Last Updated:
ಮೈಸೂರಿನ ಶಿಲ್ಪಾ ಕಾಮನ್ವೆಲ್ತ್ ಪ್ಯಾರಾ ಅಥ್ಲೆಟಿಕ್ಸ್ ಶಾಟ್ಪುಟ್ನಲ್ಲಿ ಕಂಚು ಗೆದ್ದು, ಭಾರತಕ್ಕೆ ಕೀರ್ತಿ ತಂದರು. ಅಪಘಾತದಲ್ಲಿ ಕಾಲು ಕಳೆದುಕೊಂಡರೂ, ಕ್ರೀಡೆಯಲ್ಲಿ ಸಾಧನೆ.
ಮೈಸೂರು: ಮನಸ್ಸಿದ್ದರೆ ಮಾರ್ಗ ಎನ್ನುವ ಮಾತಿಗೆ ಮೈಸೂರು (Mysuru) ಜಿಲ್ಲೆಯ ಕೆ.ಆರ್.ನಗರ (K R Nagara) ತಾಲೂಕಿನ ಕಂಚಗಾರಕೊಪ್ಪಲು ಗ್ರಾಮದ ಯುವತಿ ಶಿಲ್ಪಾ ಅಕ್ಷರಶಃ ಜೀವಂತ ಉದಾಹರಣೆಯಾಗಿದ್ದಾರೆ. ಸ್ಕಾಟ್ಲೆಂಡ್ನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಪ್ಯಾರಾ ಅಥ್ಲೆಟಿಕ್ಸ್ (Para Athletics) ಕ್ರೀಡಾಕೂಟದ ಶಾಟ್ಪುಟ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು, ಭಾರತ ಹಾಗೂ ಕರ್ನಾಟಕದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಎತ್ತಿಹಿಡಿದಿದ್ದಾರೆ. ವಿಶೇಷವೆಂದರೆ, ಈ ಕ್ರೀಡಾಕೂಟಕ್ಕೆ ಆಯ್ಕೆಯಾದ ಏಕೈಕ ಕನ್ನಡತಿ ಎಂಬ ಹೆಗ್ಗಳಿಕೆಗೂ ಶಿಲ್ಪಾ ಪಾತ್ರರಾಗಿದ್ದಾರೆ.
ಗ್ರಾಮೀಣ ಪರಿಸರದಲ್ಲಿ ಬೆಳೆದ ಶಿಲ್ಪಾ, ಕಷ್ಟದ ನಡುವೆಯೇ ವಿದ್ಯಾಭ್ಯಾಸ ಮುಗಿಸಿ ಸ್ನಾತಕೋತ್ತರ ಪದವಿ ಮತ್ತು ಬಿ.ಎಡ್ ಪೂರ್ಣಗೊಳಿಸಿದರು. ಬಳಿಕ ಮೈಸೂರಿನಲ್ಲಿ ಶಿಕ್ಷಕಿಯಾಗಿ ಕೆಲಸ ಆರಂಭಿಸಿದರು. ಬದುಕು ಇದೇ ದಾರಿಯಲ್ಲಿ ಸಾಗುತ್ತದೆ ಎನ್ನುವಷ್ಟರಲ್ಲಿ, ಬಸ್ ಪ್ರಯಾಣದ ವೇಳೆ ಪರಿಚಯವಾದ ಗೆಳತಿ ಗೀತಾ ನೀಡಿದ ಒಂದು ಸಲಹೆ ಅವರ ಬದುಕಿನ ದಿಕ್ಕನ್ನೇ ಬದಲಿಸಿತು.
2019ರಲ್ಲಿ, ತಮ್ಮ 29ನೇ ವಯಸ್ಸಿನಲ್ಲಿ, ಶಿಲ್ಪಾ ಪ್ಯಾರಾ ಕ್ರೀಡಾ ಲೋಕಕ್ಕೆ ಕಾಲಿಟ್ಟರು. ಮೊದಲಿಗೆ ಸಿಟ್ಟಿಂಗ್ ವಾಲಿಬಾಲ್ ತಂಡದಲ್ಲಿ ಆಡುತ್ತಾ ಕರ್ನಾಟಕ ತಂಡವನ್ನು ನಾಲ್ಕು ಬಾರಿ ಮುನ್ನಡೆಸಿದರು. ನಂತರ ಕೋಚ್ ರಾಘವೇಂದ್ರ ಅವರ ಸಲಹೆಯಂತೆ ಶಾಟ್ಪುಟ್ ಮತ್ತು ಡಿಸ್ಕಸ್ ಥ್ರೋ ವಿಭಾಗದಲ್ಲಿ ಅಭ್ಯಾಸ ಆರಂಭಿಸಿದರು. ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಕೋಚ್ ಎಸ್.ಡಿ. ಈಶಾನ್ ಅವರಿಂದ ಕಠಿಣ ತರಬೇತಿ ಪಡೆದು, ಸತ್ಯನಾರಾಯಣ ಅವರ ಮಾರ್ಗದರ್ಶನದಲ್ಲಿ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಸಿದ್ಧರಾದರು.
ಕೋಚ್ ಇಶಾನ್ ಅವರ ಮಾರ್ಗದರ್ಶನದಲ್ಲಿ ಕಳೆದ ಒಂದು ವರ್ಷದಿಂದ ಕಠಿಣ ತರಬೇತಿ ಪಡೆದ ಶಿಲ್ಪಾ, ಇಂದು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. “ದೈಹಿಕ ಮಿತಿಗಳು ಸಾಧನೆಗೆ ಎಂದಿಗೂ ಅಡ್ಡಿಯಾಗುವುದಿಲ್ಲ” ಎಂಬುದನ್ನು ತಮ್ಮ ಅಚಲ ವಿಶ್ವಾಸದಿಂದ ಸಾಬೀತುಪಡಿಸಿರುವ ಶಿಲ್ಪಾ ಅವರ ಈ ಯಶಸ್ಸು, ಗ್ರಾಮೀಣ ಭಾಗದ ಯುವಜನತೆಗೆ ಹಾಗೂ ವಿಶೇಷಚೇತನ ಕ್ರೀಡಾಪಟುಗಳಿಗೆ ದೊಡ್ಡ ಸ್ಪೂರ್ತಿಯಾಗಿದೆ.
Mysore,Mysore,Karnataka













