Last Updated:
ಕನ್ನಡದ ಹೆಮ್ಮೆಯ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivarajkumar) ತಮ್ಮ 64ನೇ ಜನ್ಮದಿನವನ್ನು ಅಭಿಮಾನಿಗಳೊಂದಿಗೆ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಕನ್ನಡದ ಹೆಮ್ಮೆಯ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivarajkumar) ತಮ್ಮ 64ನೇ ಜನ್ಮದಿನವನ್ನು ಅಭಿಮಾನಿಗಳೊಂದಿಗೆ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ. ಹಲವು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಶಿವಣ್ಣ ಅವರ ಬದುಕಿನ ಪಯಣ, ಹೋರಾಟ, ಸಾಧನೆಯನ್ನು ಅನಾವರಣಗೊಳಿಸುವ ವಿಶೇಷ ಸಾಕ್ಷ್ಯಚಿತ್ರ ಇದೀಗ ಬಿಡುಗಡೆಯಾಗಲು ಸಜ್ಜಾಗಿದೆ.
ಹೌದು ಸರ್ವೈವರ್ ಎಂಬ ಶೀರ್ಷಿಕೆಯಲ್ಲಿ ನಿರ್ಮಾಣವಾಗಿರುವ ಈ ಡಾಕ್ಯುಮೆಂಟರಿಯ ಪ್ರೋಮೋ ಶಿವಣ್ಣ ಹುಟ್ಟುಹಬ್ಬದ ಅಂಗವಾಗಿ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ಕನ್ನಡ ಚಿತ್ರರಂಗದ ಜನಪ್ರಿಯ ನಟ ಶಿವರಾಜ್ ಕುಮಾರ್ 63 ವರ್ಷಗಳನ್ನು ಪೂರ್ಣಗೊಳಿಸಿ 64ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಅವರ ಜನ್ಮದಿನವನ್ನು ಅಭಿಮಾನಿಗಳು ರಾಜ್ಯದಾದ್ಯಂತ ವಿಶೇಷವಾಗಿ ಆಚರಿಸುತ್ತಿದ್ದಾರೆ.
ಇನ್ನು ಶಿವರಾಜ್ ಕುಮಾರ್ ಅವರ ಜೀವನದ ಪ್ರಮುಖ ಘಟ್ಟಗಳನ್ನು ಒಳಗೊಂಡಿರುವ ‘ಸರ್ವೈವರ್’ ಸಾಕ್ಷ್ಯಚಿತ್ರದ ಪ್ರೋಮೋವನ್ನು ಅವರ ಜನ್ಮದಿನದ ಪ್ರಯುಕ್ತ ರಿಲೀಸ್ ಮಾಡಲಾಗಿದೆ. ಪ್ರೋಮೋದಲ್ಲಿ ಶಿವಣ್ಣ ಚಿತ್ರರಂಗದ ಆರಂಭ, ಏಳುಬೀಳುಗಳು ಹಾಗೂ ಇತ್ತೀಚಿನ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ ಕ್ಷಣಗಳನ್ನು ತೋರಿಸಲಾಗಿದೆ.
ಈ ವಿಶೇಷ ಸಾಕ್ಷ್ಯಚಿತ್ರವನ್ನು ಗೀತಾ ಶಿವರಾಜ್ ಕುಮಾರ್ ಅವರ ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ಕುಟುಂಬದ ಸದಸ್ಯರು ಹಾಗೂ ಆಪ್ತರು ಸೇರಿಕೊಂಡು ಶಿವರಾಜ್ ಕುಮಾರ್ ಅವರ ಜೀವನದ ಅಪರೂಪದ ನೆನಪುಗಳನ್ನು ಈ ಚಿತ್ರದಲ್ಲಿ ಹಂಚಿಕೊಂಡಿದ್ದಾರೆ.
ಹಾಗೆಯೇ ಚಿತ್ರರಂಗದ ಹಲವು ಖ್ಯಾತ ನಟರು ಶಿವರಾಜ್ ಕುಮಾರ್ ಬಗ್ಗೆ ಮಾತನಾಡಿದ್ದಾರೆ. ಕಿಚ್ಚ ಸುದೀಪ್, ಸಾಯಿ ಕುಮಾರ್, ಕಮಲ್ ಹಾಸನ್, ನಾಗಾರ್ಜುನ, ದುನಿಯಾ ವಿಜಯ್ ಹಾಗೂ ಡಾಲಿ ಧನಂಜಯ ಸೇರಿದಂತೆ ಅನೇಕ ಕಲಾವಿದರು ಶಿವಣ್ಣ ಅವರೊಂದಿಗೆ ತಮ್ಮ ಒಡನಾಟದ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಇನ್ನು ಪ್ರೋಮೋ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಸರ್ವೈವರ್ ಸಾಕ್ಷ್ಯಚಿತ್ರದ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ಶಿವರಾಜ್ ಕುಮಾರ್ ಅವರ ಜೀವನದ ಅಪರೂಪದ ಕ್ಷಣಗಳನ್ನು ನೋಡುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
Bangalore [Bangalore],Bangalore,Karnataka














