Last Updated:
ಹೌದು ಇತ್ತೀಚಿಗೆ ಹೈದರಾಬಾದ್ನಲ್ಲಿ ನಡೆದ ಅಭಿಮಾನಿಗಳ ಭೇಟಿ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ತಮ್ಮ ಫ್ಯಾನ್ಸ್ ಅಸೋಸಿಯೇಷನ್ ಸದಸ್ಯರಿಗೆ ಉಚಿತ ಅಪಘಾತ ವಿಮೆ ಸೌಲಭ್ಯವನ್ನು ಘೋಷಿಸಿದರು.
ಟಾಲಿವುಡ್ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ತಮ್ಮ ಅಭಿನಯದ ಮೂಲಕ ಮಾತ್ರವಲ್ಲ, ಅಭಿಮಾನಿಗಳ ಮೇಲಿನ ಕಾಳಜಿಯಿಂದಲೂ ಹಲವು ಬಾರಿ ಸುದ್ದಿಯಾಗಿದ್ದಾರೆ. ಕಷ್ಟದಲ್ಲಿರುವ ಅಭಿಮಾನಿಗಳಿಗೆ ನೆರವಾಗುವುದು, ಅವರ ಕುಟುಂಬಗಳನ್ನು ಭೇಟಿ ಮಾಡುವುದು ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ನಟ ತೊಡಗಿಸಿಕೊಂಡಿದ್ದಾರೆ. ಇದೀಗ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆಲ್ಲುವಂತಹ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ.
ಹೌದು ಇತ್ತೀಚಿಗೆ ಹೈದರಾಬಾದ್ನಲ್ಲಿ ನಡೆದ ಅಭಿಮಾನಿಗಳ ಭೇಟಿ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ತಮ್ಮ ಫ್ಯಾನ್ಸ್ ಅಸೋಸಿಯೇಷನ್ ಸದಸ್ಯರಿಗೆ ಉಚಿತ ಅಪಘಾತ ವಿಮೆ ಸೌಲಭ್ಯವನ್ನು ಘೋಷಿಸಿದರು. ಯಾವುದೇ ಪ್ರವೇಶ ಶುಲ್ಕ ಅಥವಾ ಪೇಯ್ಡ್ ಮೆಂಬರ್ಶಿಪ್ ಇಲ್ಲದೆ ಈ ಯೋಜನೆ ಜಾರಿಗೆ ಬರುತ್ತಿರುವುದು ವಿಶೇಷವಾಗಿದೆ.
My Dear Fansss… 🖤
Seeing all of you coming from different places for this event is really heart touching. Thank you for all the love. Humbled . Hope to make you all more mad proud. 🖤 pic.twitter.com/HV9mHSA9aW
— Allu Arjun (@alluarjun) July 28, 2026
ಈ ವಿಮೆ ಯೋಜನೆಯಿಂದ ಸುಮಾರು 900ಕ್ಕೂ ಹೆಚ್ಚು ಅಭಿಮಾನಿಗಳಿಗೆ ನೇರ ಪ್ರಯೋಜನ ದೊರೆಯಲಿದೆ. ರಾಜ್ಯ ಸಮಿತಿ ಸದಸ್ಯರಿಗೆ 5 ಲಕ್ಷ ರೂಪಾಯಿಗಳ ಅಪಘಾತ ವಿಮೆ ನೀಡಲಾಗುತ್ತದೆ. ಜಿಲ್ಲಾ ಸಮಿತಿ ಸದಸ್ಯರಿಗೆ 3 ಲಕ್ಷ ರೂಪಾಯಿಗಳ ವಿಮೆ ಸೌಲಭ್ಯ ದೊರೆಯಲಿದೆ. ಅಭಿಮಾನಿಗಳ ಸಂಘಟನೆಗೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆ ಆಗದಂತೆ ಉಚಿತವಾಗಿ ಈ ಯೋಜನೆಯನ್ನು ಜಾರಿಗೊಳಿಸಿರುವುದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಸಿನಿಮಾ ನಟರು ಅಭಿಮಾನಿಗಳೊಂದಿಗೆ ಹಲವು ರೀತಿಯಲ್ಲಿ ಸಂಪರ್ಕದಲ್ಲಿರುತ್ತಾರೆ. ಆದರೆ ತಮ್ಮ ಅಭಿಮಾನಿ ಸಂಘದ ಸದಸ್ಯರಿಗೆ ನೇರವಾಗಿ ವಿಮೆ ಮಾಡಿಸುವ ನಿರ್ಧಾರ ಕೈಗೊಂಡಿರುವ ಉದಾಹರಣೆಗಳು ಬಹಳ ವಿರಳ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳ ಕಲ್ಯಾಣಕ್ಕಾಗಿ ಇಂತಹ ವ್ಯವಸ್ಥೆ ಕಲ್ಪಿಸಿದ ಮೊದಲ ಪ್ರಮುಖ ಭಾರತೀಯ ಸ್ಟಾರ್ ನಟರಲ್ಲಿ ಅಲ್ಲು ಅರ್ಜುನ್ ಹೆಸರು ಸೇರ್ಪಡೆಯಾಗಿದೆ ಎನ್ನಲಾಗುತ್ತಿದೆ.
