Last Updated:
ಅನಂತ್ ನಾಗ್ ಅವರು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಭಾಜನರಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಹಿರಿಯ ನಟ ಸಂತಸ ಹಂಚಿಕೊಂಡಿದ್ದಾರೆ. ಆದ್ರೆ, ಈ ವೇಳೆ ಕನ್ನಡದ ಚಿತ್ರರಂಗದ ಈಗಿನ ಬೆಳವಣಿಗೆ ಬಗ್ಗೆ ಬೇಸರ ಹೊರಹಾಕಿದ್ದಾರೆ.
ಅನಂತ್ ನಾಗ್ (Ananth Nag) ನಟನಾ ಲೋಕದ ಧ್ರುವತಾರೆ. ಪಾತ್ರ ಯಾವುದೇ ಇರಲಿ, ಆ ಪಾತ್ರಕ್ಕೆ ಜೀವ ತುಂಬುವ ಅದ್ಭುತ ಪ್ರತಿಭೆ.. ಸರಳತೆ, ಸೌಮ್ಯತೆ ಮತ್ತು ಸಹಜ ಅಭಿನಯದಿಂದ ಕೋಟ್ಯಂತರ ಕನ್ನಡಿಗರ ಮನ ಗೆದ್ದ ಮಹಾನ್ ನಟ. ಅಷ್ಟೇ ಯಾಕೆ ನಟನೆಯಲ್ಲಿ ನವರಸಗಳನ್ನ ಹರಿಸಬಲ್ಲ, ಪ್ರೇಕ್ಷಕರ ಮನಸ್ಸಿನಲ್ಲಿ ಆಳವಾಗಿ ಬೇರೂರ ಬಲ್ಲ ನಟ ಅಂದ್ರೆ ಅದು ಅನಂತ್ ನಾಗ್. ಇವರು ಕೇವಲ ಬಣ್ಣ ಹಚ್ಚಿ ನಟರಾದವರಲ್ಲ. ಬದಲಿಗೆ ಪಾತ್ರವನ್ನೇ ಜೀವಂತವಾಗಿಸಿ ನಟರಾದವರು.
ಹೀಗಾಗಿಯೇ ಇವತ್ತಿಗೂ ಎವರ್ಗ್ರೀನ್ ನಟ ಅಂತಾ ಕರೆಸಿಕೊಳ್ತಿರೋದು. ಅನಂತ್ ನಾಗ್ಗೆ ವಯಸ್ಸಾಗಿರಬಹುದು, ಆದ್ರೆ, ಅವರ ನಟನೆಗೆ ವಯಸ್ಸಾಗಿಲ್ಲ. ಅವರಲ್ಲಿರೋ ಉತ್ಸಾಹಕ್ಕೆ ವಯಸ್ಸಾಗಿಲ್ಲ. ಪ್ರಶಸ್ತಿಗಳ ಸರಮಾಲೆಯನ್ನೇ ಹೊತ್ತ, ಮಹಾನಟನಿಗೆ ಈಗ ಮತ್ತೊಂದು ಕಿರೀಟ ಮುಡಿಗೇರಿದೆ. ಕೇಂದ್ರ ಸರ್ಕಾರ ಕೊಡಮಾಡುವ ಮಹೋನ್ನತ ಪ್ರಶಸ್ತಿ ಅನಂತ್ನಾಗ್ರನ್ನ ಅರಸಿ ಬಂದಿದೆ.
ಮುಂದುವರೆದು ಮಾತನಾಡಿದ ಅವರು, ಇದು ಜೀವಮಾನದ ಸಾಧನೆ. 1995ರಲ್ಲಿ ಡಾ. ರಾಜ್ಕುಮಾರ್ ಅವರಿಗೆ ಲಭಿಸಿತ್ತು. ಈಗ ನನಗೆ ಬಂದಿದೆ ಬಹಳ ಸಂತೋಷ ಇದೆ. ಡಾ. ರಾಜ್ಕುಮಾರ್ ಅವರು ಎಂತೆಂಥಹ ಸಿನಿಮಾಗಳನ್ನ ಮಾಡಿದರು. ದೊಡ್ಡ ದೊಡ್ಡ ಪೌರಾಣಿಕ ಸಿನಿಮಾಗಳನ್ನ ಮಾಡಿದರು. ಅವರು ಹಾಕಿದ್ದ ರಸ್ತೆಯಲ್ಲಿ ನಾವೆಲ್ಲ ಬಂದ್ವಿ. ಕರಾವಳಿಯಲ್ಲಿ ಬೆಳೆದವ ನಾನು. ಮುಂಬೈಗೆ ಹೋದ್ರೂ ಕನ್ನಡ ನಾಟಕಗಳನ್ನ ಮಾಡಿದೆ. ಕಾದಂಬರಿ ಆಧಾರಿತ ಸಿನಿಮಾಗಳನ್ನ ಮಾಡಿದ್ದೆ ಎಂದು ಅನಂತ್ ನಾಗ್ ಅವರು ತಮ್ಮ ಸಿನಿಮಾ ಎಂಟ್ರಿ ಸಿನಿಮಾ ಎಂಟ್ರಿ ಮತ್ತು ತಮ್ಮ ಹಳೆಯ ಸಿನಿಮಾಗಳನ್ನ ಮೆಲಕು ಹಾಕಿದರು.
