Last Updated:
ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನಪ್ಪಿದ್ದಾರೆ. ಅಲ್ಲದೇ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸಾರಿಗೆ ಬಸ್ ಮತ್ತು ಕಾರಿನ (Bus Car Accident) ಮಧ್ಯೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ರಾಜಸ್ಥಾನದ (Rajasthan) ಬಲೋತ್ರಾ ಜಿಲ್ಲೆಯ ಪಚ್ಪದ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಈ ಭೀಕರ ರಸ್ತೆ ಅಪಘಾತ ಇಡೀ ಪ್ರದೇಶವನ್ನು ಶೋಕದಲ್ಲಿ ಮುಳುಗಿಸಿದೆ. ಮನೆಯಿಂದ ಕೆಲಸಕ್ಕೆ ಹೊರಟಿದ್ದ ಒಂದೇ ಕುಟುಂಬದ 4 ಸಹೋದರರು ಬಸ್ ಮತ್ತು ಆಲ್ಟೋ ಕಾರಿನ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಸಾವನ್ನಪ್ಪಿದ್ದಾರೆ. ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗುವಷ್ಟು ಈ ಅಪಘಾತ ಭೀಕರವಾಗಿತ್ತು.
ವರದಿಗಳ ಪ್ರಕಾರ, ಬೆಳಿಗ್ಗೆ ಸುಮಾರು 10 ಗಂಟೆ ಸಮಯದಲ್ಲಿ ಪಚ್ಪದ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಗೋಲಿಯಾ–ಪರೇಯು ವೃತ್ತದ ಬಳಿ ಈ ದುರಂತ ಸಂಭವಿಸಿದೆ. 4 ಸಹೋದರರು ತಮ್ಮ ಕೆಲಸದ ಸ್ಥಳಕ್ಕೆ ಹೋಗಲು ಆಲ್ಟೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಬಾರ್ಮರ್ ನಿಂದ ಜೋಧ್‌ಪುರ ಕಡೆಗೆ ಹೋಗುತ್ತಿದ್ದ ರಾಜಸ್ಥಾನ್ ರೋಡ್‌ವೇಸ್ ಬಸ್ ಕಾರು ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ.
ಪ್ರತ್ಯಕ್ಷದರ್ಶಿಗಳ ಹೇಳಿಕೆಯಲ್ಲಿ, ಡಿಕ್ಕಿಯ ತೀವ್ರತೆ ತುಂಬಾ ಜಾಸ್ತಿ ಇದ್ದುದರಿಂದ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂ ಆಗಿದ್ದು, ಈ ಅಪಘಾತದ ಶಬ್ದ ಕೇಳಿದ ಗ್ರಾಮಸ್ಥರು ತಕ್ಷಣ ಸ್ಥಳಕ್ಕೆ ಓಡಿ ಬಂದಿದ್ದಾರೆ. ಕಾರಿನೊಳಗೆ 4 ಯುವಕರು ಸಿಲುಕಿಕೊಂಡಿರುವುದನ್ನು ನೋಡಿ ಎಲ್ಲರೂ ಬೆಚ್ಚಿಬಿದ್ದರು. ಗ್ರಾಮಸ್ಥರು ತಕ್ಷಣ ರಕ್ಷಣಾ ಕಾರ್ಯ ಆರಂಭಿಸಿ, ಬಹಳ ಪ್ರಯತ್ನದ ಬಳಿಕ ಕಾರಿನೊಳಗಿದ್ದ ಗಾಯಾಳುಗಳನ್ನು ಹೊರತೆಗೆದರು. ವಿಷಯ ತಿಳಿದ ಕೂಡಲೇ ಪಟೌಡಿ ಹೊರಠಾಣೆ ಹಾಗೂ ಪಚ್ಪದ್ರಾ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಬಂದು, ಗಾಯಾಳುಗಳನ್ನು ಮೊದಲು ಪಟೌಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಇಬ್ಬರು ಸಹೋದರರು ಆಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು.
