Last Updated:
Anil Kumble: ಭಾರತೀಯ ಕ್ರಿಕೆಟ್ನ ಜಂಬೋ ಅನಿಲ್ ಕುಂಬ್ಳೆ ಮನೆಯಲ್ಲಿ ಈಗ ಸಂಭ್ರಮವೋ ಸಂಭ್ರಮ! ಕೇವಲ 3 ವರ್ಷದ ಮಗುವಾಗಿದ್ದಾಗ ಕೊಟ್ಟ ಮಾತನ್ನು ಉಳಿಸಿಕೊಂಡು ಅನಿಲ್ ಕುಂಬ್ಳೆ ಮಗ ಉಳಿಸಿಕೊಂಡಿದ್ದಾರೆ.
ಭಾರತೀಯ ಕ್ರಿಕೆಟ್ ಲೋಕದ ದಂತಕಥೆ, ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಹಾಗೂ ಅವರ ಪತ್ನಿ ಚೇತನಾ ದಂಪತಿ ತಮ್ಮ ಮಗ ಮಾಯಸ್ ಕುಂಬ್ಳೆ (Mayas Kumble) ಯಶಸ್ಸಿನ ಖುಷಿಯಲ್ಲಿದ್ದಾರೆ. ಮಾಯಸ್ ಇಂಜಿನಿಯರಿಂಗ್ ಪದವಿ ಮುಗಿಸಿ ಹೊರಬಂದಿದ್ದು, ಈ ವಿಶೇಷ ಸಂದರ್ಭದಲ್ಲಿ ಇಡೀ ಕುಟುಂಬ ಸಾಮಾಜಿಕ ಮಾಧ್ಯಮದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದೆ. ಅನಿಲ್ ಕುಂಬ್ಳೆ, ಚೇತನಾ ಹಾಗೂ ಮಗ ಮಾಯಸ್ ಒಟ್ಟಿಗೆ ಇರುವ ಸುಂದರ ಫೋಟೋಗಳನ್ನು ಪೋಸ್ಟ್ (Social Media Post) ಮಾಡಲಾಗಿದ್ದು, ಇದು ಕ್ರಿಕೆಟ್ ಪ್ರೇಮಿಗಳು ಮತ್ತು ನೆಟ್ಟಿಗರ ಮನ ಗೆದ್ದಿದೆ.
ಮಾಯಸ್ ಕುಂಬ್ಳೆ ಬಾಲ್ಯದಿಂದಲೂ ಇಂಜಿನಿಯರ್ (Engineer) ಆಗಬೇಕೆಂಬ ದೊಡ್ಡ ಕನಸು ಕಂಡಿದ್ದರು. ಈ ಬಗ್ಗೆ ಅವರ ತಾಯಿ ಚೇತನಾ ಇನ್ಸ್ಟಾಗ್ರಾಮ್ನಲ್ಲಿ ಅತ್ಯಂತ ಸುಂದರವಾದ ಲೇಖನ ಬರೆದಿದ್ದಾರೆ. “ಅವನಿಗೆ ಕೇವಲ 3 ವರ್ಷ ವಯಸ್ಸಾಗಿದ್ದಾಗಿನಿಂದಲೇ ದೊಡ್ಡವನಾದ ಮೇಲೆ ಏನಾಗಬೇಕು ಅನ್ನೋದರ ಬಗ್ಗೆ ಯಾವುದೇ ಕನ್ಫ್ಯೂಷನ್ ಇರಲಿಲ್ಲ. ಒಂದು ಮಗುವಿಗೆ ಮಾತ್ರ ಇರಬಹುದಾದ ದೃಢನಿಶ್ಚಯದಿಂದ ‘ನಾನು ದೊಡ್ಡವನಾದ ಮೇಲೆ ಇಂಜಿನಿಯರ್ ಆಗ್ತೀನಿ’ ಎಂದು ಆತ್ಮವಿಶ್ವಾಸದಿಂದ ಹೇಳುತ್ತಿದ್ದ” ಎಂದು ಭಾವುಕರಾಗಿದ್ದಾರೆ.
ಮಾಯಸ್ ಚಿಕ್ಕವನಿದ್ದಾಗ ತನ್ನ ಪುಟ್ಟ ಕೈಯಲ್ಲಿ ಒಂದು ಸಣ್ಣ ವ್ರೆಂಚ್ ಅಥವಾ ಸ್ಲೈಡ್ ರೇಂಚ್ ಹಿಡಿದುಕೊಂಡು, ತಾನೊಂದು ದಿನ ಹೊಸ ಸ್ಕೂಟರ್ ತಯಾರಿಸುವುದಾಗಿ ಹೇಳುತ್ತಿದ್ದನಂತೆ. ಇನ್ನು ಆತನಿಗೆ 7 ವರ್ಷ ತುಂಬುವ ಹೊತ್ತಿಗೆ ಕನಸುಗಳು ಮತ್ತಷ್ಟು ದೊಡ್ಡದಾದವು. ಸ್ವತಃ ತಾನೇ ಅದ್ಭುತ ಕಾರುಗಳನ್ನು ವಿನ್ಯಾಸಗೊಳಿಸಲು ಬಯಸಿದ್ದ ಮಾಯಸ್, ಆ ಕಾರುಗಳಿಗೆ ಹೆಮ್ಮೆಯಿಂದ ‘MAK’ ಎಂದು ಹೆಸರಿಡುವುದಾಗಿ ಅಪ್ಪ-ಅಮ್ಮನ ಮುಂದೆ ಘೋಷಿಸುತ್ತಿದ್ದನಂತೆ.