ವಿಮೆ ಘೋಷಣೆಯ ಜೊತೆಗೆ ಅಲ್ಲು ಅರ್ಜುನ್ ತಮ್ಮ ಅಭಿಮಾನಿಗಳಿಗೆ ಮಹತ್ವದ ಸಂದೇಶವನ್ನೂ ನೀಡಿದರು. ನಿಮ್ಮ ಶಕ್ತಿ, ಸಮಯ ಮತ್ತು ಉತ್ಸಾಹವನ್ನು ಒಳ್ಳೆಯ ಕೆಲಸಗಳಿಗೆ ಬಳಸಿಕೊಳ್ಳಿ ಎಂದು ಮನವಿ ಮಾಡಿದರು.
ಇದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಇತರ ನಟರು ಅಥವಾ ಅವರ ಅಭಿಮಾನಿಗಳನ್ನು ಟೀಕಿಸುವುದು, ಟ್ರೋಲ್ ಮಾಡುವುದು ಅಥವಾ ಅನಗತ್ಯ ವಿವಾದಗಳನ್ನು ಸೃಷ್ಟಿಸುವುದನ್ನು ತಪ್ಪಿಸಿಕೊಳ್ಳುವಂತೆ ಮನವಿ ಮಾಡಿದರು.
ಇತ್ತೀಚಿನ ದಿನಗಳಲ್ಲಿ ಅಲ್ಲು ಅರ್ಜುನ್ ಈ ರೀತಿಯ ಸಾಮಾಜಿಕ ಕಾರ್ಯಕ್ರಮಗಳು ಮತ್ತು ಅಭಿಮಾನಿಗಳ ಸಂಘಟನೆಯನ್ನು ಬಲಪಡಿಸುವ ಕ್ರಮಗಳು ರಾಜಕೀಯ ಪ್ರವೇಶದ ಕುರಿತು ಚರ್ಚೆಗೆ ಕಾರಣವಾಗಿವೆ. ವಿಶೇಷವಾಗಿ ತಮಿಳು ನಟ ದಳಪತಿ ವಿಜಯ್ ರಾಜಕೀಯ ಪ್ರವೇಶಕ್ಕೂ ಮುನ್ನ ತಮ್ಮ ಅಭಿಮಾನಿ ಸಂಘಟನೆಗಳನ್ನು ಸಾಮಾಜಿಕ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಹಿನ್ನೆಲೆಯಲ್ಲಿ, ಅಲ್ಲು ಅರ್ಜುನ್ ಅವರ ಈ ನಡೆ ಕೂಡ ಕೆಲವರಲ್ಲಿ ಇದೇ ರೀತಿಯ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹೀಗಾಗಿ ಅಲ್ಲು ಅರ್ಜುನ್ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದಾರಾ ಎಂಬ ಪ್ರಶ್ನೆ ಕೆಲವರಲ್ಲಿ ಮೂಡಿದೆ.
ಅಲ್ಲು ಅರ್ಜುನ್ ಅವರ ಈ ನಿರ್ಧಾರಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳನ್ನು ಕೇವಲ ಸಿನಿಮಾ ನೋಡುವವರಂತೆ ಕಾಣದೆ, ಅವರ ಸುರಕ್ಷತೆ ಮತ್ತು ಭವಿಷ್ಯದ ಬಗ್ಗೆ ಕಾಳಜಿ ವಹಿಸಿರುವುದು ಶ್ಲಾಘನೀಯ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
Bangalore [Bangalore],Bangalore,Karnataka
Jul 29, 2026 10:21 AM IST