ಇನ್ನೂ ಇಬ್ಬರು ಸಹೋದರರು ಗಂಭೀರವಾಗಿ ಗಾಯಗೊಂಡಿದ್ದರಿಂದ ಅವರನ್ನು ಉತ್ತಮ ಚಿಕಿತ್ಸೆಗೆ ಬಲೋತ್ರಾದ ನಹತಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ದಾರಿಯಲ್ಲಿಯೇ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ. ಒಂದೇ ಕುಟುಂಬದ ನಾಲ್ವರು ಸಹೋದರರ ಸಾವು ಗ್ರಾಮದ ಜನರಿಗೆ ನಂಬಲಸಾಧ್ಯವಾದ ಆಘಾತವನ್ನುಂಟುಮಾಡಿದೆ. ಕುಟುಂಬದ ನಾಲ್ವರು ಸಹೋದರರು ತಮ್ಮ ಕುಟುಂಬವನ್ನು ಅಗಲಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದ್ದು, ಪ್ರತಿಯೊಬ್ಬರ ಕಣ್ಣು ತೇವಗೊಂಡಿದೆ. ಮನೆಯನ್ನು ನಡೆಸುತ್ತಿದ್ದ ನಾಲ್ವರು ಯುವಕರನ್ನು ಒಂದೇ ಕ್ಷಣದಲ್ಲಿ ಕಳೆದುಕೊಂಡ ಕುಟುಂಬದ ದುಃಖವನ್ನು ಹೇಳತೀರದು. ಈ ಘಟನೆಯ ನಂತರ ಸ್ಥಳೀಯರಲ್ಲಿ ಕೋಪವೂ ಹೆಚ್ಚಾಗಿದೆ. ಈ ಪ್ರದೇಶದಲ್ಲಿ ಸುರಕ್ಷತಾ ಕ್ರಮಗಳ ಕೊರತೆಯಿಂದಾಗಿ ನಿರಂತರವಾಗಿ ಅಪಘಾತಗಳು ನಡೆಯುತ್ತಿವೆ, ಆದರೆ ಸರಿಯಾದ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬ ಆಕ್ರೋಶದೊಂದಿಗೆ ಗ್ರಾಮಸ್ಥರು ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಿಸ್ಥಿತಿ ತೀವ್ರಗೊಳ್ಳುತ್ತಿರುವುದನ್ನು ಗಮನಿಸಿದ ಪಚ್ಪದ್ರಾ ಪೊಲೀಸ್ ಠಾಣಾಧಿಕಾರಿ ಗೀತಾ ಕುಮಾರಿ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದು ಜನರೊಂದಿಗೆ ಮಾತನಾಡಿದರು. ಅವರು ಪರಿಸ್ಥಿತಿಯನ್ನು ವಿವರಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದರು. ಪೊಲೀಸರ ಮನವಿಯ ಬಳಿಕ ಗ್ರಾಮಸ್ಥರು ರಸ್ತೆ ತಡೆ ತೆಗೆದುಹಾಕಿ ಸಂಚಾರವನ್ನು ಪುನಃ ಆರಂಭಿಸಲು ಅವಕಾಶ ನೀಡಿದರು.
ಪೊಲೀಸರು ಈ ಅಪಘಾತದ ಕುರಿತು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ಹಂತದಲ್ಲಿ ಅಪಘಾತದ ನಿಖರ ಕಾರಣವನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ. ಅಪಘಾತ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದ್ದು, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ. ತನಿಖೆ ಪೂರ್ಣಗೊಂಡ ಬಳಿಕವೇ ಇದು ಅತಿವೇಗ, ನಿರ್ಲಕ್ಷ್ಯ ಅಥವಾ ಬೇರೆ ಕಾರಣದಿಂದ ಸಂಭವಿಸಿತೇ ಎಂಬುದು ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.













