Last Updated:
Aamir Khan: ಹಲವು ವರ್ಷಗಳಿಂದ ಭಾರತೀಯ ಚಿತ್ರರಂಗದಲ್ಲಿ ಯಶಸ್ವಿ ನಟ, ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಆಮಿರ್ ಖಾನ್ ಇದೀಗ 61ನೇ ವಯಸ್ಸಿನಲ್ಲಿ ಹೊಸ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎಂಬ ವರದಿಗಳು ಸಿನಿರಂಗದಲ್ಲಿ ಚರ್ಚೆಗೆ ಕಾರಣವಾಗಿವೆ.
ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಖ್ಯಾತಿ ಪಡೆದಿರುವ ಆಮಿರ್ ಖಾನ್ (Aamir Khan) ಮತ್ತೊಮ್ಮೆ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಸುದ್ದಿಯಲ್ಲಿದ್ದಾರೆ . ಹಲವು ವರ್ಷಗಳಿಂದ ಭಾರತೀಯ ಚಿತ್ರರಂಗದಲ್ಲಿ ಯಶಸ್ವಿ ನಟ, ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಆಮಿರ್ ಖಾನ್ ಇದೀಗ 61ನೇ ವಯಸ್ಸಿನಲ್ಲಿ ಹೊಸ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎಂಬ ವರದಿಗಳು ಸಿನಿರಂಗದಲ್ಲಿ ಚರ್ಚೆಗೆ ಕಾರಣವಾಗಿವೆ. ಉದ್ಯಮಿ ಹಾಗೂ ದೀರ್ಘಕಾಲದ ಗೆಳತಿಯಾಗಿರುವ ಗೌರಿ ಸ್ಪ್ರಾಟ್ (Gauri Spratt) ಅವರೊಂದಿಗೆ ಅವರು ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಆಮಿರ್ ಖಾನ್ ಮತ್ತು ಗೌರಿ ಸ್ಪ್ರಾಟ್ ಅವರ ಸಂಬಂಧದ ಬಗ್ಗೆ ಕಳೆದ ಕೆಲವು ತಿಂಗಳುಗಳಿಂದ ಹಲವು ಊಹಾಪೋಹಗಳು ಕೇಳಿಬರುತ್ತಿದ್ದವು. ಇದೀಗ ಆ ಸಂಬಂಧಕ್ಕೆ ಕಾನೂನುಬದ್ಧ ಮಾನ್ಯತೆ ನೀಡಲು ಇಬ್ಬರೂ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಈ ಬೆಳವಣಿಗೆ ಬಾಲಿವುಡ್ ಅಭಿಮಾನಿಗಳಲ್ಲಿ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ವರದಿಗಳ ಪ್ರಕಾರ, ಆಮಿರ್ ಖಾನ್ ಮತ್ತು ಗೌರಿ ಸ್ಪ್ರಾಟ್ ಜುಲೈ 5ರಂದು ಸರಳ ಹಾಗೂ ಖಾಸಗಿ ಸಮಾರಂಭದಲ್ಲಿ ವಿವಾಹವಾಗಲಿದ್ದಾರೆ. ಈ ಮದುವೆ ಯಾವುದೇ ಅದ್ಧೂರಿ ಕಾರ್ಯಕ್ರಮವಲ್ಲದೆ, ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಡೆಯುವ ನೋಂದಣಿ ವಿವಾಹವಾಗಿರಲಿದೆ ಎಂದು ತಿಳಿದುಬಂದಿದೆ.
ಗೌರಿ ಸ್ಪ್ರಾಟ್ ಮೂಲತಃ ಬೆಂಗಳೂರಿನವರು. ಅವರು ತಮ್ಮ ಬಾಲ್ಯ ಹಾಗೂ ಜೀವನದ ಬಹುಪಾಲು ಸಮಯವನ್ನು ಬೆಂಗಳೂರಿನಲ್ಲೇ ಕಳೆದಿದ್ದಾರೆ. ಅವರ ತಾಯಿ ರೀಟಾ ಸ್ಪ್ರಾಟ್ ನಗರದಲ್ಲಿ ಪ್ರಸಿದ್ಧ ಸಲೂನ್ ನಡೆಸುತ್ತಿದ್ದರು.
