಸಿನ್ನ ಕೊರೊಗಿ ಸ್ಪೋರ್ಟ್ಸ್ ಪಾರ್ಕ್ನಲ್ಲಿ ಮಹಿಳಾ ಟಿ20 ಕ್ರಿಕೆಟ್ ಸರಣಿಯ ಮೊದಲ ಕ್ವಾರ್ಟರ್ ಫೈನಲ್ ಪಂದ್ಯವು ಚೀನಾ ಮತ್ತು ಬಾಂಗ್ಲಾದೇಶ ನಡುವೆ ನಡೆಯಬೇಕಿತ್ತು. ಆದರೆ, ನಿರಂತರವಾಗಿ ಕಾಡಿದ ಕೆಟ್ಟ ಹವಾಮಾನ ಮತ್ತು ಮಳೆಯಿಂದಾಗಿ ಟಾಸ್ ಕೂಡ ಆಗದೆ ಪಂದ್ಯವನ್ನು ರದ್ದುಗೊಳಿಸಲಾಯಿತು. ಇದು 2010ರ ನಂತರ ಮೂರನೇ ಬಾರಿಗೆ ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸುತ್ತಿದ್ದ ಚೀನಾ ತಂಡಕ್ಕೆ ಭಾರಿ ನಿರಾಶೆ ಉಂಟುಮಾಡಿತು.
ಏಷ್ಯನ್ ಗೇಮ್ಸ್ ಕ್ರಿಕೆಟ್ ನಿಯಮಾವಳಿಗಳ ನಿಯಮ 16.10.2 (B) ಪ್ರಕಾರ, ಪಂದ್ಯವು ಯಾವುದೇ ಫಲಿತಾಂಶವಿಲ್ಲದೆ ರದ್ದಾದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಶ್ರೇಯಾಂಕ (ICC Ranking) ಹೊಂದಿರುವ ತಂಡವು ಮುಂದಿನ ಹಂತಕ್ಕೆ ಅರ್ಹತೆ ಪಡೆಯುತ್ತದೆ. ಬಾಂಗ್ಲಾದೇಶ ತಂಡವು ಚೀನಾಕ್ಕಿಂತ ಉತ್ತಮ ಶ್ರೇಯಾಂಕ ಹೊಂದಿರುವ ಕಾರಣ, ನಿಗಾರ್ ಸುಲ್ತಾನಾ ನೇತೃತ್ವದ ಬಾಂಗ್ಲಾದೇಶ ತಂಡವು ನೇರವಾಗಿ ಸೆಮಿಫೈನಲ್ಗೆ ಪ್ರವೇಶಿಸಿತು. ಇನ್ನು ಚೀನಾದ ಪುರುಷರ ಕ್ರಿಕೆಟ್ ತಂಡವೂ ಈ ಬಾರಿ ಅರ್ಹತೆ ಪಡೆಯದ ಕಾರಣ, ಈ ಪಂದ್ಯ ರದ್ದಾಗುವುದರೊಂದೊಗೆ ಚೀನಾದ ಏಷ್ಯನ್ ಗೇಮ್ಸ್ ಕ್ರಿಕೆಟ್ ಅಭಿಯಾನ ಸಂಪೂರ್ಣವಾಗಿ ಕೊನೆಗೊಂಡಿದೆ.
ಇದೇ ನಿಯಮವು 2023ರ ಹ್ಯಾಂಗ್ಝೌ ಏಷ್ಯನ್ ಗೇಮ್ಸ್ನಲ್ಲೂ ಅನ್ವಯವಾಗಿತ್ತು. ಆಗ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಒಳಗೊಂಡಿದ್ದ ನಾಲ್ಕರಲ್ಲಿ ಮೂರು ಕ್ವಾರ್ಟರ್ ಫೈನಲ್ ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದವು. ಈ ಟೂರ್ನಿಯ ಎಲ್ಲಾ ಪಂದ್ಯಗಳೂ ಇದೇ ಮೈದಾನದಲ್ಲಿ ನಡೆಯುತ್ತಿರುವುದರಿಂದ, ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯಲಿರುವ ಸಂಭಾವ್ಯ ಸೆಮಿಫೈನಲ್ ಪಂದ್ಯವೂ ಮಳೆಗೆ ಆಹುತಿಯಾಗುವ ಸಾಧ್ಯತೆಯಿದೆ. ಹಾಗೇನಾದರೂ ಆದರೆ ಭಾರತ ಉತ್ತಮ ಶ್ರೇಯಾಂಕದ ಕಾರಣ ಫೈನಲ್ ಪ್ರವೇಶಿಸಲಿದೆ.
ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ತಂಡವು ಶುಕ್ರವಾರ ನಡೆಯಲಿರುವ ತನ್ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆತಿಥೇಯ ಜಪಾನ್ ತಂಡವನ್ನು ಎದುರಿಸಲಿದೆ.
ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್ನ ಎರಡೂ ಸೆಮಿಫೈನಲ್ ಪಂದ್ಯಗಳು ಸೆಪ್ಟೆಂಬರ್ 20 ರಂದು (ಭಾನುವಾರ) ನಡೆಯಲಿದ್ದು, ಚಿನ್ನದ ಪದಕಕ್ಕಾಗಿ ನಡೆಯುವ ಫೈನಲ್ ಪಂದ್ಯವು ಸೆಪ್ಟೆಂಬರ್ 22 ರಂದು ಆಯೋಜನೆಗೊಂಡಿದೆ. ಇದೇ ಸೆಪ್ಟೆಂಬರ್ 22 ರಂದು ಶ್ರೇಯಸ್ ಅಯ್ಯರ್ ನೇತೃತ್ವದ ಭಾರತೀಯ ಪುರುಷರ ಕ್ರಿಕೆಟ್ ತಂಡವು ಟೋಕಿಯೋದಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಸಾನೋ ಇಂಟರ್ನ್ಯಾಷನಲ್ ಕ್ರಿಕೆಟ್ ಗ್ರೌಂಡ್ನಲ್ಲಿ ಜಪಾನ್ ವಿರುದ್ಧ ತನ್ನ ಮೊದಲ ದ್ವಿಪಕ್ಷೀಯ ಟಿ20 ಪಂದ್ಯವನ್ನು ಆಡಲಿದೆ. ಆದರೆ, ಏಷ್ಯನ್ ಗೇಮ್ಸ್ನಲ್ಲಿ ಭಾರತೀಯ ಪುರುಷರ ತಂಡದ ಅಧಿಕೃತ ಪಂದ್ಯಗಳು ಸೆಪ್ಟೆಂಬರ್ 28 ರಿಂದ ನೇರವಾಗಿ ಕ್ವಾರ್ಟರ್ ಫೈನಲ್ ಮೂಲಕ ಆರಂಭವಾಗಲಿವೆ.