“ಪೋಷಕರಾಗಿ ನಾವು ಮಕ್ಕಳ ಬಾಲ್ಯದ ಇಂತಹ ಮಾತುಗಳನ್ನು ಕೇಳಿ ನಗುತ್ತೇವೆ. ಭವಿಷ್ಯದಲ್ಲಿ ಏನಾಗುತ್ತಾರೋ ಎಂದು ಆಶ್ಚರ್ಯ ಪಡುತ್ತೇವೆ. ಆದರೆ ಇಂದು ಅವನು ನಿಜವಾಗಿಯೂ ಇಂಜಿನಿಯರ್ ಆಗಿ ಪದವಿ ಪಡೆಯುವುದನ್ನು ನೋಡುವಾಗ ನನಗೆ ತುಂಬಾ ಸುಂದರವಾದ ಭಾವನೆ ಮೂಡುತ್ತಿದೆ.
ಕೆಲವೊಮ್ಮೆ ಪ್ರಪಂಚವು ಗುರುತಿಸುವ ಮೊದಲೇ ಮಕ್ಕಳಿಗೆ ತಾವು ನಿಜವಾಗಿಯೂ ಯಾರೆಂದು ಮತ್ತು ತಮ್ಮ ಗುರಿ ಏನೆಂದು ಚೆನ್ನಾಗಿ ಗೊತ್ತಿರುತ್ತದೆ” ಎಂದು ಚೇತನಾ ಬರೆದುಕೊಂಡಿದ್ದಾರೆ.
“ವರ್ಷಗಳು ಕಳೆದವು, ಕಠಿಣ ಪರಿಶ್ರಮ ಮತ್ತು ನಿದ್ದೆಯಿಲ್ಲದ ರಾತ್ರಿಗಳು ಬಂದು ಹೋದವು. ಆದರೆ ಆ ಪುಟ್ಟ ಹುಡುಗ ತನ್ನ ಕನಸನ್ನು ಎಂದಿಗೂ ಬಿಡಲಿಲ್ಲ, ಇಂದು ಅದನ್ನು ಸಾಧಿಸಿ ತೋರಿಸಿದ್ದಾನೆ. ನನ್ನ ಹೃದಯ ಈಗ ಹೆಮ್ಮೆ, ಕೃತಜ್ಞತೆ ಮತ್ತು ಭಾವನೆಗಳಿಂದ ತುಂಬಿ ಬಂದಿದೆ.
ಕೈಯಲ್ಲಿ ಉಪಕರಣಗಳನ್ನು ಹೊಂದಿದ್ದ ಕುತೂಹಲಕಾರಿ ಪುಟ್ಟ ಹುಡುಗನಿಂದ, ಇಂದು ಹೃದಯದಲ್ಲಿ ಒಂದು ದೊಡ್ಡ ಉದ್ದೇಶವನ್ನು ಹೊಂದಿರುವ ಇಂಜಿನಿಯರ್ ಆಗಿ ನೀನು ಬೆಳೆದಿರುವುದು ನನ್ನ ಜೀವನದ ಅತ್ಯಂತ ದೊಡ್ಡ ಸಂತೋಷ” ಎಂದು ತಾಯಿ ಹರಸಿದ್ದಾರೆ.
ಭಾರತ ತಂಡಕ್ಕಾಗಿ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಬರೋಬ್ಬರಿ 957 ವಿಕೆಟ್ಗಳನ್ನು ಕಬಳಿಸಿ ದೇಶದ ಹೆಮ್ಮೆಯಾಗಿರುವ ಅನಿಲ್ ಕುಂಬ್ಳೆ (Anil Kumble) ಅವರು ಕೂಡ ಕ್ರಿಕೆಟ್ಗೆ ಬರುವ ಮುನ್ನ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿದ್ದರು ಎನ್ನುವುದು ವಿಶೇಷ. ಈಗ ಮಗ ಕೂಡ ಇಂಜಿನಿಯರ್ ಆಗಿ ಹೊರಬಂದಿರುವುದು ತಂದೆಯಾಗಿ ಅವರಿಗೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ತಂದೆಯ ಹೆಜ್ಜೆಯಲ್ಲೇ ಮಗ ಮುನ್ನಡೆದಿರುವುದು ಕುಂಬ್ಳೆ ಕುಟುಂಬದ ಸಂತೋಷವನ್ನು ಇಮ್ಮಡಿಗೊಳಿಸಿದೆ.
ಯಾವಾಗಲೂ ಸೌಮ್ಯ ಸ್ವಭಾವದ ಅನಿಲ್ ಕುಂಬ್ಳೆ ಅವರು ಮಗನಿಗಾಗಿ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಭಾಷಣ ಬರೆಯಲಿಲ್ಲ. ಬದಲಿಗೆ ಅರ್ಥಪೂರ್ಣ ಮತ್ತು ಕ್ಯೂಟ್ ಸಂದೇಶವನ್ನು ಹಂಚಿಕೊಂಡಿದ್ದಾರೆ.
“ನನಗೆ ನಿನ್ನ ಬಗ್ಗೆ ತುಂಬಾ ಹೆಮ್ಮೆಯಿದೆ ನನ್ನ ಮಗನೇ! ನೀನು ನಿನ್ನ ತಂದೆಯ ಹೆಜ್ಜೆಗುರುತುಗಳನ್ನು ಚೆನ್ನಾಗಿ ಅನುಸರಿಸುತ್ತಿದ್ದೀಯ. ನಿನಗೆ ಹಾರ್ದಿಕ ಅಭಿನಂದನೆಗಳು. ಇನ್ಮುಂದೆ ಈ ಜಗತ್ತನ್ನು ನಿನ್ನದಾಗಿಸಿಕೊಳ್ಳು!” ಎಂದು ಮಗನ ಬೆನ್ನನ್ನು ತಟ್ಟಿದ್ದಾರೆ.