ಡಾ. ರಾಜ್ಕುಮಾರ್ ಅವರು ಎಂತೆಥಹ ಸಿನಿಮಾಗಳು ಮಾಡಿದರು. ಅಂತಹ ಸಿನಿಮಾಗಳು ಇವತ್ತು ಮಾಡೋಕೆ ಆಗುತ್ತಾ? ಎಂದು ಕನ್ನಡ ಚಿತ್ರರಂಗದ ಈಗಿನ ಬೆಳವಣಿಗೆ ಬಗ್ಗೆ ಅನಂತ್ ನಾಗ್ ಬೇಸರ ಹೊರಹಾಕಿದರು. ಈಗ ಫ್ಯಾಮಿಲಿ ಅನ್ನೋದೆ ಮರೆತಿದ್ದಾರೆ. ಅಸಲಿ ಮನರಂಜನೆ ಅನ್ನೋದನ್ನೇ ಮರೆತಿದ್ದಾರೆ. ಬರೀ ವೈಲೆನ್ಸ್ ವೈಲೆನ್ಸ್ ಅನ್ನೋ ರೀತಿಯ ಸಿನಿಮಾ. ಈಗಿನವರು ಮನರಂಜನೆ ಸಿನಿಮಾಗಳ ಬಗ್ಗೆ ಗಮನವಹಿಸಬೇಕು. ಸಾಹಿತ್ಯ ಇಲ್ಲ, ಬರಹಗಾರರೇ ಇಲ್ಲ, ನಿರ್ಮಾಪಕರ ನಿರ್ದೇಶಕರು ಗಮನಿಸಬೇಕು. ಪ್ಯಾನ್ ಇಂಡಿಯಾ ಹುಚ್ಚಿನ ಬಗ್ಗೆ ಹಿರಿಯ ನಟ ಅನಂತ್ ನಾಗ್ ಬೇಸರ ಹೊರಹಾಕಿದರು.
ಈ ಹಿಂದೆ ಹೆಣ್ಣುಮಕ್ಕಳು ಸಾಹಿತ್ಯ ಬರೀತಿದ್ರು. ಆಗಿನ ರೀತಿ ಕಥೆಗಳು ಬರ್ತಿಲ್ಲ. ಮನರಂಜನೆ ಅನ್ನೋದೆ ಇಲ್ಲ ಹೀಗಾದ್ರೆ, ಎಲ್ಲಿಂದ ಜನ ಥಿಯೇಟರ್ಗೆ ಬರ್ತಾರೆ. ಹಣ ಕೊಟ್ಟು ತಿಂಡಿ ತಿನ್ನಬಹುದು. ಬಿಸ್ಕೆಟ್, ಸ್ವೀಟ್ ತಿನ್ನಬಹುದು. ಆದರೆ, ದುಡ್ಡು ಕೊಟ್ಟು ಸಿನಿಮಾಗೆ ಬರೋ ಜನ ಮನರಂಜನೆ ಬಯಸ್ತಾರೆ. ಅಲ್ಲಿ ತಿಂಡಿ ಸಿಗುತ್ತಾ ಜನರಿಗೆ. ಅವರಿಗೆ ಮನರಂಜನೆ ಕೊಡಬೇಕು. ಆ ನಿಟ್ಟಿನಲ್ಲಿ ಈಗಿನವರು ಕೆಲಸ ಮಾಡಬೇಕು. ಎಂದು ಅನಂತ್ ನಾಗ್ ಅವರು ಕಿವಿಮಾತು ಹೇಳಿದರು.
ಈಗಿನವರಿಗೆ ಹೇಳಲಿಕ್ಕೆ ಆಗೋದಿಲ್ಲ, ಆದ್ರೂ ಹಿರಿಯರಾಗಿ ನಾವು ಕೆಲವನ್ನ ಹೇಳ್ತೀವಿ. ಜನರಿಗೆ ಮನರಂಜನೆ ಕೊಡುವ ಸಿನಿಮಾಗಳನ್ನ ಮಾಡಬೇಕು ಎಂದು ಹಿರಿಯ ನಟ ಅನಂತ್ ನಾಗ್ ಅವರು ಹೇಳಿದರು.
(ವರದಿ: ಮಾದೇಶ್, ನ್ಯೂಸ್18 ಕನ್ನಡ, ಬೆಂಗಳೂರು)