ಶೈಕ್ಷಣಿಕವಾಗಿ ಕೂಡ ಗೌರಿ ಉತ್ತಮ ಹಿನ್ನೆಲೆಯನ್ನು ಹೊಂದಿದ್ದಾರೆ. ಅವರು ಬೆಂಗಳೂರಿನ ಬ್ಲೂ ಮೌಂಟೇನ್ ಶಾಲೆಯಲ್ಲಿ ಶಿಕ್ಷಣ ಪಡೆದ ಬಳಿಕ ಲಂಡನ್ನ ಆರ್ಟ್ಸ್ ವಿಶ್ವವಿದ್ಯಾಲಯದಲ್ಲಿ ಫ್ಯಾಷನ್, ಸ್ಟೈಲಿಂಗ್ ಮತ್ತು ಫೋಟೋಗ್ರಫಿ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ.
ಆಮಿರ್ ಖಾನ್ ಅವರ ವೈಯಕ್ತಿಕ ಜೀವನ ಸದಾ ಸುದ್ದಿಯಲ್ಲಿರುತ್ತದೆ. ಅವರು 1986ರಲ್ಲಿ ತಮ್ಮ ಬಾಲ್ಯದ ಗೆಳತಿ ರೀನಾ ದತ್ತಾ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಜುನೈದ್ ಖಾನ್ ಮತ್ತು ಇರಾ ಖಾನ್ ಎಂಬ ಇಬ್ಬರು ಮಕ್ಕಳು ಇದ್ದಾರೆ. ಜುನೈದ್ ಈಗ ಚಿತ್ರರಂಗದಲ್ಲಿ ತಮ್ಮದೇ ಆದ ಗುರುತು ಮೂಡಿಸುವ ಪ್ರಯತ್ನದಲ್ಲಿದ್ದರೆ.
ಸುಮಾರು 16 ವರ್ಷಗಳ ದಾಂಪತ್ಯ ಜೀವನದ ನಂತರ ಆಮಿರ್ ಮತ್ತು ರೀನಾ 2002ರಲ್ಲಿ ವಿಚ್ಛೇದನ ಪಡೆದರು. ಬಳಿಕ 2005ರಲ್ಲಿ ಅವರು ಕಿರಣ್ ರಾವ್ ಅವರನ್ನು ವಿವಾಹವಾದರು. ಲಗಾನ್ ಚಿತ್ರದ ಸಮಯದಲ್ಲಿ ಆರಂಭವಾದ ಪರಿಚಯ ಪ್ರೀತಿಗೆ ತಿರುಗಿ ಮದುವೆಯವರೆಗೆ ತಲುಪಿತ್ತು.
ಆದರೆ 2021ರಲ್ಲಿ ಆಮಿರ್ ಮತ್ತು ಕಿರಣ್ ರಾವ್ ತಮ್ಮ ದಾಂಪತ್ಯ ಜೀವನವನ್ನು ಅಂತ್ಯಗೊಳಿಸಿದರು. ವಿಚ್ಛೇದನದ ನಂತರವೂ ಇಬ್ಬರೂ ಸ್ನೇಹಪೂರ್ಣ ಸಂಬಂಧವನ್ನು ಉಳಿಸಿಕೊಂಡಿದ್ದು, ತಮ್ಮ ಮಗ ಆಜಾದ್ನ ಸಹ-ಪೋಷಕರಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.
ಆಮಿರ್ ಖಾನ್ ಅವರ ಮೂರನೇ ವಿವಾಹದ ಕುರಿತ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿವೆ. ಆದರೆ ಮದುವೆ ಕುರಿತು ಅಧಿಕೃತ ಘೋಷಣೆ ಹೊರಬಿದ್ದಿಲ್ಲ.
Bangalore [Bangalore],Bangalore,Karnataka













